Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

- Advertisement -
- Advertisement -

ಡಾ.ಬಿ.ಆರ್ ಅಂಬೇಡ್ಕರ್‌ರವರು ಕಾಲಿಟ್ಟಿದ್ದ ಊರು ಕೆಜಿಎಫ್. ದ್ರಾವಿಡ ಚಳವಳಿಗಾರರಾದ ಪೆರಿಯಾರ್, ಪಂಡಿತ್ ಅಯೋತಿದಾಸ್ ಮೊದಲಾದವರ ಪ್ರಭಾವ ಇರುವ ನೆಲ. ರಾಜ್ಯದ ಪ್ರಥಮ ಕಾರ್ಮಿಕ ಚಳವಳಿಗಳು ಇಲ್ಲಿ ಆರಂಭವಾಗಿದ್ದವು. ಚಿನ್ನದ ಗಣಿಗಳಲ್ಲಿ ದುಡಿಯುವ ಕಾರ್ಮಿಕರು ಒಗ್ಗೂಡಿ ಹೋರಾಡಿ, ತಮ್ಮ ನಾಯಕರುಗಳನ್ನು ಚುನಾವಣೆಗಳಲ್ಲಿ ಗೆಲ್ಲಿಸಿದ ಇತಿಹಾಸ ಈ ಕ್ಷೇತ್ರಕ್ಕಿದೆ. ಇಂದಿಗೂ ಬ್ರಿಟಿಷ್ ಆಡಳಿತದ ಪಳೆಯುಳಿಕೆಗಳು, ಕಟ್ಟಡಗಳು ಇಲ್ಲಿವೆ.

ಕೆಜಿಎಫ್ ಎಂಬುದು ಕರ್ನಾಟಕದಲ್ಲಿರುವ, ಹೆಚ್ಚು ತೆಲುಗು ಭಾಷಿಕ ಹಳ್ಳಿಗಳಿಂದ ಆವೃತವಾದ ತಮಿಳು ಪಟ್ಟಣವಾಗಿದೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕೆಜಿಎಫ್‌ನಲ್ಲಿ ಕನ್ನಡ, ತೆಲುಗು ಭಾಷಿಕರಿದ್ದರೂ ಇಲ್ಲಿ ತಮಿಳು ಭಾಷೆಯ ಪ್ರಭಾವ ಹೆಚ್ಚು. ಹಾಗಾಗಿಯೇ ಎಐಎಡಿಎಂಕೆ ಪಕ್ಷ ಇಲ್ಲಿ ಮೂರು ಬಾರಿ ಜಯ ಕಂಡಿದೆ. ಕೆಜಿಎಫ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಮತ್ತು ಶ್ರಮಿಕರಿದ್ದಾರೆ. ಅವರನ್ನು ಸಂಘಟಿಸಿದ ಆರ್‌ಪಿಐ, ಸಿಪಿಐ, ಸಿಪಿಎಂನಂತಹ ಪರ್ಯಾಯ ರಾಜಕೀಯ ಪಕ್ಷಗಳು ಜಯಕಂಡಿವೆ.

ಬಿಜಿಎಂಎಲ್ ಚಿನ್ನದ ಗಣಿಗಳಲ್ಲಿ ದುಡಿದ, ಮಡಿದ ಕಾರ್ಮಿಕರ ರಕ್ತ ಮತ್ತು ಬೆವರಿನಿಂದ ಕೆಜಿಎಫ್‌ಅನ್ನು ಕಟ್ಟಲಾಗಿದೆ. ಟನ್‌ಗಟ್ಟಲೇ ಚಿನ್ನ ತೆಗೆದು ಭಾರತದ ಚಿನ್ನದ ಬೊಕ್ಕಸವನ್ನು ತುಂಬಲಾಗಿದೆ. ದೇಶ ಹಣಕಾಸು ವ್ಯವಸ್ಥೆ ಸಂಕಷ್ಟದಲ್ಲಿದ್ದಾಗ ಕೆಜಿಎಫ್ ಚಿನ್ನದ ಗಣಿಗಳನ್ನು ತೋರಿಸಿ ವಿದೇಶದಿಂದ ಸಾಲ ಪಡೆಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ ಗಣಿ ಮುಚ್ಚಿಹೋದ ನಂತರ ಕೆಲಸ ಸಿಗದೆ, ವಾಸಿಸಲು ಸ್ವಂತ ಮನೆಯಿಲ್ಲದೆ ಸಾವಿರಾರು ಕುಟುಂಬಗಳು ಇಂದಿಗೂ ಅತಂತ್ರರಾಗಿರುವ ಪರಿಸ್ಥಿತಿ ಕ್ಷೇತ್ರದಲ್ಲಿದೆ.

