Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್‌ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?

- Advertisement -
- Advertisement -

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೂ 13 ಚುನಾವಣೆಗಳು ನಡೆದಿದ್ದರೂ ಕೇವಲ ಐವರು ಶಾಸಕರನ್ನು ಮಾತ್ರ ಕಂಡ ವಿಶಿಷ್ಟ ಕ್ಷೇತ್ರವಿದು. ಅದರಲ್ಲಿಯೂ 8 ಬಾರಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜಯ ಕಂಡಿದ್ದಾರೆ. ಹಾಗಾಗಿ ಅದನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂತಲೇ ಹೇಳಬಹುದು. 1983 ರಿಂದ ಅಂದರೆ ಸತತ 9 ಚುನಾವಣೆಗಳಲ್ಲಿ ಈ ಕ್ಷೇತ್ರವು ಕೆ.ಆರ್ ರಮೇಶ್ ಕುಮಾರ್ (ಸ್ವಾಮಿ) ವರ್ಸಸ್ ವೆಂಕಟಶಿವಾರೆಡ್ಡಿ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ. 2018ರ ಚುನಾವಣೆ ಹೊರತುಪಡಿಸಿ ಉಳಿದ ಯಾವ ಚುನಾವಣೆಯಲ್ಲಿಯೂ ಯಾರೂ ಸಹ ಸತತ ಎರಡನೇ ಬಾರಿಗೆ ಶಾಸಕರಾಗಲು ಸಾಧ್ಯವಾಗಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಾದ ಕೆ.ಆರ್ ರಮೇಶ್ ಕುಮಾರ್‌ರವರು 2013 ಮತ್ತು 2018ರಲ್ಲಿಯೂ ಗೆಲ್ಲುವ ಮೂಲಕ ಆ ಸಂಪ್ರದಾಯವನ್ನು ಮುರಿದಿದ್ದಾರೆ.

ರಾಜಕೀಯ ಇತಿಹಾಸ

1962ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ನಾರಾಯಣಗೌಡರು ಸ್ವತಂತ್ರ ಅಭ್ಯರ್ಥಿ ಬಿ.ಎಲ್ ನಾರಾಯಣಸ್ವಾಮಿಯವರನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದ್ದರು. ಆದರೆ 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಬಿ.ಎಲ್ ನಾರಾಯಣಸ್ವಾಮಿಯವರು ಕಾಂಗ್ರೆಸ್‌ನ ಎಸ್.ಬಿ ರೆಡ್ಡಿಯವರನ್ನು ಮಣಿಸಿ ಶಾಸಕರಾದರು. 1972ರಲ್ಲಿ NCO (ನ್ಯಾಷನಲಿಸ್ಟ್ ಕಾಂಗ್ರೆಸ್ ಆರ್ಗನೈಸೇಷನ್) ಪಕ್ಷದ ಎಸ್.ಬಾಚಿ ರೆಡ್ಡಿಯವರು ಕಾಂಗ್ರೆಸ್‌ನ ಸೈಯ್ಯದ್ ಅಬ್ದುಲ್ ಅಲೀಂರವರನ್ನು ಸೋಲಿಸಿ ಶಾಸಕರಾದರು.

ಕೆ.ಆರ್ ರಮೇಶ್ ಕುಮಾರ್ ಆಗಮನ

ಬೆಂಗಳೂರಿನಲ್ಲಿ ಬಿ.ಎಸ್‌ಸಿ ಪದವಿ ಪಡೆದು ಹಲವು ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ ಸ್ವಾಮಿಯವರು (ಕೋಲಾರ ಜಿಲ್ಲೆಯಲ್ಲಿ ರಮೇಶ್ ಕುಮಾರ್‌ರವರನ್ನು ಕರೆಯುವ ಅಡ್ಡ ಹೆಸರು ಸ್ವಾಮಿ) ಡಿ.ದೇವರಾಜ ಅರಸ್‌ರವರ ಪ್ರಭಾವದಿಂದ ರಾಜಕೀಯ ಪ್ರವೇಶಿಸಿದರು. 1978ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಮೊದಲ ವಿಧಾನಸಭಾ ಚುನಾವಣೆ ಎದುರಿಸಿದ ಅವರು ಕಾಂಗ್ರೆಸ್‌ನ ಆರ್.ಜಿ ನಾರಾಯಣರೆಡ್ಡಿಯವರನ್ನು 19,800 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಸಿಸಿದರು. ಆಗ ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು!

