Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆಅನಿತಾ ಕುಮಾರಸ್ವಾಮಿ ಸ್ಪರ್ಧೆ ಇಲ್ಲ, ನಾನು ಚಾಮುಂಡೇಶ್ವರಿಗೆ ಹೋಗುತ್ತೇನೆ- ಎಚ್‌.ಡಿ.ಕೆ: ರಾಮನಗರಕ್ಕೆ ನಿಖಿಲ್ ಫಿಕ್ಸ್?

ಅನಿತಾ ಕುಮಾರಸ್ವಾಮಿ ಸ್ಪರ್ಧೆ ಇಲ್ಲ, ನಾನು ಚಾಮುಂಡೇಶ್ವರಿಗೆ ಹೋಗುತ್ತೇನೆ- ಎಚ್‌.ಡಿ.ಕೆ: ರಾಮನಗರಕ್ಕೆ ನಿಖಿಲ್ ಫಿಕ್ಸ್?

- Advertisement -
- Advertisement -

ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಯವರು 2023ರ ವಿಧಾನಸಭಾ ಚುನಾವಣೆ ಕುರಿತಂತೆ ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಯಾರು ಎಲ್ಲಿಂದ ಸ್ಪರ್ಧೆ ಮಾಡುತ್ತೇವೆ ಎಂಬ ಸುಳಿವು ಸಹ ನೀಡುತ್ತಿದ್ದಾರೆ. ಕನ್ನಡ ಹೋರಾಟಗಾರರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಂದಿನ ಚುನಾವಣೆಯಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ನಿನ್ನೆ ಪತ್ರಕರ್ತರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ ಪ್ರಶ್ನೆಗೆ ನಾನೇ ಹೋಗುತ್ತೇನೆ ಎಂದು ಹೇಳಿದ್ದಾರೆ. ಕುಟುಂಬ ರಾಜಕೀಯದ ಬಗ್ಗೆ ಮಾತನಾಡಬೇಡಿ, ನಾವು ಮತ್ತು ನಮ್ಮ ಅಣ್ಣ ಬೇರೆ ಬೇರೆಯಾಗಿದ್ದೇವೆ. ಈಗ ನಮ್ಮ ಕುಟುಂಬ ಎಂದರೆ ನಾನು, ನನ್ನ ಪತ್ನಿ ಮತ್ತು ನನ್ನ ಪುತ್ರ ಅಷ್ಟೇ ಎಂದಿದ್ದಾರೆ. ಈ ಎಲ್ಲವೂ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕ, ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಅಲ್ಲದೆ ಜಿ.ಟಿ ದೇವೇಗೌಡ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದಾರೆ. ಅದರ ಭಾಗವಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಅದರೊಟ್ಟಿಗೆ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ನಿಲ್ಲಿಸಲಾಗುತ್ತದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸದ್ಯ ಎಚ್‌.ಡಿ.ಕೆ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, 2023ಕ್ಕೆ ಅಲ್ಲಿಂದ ಮತ್ತು ಚಾಮುಂಡೇಶ್ವರಿಯಲ್ಲಿ ಅದೃ‍ಷ್ಟ ಪರೀಕ್ಷೆ ಮಾಡಬಹುದು. ರಾಮನಗರವನ್ನು ಸದ್ಯಕ್ಕೆ ಅನಿತಾ ಕುಮಾರಸ್ವಾಮಿಯವರು ಪ್ರತಿನಿಧಿಸುತ್ತಿದ್ದು, ಅವರ ಬದಲಿಗೆ ಅವರ ಮಗ ನಿಖಿಲ್ ಕುಮಾರಸ್ವಾಮಿ ಎಂಟ್ರಿ ಆಗಬಹುದು. ಹಾಗಿದ್ದರೆ ಕ್ಷೇತ್ರದ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ರಾಮನಗರ ವಿಧಾನಸಭಾ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿ ಮಾಡುತ್ತಿದೆ. 2023ರ ಚುನಾವಣೆಗೆ ಈ ಕ್ಷೇತ್ರದಲ್ಲಿ ಸಿದ್ಧತೆಗಳು ಈಗಾಗಲೇ ಪ್ರಾರಂಭವಾದಂತೆ ಭಾಸವಾಗುತ್ತದೆ. ಇಲ್ಲಿಂದ ಗೆದ್ದವರು ಸಿಎಂ ಆಗುತ್ತಾರೆ ಎಂಬ ಮಾತು ಒಂದಾದರೆ, ಇಲ್ಲಿಂದ ಗೆದ್ದು ಸಿಎಂ ಆದವರು ಪೂರ್ಣಾವಧಿ ಪೂರೈಸುವ ಮೊದಲೇ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯೂ ಮನೆಮಾಡಿದೆ. ನಾಲ್ವರು ಸಿಎಂಗಳು ಐದು ಬಾರಿ ಅಧಿಕಾರ ನಡೆಸಲು ಸಹಕರಿಸಿರುವ ಜಿಲ್ಲೆಯಿದು. ಕೆಂಗಲ್ ಹನುಮಂತಯ್ಯ, ಎಚ್.ಡಿ. ದೇವೇಗೌಡರು ರಾಮನಗರದಿಂದ ಆಯ್ಕೆಯಾಗಿ ತಲಾ ಒಮ್ಮೊಮ್ಮೆ ಸಿಎಂ ಆದರೆ, ಎಚ್.ಡಿ. ಕುಮಾರಸ್ವಾಮಿಯವರು ಇಲ್ಲಿಂದ ಗೆದ್ದು ಎರಡು ಬಾರಿ ಸಿಎಂ ಆಗಿದ್ದಾರೆ. ರಾಮಕೃಷ್ಣ ಹೆಗಡೆಯವರು ಕೂಡ 1983ರಲ್ಲಿ ಸಿಎಂ ಆದ ನಂತರ ಕನಕಪುರ ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭಾ ಸದಸ್ಯರಾಗಿದ್ದರು. ಈ ಎಲ್ಲ ಕಾರಣಗಳಿಂದ ರಾಮನಗರ ರಾಜಕೀಯ ಪಕ್ಷಗಳಿಗೆ-ನಾಯಕರಿಗೆ ಜಿದ್ದಾಜಿದ್ದಿನ ಜಿಲ್ಲೆ.

ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ದಲಿತರು ಮತ್ತು ಮುಸ್ಲಿಮರು ಸಹ ಗಣನೀಯ ಸಂಖ್ಯೆಯಲ್ಲಿದ್ದು, ಪ್ರತಿ ಬಾರಿಯೂ ಒಕ್ಕಲಿಗರೆ ನಿರ್ಣಾಯಕ ಮತದಾರರಾಗಿದ್ದಾರೆ. 2007ರಲ್ಲಿ ರಾಮನಗರ ಅಧಿಕೃತ ಜಿಲ್ಲೆಯ ಸ್ಥಾನಮಾನ ಪಡೆದ ನಂತರ ಇಲ್ಲಿನ ಜನತೆ ಹಲವು ಕನಸುಗಳನ್ನು ಕಂಡಿದ್ದರು. ಜಿಲ್ಲೆಯಾಗಿ 15 ವರ್ಷ ಪೂರೈಸಿದರೂ ಕೆಲ ಕಟ್ಟಡಗಳನ್ನು ಎತ್ತಿರುವುದು ಬಿಟ್ಟರೆ ಮಹತ್ವದ ಬದಲಾವಣೆಯಾಗಿಲ್ಲ ಎನ್ನುವುದು ಜನರ ಕೊರಗು. ಇಲ್ಲಿಂದ ಗೆದ್ದವರು ಜನರ ಕೈಗೆ ಸಿಗುವುದಿಲ್ಲ, ಬಹುತೇಕ ರೈತಾಪಿ ಜನರಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ, ರೇಷ್ಮೆ ಬೆಳೆ ಕೈ ಹಿಡಿಯುತ್ತಿಲ್ಲ, ಸುಸಜ್ಜಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಹಲವು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಇಲ್ಲಿಂದ 2023ರಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕೆಂದು ಮಾಜಿ ಸಿಎಂ ಎಚ್‌ಡಿಕೆ ಚಿಂತಿಸುತ್ತಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್‌ನಿಂದ ನಡೆದ ಮೇಕೆದಾಟು ಯೋಜನೆಗಾಗಿನ ಪಾದಯಾತ್ರೆ ಸಹ ಸಾಕಷ್ಟು ಸುದ್ದಿ ಮಾಡಿದೆ.

ರಾಜಕೀಯ ಇತಿಹಾಸ

2018ರಲ್ಲಿ ರಾಮನಗರದಲ್ಲಿ ಒಟ್ಟು ಅಂದಾಜು 2,07,000 ಮತದಾರರಿದ್ದರು. ಅದರಲ್ಲಿ ಸುಮಾರು 99,000ಕ್ಕೂ ಹೆಚ್ಚು ಒಕ್ಕಲಿಗರು, ಎಸ್‌ಸಿ ಮತ್ತು ಎಸ್‌ಟಿ ಸೇರಿ 45,000, ಮುಸ್ಲಿಮರು 35,000, ಮತ್ತು 15,000ದಷ್ಟು ಲಿಂಗಾಯತ ಹಾಗೂ 10,000ಕ್ಕೂ ಹೆಚ್ಚು ಇತರ ಸಮುದಾಯದ ಮತದಾರರಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಒಕ್ಕಲಿಗ ಮತಗಳು ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಮತಬ್ಯಾಂಕ್ ಆಗಿ ಪರಿವರ್ತನೆ ಆಗಿವೆ. ಹಿಂದೊಮ್ಮೆ ಕೋಮು ಸೂಕ್ಷ್ಮ ಕ್ಷೇತ್ರವಾಗಿದ್ದ ಇದು ಇತ್ತೀಚಿನ ವರ್ಷಗಳಲ್ಲಿ ಅದರಿಂದ ಹೊರಬಂದಿದೆ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಫೈಟ್ ಇರುವುದರಿಂದ ಇದು ಸಾಧ್ಯವಾಗಿದೆ.

ರಾಮನಗರ ಕ್ಷೇತ್ರದಲ್ಲಿ 1957ರಿಂದ ಒಟ್ಟು 7 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ ಲಿಂಗಪ್ಪನವರು ಇಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರು ಸಹ ಆಗಿದ್ದಾರೆ. ಒಮ್ಮೆ ಪಕ್ಷೇತರ ಅಭ್ಯರ್ಥಿ, ಎರಡು ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಎಚ್.ಡಿ ದೇವೇಗೌಡರ ಪ್ರವೇಶ

ಹಾಸನ ಜಿಲ್ಲೆಯ ಎಚ್.ಡಿ ದೇವೇಗೌಡರು 1985ರಲ್ಲಿ ಸಾತನೂರು ಕ್ಷೇತ್ರಕ್ಕೆ ಕಾಲಿಟ್ಟರು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‌ರನ್ನು ಸೋಲಿಸಿದರು. ಆದರೆ ದೇವೇಗೌಡರು 1989ರಲ್ಲಿ ಹೊಳೆ ನರಸೀಪುರದಲ್ಲಿ ಸೋಲನ್ನು ಅನುಭವಿಸಿದ್ದರು. 1994ರಲ್ಲಿಯೂ ಅಲ್ಲಿ ಕಠಿಣ ಸವಾಲು ಎದುರಿಸಬೇಕಾದ ಪರಿಸ್ಥಿತಿಯಲ್ಲಿದ್ದಾಗ ರಾಮನಗರದ ಮುಖಂಡರು ಇಲ್ಲಿಗೆ ಆಹ್ವಾನ ನೀಡಿದರು. ಆಗ ರಾಮನಗರ ಕ್ಷೇತ್ರದಲ್ಲಿ ಜನತಾದಳದಿಂದ ಜಯಗಳಿಸಿದ ಅವರು ರಾಜ್ಯದ 14ನೇ ಸಿಎಂ ಆದರು. ಅಲ್ಲಿಂದ ರಾಮನಗರ ಹೆಚ್ಚು ಕಡಿಮೆ ಜೆಡಿಎಸ್ ಪಕ್ಷದ ಭದ್ರಕೋಟೆಯಾಯಿತು.

