Homeಕರ್ನಾಟಕಹಾಸನ: ಹೊಯ್ಸಳ ಸಾಹಿತ್ಯೋತ್ಸವ ಪ್ರವೇಶಕ್ಕೆ 250 ರೂ. ಶುಲ್ಕ; ತೀರಿಹೋಗಿರುವ ರಂಗಕರ್ಮಿ ವಿಶೇಷ ಅತಿಥಿ!

ಹಾಸನ: ಹೊಯ್ಸಳ ಸಾಹಿತ್ಯೋತ್ಸವ ಪ್ರವೇಶಕ್ಕೆ 250 ರೂ. ಶುಲ್ಕ; ತೀರಿಹೋಗಿರುವ ರಂಗಕರ್ಮಿ ವಿಶೇಷ ಅತಿಥಿ!

‘ಹೊಯ್ಸಳ ಸಾಹಿತ್ಯೋತ್ಸವ’ ಎಂದು ಹೆಸರಿರುವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯವರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪ ಬಂದಿದೆ. ‘ಶುದ್ಧ ಸಾಹಿತ್ಯ’ದ ಕಮಟು ಕೂಡ ಬರಲಾರಂಭಿಸಿದೆ.

- Advertisement -
- Advertisement -

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಕ್ಟೋಬರ್‌ 22, 23ರಂದು ಹಾಸನದಲ್ಲಿ ಆಯೋಜಿಸಲಾಗಿರುವ ‘ಹೊಯ್ಸಳ ಸಾಹಿತ್ಯೋತ್ಸವ’ ಪ್ರವೇಶಕ್ಕೆ 250 ರೂ. ಶುಲ್ಕವನ್ನು ವಿಧಿಸಲಾಗಿದೆ. ಜನಸಾಮಾನ್ಯರ ಪರವಾಗಿರಬೇಕಿದ್ದ ಕಸಾಪ, ಖಾಸಗಿ ಸಂಸ್ಥೆಯಂತೆ ಶುಲ್ಕ ವಿಧಿಸಿದೆ ಎಂಬ ಟೀಕೆಗಳು ಬಂದಿವೆ. ಜೊತೆಗೆ ಸ್ಥಳೀಯ ಪ್ರಾತಿನಿಧ್ಯವನ್ನು ಕಡೆಗಣಿಸಿ ಕಾರ್ಯಕ್ರಮ ಆಯೋಜಿಸಿರುವ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಶುಲ್ಕ ವಿಧಿಸಿರುವುದಷ್ಟೇ ಅಲ್ಲದೇ ತೀರಿ ಹೋಗಿರುವ ರಂಗಕರ್ಮಿ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕರಾದ ಲಿಂಗದೇವರು ಹಳೆಮನೆಯವರ ಹೆಸರನ್ನೂ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಸೇರಿಸಲಾಗಿದೆ. ವಾಟ್ಸ್‌ಅಪ್‌ನಲ್ಲಿ ಹರಿದಾಡಿರುವ ಸಂದೇಶಗಳಲ್ಲಿ ‘ಶುದ್ಧ ಸಾಹಿತ್ಯ’ ಎಂಬ ಪದವೂ ಸೇರಿರುವುದು ಗೊಂದಲ ಮೂಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಾಹಿತ್ಯ ಪರಿಷತ್‌ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ. ಸಾಹಿತ್ಯಲೋಕದ ಪ್ರಮುಖ ಹಿರಿಯ, ಕಿರಿಯ ದಿಗ್ಗಜ ಕವಿಗಳು, ಸಾಹಿತಿಗಳು, ವಿಮರ್ಶಕರು ಹಾಗೂ ವಿದ್ವಾಂಸರು ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಐತಿಹಾಸಿಕವಾದ ಸಾಹಿತ್ಯೋತ್ಸವಕ್ಕೆ ಕೇವಲ 500 ಜನರಿಗೆ ಮಾತ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಜಿಲ್ಲೆಯ ಆಸಕ್ತ ಸಾಹಿತ್ಯ ಮನಸ್ಸುಗಳು ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ದಿನಾಂಕ 15-10-2022 ರೊಳಗೆ ನೋಂದಣಿಯಾಗಬಹುದು” ಎಂದು ಕೆಲವರು ಸಂಪರ್ಕ ಸಂಖ್ಯೆಯನ್ನು ನೀಡಲಾಗಿದೆ.

ಮುಖ್ಯವಾಗಿ ಸ್ಥಳೀಯರಲ್ಲದವರು ಸ್ವಾಗತ ಸಮಿತಿಯಲ್ಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಸಂಚಾಲಕರಾಗಿ ಕವಿ ಬಿ.ಆರ್.ಲಕ್ಷ್ಮಣರಾವ್, ಪತ್ರಕರ್ತ ಜೋಗಿ, ಕಾರ್ಯದರ್ಶಿಯಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಚ್.ಎಲ್.ಮಲ್ಲೇಶಗೌಡ ಇದ್ದಾರೆ.

‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ‘ಜೇನುಗಿರಿ’ ಪತ್ರಿಕೆ ಸಂಪಾದಕರಾದ ಚಲಂ ಹಾಡ್ಲಹಳ್ಳಿ, “ಹಾಸನ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಪ್ರತಿವರ್ಷ ಹೊಯ್ಸಳ ಉತ್ಸವ ನಡೆಯುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜನೆಯಾಗಿಲ್ಲ. ಹೊಯ್ಸಳ ಸಾಹಿತ್ಯೋತ್ಸವವು ಹೊಯ್ಸಳ ಉತ್ಸವದ ನೆರಳಿನಂತೆ ಕಾಣುತ್ತಿದೆ. ಅಥವಾ ಹೊಯ್ಸಳ ಉತ್ಸವವನ್ನು ನಡೆಸದಿದ್ದರೂ ಆಗುತ್ತದೆ. ಇದನ್ನೇ ತೋರಿಸಿ ಸರ್ಕಾರ ನುಣುಚಿಕೊಳ್ಳಲೂ ಸಾಧ್ಯವಿದೆ. ಹೀಗಿರುವಾಗ ಸ್ಥಳೀಯರಿಗೆ ಅವಕಾಶ ನೀಡಬೇಕಿತ್ತು. ಸ್ವಾಗತ ಸಮಿತಿಯಲ್ಲೂ ಹೊರಗಿನವರೇ ಇದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಹೊಯ್ಸಳ ಎಂಬುದೇ ಒಂದು ಪ್ರಾದೇಶಿಕತೆಯನ್ನು ಬಿಂಬಿಸುತ್ತದೆ. ಕರಾವಳಿ ಉತ್ಸವ, ಹಂಪಿ ಉತ್ಸವ, ಹೊಯ್ಸಳ ಉತ್ಸವ- ಇವುಗಳಿಗೆಲ್ಲ ವ್ಯತ್ಯಾಸಗಳಿರುತ್ತವೆ. ಈ ನಿಟ್ಟಿನಲ್ಲಿ ಪ್ರಾತಿನಿಧಿಕತೆಯ ಪ್ರಶ್ನೆ ಬರುತ್ತದೆ. ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್‌.ಲಕ್ಷ್ಮಣರಾವ್, ಜೋಗಿ ಇವರೆಲ್ಲ ಹಾಸನವನ್ನು ಹೇಗೆ ಪ್ರತಿನಿಧಿಸಬಲ್ಲರು? ಅತಿಥಿಗಳಾಗಿ ಬಂದಿದ್ದರೆ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಕಾರ್ಯಕ್ರಮ ಹೇಗಿರಬೇಕೆಂದು ನಿರ್ಧರಿಸುವವರೇ ಹೊರಗಿನವರಾಗಿರುವುದು ಎಷ್ಟು ಸರಿ? ಸಕಲೇಶಪುರ ಭಾಗದ ಕಾಡಿನ ಸಮಸ್ಯೆ ಇವರಿಗೆ ಗೊತ್ತಿದೆಯೇ? ಚನ್ನರಾಯಪಟ್ಟಣ ಭಾಗದ ತೆಂಗಿನ ಸಮಸ್ಯೆ ಗೊತ್ತಿದೆಯೇ? ಅರಕಲಗೂಡು ಭಾಗದ ತಂಬಾಕಿನ ಸಮಸ್ಯೆ ಗೊತ್ತಿದೆಯೇ? ಈ ಅಂಶಗಳನ್ನು ತಿರಸ್ಕರಿಸಿ ‘ಇದು ಶುದ್ಧಸಾಹಿತ್ಯ ಸಮ್ಮೇಳನ’ ಎಂದು ಕರೆಯುತ್ತಿದ್ದಾರೆಂದು ತಿಳಿದುಬಂದಿದೆ” ಎಂದು ವಿಷಾದಿಸಿದರು.

“ಹಾಸನ ಜಿಲ್ಲಾ ಕಸಾಪವು ಖಾಸಗಿ ಸಂಸ್ಥೆಯಂತೆ ವರ್ತಿಸುತ್ತಿದೆ” ಎಂದು ಸ್ಥಳೀಯ ನಿವಾಸಿ, ಲೇಖಕ ಕೊಟ್ರೇಶ್ ತಂಬ್ರಳ್ಳಿ ಆಕ್ಷೇಪ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. “ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅನೇಕ ಕನಸುಗಳಿದ್ಧವು. ಶ್ರೀಸಾಮಾನ್ಯನೂ ಸಾಹಿತ್ಯ ಕೈಂಕರ್ಯದಲ್ಲಿ ಭಾಗವಹಿಸಬೇಕು ಎಂಬ ಆಶಯ ಇತ್ತು. ಜಿಲ್ಲಾ ಮತ್ತು ತಾಲೂಕು ಘಟಕಗಳು ಇರುವುದೇ ಸ್ಥಳೀಯವಾಗಿಯೂ ಕೂಡ ಪರಿಷತ್ತು ಕಾರ್ಯೋನ್ಮುಖವಾಗಿ ಇರಬೇಕೆಂದು. ಹೊಯ್ಸಳ ಸಾಹಿತ್ಯೋತ್ಸವದಲ್ಲಿ ಹಾಸನದ ಕವಿ, ಲೇಖಕ, ಕಲಾವಿದರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ” ಎಂದು ಆರೋಪಿಸಿದ್ದಾರೆ.