ಕೆ.ಆರ್ ರಮೇಶ್ ಕುಮಾರ್ ವರ್ಸಸ್ ಜಿ.ಕೆ ವೆಂಕಟಶಿವಾರೆಡ್ಡಿ

1983ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬ್ರಾಹ್ಮಣ ಸಮುದಾಯದ ಕೆ.ಆರ್ ರಮೇಶ್ ಕುಮಾರ್ ಕಾಂಗ್ರೆಸ್‌ನ ರೆಡ್ಡಿ ಸಮುದಾಯದ ಜಿ.ಕೆ ವೆಂಕಟಶಿವಾರೆಡ್ಡಿಯವರ ಎದುರು ಕೇವಲ 642 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಅಲ್ಲಿಂದ 2018ರವರೆಗೆ ಈ ಇಬ್ಬರೂ ಸತತ 9 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ರಮೇಶ್ ಕುಮಾರ್ 5 ಬಾರಿ ಜಯಗಳಿಸಿ ಶಾಸಕರಾದರೆ ವೆಂಕಟಶಿವಾರೆಡ್ಡಿಯವರು 4 ಬಾರಿ ಗೆದ್ದು ಶಾಸಕರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಚುನಾವಣೆಗಳಲ್ಲಿ ಗೆಲುವಿನ ಅಂತರ ಸರಾಸರಿ 5,000 ಮತಗಳಾಗಿವೆ.

ಜೆ.ಕೆ ವೆಂಕಟಶಿವಾರೆಡ್ಡಿ

1985ರ ಚುನಾವಣೆಯ ಹೊತ್ತಿಗೆ ಕೆ.ಆರ್ ರಮೇಶ್ ಕುಮಾರ್ ಜನತಾ ಪಕ್ಷ ಸೇರಿದ್ದರು. ಆಗ ಅವರು ಕಾಂಗ್ರೆಸ್‌ನಲ್ಲಿ ವೆಂಕಟಶಿವಾರೆಡ್ಡಿಯವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿಯವರು ಜನತಾದಳದ ಕೆ.ಆರ್ ರಮೇಶ್‌ಕುಮಾರ್‌ರವರನ್ನು ಸೋಲಿಸಿದರು.

1994ರಲ್ಲಿ ಜನತಾದಳದಲ್ಲಿದ್ದ ರಮೇಶ್‌ಕುಮಾರ್‌ರವರು ವೆಂಕಟಶಿವಾರೆಡ್ಡಿಯವರನ್ನು ಸೋಲಿಸಿದರು. ಆಗಿನ ಜನತಾದಳ ಸರ್ಕಾರ ರಮೇಶ್‌ಕುಮಾರ್‌ರವರನ್ನು ವಿಧಾನಸಭೆಯ ಸ್ಪೀಕರ್ ಆಗಿ ನೇಮಿಸಿತು. 1999ರ ಚುನಾವಣೆ ಹೊತ್ತಿಗೆ ಜನತಾದಳ ತೊರೆದಿದ್ದ ರಮೇಶ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ವೆಂಕಟಾಶಿವಾರೆಡ್ಡಿಯವರ ಎದುರು ಸೋತರು.