ಅಂಬರೀಶ್‌ಗೆ ಸೋಲು

1996 ರಲ್ಲಿ ರಾಮನಗರ ಕ್ಷೇತ್ರದ ಶಾಸಕರಾಗಿದ್ದ ದೇವೇಗೌಡರಿಗೆ ಪ್ರಧಾನಿ ಪಟ್ಟ ಒಲಿಯಿತು. ಆಗ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗಾಗಿ 1997 ರಲ್ಲಿ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು. ಆಗ ಜನಪ್ರಿಯ ಚಿತ್ರನಟರಾಗಿದ್ದ ಅಂಬರೀಶ್‌ರನ್ನು ಜನತಾದಳದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಭಾರೀ ಪ್ರಚಾರ ನಡೆಸಿದ್ದ ಅವರೇ ಬಹುತೇಕ ಜಯಗಳಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ ಆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಪಕ್ಷದ ಸಿ.ಎಂ ಲಿಂಗಪ್ಪನವರು 9,610 ಮತಗಳ ಅಂತರದಿಂದ ಅಂಬರೀಶ್‌ರನ್ನು ಸೋಲಿಸಿದರು.

ಕುಮಾರಸ್ವಾಮಿ ಹಿಡಿತಕ್ಕೆ ಸಿಕ್ಕ ಕ್ಷೇತ್ರ

ಇಲ್ಲಿ 2004ರಿಂದ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿಯವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಅವರು ಕ್ಷೇತ್ರ ತ್ಯಜಿಸಿದಾಗ ನಡೆದ ಉಪಚುನಾವಣೆಯಲ್ಲಿಯೂ ಸಹ ಜೆಡಿಎಸ್ ಜಯಭೇರಿ ಭಾರಿಸಿದೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ, ಬಿಡದಿಯಲ್ಲಿ ತೋಟ, ಮನೆ ಹೊಂದಿರುವ ಎಚ್.ಡಿ.ಕೆ ಇಲ್ಲಿಯೇ ನೆಲೆಯೂರಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು 92,626 ಮತಗಳನ್ನು ಪಡೆದು ಜಯಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕೂಡ 69,990 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು. ಆ ಚುನಾವಣೆಯಲ್ಲಿ ಎಚ್‌.ಡಿ.ಕೆ ಬದಲು ಜೆಡಿಎಸ್‌ನಿಂದ ಬೇರೆ ಯಾರು ನಿಂತಿದ್ದರೂ ಗೆಲುವು ಕಷ್ಟವಿತ್ತು. ಆಗ ರಾಮನಗರದ ಹಲವು ಬೂತ್‌ಗಳಲ್ಲಿ ಇಕ್ಬಾಲ್ ಹುಸೇನ್ ಲೀಡ್ ಪಡೆದಿದ್ದರೆ ಕೆಲ ಬೂತ್‌ಗಳಲ್ಲಿ ಕುಮಾರಸ್ವಾಮಿಯವರಿಗೆ 10 ಕ್ಕಿಂತ ಕಡಿಮೆ ಮತಗಳು ಬಿದ್ದಿದ್ದವು!. ಹಾಗಾಗಿ ಆ ಚುನಾವಣೆಯನ್ನು ಎಚ್‌.ಡಿ.ಕೆ ಮರೆಯುವಂತಿಲ್ಲ. ನಂತರ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಸಿಎಂ ಆದರು. ಅವರು ಚನ್ನಪಟ್ಟಣ ಕ್ಷೇತ್ರದಲ್ಲಿಯು ಸಹ ಗೆಲುವು ಸಾಧಿಸಿದ್ದರಿಂದ ರಾಮನಗರ ಕ್ಷೇತ್ರವನ್ನು ತ್ಯಜಿಸಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಜೆಡಿಎಸ್‌ನಿಂದ ಕಣಕ್ಕಿಳಿದರು. ಕಾಂಗ್ರೆಸ್ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಆದರೆ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಸಿ.ಎಂ. ಲಿಂಗಪ್ಪನವರ ಮಗ ಎಲ್ ಚಂದ್ರಶೇಖರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿ ಆದರು. ಆದರೆ ಚುನಾವಣೆಗೆ ಎರಡು ದಿನ ಬಾಕಿ ಇದ್ದಾಗ ಅವರು ಬಿಜೆಪಿಗೆ ರಾಜೀನಾಮೆ ನೀಡಿ ವಾಪಸ್ ಕಾಂಗ್ರೆಸ್ ಸೇರಿ ಸ್ಪರ್ಧೆಯಿಂದ ಹಿಂದೆ ಸರಿದು ನಾಮಕಾವಸ್ಥೆ ಚುನಾವಣೆ ಎದುರಿಸಿ ಸೋತರು. ಇದರಲ್ಲಿ ಡಿ.ಕೆ ಸಹೋದರರ ಕೈವಾಡವಿದ್ದಿದ್ದರಿಂದ ಬಿಜೆಪಿಗೆ ತೀವ್ರ ಮುಜುಗರ ಉಂಟಾಯಿತು. ಇದರಿಂದಾಗಿ ಆ ಚುನಾವಣೆಯಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯವರು ಅನಾಯಾಸವಾಗಿ 1,06,137 ಮತಗಳ ಅಂತರದ ಭಾರೀ ಗೆಲುವು ದಾಖಲಿಸಿದರು.

