Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಂಗಾರಪೇಟೆ: ಕಾಂಗ್ರೆಸ್ ಒಳಜಗಳದ ಲಾಭ ಪಡೆಯಲು ಜೆಡಿಎಸ್-ಬಿಜೆಪಿ ಪೈಪೋಟಿ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಂಗಾರಪೇಟೆ: ಕಾಂಗ್ರೆಸ್ ಒಳಜಗಳದ ಲಾಭ ಪಡೆಯಲು ಜೆಡಿಎಸ್-ಬಿಜೆಪಿ ಪೈಪೋಟಿ

- Advertisement -
- Advertisement -

ಕೆ.ಸಿ. ರೆಡ್ಡಿಯವರು ಮೈಸೂರು ಪ್ರಾಂತ್ಯದ ಮೊದಲ ಮುಖ್ಯಮಂತ್ರಿಗಳಾಗಿದ್ದಾಗ ಅವರು ಬಂಗಾರಪೇಟೆ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರು. ಸಾಮಾನ್ಯ ಕ್ಷೇತ್ರವಾಗಿದ್ದ ಬಂಗಾರಪೇಟೆಯನ್ನು 1967ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿತ್ತು. 1972ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಬೇತಮಂಗಲವು ಆನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. 2008ರಲ್ಲಿ ಬೇತಮಂಗಲವನ್ನು ಬಂಗಾರಪೇಟೆಯ ಪ.ಜಾ. ಮೀಸಲು ಕ್ಷೇತ್ರವನ್ನಾಗಿ ಮರುವಿಂಗಡನೆ ಮಾಡಲಾಗಿದೆ.

ಜಾತಿವಾರು ಲೆಕ್ಕಾಚಾರ

ಬಂಗಾರಪೇಟೆ ಕ್ಷೇತ್ರವು ಅತಿ ಹೆಚ್ಚು ದಲಿತ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಸುಮಾರು 70-80 ಸಾವಿರದಷ್ಟು ಎಸ್‌ಸಿ ಮತಗಳಿವೆ. ಎರಡನೇ ಸ್ಥಾನದಲ್ಲಿ ಒಕ್ಕಲಿಗರಿದ್ದು ಸುಮಾರು 40 ಸಾವಿರದಷ್ಟು ಮತಗಳಿವೆ. ಕುರುಬರು, ಪಳ್ಳೀಗ ಎಂದು ಕರೆಯುವ ತಿಗಳ ಸಮುದಾಯ ಮತ್ತು ಮುಸ್ಲಿಮರು ನಂತರದ ಸ್ಥಾನದಲ್ಲಿದ್ದಾರೆ. ಈ ಸಮುದಾಯಗಳ ತಲಾ 18-20 ಸಾವಿರ ಮತಗಳಿವೆ ಎನ್ನಲಾಗುತ್ತಿದೆ. ದಲಿತರಲ್ಲಿ ಸುಮಾರು 10 ಸಾವಿರ ಜನಸಂಖ್ಯೆಯಿರುವ ಭೋವಿ ಸಮುದಾಯದ ಮತದಾರರು ಇದ್ದಾರೆ. ಭೋವಿ ಸಮುದಾಯದ ಒಟ್ಟಾರೆ ಮತದಾನದ ಪ್ಯಾಟರ್ನ್ ಉಳಿದ ದಲಿತ ಸಮುದಾಯಗಳ ದಿಕ್ಕಿನಲ್ಲಿ ಸಾಮಾನ್ಯವಾಗಿ ಇರುವುದಿಲ್ಲ ಎಂಬ ಅವಲೋಕನಗಳ ನಡುವೆ, ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಉಳಿದ ಸಮುದಾಯಗಳ ಮತಗಳು ನಿರ್ಣಾಯಕವೆನಿಸಿವೆ.