2004ರ ಚುನಾವಣೆ ಹೊತ್ತಿಗೆ ರಮೇಶ್ ಕುಮಾರ್‌ರವರು ಕಾಂಗ್ರೆಸ್ ಪಕ್ಷ ಸೇರಿದ್ದರು. ಈವರೆಗೂ ಕಾಂಗ್ರೆಸ್‌ನಲ್ಲಿದ್ದ ವೆಂಕಟಾಶಿವರೆಡ್ಡಿಯವರು, ಪಕ್ಷ ತೊರೆದು ಬಿಜೆಪಿ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ರಮೇಶ್ ಕುಮಾರ್ 8,610 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2008ರ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿಯವರು ಜೆಡಿಎಸ್‌ನಿಂದ ಗೆದ್ದು ಶಾಸಕರಾದರು.

2013ರಲ್ಲಿ ಕೆ.ಆರ್ ರಮೇಶ್ ಕುಮಾರ್‌ರವರು ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ ವೆಂಕಟಶಿವಾರೆಡ್ಡಿಯವರು ಜೆಡಿಎಸ್‌ನಿಂದ ಸ್ಪರ್ಧಿಸಿದರು. ಎಂದಿನಂತೆ ಒಮ್ಮೆ ಅವರು, ಒಮ್ಮೆ ಇವರು ಎಂಬಂತೆ ರಮೇಶ್ ಕುಮಾರ್ 3,893 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2016ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿ ಸಹ ಆದರು. ಕೆ.ಪಿ.ಎಂ.ಇ ಕಾಯ್ದೆ ಜಾರಿಗೊಳಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.

ಸಂಪ್ರದಾಯಕ್ಕೆ ಬ್ರೇಕ್

2018ರ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ರಮೇಶ್ ಕುಮಾರ್ ಮತ್ತು ವೆಂಕಟಶಿವಾರೆಡ್ಡಿಯವರು ಪರಸ್ಪರ ಎದುರಾಳಿಗಳಾಗಿದ್ದರು. ಆ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿಯವರು ಗೆಲುವು ಸಾಧಿಸಿದ್ದರೆ 40 ವರ್ಷಗಳ ಸಂಪ್ರದಾಯ ಮುಂದುವರೆಯುತ್ತಿತ್ತು. ಆದರೆ ರಮೇಶ್ ಕುಮಾರ್ 10,552 ಮತಗಳ ಅಂತರದಿಂದ ಅವರನ್ನು ಸೋಲಿಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಆದ ರಮೇಶ್ ಕುಮಾರ್ ಹಲವು ಕಾರಣಗಳಿಗೆ ಗಮನ ಸೆಳೆದಿದ್ದರು. ಅದರಲ್ಲಿಯೂ ಆಪರೇಷನ್ ಕಮಲ ನಡೆದಾಗ 18 ಶಾಸಕರನ್ನು ಅನರ್ಹಗೊಳಿಸಿದ್ದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಹೊಸ ಬಿಜೆಪಿ ಸರ್ಕಾರ ರಚನೆ ಸುಲಭಕ್ಕೆ ಸಾಧ್ಯವಾಗದಂತೆ ಅವರು ತಮ್ಮ ಸ್ಪೀಕರ್ ಅಧಿಕಾರವನ್ನು ಬಳಸಿದ್ದರು.

ಜಾತಿವಾರು ಅಂದಾಜು ಮತಗಳು

ಕೋಲಾರದ ಎಲ್ಲ ಕ್ಷೇತ್ರಗಳಂತೆ ಶ್ರೀನಿವಾಸಪುರದಲ್ಲಿಯೂ ದಲಿತ ಸಮುದಾಯಗಳ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಎಸ್‌ಸಿ ಮತ್ತು ಎಸ್‌ಟಿ ಸೇರಿ 70,000 ಮತಗಳಿವೆ ಎನ್ನಲಾಗುತ್ತಿದೆ. ನಂತರದ ಸ್ಥಾನದಲ್ಲಿ ರೆಡ್ಡಿ ಮತ್ತು ಒಕ್ಕಲಿಗರು ಇದ್ದು ತಲಾ 30,000 ಮತಗಳನ್ನು ಹೊಂದಿದ್ದಾರೆ. ಸುಮಾರು 16,000ದಷ್ಟು ಮುಸ್ಲಿಂ ಮತಗಳಿವೆ. ಇನ್ನುಳಿದಂತೆ ಕುರುಬ, ಬಲಿಜ, ತಿಗಳ ಇತ್ಯಾದಿ ಹಿಂದುಳಿದ ವರ್ಗದ 50,000ದಷ್ಟು ಮತಗಳಿವೆ. ಬ್ರಾಹ್ಮಣ, ಶೆಟ್ರು ಸೇರಿದಂತೆ ಇತರರು ಸುಮಾರು 5-10 ಸಾವಿರ ಮತಗಳಿವೆ.