ರಾಮನಗರ ಸಮೀಕ್ಷೆಯ ವಿಡಿಯೋ ನೋಡಿ

ಅದಕ್ಕೂ ಮೊದಲು 2013ರಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತಿದ್ದ ಅನಿತಾ ಕುಮಾರಸ್ವಾಮಿಯವರು ಸದ್ಯ ಶಾಸಕರಾದರೂ ರಾಮನಗರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಸಾಮಾನ್ಯ ಆರೋಪ. ಯಾವಾಗಲೋ ಒಮ್ಮೆ ಕ್ಷೇತ್ರಕ್ಕೆ ಆಗಮಿಸಿದರೂ ಜನರ ಕೈಗೆ ಸಿಗುವುದಿಲ್ಲ, ಕ್ಷೇತ್ರದ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ ಎನ್ನುತ್ತಾರೆ ಕಾರ್ಯಕರ್ತರು.

ರಾಮನಗರ ಅದೃಷ್ಟದ ಕ್ಷೇತ್ರ ಎಂಬ ಮೂಢನಂಬಿಕೆಯ ಬೆನ್ನೇತ್ತಿ

ಡಿ.ಕೆ ಶಿವಕುಮಾರ್ ರಾಮನಗರದಿಂದ ಸ್ಪರ್ಧಿಸಿ ಗೆದ್ದು ಸಿಎಂ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಈ ಬಾರಿ ಅವರು ಕನಕಪುರ ಮತ್ತು ರಾಮನಗರ ಎರಡೂ ಕಡೆಗಳಿಂದ ಕಣಕ್ಕಿಳಿಯುವ ಸೂಚನೆ ಇದೆ. ಒಂದು ವೇಳೆ ರಾಮನಗರದಲ್ಲಿ ಗೆದ್ದಲ್ಲಿ ಸಹೋದರ ಡಿ.ಕೆ ಸುರೇಶ್‌ರವರನ್ನು ರಾಜ್ಯ ರಾಜಕೀಯಕ್ಕೆ ತಂದು ಕನಕಪುರ ಕ್ಷೇತ್ರಕ್ಕೆ ಶಾಸಕರನ್ನಾಗಿ ಮಾಡುತ್ತಾರೆ ಎಂಬ ಮಾತು ಸಹ ಹರಿದಾಡುತ್ತಿದೆ. ಆದರೆ ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ.ಶಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಎಚ್.ಡಿ.ಕೆಯವರನ್ನು ಬದಿಗೆ ಸರಿಸುವ ಅನಿವಾರ್ಯತೆಯಿದೆ. ಆದರೆ ಅದೇ ಸಮಯಕ್ಕೆ ದೇವೇಗೌಡರ ಕುಟುಂಬದ ಬೆಂಬಲವನ್ನೂ ನೀರಿಕ್ಷಿಸುತ್ತಿದ್ದಾರೆ. ಹಾಗಾಗಿಯೇ ಅವರು ಕುಮಾರಸ್ವಾಮಿಯವರೊಂದಿಗೆ ಚೆನ್ನಾಗಿದ್ದಾರೋ ಇಲ್ಲವೋ ತಿಳಿಯುವುದೇ ಕಷ್ಟ ಎನಿಸಿಬಿಡುತ್ತದೆ.

ಡಿ.ಕೆ.ಶಿ. ಮೇಕೆದಾಟು ಯೋಜನೆಗಾಗಿ ನಡೆಸಿದ ಪಾದಯಾತ್ರೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದರು. ಕೋವಿಡ್ ಹೆಚ್ಚಾಗುತ್ತಿರುವುದರಿಂದ ಪಾದಯಾತ್ರೆ ನಿಲ್ಲಿಸಬೇಕು ಎಂದು ಸರ್ಕಾರ ಎಷ್ಟೇ ಎಚ್ಚರಿಕೆ ಕೊಟ್ಟರೂ, ವೀಕೆಂಡ್ ಕರ್ಫ್ಯೂ ಇದ್ದರೂ ಪಾದಯಾತ್ರೆಗೆ ಚಾಲನೆ ನೀಡಿದರು. ಅಂದುಕೊಂಡಂತೆ ರಾಮನಗರ ಜಿಲ್ಲೆ ಪ್ರವೇಶಿಸಿದ ನಂತರವೇ ಅವರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ. ಇದಕ್ಕೆ ರಾಮನಗರದ ಮೇಲೆ ಅವರ ಕಣ್ಣಿಟ್ಟಿರುವುದೇ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಒಕ್ಕಲಿಗರ ಪಕ್ಷ ಎಂಬುದು ಒಂದು ಕಾರಣವಾದರೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಹೊಂದಿಲ್ಲದಿರುವುದು ಎರಡನೇ ಕಾರಣ. ರಾಮನಗರದಲ್ಲಿ ಕಾಂಗ್ರೆಸ್ ತಲೆಹಾಕುವುದಿಲ್ಲ, ಕನಕಪುರದಲ್ಲಿ ಜೆಡಿಎಸ್ ತಲೆ ಹಾಕುವುದಿಲ್ಲ. ಡಿ.ಕೆ.ಶಿ ಮತ್ತು ಎಚ್.ಡಿ.ಕೆ ನಡುವೆ ಈ ಹೊಂದಾಣಿಕೆಯಿದ್ದು ಚುನಾವಣೆಯಲ್ಲಿ ಗೆಲ್ಲಲು ಪರಸ್ಪರ ಸಹಕರಿಸುತ್ತಾರೆ ಎಂಬ ಆರೋಪ ಸಹ ಇದೆ.

ಬಿಜೆಪಿಯ ಬಯಕೆಯೇನು?

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಯಾವುದೇ ನೆಲೆ ಇಲ್ಲ. ಈ ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆಯೂ ಗೆಲ್ಲಲಾಗದ ಬಿಜೆಪಿ, ಎರಡು ಬಾರಿ ಮಾತ್ರ ರನ್ನರ್ ಅಪ್ ಆಗಿದೆ ಅಷ್ಟೇ. ಉಸ್ತುವಾರಿ ಮಂತ್ರಿ ಅಶ್ವಥ್ ನಾರಾಯಣ್ ಮತ್ತು ಸಚಿವ ಸಿ.ಪಿ ಯೋಗೀಶ್ವರ್ ಜಿಲ್ಲೆಯಲ್ಲಿ ಬಿಜೆಪಿ ಬೇರು ಬಿಡಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.

