Homeಕರ್ನಾಟಕ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲ್ಲ: ಜನಾಕ್ರೋಶದ ಬಳಿಕ ಹಿಂದೆ ಸರಿದ ಕಸಾಪ

‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಿಸಲ್ಲ: ಜನಾಕ್ರೋಶದ ಬಳಿಕ ಹಿಂದೆ ಸರಿದ ಕಸಾಪ

- Advertisement -
- Advertisement -

ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸಬೇಕೆಂಬ ಪ್ರಸ್ತಾಪವನ್ನು ಕನ್ನಡ ಸಾಹಿತ್ಯ ಪರಿಷತ್ ಬಿಬಿಎಂಪಿಗೆ ಬರೆದಿಲ್ಲ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟಪಡಿಸಿದ್ದಾರೆ.

“ಬದಲಾವಣೆ ಮಾಡಿ ಎನ್ನುವುದಾಗಲೀ, ಮತ್ತೆ ಯಾವುದೇ ಪ್ರಸ್ತಾವನೆಯನ್ನಾಗಲೀ ಮಹಾನಗರ ಪಾಲಿಕೆಗೆ ನಾವು ಕಳುಹಿಸುವುದಿಲ್ಲ” ಎಂದು ಅವರು ಮಾತನಾಡಿದ್ದಾರೆ.

ಕಸಾಪಕ್ಕೆ ಭೇಟಿ ನೀಡಿರುವ ಮುಖಂಡರ ಜೊತೆ ಮಾತನಾಡಿರುವ ಅವರು, “ಮಾಧ್ಯಮದ ಮೂಲಕ ಬಂದ ಅಭಿಪ್ರಾಯಗಳನ್ನು ನೋಡಿ ಬಂದಿದ್ದೀರಿ. ಆ ಅಭಿಪ್ರಾಯಗಳು ತಪ್ಪು ಭಾವನೆಗಳನ್ನು ಕಲ್ಪಿಸಿದೆ. ವಾಸ್ತವಿಕ ವಿಚಾರಗಳನ್ನು ನಿಮ್ಮ ಮುಂದೆ ಹೇಳಿದ್ದೇನೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜೈನ ಸಾಹಿತಿಗಳು ಹಾಗೂ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ಜೈನ ಸಮುದಾಯ ಶಾಂತಿ, ತಾಳ್ಮೆಗೆ ಹೆಸರಾಗಿದೆ” ಎಂದು ಅವರು ತಿಳಿಸಿದ್ದಾರೆ.

ಜೈನ ಸಮುದಾಯದ ಮುಖಂಡರಾದ ನಿರಂಜನ್‌ ಜೈನ್ ಕನ್ಯಾಡಿಯವರು ವಿಡಿಯೊವನ್ನು ಹಂಚಿಕೊಂಡಿದ್ದು, “ಕೊನೆಗೂ ಕಸಾಪ ಅಧ್ಯಕ್ಷರು‌ ಎಚ್ಚೆತ್ತುಕೊಂಡಿದ್ದಾರೆ. ಕನ್ನಡ ಪ್ರೇಮಿಗಳ ಪ್ರತಿಭಟನೆಗೆ ಉತ್ತರಿಸಿದ್ದಾರೆ. ಯಾವುದೇ ಕಾರಣಕ್ಕೂ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಇಲ್ಲ ಎಂದಿದ್ದಾರೆ. ಪಂಪನ ಬಗ್ಗೆ ಅಪಾರ ಗೌರವವಿರುವುದಾಗಿ ಹೇಳಿಕೊಂಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

“ನನ್ನ ಸಹಿತ ಅನೇಕರು ಸಾಮಾಜಿಕ ಜಾಲತಾಣಗಳ ಮಾಧ್ಯಮದ ಮೂಲಕ ಲೇಖನ ಬರಹಗಳ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಿದ್ದೆವು. ನಿನ್ನೆ ಮತ್ತು ಇವತ್ತು ನಾನು ಕಸಾಪ ಅಧ್ಯಕ್ಷರಿಗೆ ದೂರವಾಣಿ ಮೂಲಕ ಮಾತನಾಡಿದ್ದೆ. ಆಗಲೂ ಸಮಾಧಾನದಿಂದ ಉತ್ತರಿಸಿದ್ದರು. ಸ್ಪಷ್ಟೀಕರಣ ಕೊಡುವುದಾಗಿ ಹೇಳಿದ್ದರು. ಇವತ್ತು ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರತಿಭಟನಾ ಪತ್ರವನ್ನು ಒಪ್ಪಿಸಿದಾಗ ಸಮಚಿತ್ತದಿಂದ ವ್ಯವಹರಿಸಿ ಸಮಾಧಾನದ ಮೂಲಕ ವ್ಯವಹರಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