ಸದ್ಯದ ಪರಿಸ್ಥಿತಿ

ಶ್ರೀನಿವಾಸಪುರದಲ್ಲಿ ತಮ್ಮ ಸಮುದಾಯದ ಮತಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಬ್ರಾಹ್ಮಣ ಸಮುದಾಯದ ರಮೇಶ್ ಕುಮಾರ್‌ರವರು ತಮ್ಮ ಸ್ವಂತ ವರ್ಚಸ್ಸಿನಿಂದ ಆರು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಈ ವರ್ಚಸನ್ನು ಇಂದಿನವರೆಗೂ ಸಹ ಕಾಪಾಡಿಕೊಂಡು ಬಂದಿರುವುದು ವಿಶೇಷ. ಈ ಕ್ಷೇತ್ರದಲ್ಲಿ ಪಕ್ಷ ಅಥವಾ ಜಾತಿ ರಾಜಕೀಯಕ್ಕಿಂತ ವ್ಯಕ್ತಿ ಕೇಂದ್ರಿತ ರಾಜಕೀಯ ಕೆಲಸ ಮಾಡುತ್ತದೆ. ಅದು ಸ್ವಾಮಿ ವರ್ಸಸ್ ವೆಂಕಟಶಿವಾರೆಡ್ಡಿ ನಡುವಿನ ರಾಜಕೀಯವಾಗಿದೆ. ಹಾಗಾಗಿ ರಮೇಶ್ ಕುಮಾರ್ ಹೊರತುಪಡಿಸಿ ಬೇರೆ ಯಾರೂ ಸಹ ಕಾಂಗ್ರೆಸ್ ಟಿಕೆಟ್ ಕೇಳುವ ಪರಿಸ್ಥಿತಿ ಇಲ್ಲ.

ಡಾ.ಕೆ ಸುಧಾಕರ್‌

ಸದ್ಯ ಶಾಸಕರಾಗಿರುವ ರಮೇಶ್ ಕುಮಾರ್‌ರವರು ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಜಾರಿಗೊಳಿಸಿ ಜಿಲ್ಲೆಯ ಜನರ ಬೆಂಬಲ ಗಳಿಸಿದ್ದಾರೆ. ಅಲ್ಲದೆ ಶ್ರೀನಿವಾಸಪುರ ಗುಡಿಸಲು ಮುಕ್ತ ಕ್ಷೇತ್ರ ಎಂದು ಹೇಳಿಕೊಳ್ಳುತ್ತಾರೆ. ಇವುಗಳ ಆಧಾರದಲ್ಲಿ 7ನೇ ಬಾರಿಗೆ ಮತ್ತು ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ. ಸತತ ಎರಡನೇ ಬಾರಿ ಗೆಲ್ಲಲಾಗದ ಸಂಪ್ರದಾಯ ಮುರಿದು ಗೆದ್ದಿರುವ ಅವರು ಮೂರನೇ ಗೆಲುವು ದಾಖಲಿಸುವ ಹಂಬಲದಲ್ಲಿದ್ದಾರೆ. ಆದರೆ ಕಾಂಗ್ರೆಸ್‌ನೊಳಗಿನ ಕೆ.ಎಚ್ ಮುನಿಯಪ್ಪ ಬಣ ಅದಕ್ಕೆ ತಡೆಗೋಡೆಯಾಗಿದೆ. ಏಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪನವರ ಸೋಲು ಮತ್ತು ಬಿಜೆಪಿಯ ಮುನಿಸ್ವಾಮಿ ಗೆಲುವಿನ ನೇತೃತ್ವ ವಹಿಸಿದ್ದವರು ಇದೇ ಕೆ.ಆರ್ ರಮೇಶ್ ಕುಮಾರ್ ಎಂಬುದು ಕೋಲಾರದಾದ್ಯಂತ ಜನರು ಮಾತಾಡಿಕೊಳ್ಳುವ ವಿಷಯವಾಗಿದೆ. ಒಂದು ಕಡೆ ಮುನಿಯಪ್ಪನವರು ರಮೇಶ್ ಕುಮಾರ್‌ರವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಸಂಸದ ಮುನಿಸ್ವಾಮಿ ಬಿಜೆಪಿ ಪಕ್ಷದ ಸಂಘಟನೆಯನ್ನು ಬೆಳೆಸುತ್ತಿದ್ದಾರೆ. ಇದು ರಮೇಶ್ ಕುಮಾರ್‌ರವರಿಗೆ ತಲೆನೋವಾಗಿ ಪರಿಣಮಿಸಿದೆ.