ರಾಜಕೀಯ ಇತಿಹಾಸ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಕೆಜಿಎಫ್ 1952ರ ಮೈಸೂರು ಪ್ರಾಂತ್ಯದ ಭಾಗವಾಗಿದ್ದಾಗ ಎರಡು ವಿಧಾನಸಭಾ ಸ್ಥಾನಗಳನ್ನು ಹೊಂದಿತ್ತು. ಒಂದು ಸ್ಥಾನಕ್ಕೆ ಅಂಬೇಡ್ಕರ್‌ರವರು ಸ್ಥಾಪಿಸಿದ್ದ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ (SCF) ಅನ್ನು ಪ್ರತಿನಿಧಿಸಿ ಪಿ.ಎಂ ಸ್ವಾಮಿದೊರೈರವರು ಆಯ್ಕೆಯಾದರೆ ಮತ್ತೊಂದು ಸ್ಥಾನಕ್ಕೆ ಸಿಪಿಐ ಪಕ್ಷವನ್ನು ಪ್ರತಿನಿಧಿಸಿ ಕೆ.ಎಸ್ ವಾಸನ್‌ರವರು ಆಯ್ಕೆಯಾಗಿದ್ದರು.

ಸಿ.ಎಂ ಆರ್ಮುಗಂ

1957ರಲ್ಲಿಯೂ ಸಹ ಕೆಜಿಎಫ್ ಎರಡು ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಪಕ್ಷದ ಮೇರು ನಾಯಕ ಸಿ.ಎಂ ಆರ್ಮುಗಂ ಮತ್ತು ಸಿಪಿಐ ಪಕ್ಷದ ಎಂ.ಸಿ ನರಸಿಂಹನ್ ಶಾಸಕರಾಗಿ ಆಯ್ಕೆಯಾಗಿದ್ದರು.

1962ರ ಚುನಾವಣೆಗೆ ಕೆಜಿಎಫ್ ಒಂದು ವಿಧಾನಸಭಾ ಕ್ಷೇತ್ರವಾಗಿ ಸೀಮಿತವಾಯಿತು. ಆ ವೇಳೆಗೆ SCF ಪಕ್ಷವು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ಆಗಿ ಮರುನಾಮಕರಣಗೊಂಡಿತ್ತು. ಆ ಚುನಾವಣೆಯಲ್ಲಿ ಸಿಪಿಐ ಪಕ್ಷದ ಎಸ್.ರಾಜಗೋಪಾಲ್ ಮತ್ತು ಆರ್‌ಪಿಐ ನಾಯಕ ಸಿ.ಎಂ ಆರ್ಮುಗಂರವರ ನಡುವಿನ ಹಣಾಹಣಿಯಲ್ಲಿ ರಾಜಗೋಪಾಲ್‌ರವರು 128 ಮತಗಳ ಅಂತರದಿಂದ ಗೆದ್ದು ಶಾಸಕರಾಗಿ ಆಯ್ಕೆಯಾದರು.

1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಎಸ್.ಆರ್ ಗೋಪಾಲ್‌ರವರು ಆರ್‌ಪಿಐ ಪಕ್ಷದ ಸಿ.ಎಂ ಆರ್ಮುಗಂರವರ ಎದುರು ಜಯ ಕಂಡರು. 1972ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಿ.ಎಂ ಆರ್ಮುಗಂರವರು ಗೆಲುವು ಸಾಧಿಸಿದರು. ಅಲ್ಲದೆ ಅವರು 1978ರ ಚುನಾವಣೆಯಲ್ಲಿ ಆರ್‌ಪಿಐ ಪಕ್ಷದಿಂದ ಕಣಕ್ಕಿಳಿದು ಜನತಾಪಕ್ಷದಲ್ಲಿದ್ದ ಎಸ್.ರಾಜಗೋಪಾಲ್‌ರವರನ್ನು ಮಣಿಸಿ ಮೂರನೇ ಬಾರಿಗೆ ಶಾಸಕರಾದರು.