ಕೆ.ಸಿ ರೆಡ್ಡಿ

ರಾಜಕೀಯ ಇತಿಹಾಸ

1957 ಮತ್ತು 62ರಲ್ಲಿ ಬಂಗಾರಪೇಟೆ ಸಾಮಾನ್ಯ ಕ್ಷೇತ್ರವಾಗಿದ್ದಾಗ ಇ.ನಾರಾಯಣ ಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಡಿ.ವೆಂಕಟರಾಮಯ್ಯ ಮತ್ತು ಕೆ.ವಿ ನಾರಾಯಣರೆಡ್ಡಿಯವರನ್ನು ಕ್ರಮವಾಗಿ ಸೋಲಿಸಿ ಎರಡು ಬಾರಿ ಆಯ್ಕೆಯಾಗಿದ್ದರು. 1967ರಲ್ಲಿ ಬೇತಮಂಗಲ ವಿಧಾನಸಭಾ ಕ್ಷೇತ್ರವಾಗಿ ಅದು ಬದಲಾದಾಗಲೂ ಅವರು ಕಾಂಗ್ರೆಸ್ ಟಿಕೆಟ್ ಅಡಿ ಸ್ಪರ್ಧಿಸಿ ಸ್ವತಂತ್ರ ಅಭ್ಯರ್ಥಿ ಬಿ.ಎಂ.ಎಸ್ ಗೌಡರನ್ನು ಸೋಲಿಸಿ ಸತತ ಮೂರನೇ ಬಾರಿಗೆ ಶಾಸಕರಾಗಿದ್ದರು. 1972ರಲ್ಲಿ ಸ್ವತಂತ್ರ ಅಭ್ಯರ್ಥಿ ದೊರೆಸ್ವಾಮಿ ನಾಯ್ಡುರವರು ಕಾಂಗ್ರೆಸ್ ಪಕ್ಷದ ಕೆ.ಸಿ ವೆಂಕಟೇಶ್‌ರವರನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದ್ದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬೇತಮಂಗಲ

1978ರಲ್ಲಿ ಬೇತಮಂಗಲ ಕ್ಷೇತ್ರವನ್ನು ಪ.ಜಾ ಮೀಸಲು ಕ್ಷೇತ್ರ ಎಂದು ಘೋಷಿಸಲಾಯಿತು. ಆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಸಿ.ವೆಂಕಟೇಶಪ್ಪನವರು ಜನತಾ ಪಕ್ಷದ ಟಿ.ಚನ್ನಯ್ಯನವರನ್ನು ಸೋಲಿಸಿದರೆ, 1983ರ ಚುನಾವಣೆಯಲ್ಲಿಯೂ ಸಹ ಅವರು ಲಕ್ಷ್ಮಮ್ಮನವರನ್ನು ಸೋಲಿಸಿ ಎರಡನೇ ಬಾರಿ ಶಾಸಕರಾಗಿದ್ದರು. ಆದರೆ 1985ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಿ.ವೆಂಕಟೇಶಪ್ಪನವರ ಬದಲಿಗೆ ವಿ.ವೆಂಕಟಮುನಿಯವರಿಗೆ ಟಿಕೆಟ್ ನೀಡಿತು. ಆದರೆ ವೆಂಕಟಮುನಿಯವರು ಜನತಾ ಪಕ್ಷದ ಎ.ಚಿನ್ನಪ್ಪನವರ ಎದುರು ಪರಾಭವಗೊಂಡರು.

ಬೇತಮಂಗಲ ನಾರಾಯಣಸ್ವಾಮಿ ಆಗಮನ

ಬೇತಮಂಗಲ ನಾರಾಯಣಸ್ವಾಮಿ ಎಂದು ಕರೆಸಿಕೊಳ್ಳುವ ಭೋವಿ ಸಮುದಾಯದ ಎಂ.ನಾರಾಯಣಸ್ವಾಮಿಯವರು 1989ರಲ್ಲಿ ಜನತಾದಳ ಅಭ್ಯರ್ಥಿಯಾದರು. ಕಾಂಗ್ರೆಸ್ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಸಿ.ವೆಂಕಟೇಶಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಎಂ ನಾರಾಯಣಸ್ವಾಮಿಯವರು ಜಯಗಳಿಸಿದರು. 1994ರಲ್ಲಿಯೂ ಜನತಾದಳದ ಎಂ ನಾರಾಯಣಸ್ವಾಮಿಯವರು ಸ್ವತಂತ್ರ ಅಭ್ಯರ್ಥಿ ಸಿ.ವೆಂಕಟೇಶಪ್ಪನವರನ್ನು ಸೋಲಿಸಿ ಶಾಸಕರಾದರು. ಆನಂತರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಸಿ.ವೆಂಕಟೇಶಪ್ಪನವರು 1999ರಲ್ಲಿ ಎಂ.ನಾರಾಯಣಸ್ವಾಮಿಯವರನ್ನು ಮಣಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ.