ಇತ್ತೀಚೆಗೆ ಸರ್ಕಾರದ ವತಿಯಿಂದ ಹಲವು ಕಾಮಗಾರಿಗಳಿಗೆ ಚಾಲನೆ ಮತ್ತು ಕೆಂಪೇಗೌಡರ ಹಾಗೂ ಡಾ.ಬಿ.ಆರ್ ಅಂಬೇಡ್ಕರ್‌ರವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ವಿವಾದಕ್ಕೆ ಕಾರಣವಾಯಿತು. ಬೃಹತ್ ಕಾರ್ಯಕ್ರಮ ಆಯೋಜಿಸಿ, ಸಿಎಂ ಬೊಮ್ಮಾಯಿ ಮತ್ತು ಸರ್ಕಾರದ ಹಲವಾರು ಸಚಿವರನ್ನು ಕರೆಸಿ ಕಾರ್ಯಕ್ರಮ ನಡೆಸಲಾಯಿತು. ಆದರೆ ಡಿ.ಕೆ ಸಹೋದರರು ಮಾಡಿದ ಕೆಲಸದ ಕ್ರೆಡಿಟ್‌ಅನ್ನು ಬಿಜೆಪಿ ಸಚಿವ ಅಶ್ವಥ್ ನಾರಾಯಣ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ಕಾರ್ಯಕ್ರಮದ ವೇದಿಕೆ ಎದುರೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಡಿ.ಕೆ-ಡಿ.ಕೆ ಎಂದು ಘೋಷಣೆ ಕೂಗಿದರು. ಇದರಿಂದ ಕುಪಿತರಾದ ಅಶ್ವಥ್ ನಾರಾಯಣ್ ವೇದಿಕೆಯಿಂದ ಅಸಂಬದ್ಧ ಪದಗಳನ್ನು ಬಳಸಿದರು. ಅದು ಬೇಡ ಎಂದು ಸಿಎಂ ಬೊಮ್ಮಾಯಿ ಮತ್ತು ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಕೈಸನ್ನೆ ಮಾಡಿದರೂ ಅಶ್ವಥ್ ನಾರಾಯಣ್ ನಿಲ್ಲಿಸಲಿಲ್ಲ. ಆಗ ಸಂಸದ ಡಿ.ಕೆ ಸುರೇಶ್ ಮತ್ತು ನೂತನ ಎಂಎಲ್‌ಸಿ ರವಿಯವರು ಎದ್ದುಬಂದು ಅಶ್ವಥ್ ನಾರಾಯಣ್‌ರನ್ನು ತರಾಟೆಗೆ ತೆಗೆದುಕೊಂಡು ಭಾಷಣಕ್ಕೆ ಅಡ್ಡಿಪಡಿಸಿದರು. ಸಿಎಂ ಎದುರಲ್ಲೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಅವರು ಅಸಹಾಯಕರಾಗಿದ್ದರು. ನಂತರ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ತಮ್ಮ ಭಾಷಣದ ಟೋನ್ ಬದಲಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು.

2013ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಿದ್ದ ಸಿ.ಪಿ ಯೋಗೀಶ್ವರ್ 2018ರಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸೋತರು. ಎಂಎಲ್‌ಸಿಯಾಗಿ ಸಚಿವರಾಗಿದ್ದ ಅವರು ಈಗ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಜೊತೆಗೆ ಹೈಕಮಾಂಡ್ ಸೂಚಿಸಿದರೆ ರಾಮನಗರದಿಂದಲೂ ಸ್ಪರ್ಧಿಸಲು ಸಿದ್ಧ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅದು ಸದ್ಯಕ್ಕೆ ಫಲ ಕೊಡುವ ಯಾವುದೇ ಸೂಚನೆ ಕಾಣುತ್ತಿಲ್ಲ.

ಮೇಕೆದಾಟು ಪಾದಯಾತ್ರೆ ವರ್ಸಸ್ ಜನತಾ ಜಲಧಾರೆ

ಮೇಕೆದಾಟು ಪಾದಯಾತ್ರೆಯ ಮೂಲಕ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ ಎಂದು ತಿಳಿದೊಡನೆಯೇ ಜೆಡಿಎಸ್ ಆ ಪಾದಯಾತ್ರೆಯನ್ನು ವಿರೋಧಿಸಿದೆ. ಅಲ್ಲದೇ ಅದಕ್ಕೆ ಪರ್ಯಾಯವಾಗಿ ಜಲಧಾರೆ ಎಂಬ ಪ್ರಚಾರಾಂದೋಲನವನ್ನು ಸಹ ಆರಂಭಿಸಿದೆ. ರಾಜ್ಯದ ನದಿ ನೀರು ಬಳಕೆ ಹಾಗೂ ಜನರಿಗೆ ಜಲ ಭದ್ರತೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಕೇಂದ್ರದ ತಾರತಮ್ಯವನ್ನು ಪ್ರಶ್ನಿಸುವುದರ ಜೊತೆಗೆ ರಾಜ್ಯದ ಎಲ್ಲಾ ನದಿಗಳ ಪವಿತ್ರ ನೀರು ಸಂಗ್ರಹಿಸುವುದು ಇದರ ಉದ್ದೇಶ. ಆದರೆ ಕೋವಿಡ್ ಕಾರಣಕ್ಕಾಗಿ ಈ ಕಾರ್ಯಕ್ರಮ ಸಹ ಮುಂದೂಡಲ್ಪಟ್ಟಿದೆ.

ಮೇಕೆದಾಟು ಯೋಜನೆಯು ಕುಡಿಯುವ ನೀರಿನ ಯೋಜನೆಯಾಗಿದ್ದು, ಇದರಿಂದ ರೈತರ ಕೃಷಿಗೆ ಯಾವ ರೀತಿ ನೀರು ಕೊಡುತ್ತಾರೆ? ಈ ಯೋಜನೆ ಯಾವಾಗ ಜಾರಿಯಾಗುತ್ತದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಇನ್ನು ಜನತಾ ಜಲಧಾರೆಯಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಜೆಡಿಎಸ್‌ನವರಿಗೇ ಗೊತ್ತಿಲ್ಲದಿರುವಾಗ ಜನರಿಗೇನು ಉಪಯೋಗ?