“ಯಾವುದೇ ಕಾರಣಕ್ಕೂ ರಾಜಕೀಯದ ಒತ್ತಡಕ್ಕೆ ಮತ್ತು ಜಾತಿ ರಾಜಕಾರಣಕ್ಕೆ ಬಲಿಯಾಗದೇ ಕನ್ನಡದ ಆದಿ ಕವಿ ಪಂಪನ ಬಗ್ಗೆ ಒಲುಮೆಯಿರಲಿ, ಅಭಿಮಾನವಿರಲಿ” ಎಂದು ಅವರು ಕಸಾಪ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದಾರೆ.

 

ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆ ಮತ್ತು ಮಕ್ಕಳ ಕೂಟ ಪಾರ್ಕ್ ನಡುವಿನ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಮರುನಾಮಕರಣ ಮಾಡಲು ಕಸಾಪ ಮುಂದಾಗಿತ್ತು.

ಈ ರಸ್ತೆಗೆ ಪ್ರಸ್ತುತ ಪಂಪ ಮಹಾಕವಿ ಎಂದು ಹೆಸರಿಡಲಾಗಿದೆ. ಇಲ್ಲಿನ ಅರ್ಧ ಕಿ.ಮೀ.ಯಷ್ಟು ರಸ್ತೆಯನ್ನು ಕನ್ನಡ ಪರಿಮಳದಿಂದ, ಕನ್ನಡಮಯದಿಂದ ತುಂಬಬೇಕು ಎಂದು ಕಸಾಪ ಅಧ್ಯಕ್ಷರು ಹೇಳಿದ್ದರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ಮಹೇಶ್ ಜೋಶಿಯವರು, “ನ್ಯಾಷನಲ್‌ ಕಾಲೇಜಿನಿಂದ ಆರಂಭವಾಗಿ ಮಿಂಟೋ ಆಸ್ಪತ್ರೆಯವರೆಗೆ ಪಂಪ ಮಹಾಕವಿ ರಸ್ತೆ ಇದೆ. ನ್ಯಾಷನಲ್ ಕಾಲೇಜಿನಿಂದ ಮಕ್ಕಳ ಕೂಟದವರೆಗೆ ಪಂಪ ಮಹಾಕವಿ ರಸ್ತೆ ಎಂದೇ ಇರುತ್ತದೆ. ಅದರ ಮುಂದಿನ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ರಸ್ತೆ ಎಂದು ಇಡಬೇಕೆಂದು ಯೋಚಿಸಿದ್ದೇವೆ” ಎಂದಿದ್ದರು.

ಪಂಪನ ಹೆಸರಲ್ಲಿರುವ ರಸ್ತೆಯಿಂದ ಕಸಾಪಕ್ಕೆ ಆಗುವ ನಷ್ಟವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, “ಕನ್ನಡ ಸಾಹಿತ್ಯ ಪರಿಷತ್‌ ಕೂಡ ಕನ್ನಡಕ್ಕಾಗಿಯೇ ದುಡಿದಿದೆ. ಮೈಸೂರು ಒಡೆಯರಿಂದ ಸ್ಥಾಪನೆಯಾಗಿರುವ ಸಂಸ್ಥೆ ಕಸಾಪ. ನಮ್ಮ ಎದುರಿನ ರಸ್ತೆಗೆ ನಮ್ಮತನ ಬೇಕಾಲ್ಲವೇ? ಕಸಾಪ ಎಂಬ ನಮ್ಮತನ ಬೇಡವೆ? ಪಂಪ ಎಂಬ ಹೆಸರನ್ನು ನಾವು ಬದಲಿಸುತ್ತಿಲ್ಲ. ಪಂಪ ರಸ್ತೆಯೂ ಇರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ರಸ್ತೆಯೂ ಇರುತ್ತದೆ. ಹೀಗಾಗಿ ಈ ರಸ್ತೆಗೆ ಮತ್ತಷ್ಟು ಮೆರಗು ಬರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದರು.