AIADMKಗೆ ಗೆಲುವು

ತಮಿಳು ಪ್ರಭಾವವಿರುವ ಕೆಜಿಎಫ್‌ನಲ್ಲಿ 1983ರ ಚುನಾವಣೆಯಲ್ಲಿ AIADMK ಪಕ್ಷದ ಎಂ.ಭಕ್ತವತ್ಸಲಂ ಎಂಬುವವರು ಸಿಪಿಎಂ ಪಕ್ಷದ ಟಿ.ಎಸ್ ಮಣಿಯವರನ್ನು 1,380 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಎರಡು ವರ್ಷಗಳ ನಂತರದಲ್ಲಿ ನಡೆದ 1985ರ ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಟಿ.ಎಸ್ ಮಣಿಯವರು ಸ್ವತಂತ್ರ ಅಭ್ಯರ್ಥಿಯಾಗಿದ್ದ ಎಂ.ಭಕ್ತವತ್ಸಲಂರನ್ನು ಸೋಲಿಸಿ ಶಾಸಕರಾದರು. 1989ರ ಚುನಾವಣೆಯಲ್ಲಿ ಮತ್ತೆ AIADMK ಪಕ್ಷದ ಎಂ.ಭಕ್ತವತ್ಸಲಂ ಸಿಪಿಎಂನ ಟಿ.ಎಸ್ ಮಣಿಯವರನ್ನು ಮಣಿಸಿದರು. ಆನಂತರ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಕುಗ್ಗುತ್ತಾ, ಇಂದು ಕುಸಿತ ಕಂಡಿದೆ.

1994ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಪಕ್ಷದ ಎಸ್.ರಾಜೇಂದ್ರನ್‌ರವರು ಭಕ್ತವತ್ಸಲಂರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. 1999ರ ಚುನಾವಣೆಯಲ್ಲಿ ಮತ್ತೆ AIADMK ಪಕ್ಷದ ಎಂ.ಭಕ್ತವತ್ಸಲಂ ಗೆಲ್ಲುವ ಮೂಲಕ ಮೂರನೆಯ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 2004ರ ಚುನಾವಣೆ ವೇಳೆಗೆ ಎಸ್.ರಾಜೇಂದ್ರನ್‌ರವರು ಆರ್‌ಪಿಐ ಪಕ್ಷದ ಚಿಹ್ನೆಯಡಿ ಕಣಕ್ಕಿಳಿದು ಭಕ್ತವತ್ಸಲಂರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾದರು.

ಖಾತೆ ತೆರೆದ ಬಿಜೆಪಿ

2008ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ ವೈ.ಸಂಪಂಗಿಯವರು ಆರ್‌ಪಿಐ ಪಕ್ಷದ ಎಸ್.ರಾಜೇಂದ್ರನ್‌ರವರನ್ನು ಸೋಲಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಯ ಖಾತೆ ತೆರೆದರು. ಆದರೆ ವೈ ಸಂಪಂಗಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ದೂರು ಪಡೆದಿದ್ದ ಲೋಕಾಯುಕ್ತ ಅಧಿಕಾರಿಗಳು ಶಾಸಕರ ಭವನಕ್ಕೆ ನುಗ್ಗಿ ರೆಡ್ ಹ್ಯಾಂಡ್ ಆಗಿ ಹಿಡಿದು ಸಂಪಂಗಿ ವಿರುದ್ಧ ಪ್ರಕರಣ ದಾಖಲಿಸಿದರು. ಈ ಪ್ರಕರಣದಿಂದಾಗಿ ಮುಂದಿನ ಎರಡು ಚುನಾವಣೆಗಳಲ್ಲಿ ಸಂಪಂಗಿ ಸ್ಪರ್ಧಿಸುವುದು ಅಸಾಧ್ಯವಾದ ಕಾರಣ ತಮ್ಮ ತಾಯಿ ಮತ್ತು ಮಗಳನ್ನು ಕಣಕ್ಕಿಳಿಸಿದರು.