ಜಿಲ್ಲೆಯ ಜನರ ಸಮಸ್ಯೆಗಳು

ಇಡೀ ರಾಮನಗರ ಜಿಲ್ಲೆಯ ಜನರ ಬಹುಮುಖ್ಯ ಸಮಸ್ಯೆಯೆಂದರೆ ಇಲ್ಲಿನ ಹೆವಿವೈಟ್ ರಾಜಕಾರಣಿಗಳೇ ಆಗಿದ್ದಾರೆ. ಚುನಾವಣೆಗೆ ಒಂದು ವರ್ಷ ಇರುವಂತೆ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಇವರು ಚುನಾವಣೆ ಮುಗಿದಂತೆ ಇನ್ನು ನಾಲ್ಕು ವರ್ಷ ನಾಪತ್ತೆಯಾಗಿಬಿಡುತ್ತಾರೆ. ರಾಜ್ಯ ರಾಜಕೀಯದಲ್ಲಿ ಬ್ಯುಸಿ ಆಗುವ ಈ ಯಾವ ರಾಜಕಾರಣಿಗಳು ಸಹ ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ, ಅವರ ಹೆಸರಿನಲ್ಲಿ ಅವರ ಹಿಂಬಾಲಕರೆ ಇಲ್ಲಿ ಆಡಳಿತ ನಡೆಸುತ್ತಾರೆ, ಅಧಿಕಾರಿಗಳ ಮೇಲೆ ಒತ್ತಡ ತರುತ್ತಾರೆ, ಸ್ವತಂತ್ರವಾಗಿ ಆಡಳಿತ ನಡೆಸಲು ಬಿಡುವುದಿಲ್ಲ, ಜನರು ಹೈರಣಾಗುತ್ತಾರೆ ಎಂಬುದು ಸಾಮಾನ್ಯ ಆರೋಪ.

ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮೂರೂ ಪಕ್ಷದ ಸ್ಥಳೀಯ ಮುಖಂಡರು ಇಲ್ಲಿನ ಅಧಿಕಾರಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಎಷ್ಟೇ ಕಟ್ಟುನಿಟ್ಟಿನ ಪ್ರಾಮಾಣಿಕ ಅಧಿಕಾರಿ ಬಂದರೂ ಇವರು ಹೇಳಿದಂತೆಯೇ ಕೇಳಬೇಕಿದೆ. ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಅದು ಮತ್ತಷ್ಟು ಹೆಚ್ಚಾಗಿದೆ. ಸಾಮಾನ್ಯ ಜನರ ಯಾವ ಕೆಲಸಗಳು ಲಂಚ ಕೊಡದೆ ಆಗುವುದಿಲ್ಲ. ಜೆಡಿಎಸ್‌ನವರ ಸರ್ವಾಧಿಕಾರ, ಕಾಂಗ್ರೆಸ್‌ನ ಸಹೋದರರ ಪ್ರಾಬಲ್ಯ, ಬಿಜೆಪಿಯ ಇಬ್ಬರು ಸಚಿವರ (ಅಶ್ವಥ್ ನಾರಾಯಣ ಮತ್ತು ಸಿ.ಪಿ ಯೋಗೀಶ್ವರ್) ಹಸ್ತಕ್ಷೇಪ ಜಿಲ್ಲೆಯ ಮೇಲಾಗುತ್ತಿದೆ ಎನ್ನುತ್ತಾರೆ ಕ್ಷೇತ್ರದ ಜನ.

ನೀಗದ ರೈತರ ಸಂಕಷ್ಟ

ಜಿಲ್ಲೆಯ ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಒಂದಷ್ಟು ಭಾಗ ಬಿಟ್ಟರೆ ಜಿಲ್ಲೆಗೆ ಸಮರ್ಪಕ ನೀರಾವರಿ ಯೋಜನೆ ಇಲ್ಲ. ಇನ್ನು ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಬೆಲೆ ಇಳಿಕೆ ಎಂಬುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹೆಚ್ಚಿನ ರೈತರು ರೇಷ್ಮೆ ಬೆಳೆಯುತ್ತಿದ್ದು, ಬೆಲೆ ಕುಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಈ ಹಿಂದೆ ಎದುರಾಗಿದ್ದಿದೆ. ಈ ಯಾವ ಸಂದರ್ಭದಲ್ಲಿಯೂ ಇಲ್ಲಿನ ರಾಜಕಾರಣಿಗಳು ರೈತರ ನೆರವಿಗೆ ನಿಂತಿಲ್ಲ.

ಸಿ.ಎಂ. ಲಿಂಗಪ್ಪ

ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಮಾವು ಬೆಳೆದರೂ ಬೆಳೆಗಾರರ ದಶಕದ ಬೇಡಿಕೆಯಾದ ಮಾವು ಸಂಸ್ಕರಣ ಘಟಕ ರಚನೆಯಾಗಿಲ್ಲ. ಇನ್ನು ಹೈನುಗಾರಿಕೆ ರೈತರ ಉಪಕಸುಬಾಗಿದೆ. ಆದರೆ ಹಾಲಿಗೆ ಉತ್ತಮ ದರ ಕೊಡಿಸುವಲ್ಲಿಯೂ ಸಹ ಜನಪ್ರತಿನಿಧಿಗಳು ಮುಂದಾಗಿಲ್ಲ. ಒಟ್ಟಾರೆಯಾಗಿ ರೈತರು ನಿರಂತರ ಸಂಕಷ್ಟಕ್ಕೆ ಅಗತ್ಯ ನೆರವು ಸಿಗುತ್ತಿಲ್ಲ.