ರಸ್ತೆಯ ಹೆಸರು ಬದಲಿಸುವ ಪ್ರಸ್ತಾವನೆಗೆ ಅನೇಕ ಸಂಘಸಂಸ್ಥೆಗಳು, ಸಾಹಿತಿಗಳು ಹಾಗೂ ಕನ್ನಡ ನಾಡಿನ ಜನತೆ ವಿರೋಧ ವ್ಯಕ್ತಪಡಿಸಿದ್ದರು.

ಕರವೇ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ಪತ್ರ ಬರೆದು, “ಕನ್ನಡದ ಆದಿಕವಿ ಪಂಪನ ರಸ್ತೆಯ ಹೆಸರನ್ನು ಕನ್ನಡಿಗರ ಪ್ರಾತಿನಿಧಿಕ ಸಂಘಟನೆ ಎಂದು ಹೇಳಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತೇ ಬದಲಿಸಲು ಹೊರಟಿರುವುದು ವಿಲಕ್ಷಣವಾದ ಘಟನೆಯಾಗಿದ್ದು, ಪರಿಷತ್ತು ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಂತಾಗಿದೆ” ಎಂದಿದ್ದರು.

ಇದನ್ನೂ ಓದಿರಿ: ಕಸಾಪ ಸದಸ್ಯತ್ವ ಮತ್ತು ಅನಕ್ಷರಸ್ಥತೆ; ಅಕ್ಷರಜ್ಞಾನ, ಸಾಹಿತ್ಯ, ಕಲೆ – ಒಂದು ವಿವೇಚನೆ

“ಹತ್ತನೇ ಶತಮಾನದಲ್ಲಿ ಬದುಕಿದ ಪಂಪ ಮಹಾಕವಿ ಇಡೀ ಕನ್ನಡ ಸಾಹಿತ್ಯ ಚರಿತ್ರೆಗೆ ಮುನ್ನುಡಿಯನ್ನು ಬರೆದವರು. ಭೂಮಿ, ಸೂರ್ಯ, ಚಂದ್ರರು ಇರುವವರೆಗೆ ಅವರ ಹೆಸರು ಅಮರವಾಗಿರುತ್ತದೆ. ಸಾಹಿತ್ಯ ಪರಿಷತ್ತು ಇಂಥ‌ ದುಸ್ಸಾಹಸಕ್ಕೆ ಇಳಿದಿದ್ದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ” ಎಂದು ತಿಳಿಸಿದ್ದರು.

“ಪಂಪ ಮಹಾಕವಿ ರಸ್ತೆಯ ಒಂದು ಭಾಗಕ್ಕೆ ಮಾತ್ರ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಹೆಸರಿಡುವ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅಧ್ಯಕ್ಷರಾದ ಮಹೇಶ್ ಜೋಷಿ ಹೇಳಿರುವುದನ್ನು ಗಮನಿಸಿದೆ. ಪಂಪನ ಹೆಸರಿನ ರಸ್ತೆಯ ಒಂದು ಮೀಟರ್ ರಸ್ತೆಯ ಹೆಸರನ್ನೂ ಬದಲಿಸುವ ಅವಶ್ಯಕತೆ ಇಲ್ಲ ಎಂಬುದು ಕರವೇ ನಿಲುವಾಗಿರುತ್ತದೆ. ಒಂದು ವೇಳೆ ಪರಿಷತ್ತು ರಸ್ತೆಯ ಹೆಸರನ್ನು ಬದಲಿಸಲು ಹಟ ಹಿಡಿದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ. ಕಸಾಪ ವಿರುದ್ಧವೇ ಹೋರಾಟ ನಡೆಸಲು ನಾವು ಹಿಂಜರಿಯುವುದಿಲ್ಲ” ಎಂದು ಎಚ್ಚರಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...