ವೈ.ಸಂಪಂಗಿ

2013ರ ಚುನಾವಣೆಯಲ್ಲಿ ಸಂಪಂಗಿಯವರ ತಾಯಿ ವೈ.ರಾಮಕ್ಕನವರು ಕಣಕ್ಕಿಳಿದರು. ಅಷ್ಟರಲ್ಲಿ (2008) ಎಂ.ಭಕ್ತವತ್ಸಲಂರವರು AIADMK ತೊರೆದು ಜೆಡಿಎಸ್ ಸೇರಿದ್ದರು. ಇವರಿಬ್ಬರ ನಡುವಿನ ಕಾಳಗದಲ್ಲಿ ರಾಮಕ್ಕನವರು 26,022 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಇನ್ನು ಇತ್ತೀಚಿನ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಚ್ ಮುನಿಯಪ್ಪನವರ ಮಗಳಾದ ರೂಪಕಲಾ ಶಶಿಧರ್‌ರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬಿಜೆಪಿ ಪಕ್ಷವು ಸಂಪಂಗಿಯವರ ಮಗಳಾದ ಅಶ್ವಿನಿ ಸಂಪಂಗಿಯವರಿಗೆ ಟಿಕೆಟ್ ನೀಡಿತು. ಈ ಚುನಾವಣೆಯಲ್ಲಿ ರೂಪಕಲಾ ಶಶಿಧರ್‌ರವರು 40,827 ಮತಗಳ ಬೃಹತ್ ಅಂತರದಿಂದ ಗೆದ್ದು ಶಾಸಕರಾದರು. ಆ ಮೂಲಕ 51 ವರ್ಷದ ನಂತರ ಮತ್ತೆ ಕೆ.ಜಿ.ಎಫ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರುಜನ್ಮ ನೀಡಿದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ಎರಡನೇ ಸ್ಥಾನ ಪಡೆದರೆ ಆರ್‌ಪಿಐ ಪಕ್ಷದ ಎಸ್.ರಾಜೇಂದ್ರನ್ ಮೂರನೇ ಸ್ಥಾನಕ್ಕೆ ಕುಸಿದರು. ಜೆಡಿಎಸ್ ಅಭ್ಯರ್ಥಿ ಎಂ.ಭಕ್ತವತ್ಸಲಂ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಅಂದಾಜು ಜಾತಿವಾರು ಮತಗಳು

ಕೆಜಿಎಫ್‌ನಲ್ಲಿ ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಸ್‌ಸಿ, ಎಸ್‌ಟಿ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಜನರ ಮತಗಳು ಅಂದಾಜು ಒಂದು ಲಕ್ಷದಷ್ಟಿವೆ. 15 ಸಾವಿರ ಮುಸ್ಲಿಮ್ ಮತಗಳು, ಒಕ್ಕಲಿಗರು ಮತ್ತು ರೆಡ್ಡಿಗಳು ಸೇರಿ 30,000 ದಷ್ಟು ಮತಗಳಿವೆ. ಇತರ ಹಿಂದುಳಿದ ವರ್ಗಗಳ ಸುಮಾರು 50,000 ಮತಗಳಿದ್ದು, ಉಳಿದವರದ್ದು 15,000 ಮತಗಳಿವೆ ಎನ್ನಲಾಗಿದೆ.

ಸದ್ಯದ ವಿದ್ಯಮಾನ

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರೂಪಕಲಾ ಶಶಿಧರ್‌ರವರು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬ ಹೆಸರು ಗಳಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದರೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಮಿನಿ ವಿಧಾನಸೌಧ, ಗುರುಭವನ ಕಟ್ಟಿಸುವಲ್ಲಿ ಪಾತ್ರ ವಹಿಸಿದ್ದಾರೆ; ಬಂಗಾರಪೇಟೆಯೊಂದಿಗೆ ಇದ್ದ ಎಪಿಎಂಸಿಯನ್ನು ಬೇರ್ಪಡಿಸಿದ್ದಾರೆ; ಸದನದಲ್ಲಿ ನಿರಂತರವಾಗಿ ಕೆಜಿಎಫ್ ಕ್ಷೇತ್ರದ ಕುರಿತು ದನಿಯೆತ್ತಿದ್ದಾರೆ; ಕೆಜಿಎಫ್ ಬಳಿ 970 ಎಕರೆಯಲ್ಲಿ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಭಿವೃದ್ಧಿಪಡಿಸಲು ದನಿಯೆತ್ತಿದ್ದರು. ಅದಕ್ಕೆ ಒಪ್ಪಿಗೆ ನೀಡಿರುವುದಾಗಿ ಸಿಎಂ ಇತ್ತೀಚೆಗೆ ಘೋಷಿಸಿದ್ದಾರೆ. ಅಲ್ಲದೆ ಕೆ.ಜಿಎಫ್‌ನಿಂದ ಬೆಂಗಳೂರಿಗೆ ಪ್ರತಿದಿನ ಕೆಲಸಕ್ಕಾಗಿ ಓಡಾಡುತ್ತಿದ್ದ ಹೆಣ್ಣು ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಾಲ ನೀಡುವುದನ್ನೆ ಸಾಧ್ಯವಾಗಿಸಿದ್ದಾರೆ. ಪ್ರತಿದಿನ ಕ್ಷೇತ್ರಕ್ಕೆ ಬಂದು ಜನರ ಕೈಗೆ ಸಿಗುತ್ತಾರೆ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂಬುದು ಅವರ ಬಗ್ಗೆ ಜನರು ಮಾತಾಡುವ ಪ್ಲಸ್ ಪಾಯಿಂಟ್.