ವಿಸ್ತರಣೆಯಾಗದ ರೇಷ್ಮೆ ಮಾರುಕಟ್ಟೆ

ರೇಷ್ಮೆನಾಡು ಎಂದು ಕರೆಸಿಕೊಳ್ಳುವ ರಾಮನಗರದಲ್ಲಿ, ಏಷ್ಯಾದಲ್ಲಿಯೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆಯಿದೆ. ಅದು ರಾಮನಗರ ಸಿಟಿ ಒಳಗೆ ಚಿಕ್ಕದಾದ ಜಾಗದಲ್ಲಿದ್ದು ಅಸ್ತವ್ಯಸ್ತವಾಗಿದೆ. ಹಾಗಾಗಿಯೇ ರೀಲರ್‌ಗಳಿಂದ, ಅಧಿಕಾರಿಗಳಿಂದ ಅನ್ಯಾಯ ಮತ್ತು ಮೋಸವಾಗುತ್ತಿದೆ ಎಂದು ರೈತರು ದೂರುತ್ತಾರೆ. ಕಳೆದ 30 ವರ್ಷಗಳಿಂದ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೀಲರ್‌ಗಳು ಹಾಗು ಗೂಡು ಕದಿಯುವ ಮಾಫಿಯಾದವರಿಂದ ರೈತರ ಮೇಲೆ ನಿರಂತರ ಶೋಷಣೆ ಆಗುತ್ತಿದೆ. ಈ ಸಮಸ್ಯೆಗೆ ಯಾರೂ ಸಮರ್ಪಕವಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನು ರಾಮನಗರ-ಚನ್ನಪಟ್ಟಣದ ನಡುವೆ 10 ಎಕರೆ ವಿಶಾಲ ಪ್ರದೇಶದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವುದಕ್ಕೆ ಅನುಮೋದನೆ ದೊರಕಿದೆ. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದಕ್ಕೆ ರೀಲರ್‌ಗಳ ಒತ್ತಡದ ಜೊತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.

ಉದ್ಘಾಟನೆಯಾಗದ ಜಿಲ್ಲಾಸ್ಪತ್ರೆ

2007ರಲ್ಲಿಯೇ ಜಿಲ್ಲೆಯಾಗಿದ್ದರೂ ಇದುವರೆಗೂ ರಾಮನಗರದಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆಯಿಲ್ಲ. 2007ಕ್ಕಿಂತ ಮುಂಚೆ ಇದ್ದ ತಾಲ್ಲೂಕು ಆಸ್ಪತ್ರೆಯನ್ನೆ ಜಿಲ್ಲಾಸ್ಪತ್ರೆ ಎಂದು ಮರು ನಾಮಕರಣ ಮಾಡಿದ್ದು ಬಿಟ್ಟರೆ ಸೌಲಭ್ಯಗಳು ಹೆಚ್ಚಿಲ್ಲ. ಇತ್ತೀಚೆಗೆ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಅದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ನಿಂತಲ್ಲೇ ನಿಂತ ಪ್ರವಾಸೋದ್ಯಮ ಬೆಳವಣಿಗೆ

ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದ್ದರೂ, ಜಿಲ್ಲೆಯಲ್ಲಿ ಹತ್ತಾರು ಪ್ರೇಕ್ಷಣೀಯ ಸ್ಥಳಗಳಿದ್ದರೂ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವಲ್ಲಿ ಎಲ್ಲಾ ಪಕ್ಷಗಳು, ಸರ್ಕಾರಗಳು ಎಡವಿವೆ. ಕಣ್ವ ಜಲಾಶಯದಲ್ಲಿ ಮಕ್ಕಳ ಪಾರ್ಕ್ ನಿರ್ಮಾಣವಾಗಿಲ್ಲ, ಜಿಲ್ಲೆಯಲ್ಲಿನ ಆಕರ್ಷಣೀಯ ಬೆಟ್ಟಗಳಿಗೆ ಸಮರ್ಪಕ ರಸ್ತೆಗಳಿಲ್ಲ. ಕರಕುಶಲ ವಸ್ತುಗಳಿಗೆ ಜಿಲ್ಲೆ ಖ್ಯಾತಿಯಾಗಿದ್ದರೂ ಅದಕ್ಕೆ ಸರ್ಕಾರದ ಬೆಂಬಲ ಮಾತ್ರ ಸಿಕ್ಕಿಲ್ಲ ಎನ್ನುವುದು ದುರಂತ.

ಬುಡಕಟ್ಟು ಜನರತ್ತ ತಿರುಗಿ ನೋಡದ ಸರ್ಕಾರ

ರಾಮನಗರ ಜಿಲ್ಲೆಯಲ್ಲಿ ಹಲವಾರು ಇರುಳಿಗ ಕುಟುಂಬಗಳಿದ್ದು, ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಈ ಸಮುದಾಯ ಸಂಕಷ್ಟ ಎದುರಿಸುತ್ತಿರುವುದು ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತಿದೆ. ರಾಮನಗರ ತಾಲ್ಲೂಕಿನ ಕೂಟಗಲ್ ಬಳಿ ಇರುವ ಇರುಳಿಗ ಬುಡಕಟ್ಟು ಸಮುದಾಯ ದಶಕಗಳಿಂದಲೂ ಸಮಸ್ಯೆಗಳ ನಡುವೆ ಜೀವನ ನಡೆಸುತ್ತಿದೆ. ಮಳೆ ಬಂದರಂತೂ ಇಲ್ಲಿರುವ 23 ಗುಡಿಸಲುಗಳಿಗೂ ನೀರು ನುಗ್ಗುತ್ತದೆ. ಕೆಲವು ತಿಂಗಳುಗಳ ಹಿಂದೆ ರತ್ನಗಿರಯ್ಯ ಎಂಬುವರು ಮಳೆಗೆ ಬಲಿಯಾದ ನಂತರವಷ್ಟೇ ಅಧಿಕಾರಿಗಳು ಇರುಳಿಗರಿಗೆ ನಿವೇಶನ ನೀಡಲು ಮುಂದಾಗಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬನ್ನೇರುಘಟ್ಟ ಅರಣ್ಯ ಪ್ರದೇಶದ ಬುಡಗಯ್ಯನ ದೊಡ್ಡಿ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯದ ಹಲವಾರು ಕುಟುಂಬಗಳು ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು ಭೂಮಿ ಮತ್ತು ವಸತಿಗಾಗಿ ಕೆಲವು ವರ್ಷಗಳಿಂದ ಹೋರಾಟ ಮಾಡುತ್ತಿವೆ. ಅಂತಹ ಕುಟುಂಬಗಳು ಲಾಕ್‌ಡೌನ್ ಕಾರಣಕ್ಕಾಗಿ ಅಹೋರಾತ್ರಿ ಧರಣಿ ನಿಲ್ಲಿಸಿದ್ದರು. ಇಂತಹ ಸಮಯಕ್ಕಾಗಿ ಕಾದು ಕುಳಿತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ಮುಂಜಾನೆ ದಾಳಿ ಮಾಡಿ ಗುಡಿಸಲುಗಳನ್ನು ಧ್ವಂಸಗೊಳಿಸಿರುವ ದೌರ್ಜನ್ಯ ನಡೆದಿದೆ. ಅವರ ಕಾನೂನು ಬದ್ಧ ಹಕ್ಕುಗಳನ್ನು ನೀಡದೆ ಅವರಿಗೆ ವಂಚನೆ ಮಾಡಲಾಗುತ್ತಿದೆ.