ಮುನಿಸ್ವಾಮಿ

2004ರ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಕಾಂಗ್ರೆಸ್ ಪಕ್ಷವು ಹಾಲಿ ಶಾಸಕ ಸಿ.ವೆಂಕಟೇಶಪ್ಪನವರ ಬದಲಿಗೆ ರಾಮಚಂದ್ರ ಎನ್ನುವವರಿಗೆ ಟಿಕೆಟ್ ನೀಡುತ್ತದೆ. ಅವರು 32,096 ಮತಗಳನ್ನು ಪಡೆದರೆ, ಜನತಾದಳದಿಂದ ಹೊರಬಂದಿದ್ದ ಎಂ ನಾರಾಯಣಸ್ವಾಮಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು 40,570 ಮತಗಳನ್ನು ಪಡೆಯುತ್ತಾರೆ. ಈ ಇಬ್ಬರ ನಡುವಿನ ಕಾಳಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ ವೆಂಕಟಮುನಿಯಪ್ಪನವರು 41,117 ಮತಗಳನ್ನು ಪಡೆಯುವ ಮೂಲಕ ಕೇವಲ 547 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುತ್ತಾರೆ.

2008ರ ಚುನಾವಣೆ ವೇಳೆಗೆ ಎಂ.ನಾರಾಯಣಸ್ವಾಮಿಯವರು ಕಾಂಗ್ರೆಸ್ ಪಕ್ಷ ಸೇರಿ ಬಿಜೆಪಿಯ ವೆಂಕಟಮುನಿಯಪ್ಪನವರನ್ನು ಸೋಲಿಸಿ ಮೂರನೇ ಬಾರಿಗೆ ಶಾಸಕರಾಗುತ್ತಾರೆ. ಆದರೆ ಹೆಚ್ಚು ಕಾಲ ಅಲ್ಲಿ ನಿಲ್ಲದೆ ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ. 2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಂ.ನಾರಾಯಣಸ್ವಾಮಿ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಎಸ್.ಎನ್ ನಾರಾಯಣಸ್ವಾಮಿಯವರನ್ನು 4,043 ಮತಗಳಿಂದ ಸೋಲಿಸಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ವಂಚಿತರಾದ ವೆಂಕಟಮುನಿಯಪ್ಪ ಮುನಿಸಿಕೊಂಡು ಪಕ್ಷದಿಂದ ದೂರ ಉಳಿಯುತ್ತಾರೆ.

ಕಾಂಗ್ರೆಸ್ ಮೇಲುಗೈ

2013ರ ವಿಧಾನಸಭಾ ಚುನಾವಣೆ ವೇಳೆಗೆ ಪರಿಸ್ಥಿತಿ ಬದಲಾಗುತ್ತದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಎಂ ನಾರಾಯಣಸ್ವಾಮಿ ವಿರುದ್ಧ ಜನ ಸಿಟ್ಟಿಗೇಳುತ್ತಾರೆ. ಅವರು ಬಿಜೆಪಿಯಿಂದ ಕಣಕ್ಕಿಳಿದರೆ ಕಾಂಗ್ರೆಸ್ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಮತ್ತೆ ಟಿಕೆಟ್ ನೀಡುತ್ತದೆ. ಆ ಚುನಾವಣೆಯಲ್ಲಿ ಎಸ್.ಎನ್ ನಾರಾಯಣಸ್ವಾಮಿಯವರು 28,377 ಮತಗಳಿಂದ ಎಂ ನಾರಾಯಣಸ್ವಾಮಿಯವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಮುನಿಸಿಕೊಂಡಿದ್ದ ವೆಂಕಟಮುನಿಯಪ್ಪನವರಿಗೆ ಟಿಕೆಟ್ ನೀಡಿ ಮಣೆ ಹಾಕುತ್ತಾರೆ. ಆದರೆ ಕಾಂಗ್ರೆಸ್‌ನ ಎಸ್.ಎನ್ ನಾರಾಯಣಸ್ವಾಮಿಯವರು 70,871 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುರವರು 49,300 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆಯುತ್ತಾರೆ. ಬಿಜೆಪಿ ಅಭ್ಯರ್ಥಿ ವೆಂಕಟಮುನಿಯಪ್ಪನವರು 33,555 ಮತಗಳಿಗೆ ಸೀಮಿತರಾಗುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತಾರೆ!