ನಿರುದ್ಯೋಗ ಇನ್ನೂ ಕೆಜಿಎಫ್ ಅನ್ನು ಕಾಡುತ್ತಲೇ ಇದೆ. ಬಿಜಿಎಂಎಲ್ ಗಣಿಯ ಪುನಶ್ಚೇತನದ ಮಾತು ನಡೆಯುತ್ತಿದ್ದರೂ, ಅದು ಬಹುತೇಕ ಅಸಾಧ್ಯ ಎಂಬಂತಾಗಿದೆ. ಗಣಿಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇನ್ನೂ ಸಾವಿರಾರು ಕುಟುಂಬಗಳು ಇವತ್ತಿಗೂ ಸ್ವಂತ ಮನೆ ಇಲ್ಲದೆ ಗಣಿ ಕಾರ್ಮಿಕರಿಗೆ ಕೊಟ್ಟ ಕಾಲೋನಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಆ ಮನೆಗಳನನ್ನು ಅವರಿಗೆ ಕೊಡುತ್ತೇವೆ ಎಂದು ಹಲವಾರು ಭಾರಿ ಭರವಸೆಗಳು ನೀಡಿದ್ದರೂ ಅದು ಈಡೇರಿಲ್ಲ. ಇದಕ್ಕೆ ಹಾಲಿ ಶಾಸಕಿ ರೂಪಕಲಾ ಸೇರಿದಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮೂಲಭೂತ ಬದಲಾವಣೆಗಳು ಆಗಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.

ಕೆಜಿಎಫ್ ಕ್ಷೇತ್ರದ ಜನರ ಸಮಸ್ಯೆಗಳು

ಗಣಿ ಕಾರ್ಮಿಕರ ಸ್ಥಿತಿಗತಿ ಶೋಚನೀಯವಾಗಿದ್ದು ಅವರಿಗೆ ಇನ್ನೂ 52 ಕೋಟಿ ಬಾಕಿ ಸೆಟ್ಲಮೆಂಟ್ ಹಣ ನೀಡಲಾಗಿಲ್ಲ ಎಂಬ ದೂರಿದೆ. ಕೆಜಿಎಫ್‌ನಲ್ಲಿದ್ದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮುಚ್ಚಿಹೋಗಿವೆ. ಬಿಇಎಂಎಲ್ ಸಹ ಖಾಸಗೀಕರಣದ ಹಾದಿಯಲ್ಲಿದೆ. ಇದು ನಿರುದ್ಯೋಗಕ್ಕೆ ದಾರಿ ಮಾಡಿಕೊಡುತ್ತಿದೆ ಮತ್ತು ವಲಸೆ ಹೆಚ್ಚಿಸುತ್ತಿದೆ. ಇನ್ನು ಕೆಜಿಎಫ್‌ನಲ್ಲಿ ಸಮರ್ಪಕ ಸರ್ಕಾರಿ ಬಸ್ ವ್ಯವಸ್ಥೆಯಿಲ್ಲ ಎನ್ನುವುದು ಜನರ ದೂರು. ಮಾರಿ ಕುಪ್ಪಂ – ರಾಬರ್ಟ್‌ಸನ್‌ಪೇಟ್‌ಗೂ ಕೂಡ ಬಸ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಯರಗೋಳ ಡ್ಯಾಂನಿಂದ ಕೆಜಿಎಫ್‌ಗೆ ಹೆಚ್ಚಿನ ನೀರು ಬೇಕೆಂದು ಜನ ಕೇಳುತ್ತಿದ್ದಾರೆ.