2018ರಲ್ಲಿಯೂ ಮುನಿಯಪ್ಪ ಬಣ ರಮೇಶ್ ಕುಮಾರ್ ವಿರುದ್ಧವಿತ್ತು. ಆದರೂ ಆ ತಡೆಗೋಡೆ ದಾಟಿ 10,552 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿರುವ ಅವರು ಈ ಬಾರಿ ಒದಗಿರುವ ವಿರೋಧವನ್ನು ಹೇಗೆ ನಿವಾರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿಂತಿದೆ.

5ನೇ ಗೆಲುವಿನ ನಿರೀಕ್ಷೆಯಲ್ಲಿ ಜೆಡಿಎಸ್‌ನ ವೆಂಕಟಶಿವಾರೆಡ್ಡಿ

75 ವರ್ಷದ ವೆಂಕಟಶಿವಾರೆಡ್ಡಿಯವರು ತಮ್ಮ ಜೀವಮಾನದ 5ನೇ ಗೆಲುವು ಕಾಣುವ ಹಂಬಲದಲ್ಲಿದ್ದಾರೆ. 2018ರಲ್ಲಿ ಎರಡನೇ ಬಾರಿ ಸೋತಿರುವ ಅವರು ಆ ಅನುಕಂಪದಲ್ಲಿ ಗೆಲುವಿನ ಕನಸು ಕಾಣುತ್ತಿದ್ದಾರೆ. ಜೆಡಿಎಸ್ ಪಕ್ಷದ ಟಿಕೆಟ್ ಅವರಿಗೆ ಪಕ್ಕಾ ಆಗಿದೆ. ಏಕೆಂದರೆ ಕಳೆದ 45 ವರ್ಷಗಳಲ್ಲಿ ಸ್ವಾಮಿ ಮತ್ತು ವೆಂಕಟಶಿವಾರೆಡ್ಡಿ ಬಿಟ್ಟರೆ ಬೇರೆ ಯಾರೂ ಪೈಪೋಟಿ ಕೊಡುವುದಿರಲಿ ಕನಿಷ್ಟ 10 ಸಾವಿರದಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಕೋಲಾರದ ಅಂಜುಮಾನ್ ಇಸ್ಲಾಮಿಯ ಅಧ್ಯಕ್ಷರಾಗಿದ್ದ ಜಮೀರ್‌ರವರು ಇಷ್ಟು ದಿನ ಕಾಂಗ್ರೆಸ್ ಬೆಂಬಲಿಸುತ್ತಿದ್ದರು. ಆದರೆ 2019ರಲ್ಲಿ ಕಾಂಗ್ರೆಸ್ ಮುಖಂಡರೇ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದು ಮುಸ್ಲಿಮರಿಗೆ ಇರಿಸುಮುರಿಸು ತಂದಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಮೀರ್‌ರವರನ್ನು ಜೆಡಿಎಸ್ ಪಕ್ಷ ಸೆಳೆದುಕೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು, ಜಮೀರ್ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಅಂಜುಮಾನ್ ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳು ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ಜಿಲ್ಲೆಯ ಒಂದಷ್ಟು ಮುಸ್ಲಿಮರು ಜೆಡಿಎಸ್ ಪಕ್ಷದ ಕಡೆ ವಾಲುವ ಸಂಭವವಿದೆ.