ಈ ಬಾರಿ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಸತತ ಎರಡು ಬಾರಿ ಶಾಸಕರಾಗಿರುವ ಎಸ್.ಎನ್ ನಾರಾಯಣಸ್ವಾಮಿಯವರು ಮೊದಲ ಅವಧಿಯಲ್ಲಿ ಜೋಡಿ ರಸ್ತೆ ಸೇರಿದಂತೆ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಹೆಸರುಗಳಿಸಿದ್ದರು. ಆನಂತರ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದರೂ ಹೇಳಿಕೊಳ್ಳುವ ಕೆಲಸಗಳಾಗಿಲ್ಲ ಎಂದು ಜನ ದೂರುತ್ತಾರೆ. ಹಾಗಾಗಿ ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಅದೇ ಸಂದರ್ಭದಲ್ಲಿ ಅವರು ಕೆ.ಆರ್ ರಮೇಶ್ ಕುಮಾರ್ ಬಣದ ಪರವಹಿಸಿರುವುದರಿಂದ ಅವರ ವಿರುದ್ಧ ಕೆ.ಎಚ್ ಮುನಿಯಪ್ಪ ಬಣ ಕತ್ತಿ ಮಸೆಯುತ್ತಿದೆ. ಹೇಗಾದರೂ ಮಾಡಿ ಮುಂದಿನ ಚುನಾವಣೆಯಲ್ಲಿ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಟಿಕೆಟ್ ತಪ್ಪಿಸಬೇಕೆಂದು ಆ ಬಣ ತಂತ್ರ ಹೆಣೆಯುತ್ತಿದೆ ಎನ್ನಲಾಗಿದೆ.

ಮಲ್ಲೇಶ್ ಬಾಬು

ಮುನಿಯಪ್ಪನವರ ಬಣದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಕಾರ್ಪೊರೇಟರ್ ಗುಟ್ಟೆ ರಾಜಣ್ಣನವರು ಕಸರತ್ತು ನಡೆಸುತ್ತಿದ್ದಾರೆ. 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ರಾಮಚಂದ್ರಪ್ಪನವರು ಕಾಂಗ್ರೆಸ್ ಸೇರಿದ್ದು ಅವರೂ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬೆದರಿಕೆ ಒಡ್ಡುತ್ತಿದ್ದಾರೆ.

ಜೆಡಿಎಸ್ ಪರಿಸ್ಥಿತಿ

ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುವಾಗಲೇ ಬಂಗಾರಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಭೋವಿ ಸಮುದಾಯದ ಮಲ್ಲೇಶ್ ಬಾಬುರವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಚುನಾವಣೆಯಲ್ಲಿ ಅವರು 49,300 ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಬೆಳೆಯುತ್ತಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಒಕ್ಕಲಿಗ ಮತಗಳನ್ನು ಅವರು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕ್ಷೇತ್ರದಲ್ಲಿ ಒಕ್ಕಲಿಗರು ಯಾರಿಗೆ ಬೆಂಬಲಿಸುತ್ತಾರೋ ಅವರ ವಿರುದ್ಧ ದಲಿತರು ಮತ ಚಲಾಯಿಸುತ್ತಾರೆ ಎಂಬ ರೂಢಿ ಚಾಲ್ತಿಯಲ್ಲಿದ್ದು ಅದು ಮಲ್ಲೇಶ್ ಬಾಬುರವರಿಗೆ ಮುಳುವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು

ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಭೋವಿ ಸಮುದಾಯದ ಎಂ ನಾರಾಯಣಸ್ವಾಮಿಯವರು ಇದೀಗ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಾರೆ. 2018ರಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿರಲಿಲ್ಲ. ಈಗ ಬಿಜೆಪಿ ಟಿಕೆಟ್ ಕೊಟ್ಟರೆ ಪಕ್ಷದಲ್ಲಿ ಉಳಿದುಕೊಳ್ಳುತ್ತೇನೆ, ಇಲ್ಲದಿದ್ದರೆ ಬೇರೊಂದು ಪಕ್ಷಕ್ಕೆ ಸೇರುತ್ತೇನೆ ಎಂದು ಅವರು ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ.