ವೃಷಭಾವತಿ-ಅರ್ಕಾವತಿ ಶುದ್ಧೀಕರಣ ಯಾವಾಗ?

ಅರ್ಕಾವತಿ ನದಿ ರಾಮನಗರ ಸಿಟಿ ಒಳಗಿನಿಂದಲೇ ಹರಿದು ಹೋಗುತ್ತದೆ. ಅದರ ಹೂಳೆತ್ತಿಸಿ, ಶುದ್ಧೀಕರಣ ಮಾಡುತ್ತೇವೆ ಎಂದು ಎಲ್ಲರೂ ಭರವಸೆ ನೀಡುತ್ತಿದ್ದಾರೆಯೇ ಹೊರತು ವೃಷಭಾವತಿ, ಅರ್ಕಾವತಿ ಶುದ್ಧೀಕರಣ ಕಾರ್ಯ ಆರಂಭವಾಗಿಲ್ಲ. ಇದರಿಂದ ನಗರದ ನೈರ್ಮಲ್ಯ ಕೆಟ್ಟಿದ್ದು, ಅಂದ ಹಾಳಾಗಿದೆ. ಮಂಚನಬೆಲೆ ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ಕಾಲುವೆಗಳ ಆಧುನೀಕರಣವಾಗದೆ, ಹೂಳೆತ್ತೆದೆ ನೀರು ಬರುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ, ಆದರೆ ಕೇಳಿಸಿಕೊಳ್ಳುವವರಿಲ್ಲ.

ಕೊನೆಯ ಮಾತು

ರಾಜೀವ್ ಗಾಂಧಿ ವಿವಿ ಸೇರಿದಂತೆ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಜಿಲ್ಲಾಧಿಕಾರಿಗಳ ಕಚೇರಿ ಸೇರಿ ರಾಮನಗರದಲ್ಲಿ ಕೆಲವು ದೊಡ್ಡದೊಡ್ಡ ಕಟ್ಟಡಗಳಿರುವುದು ನಿಜ. ಆದರೆ ಅವುಗಳನ್ನೇ ಅಭಿವೃದ್ಧಿಯೆನ್ನಲಾಗುವುದಿಲ್ಲ. ಜನರ ಬದುಕಿನಲ್ಲಿನ ಸುಧಾರಣೆಯೇ ನಿಜವಾದ ಅಭಿವೃದ್ಧಿಯಾಗುತ್ತದೆ. ಅಂತಹ ಯಾವುದೇ ಮುನ್ನೋಟ ಇಲ್ಲಿನ ಜನಪ್ರತಿನಿಧಿಗಳಿಗೆ ಅಂದರೆ ಈಗಾಗಲೇ ಸಿಎಂ ಆಗಿರುವವರಿಗೆ, ಮುಂದೆ ಸಿಎಂ ಆಗಬೇಕು ಎಂದು ಹವಣಿಸುತ್ತಿರುವವರಿಗೆ ಇದ್ದಂತೆ ತೋರುತ್ತಿಲ್ಲ. ಕೇವಲ ಜಾತಿ ಆಧಾರಲ್ಲಿ
ಮತ ಲೆಕ್ಕಾಚಾರ ಹಾಕುವುದನ್ನು ಬಿಟ್ಟು ಜನಪ್ರತಿನಿಧಿಗಳು ಕ್ಷೇತ್ರದಲ್ಲಿದ್ದು, ಜನರ ಹಿತಕ್ಕೆ ದುಡಿಯಬೇಕು ಎಂಬುದನ್ನ ಮತದಾರರು ಆಗ್ರಹಿಸಬೇಕಿದೆ. ಸಮಗ್ರ ಅಭಿವೃದ್ಧಿಗೆ ಮುಂದಾಗಿ ಎಂದು ಜನಪ್ರತಿನಿಧಿಗಳಿಗೆ ರಾಮನಗರದ ಜನರು ಮುಂದಿನ ಚುನಾವಣೆಯಲ್ಲಿ ಗಟ್ಟಿ ಧ್ವನಿಯಲ್ಲಿ ಕೇಳುವರೇ?

ಮುಂದಿನ ವಾರ: ಕನಕಪುರ ಕ್ಷೇತ್ರ

– ಮುತ್ತುರಾಜು


ಇದನ್ನೂ ಓದಿ: ಕೇಂದ್ರದಿಂದ ಐಎಎಸ್‌ಗಳು ದೂರ ಉಳಿಯಲು ಕೇಂದ್ರದ ಕಿರುಕುಳವೇ ಕಾರಣ: ಸಸಿಕಾಂತ್‌ ಸೆಂಥಿಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...