ವೆಂಕಟಶಿವಾರೆಡ್ಡಿಗೆ ಬಿಜೆಪಿ ಬೆಂಬಲ

ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಮುನಿರತ್ನ ಮತ್ತು ಚಿಕ್ಕಬಳ್ಳಾಪುರದ ಸಚಿವ ಡಾ.ಕೆ ಸುಧಾಕರ್‌ರವರು ಈ ಬಾರಿ ರಮೇಶ್ ಕುಮಾರ್‌ರವರನ್ನು ಶತಾಯಗತಾಯ ಸೋಲಿಸಲು ಪಣತೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಅವರು ಬಿಜೆಪಿಗೆ ಪಕ್ಷಾಂತರವಾಗುವ ವೇಳೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್‌ರವರ ಕೊಟ್ಟ ಪೆಟ್ಟು ಅವರನ್ನಿನ್ನೂ ಕಾಡುತ್ತಿದೆ. ಹಾಗಾಗಿ ಅವರಿಬ್ಬರೂ ಜೆಡಿಎಸ್ ಪಕ್ಷದ ವೆಂಕಟಶಿವಾರೆಡ್ಡಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವೆಂಕಟಶಿವಾರೆಡ್ಡಿ ಹೊರತುಪಡಿಸಿ ಬೇರೆ ಯಾರು ನಿಂತರೂ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂಬುದನ್ನು ಬಿಜೆಪಿ ಅರಿತುಕೊಂಡಿದೆ. ಏಕೆಂದರೆ 2019ರ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಡಾ.ವೇಣುಗೋಪಾಲ್ ಕೆ.ಎನ್ ಪಡೆದ ಮತಗಳು 4,208. 2013ರ ಚುನಾವಣೆಯಲ್ಲಿ ಬಿಜೆಪಿಯ ಕೆ.ವೆಂಕಟೇಗೌಡ ಪಡೆದ ಮತಗಳು ಕೇವಲ 2,379. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಎಂ ಲಕ್ಷ್ಮಣ್ ಗೌಡ ಪಡೆದಿದ್ದು 3,825 ಮತಗಳು ಮಾತ್ರ. ಅಂದರೆ ಬಿಜೆಪಿ ಎಷ್ಟೇ ತಿಪ್ಪರಲಾಗ ಹೊಡೆದರೂ ಸಹ ಈ ಕ್ಷೇತ್ರದಲ್ಲಿ 5 ಸಾವಿರ ಮತಗಳನ್ನು ಸಹ ಪಡೆಯಲಾಗಿಲ್ಲ. ಹಾಗಾಗಿ ವೆಂಕಟಶಿವಾರೆಡ್ಡಿಯವರನ್ನೇ ಬಿಜೆಪಿಗೆ ಕರೆತರುವ ಯೋಚನೆಗಳು ಸಹ ನಡೆಯುತ್ತಿವೆ. ವೆಂಕಟಶಿವಾರೆಡ್ಡಿಯವರು ಸಹ ಬಿಜೆಪಿ ಮುಖಂಡರೊಂದಿಗೆ ಸಖ್ಯ ಹೊಂದಿದ್ದಾರೆ. ಈಗಾಗಲೆ 2004ರಲ್ಲಿ ಒಮ್ಮೆ ವೆಂಕಟಶಿವಾರೆಡ್ಡಿಯವರು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಆದರೂ ಈ ಬಾರಿ ತಮ್ಮ ವೈಯಕ್ತಿಕ ವರ್ಚಸ್ಸಿನ ಮತಗಳ ಜೊತೆ ಬಿಜೆಪಿ ಮತಗಳೂ ಸೇರಿದರೆ ಗೆಲುವಿನ ದಡ ಮುಟ್ಟಬಹುದೆಂಬ ನಂಬಿಕೆಯಲ್ಲಿ ಅವರಿದ್ದಾರೆ.