ಇನ್ನು ಕಳೆದ ಚುನಾವಣೆಯಲ್ಲಿ ಸೋತಿರುವ ವೆಂಕಟಮುನಿಯಪ್ಪನವರು ತಮ್ಮ ಮಗ ಜಿಲ್ಲಾ ಪಂಚಾಯತ್ ಸದಸ್ಯ ಬಿ.ವಿ ಮಹೇಶ್‌ಗೆ ಟಿಕೆಟ್ ನೀಡಬೇಕೆಂದು ದುಂಬಾಲು ಬಿದ್ದಿದ್ದಾರೆ. ಮಹೇಶ್ ಕೂಡ ಇಡೀ ಕ್ಷೇತ್ರದಾದ್ಯಂತ ನನಗೇ ಈ ಬಾರಿ ಟಿಕೆಟ್ ಎಂದು ಓಡಾಡಿಕೊಂಡಿದ್ದಾರೆ. ಈ ನಡುವೆ ಭೋವಿ ಸಮುದಾಯದ ಶೇಷು ಎಂಬುವವರು ಸಹ ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳಲ್ಲಿದ್ದ ಅವರು ಈಗ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ.

ಕೆ.ಆರ್ ರಮೇಶ್ ಕುಮಾರ್

ಇದೆಲ್ಲದರ ನಡುವೆ ಕ್ಷೇತ್ರದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದು ಬಿಜೆಪಿ ಸಂಸದ ಮುನಿಸ್ವಾಮಿಯವರು ತಮ್ಮ ಪತ್ನಿ ಶೈಲಜಾರವರಿಗೆ ಬಂಗಾರಪೇಟೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ ಎನ್ನುವುದು. ಶೈಲಜಾರವರಿಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲದಿದ್ದರೂ ಮುನಿಸ್ವಾಮಿಯವರು ರಾಜ್ಯ ರಾಜಕೀಯದಲ್ಲಿ ಆಸಕ್ತಿ ಹೊಂದಿರುವುದರಿಂದ ತಮ್ಮ ಪತ್ನಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಒಳಜಗಳ

ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಕೆ.ಎಚ್ ಮುನಿಯಪ್ಪನವರ ವಿರುದ್ಧ ಬಂಡೆದ್ದ ಕಾಂಗ್ರೆಸ್ ಶಾಸಕರು ಕೆ.ಆರ್ ರಮೇಶ್ ಕುಮಾರ್ ಬಣವಹಿಸಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುನಿಸ್ವಾಮಿಯನ್ನು ಬೆಂಬಲಿಸಿದರು. ಪರಿಣಾಮ ಸತತ ಏಳು ಬಾರಿ ಸಂಸದರಾಗಿದ್ದ ಮುನಿಯಪ್ಪನವರು ಸೋತು ಹೋದರು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುನಿಯಪ್ಪ ಬಣ ಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ. ಚಂದ್ರಾರೆಡ್ಡಿ ಮತ್ತು ಕೋಚಿಮಲ್ (ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸಂಘ) ನಿರ್ದೇಶಕರಾದ ವಡಗೂರು ಹರೀಶ್‌ರವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇದು ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿರುವ ಹಾಲಿ ಶಾಸಕ ಎಸ್.ಎನ್ ನಾರಾಯಣಸ್ವಾಮಿಯವರ ನಿದ್ದೆಗೆಡಿಸಿದೆ. ಆದರೂ ಸಿದ್ದರಾಮಯ್ಯನವರು ಕೋಲಾರಕ್ಕೆ ಬಂದರೆ ಅದರ ಪ್ರಭಾವದಿಂದಾಗಿ ಕ್ಷೇತ್ರದ ದಲಿತ ಮತಗಳು ಮತ್ತು ಕುರುಬ, ಮುಸ್ಲಿಂ ಮತಗಳು ತಮಗೆ ಬರುತ್ತವೆ ಎಂದು ನೆಚ್ಚಿಕೊಂಡು ನಾರಾಯಣಸ್ವಾಮಿಯವರು ಚುನಾವಣೆಗೆ ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್‌ನ ಕೆಲವು ಶಾಸಕರ ಬೆಂಬಲದಿಂದ 2019ರಲ್ಲಿ ಮುನಿಸ್ವಾಮಿಯವರು ಬಿಜೆಪಿ ಸಂಸದರಾದ ನಂತರ ಜಿಲ್ಲೆಯಲ್ಲಿ ಬಿಜೆಪಿ ಉತ್ಸಾಹ ಇಮ್ಮಡಿಯಾಗಿದೆ. ಅದೀಗ ಕಾಂಗ್ರೆಸ್ ಒಳಜಗಳದ ಸಂಪೂರ್ಣ ಲಾಭ ಪಡೆಯಲು ಮುಂದಾಗಿದೆ. ಸಂಸದರಾಗಿರುವ ಮುನಿಸ್ವಾಮಿಯವರು ಕೋಮು ಪ್ರಚೋದಿತ ಹೇಳಿಕೆಗಳ ಮೂಲಕ ಬಿಜೆಪಿ ಗೆಲ್ಲಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷ ಹೇಳುವ ಯಾವ ಕೆಲಸಕ್ಕೂ ಹೇಸುವುದಿಲ್ಲ ಎಂಬುದನ್ನು ಅವರು ಈಗಾಗಲೇ ಹಳೆ ಚಡ್ಡಿಗಳನ್ನು ಹೊತ್ತು ಪ್ರತಿಭಟಿಸಿ (ಸಿದ್ದರಾಮಯ್ಯನವರು ಆರ್‌ಎಸ್‌ಎಸ್ ಟೀಕಿಸಿದ್ದಕ್ಕೆ) ತೋರಿಸಿದ್ದಾರೆ. ಈ ಹಿಂದೆ ಬಿಜೆಪಿ ಇಲ್ಲಿ ಎರಡು ಬಾರಿ ಗೆದ್ದಿರುವುದರಿಂದ ಮೂರನೇ ಬಾರಿಗೆ ಕಮಲ ಅರಳಿಸಲು ಪಣ ತೊಟ್ಟಿದ್ದಾರೆ.