ಎಸ್.ರಾಜೇಂದ್ರನ್‌

ಕೆಜಿಎಫ್‌ನಲ್ಲಿ ಮಿನಿ ಟೌನ್‌ಶಿಪ್ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶವಿದ್ದರೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂಬ ಆರೋಪ ಸಹ ಇದೆ.

2023ರ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳು

ಕಾಂಗ್ರೆಸ್ ಪಕ್ಷವು ಎರಡನೆ ಭಾರಿಗೆ ರೂಪಕಲಾ ಶಶಿಧರ್‌ರವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿ ಕಂಡುಬರುತ್ತಿಲ್ಲ ಎನ್ನಬಹುದು. ಕೆ.ಎಚ್ ಮುನಿಯಪ್ಪನವರ ನಿರ್ಧಾರಕ್ಕೆ ಇಲ್ಲಿ ಬಹಳಷ್ಟು ಪ್ರಾಮುಖ್ಯತೆಯಿದೆ.

ಬಿಜೆಪಿ

ಲಂಚ ತೆಗೆದುಕೊಂಡ ಪ್ರಕರಣ ಎದುರಿಸುತ್ತಿರುವ ಸಂಪಂಗಿಯವರು ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರ? ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡಲಿದೆಯೇ ಎಂಬುದು ಇನ್ನು ನಿಶ್ಚಿತವಾಗಿಲ್ಲ. ಆದರೆ ಸಂಪಂಗಿ ಮಾತ್ರ ಇಡೀ ಕ್ಷೇತ್ರಾದ್ಯಂತ ಓಡಾಡಿ ಪಕ್ಷ ಕಟ್ಟುತ್ತಿದ್ದಾರೆ. ತಮಗೇ ಟಿಕೆಟ್ ಎಂಬ ಭರವಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲಾರ ಉಸ್ತುವಾರಿ ಮಂತ್ರಿ ಮುನಿರತ್ನರವರು ಸಂಪಂಗಿಯವರಿಗೆ ಟಿಕೆಟ್ ಎಂದು ಬಹಿರಂಗ ಸಭೆಯೊಂದರಲ್ಲಿ ಇತ್ತೀಚಿಗೆ ಹೇಳಿದ್ದರು.

ಸಂಪಂಗಿಯವರನ್ನು ಬಿಟ್ಟು ಕೆಜಿಎಫ್‌ನಲ್ಲಿ ಬಿಜೆಪಿ ಅಸ್ತಿತ್ವ ಅಷ್ಟಕಷ್ಟೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಇತ್ತೀಚಿಗಿನ ಎಪಿಎಂಸಿ ಚುನಾವಣೆಯ ಫಲಿತಾಂಶವೂ ಅದನ್ನೆ ತೋರಿಸುತ್ತದೆ. ಆದರೂ ಕೋಲಾರದ ಸಂಸದರಾಗಿರುವ ಮುನಿಸ್ವಾಮಿಯವರು ತಮ್ಮ ಪತ್ನಿ ಶೈಲಜಾರವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಯತ್ನ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೆಜೆಎಫ್‌ನಲ್ಲಿ ಸಾಧ್ಯವಾಗದಿದ್ದರೆ ಬಂಗಾರಪೇಟೆಯಲ್ಲಾದರೂ ಟಿಕೆಟ್ ಬೇಕು ಎಂಬುದು ಅವರ ಅಂಬೋಣ. ಈ ಕಾರಣಕ್ಕಾಗಿಯೇ ಕೆಜಿಎಫ್‌ನಲ್ಲಿ ವೈ.ಸಂಪಂಗಿ ಮತ್ತು ಸಂಸದ ಮುನಿಸ್ವಾಮಿ ನಡುವೆ ಮುನಿಸು ಆರಂಭವಾಗಿದೆ. ಸಂಪಂಗಿಯವರಂತೂ ಬಹಿರಂಗವಾಗಿಯೇ ಮುನಿಸ್ವಾಮಿಯವರ ಮೇಲೆ ಹಲವೆಡೆ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೆ ನಮ್ಮ ಜಿಲ್ಲೆಗೆ ಬಿಜೆಪಿ ಸುಪ್ರಿಮೋ ಎಂದು ಮಾತಾಡುತ್ತಿದ್ದಾರೆ. ಈ ಮುನಿಸು ಚುನಾವಣೆವರೆಗೂ ಮುಂದುವರೆದರೆ ಬಿಜೆಪಿಗೆ ಗೆಲುವು ಕಷ್ಟವಾಗಲಿದೆ ಎನ್ನುವ ಅಭಿಪ್ರಾಯವಿದೆ.