“ಕಾರ್ಯಕ್ರಮದಲ್ಲಿ ಭಾಗವಹಿಸಲು ಕಡ್ಡಾಯವಾಗಿ ನೋಂದಣಿಯಾಗಿರಬೇಕೆಂದು ಸೂಚಿಸಲಾಗಿದೆ. 250 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಹಾಗಾದರೆ ಖಾಸಗಿ ಸಂಸ್ಥೆಗಳಿಗೂ ಕನ್ನಡ ನಾಡಿನ ಜನರ ಧ್ವನಿಯಾಗಿರುವ ಪರಿಷತ್ತಿಗೂ ಏನು ವ್ಯತ್ಯಾಸ? ನೋಂದಣಿ ಮಾಡಿಕೊಳ್ಳುವುದು ಸರಿ. ಆದರೆ 500-550 ಜನರ ಮಿತಿ ಏತಕ್ಕೆ?” ಎಂದು ಪ್ರಶ್ನಿಸಿದ್ದಾರೆ.

“ಈವೆಂಟ್ ಮ್ಯಾನ್ಮೇಜ್ಮೆಂಟ್‌ಗಳ ಕೈಯಲ್ಲಿ ಇವತ್ತು ಪರಿಷತ್ತು ಸಿಲುಕಿದೆ. ಜನಸಾಮಾನ್ಯರಿಂದ ದೂರ ಇರುವ ಸಾಹಿತ್ಯ ಪರಿಷತ್ತು ನಮ್ಮ ಜನಗಳಿಗೆ ಅವಶ್ಯ ಇದೆಯಾ?” ಎಂದು ಕೇಳಿದ್ದಾರೆ.

ಇದನ್ನೂ ಓದಿರಿ: ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲ್ಲ: ಜನಾಕ್ರೋಶದ ಬಳಿಕ ಹಿಂದೆ ಸರಿದ ಕಸಾಪ

ಈಗ ಉಂಟಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಎಚ್‌.ಎಲ್.ಮಲ್ಲೇಶ್‌ಗೌಡ, “ಕಾರ್ಯಕ್ರಮದಲ್ಲಿ ಸುಮಾರು 750 ಜನರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. 250 ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶವಿರುತ್ತದೆ. ಆಸಕ್ತರು ಮಾತ್ರ ಪಾಲ್ಗೊಳ್ಳಲಿ ಎಂದು ನೋಂದಣಿ ಹಾಗೂ ಪ್ರವೇಶ ಶುಲ್ಕ ವಿಧಿಸಿದ್ದೇವೆ. ಕಾರ್ಯಕ್ರಮಕ್ಕೆ ಬಂದು ಮಧ್ಯೆದಲ್ಲೇ ಎದ್ದುಹೋಗುವವರು ಇರುತ್ತಾರೆ. ಇದನ್ನು ತಪ್ಪಿಸಲೆಂದು ಶುಲ್ಕ ವಿಧಿಸುತ್ತಿದ್ದೇವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇಳೆಯೂ ಹೀಗೆಯೇ ನೋಂದಣಿ ನಡೆಯುತ್ತದೆ” ಎಂದು ಸಮರ್ಥಿಸಿಕೊಂಡರು.

“ಇದು ರಾಜ್ಯಮಟ್ಟದ ಕಾರ್ಯಕ್ರಮವಾಗಿದ್ದು, ಹೀಗಾಗಿ ಸ್ಥಳೀಯ ಸಾಹಿತಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಲ್ಲ. ಹೊಯ್ಸಳ ಸಾಹಿತ್ಯೋತ್ಸವವಲ್ಲದೆ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ನಡೆಯಲಿದೆ. ಅಲ್ಲಿ ಸ್ಥಳೀಯರಿಗೆ ಅವಕಾಶಗಳನ್ನು ಕಲ್ಪಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

“ಲಿಂಗದೇವರು ಹಳೆಮನೆಯವರ ಹೆಸರು ಕಣ್ತಪ್ಪಿನಿಂದ ಸೇರಿದೆ. ಚಲನಚಿತ್ರ ನಿರ್ದೇಶಕ ‘ಬಿ.ಎಸ್.ಲಿಂಗದೇವರು’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿ.ಎಸ್‌.ಲಿಂಗದೇವರು ಎಂಬುದು ‘ಲಿಂಗದೇವರು ಹಳೆಮನೆ’ ಎಂದಾಗಿದೆ. ಅಧಿಕೃತವಲ್ಲದ ಪಿಡಿಎಫ್‌ ಪ್ರತಿ ಹರಿದಾಡಿದೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಬಿ.ಎಸ್.ಲಿಂಗದೇವರು ಎಂದು ತಿದ್ದಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...