ಸದ್ಯಕ್ಕೆ ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಒಂದು ಕಡೆಯಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ವಿರೋಧಿ ಅಲೆಯೂ ಇದೆ. ಅಲ್ಲದೆ ದಲಿತರಲ್ಲಿ ಚಲವಾದಿ, ಮಾದಿಗ ಮತ್ತು ಭೋವಿ ಸಮುದಾಯದ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ. ಚಲವಾದಿ ಸಮುದಾಯದಲ್ಲಿ ದೊಡ್ಡ ತಾಳಿ, ಚಿಕ್ಕ ತಾಳಿ ಎಂಬ ಉಪಜಾತಿಗಳಿವೆ. ಇವೆಲ್ಲವೂ ಚುನಾವಣೆಯಲ್ಲಿ ಪ್ರಭಾವ ಬೀರುತ್ತಿವೆ. ಇದೆಲ್ಲದರ ನಡುವೆ ಕಾಂಗ್ರೆಸ್ ತನ್ನ ಒಳಜಗಳವನ್ನು ಶಮನಮಾಡಿಕೊಂಡು ಒಗ್ಗಟ್ಟಾಗಿ ಚುನಾವಣೆಗೆ ಹೋದರೆ ಹೆಚ್ಚಿನ ಅವಕಾಶ ಹೊಂದುತ್ತದೆ. ಇಲ್ಲದಿದ್ದಲ್ಲಿ ಅದರ ಫಲ ಪಡೆಯಲು ಬಿಜೆಪಿ, ಜೆಡಿಎಸ್ ಕಾಯುತ್ತಿವೆ ಎಂದು ಹೇಳಬಹುದು.

ಅಪ್ಡೇಟ್: ಚಲವಾದಿ ಸಮುದಾಯದಲ್ಲಿನ ಉಪಜಾತಿಗಳಾದ ದೊಡ್ಡ ತಾಳಿ, ಚಿಕ್ಕತಾಳಿ ಬಗ್ಗೆ ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ತಪ್ಪಾಗಿ ಬರೆದಿದ್ದವು. ಅದನ್ನು ಸರಿಪಡಿಸಿದ್ದೇವೆ.


ಇದನ್ನೂ ಓದಿ: ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯನವರು ಬಂದರೆ ಫಲಿತಾಂಶವೇನಾಗಬಹದು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...