ಒಂದು ವೇಳೆ ವೆಂಕಟಶಿವಾರೆಡ್ಡಿಯವರು ಬಿಜೆಪಿಗೆ ಬಾರದಿದ್ದರೂ ಬಿಜೆಪಿ ನೆಪ ಮಾತ್ರಕ್ಕೆ ಡಾ.ವೇಣುಗೋಪಾಲ್‌ರನ್ನು ಕಣಕ್ಕಿಳಿಸಿ, ಹಿಂಬಾಗಿಲಿನಿಂದ ಜೆಡಿಎಸ್‌ನ ವೆಂಕಟಶಿವಾರೆಡ್ಡಿಯವರನ್ನೆ ಬೆಂಬಲಿಸುತ್ತದೆ. ಏಕೆಂದರೆ ಕಾಂಗ್ರೆಸ್‌ನ ರಮೇಶ್ ಕುಮಾರ್ ಸೋಲಿಸುವುದು ಬಿಜೆಪಿಗೆ ಮುಖ್ಯವಾದಂತೆ ಕಾಣುತ್ತಿದೆ.

ಅಲ್ಲದೆ ಗುಂಜೂರು ಶ್ರೀನಿವಾಸರೆಡ್ಡಿ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಅವರು ಎಷ್ಟರಮಟ್ಟಕ್ಕೆ ಪ್ರಭಾವ ಬೀರುತ್ತಾರೆ? ಚುನಾವಣೆ ಸಮಯದಲ್ಲಿ ಹಿಂದೆ ಸರಿಯುತ್ತಾರಾ? ಎಂಬುದನ್ನು ಈಗಲೇ ಹೇಳುವುದು ಕಷ್ಟವಿದೆ.

2023ರ ಚುನಾವಣೆ ಮತ್ತೊಮ್ಮೆ ರಮೇಶ್ ಕುಮಾರ್ ವರ್ಸಸ್ ವೆಂಕಟಶಿವಾರೆಡ್ಡಿ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ರಮೇಶ್ ಕುಮಾರ್ ಮಹಿಳೆಯರ ಮೇಲಿನ ಅತ್ಯಾಚಾರ ಕುರಿತಾಗಿ ನೀಡಿದ ಕೆಟ್ಟ ಹೇಳಿಕೆಯಿಂದಾಗಿ ಟೀಕೆಗೆ ಗುರಿಯಾಗಿದ್ದರು. ಆದರೆ ಅದೆಲ್ಲ ಕ್ಷೇತ್ರದಲ್ಲಿ ಪರಿಣಾಮ ಬೀರುವುದಿಲ್ಲ ಎನ್ನಲಾಗುತ್ತಿದೆ. ದಲಿತರು ಮತ್ತು ಹಿಂದುಳಿದ ಸಮುದಾಯದ ಮತಗಳು ಬೇಷರತ್ ಆಗಿ ಅವರ ಕೈಹಿಡಿದರೆ ಗೆಲುವು ಸಾಧ್ಯ. ಇದಕ್ಕೆ ಕೆ.ಎಚ್ ಮುನಿಯಪ್ಪನವರ ಬಣ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಂಗಾರಪೇಟೆ: ಕಾಂಗ್ರೆಸ್ ಒಳಜಗಳದ ಲಾಭ ಪಡೆಯಲು ಜೆಡಿಎಸ್-ಬಿಜೆಪಿ ಪೈಪೋಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...