ಇನ್ನು ಸಿಎಂ ಬೊಮ್ಮಾಯಿಯವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿರುವ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್‌ರವರು 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸುತ್ತಾರೆ ಮತ್ತು ಅವರು ಆಯ್ಕೆಯ ಕ್ಷೇತ್ರಗಳಲ್ಲಿ ಕೆಜಿಎಫ್ ಸಹ ಒಂದು ಎಂದು ಹೇಳಲಾಗುತ್ತಿದೆ.

ಆರ್‌ಪಿಐ

ಎಸ್.ರಾಜೇಂದ್ರನ್‌ರವರು ಕೊನೆಯ ಬಾರಿಗೆ ಶಾಸಕರಾಗಿದ್ದು 2004ರಲ್ಲಿ. 2008ರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿ ಕೇವಲ 3,320 ಮತಗಳಿಂದ ಸೋತಿದ್ದ ಅವರು ನಂತರದ ಚುನಾವಣೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಈ ಬಾರಿಯಾದರೂ ಗೆಲುವು ಸಾಧಿಸಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ.

ಅಭ್ಯರ್ಥಿ ಘೋಷಿಸದ ಜೆಡಿಎಸ್

ಕೋಲಾರದ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಫೈನಲ್ ಮಾಡಿರುವ ಜೆಡಿಎಸ್ ಕೆಜಿಎಫ್‌ನಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಂ ಭಕ್ತವತ್ಸಲಂರವರು ನಿಧನರಾದ ನಂತರ ಜೆಡಿಎಸ್ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಪ್ರಬಲ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡುವ ತಂತ್ರ ಇದು ಎನ್ನಲಾಗುತ್ತಿದೆ.

2023ರ ಚುನಾವಣೆ

ಕಳೆದ 25 ವರ್ಷಗಳಿಂದ ಕುಸಿಯುತ್ತಾ ಬಂದಿರುವ ಈ ಪಟ್ಟಣದ ಪುನಶ್ಚೇತನಕ್ಕೆ ಅಗತ್ಯವಿದ್ದ ಯೋಜನೆಗಳ ಬಗೆಗಿನ ಮಾತುಗಳನ್ನು ಯಾವ ರಾಜಕಾರಣಿಯೂ ಆಡಿರಲಿಲ್ಲ. ಆದರೆ ರೂಪಾ ಶಶಿಧರ್ ಆ ನಿಟ್ಟಿನಲ್ಲಿ ಒಂದಷ್ಟು ಮುಂದುವರಿದಿದ್ದಾರೆ. ಆದರೆ, ಕೆಜಿಎಫ್‌ನ ರಾಜಕಾರಣ ಒಂದಷ್ಟು ತಮಿಳುನಾಡಿನ ರೀತಿ, ಒಂದಷ್ಟು ಕೋಲಾರ ಜಿಲ್ಲೆಯ ರೀತಿ ನಡೆಯುತ್ತದೆ. ಅಲ್ಲಿ ಯಾವಾಗ ಯಾವ ಅಲೆ ಬೀಸುತ್ತದೆ ಎಂದು ಹೇಳಲು ಬರುವುದಿಲ್ಲ. ಆ ಅನಿಶ್ಚಿತತೆಯ ಹೊರತಾಗಿ ಸದ್ಯಕ್ಕೆ ರೂಪಾ ಶಶಿಧರ್ ಅವರೇ ಇನ್ನೊಂದು ಅವಧಿಗೆ ಶಾಸಕರಾಗುವ ಸಾಧ್ಯತೆಯಂತೂ ಇದ್ದೇ ಇದೆ. ಅವರಿಗೆ ಬಿಜೆಪಿಯ ವೈ.ಸಂಪಂಗಿ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣುತ್ತಿದ್ದಾರೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಪಕ್ಷಾತೀತವಾಗಿ ಒಗ್ಗೂಡಿದ ಸಮುದಾಯದ ನಾಯಕರು

0
ಜನಸಂಖ್ಯಾಗನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಹೋರಾಟದ ಸೂಚನೆ ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಸಭೆ ನಡೆದಿದೆ. ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ,...