ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್‌ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸಾಪ್ ಚಾಟ್‌ಗಳು ಬಹಿರಂಗವಾಗಿದ್ದು, ಅದರಲ್ಲಿನ ಮಾತುಕತೆ ಭಾರಿ ವಿವಾದಕ್ಕೀಡಾಗಿದೆ. ಈ ಬಗ್ಗೆ ಜನವರಿ 18 ರಂದು ಹೇಳಿಕೆ ಬಿಡುಗಡೆ ಮಾಡಿರುವ ನ್ಯೂಸ್ ಬ್ರಾಡ್‌ಕಾಸ್ಟ್ ಅಸೋಸಿಯೇಷನ್(NBA), “ರೇಟಿಂಗ್‌ಗಳನ್ನು ತಿರುಚುವಲ್ಲಿ ಇವರಿಬ್ಬರ ಕೈವಾಡವಿರುವುದು ಈ ವಾಟ್ಸಪ್ ಚಾಟ್‌ಗಳಿಂದ ದೃಡಪಟ್ಟಿದೆಯಾದ್ದರಿಂದ ಭಾರತೀಯ ಬ್ರಾಡ್‌ಕಾಸ್ಟಿಂಗ್ ಫೌಂಡೇಷನ್‌ನಿಂದ ರಿಪಬ್ಲಿಕ್ ಟಿವಿಯನ್ನು ಹೊರಹಾಕಬೇಕು” ಎಂದು ಒತ್ತಾಯಿಸಿದೆ.
NBA ಪತ್ರಿಕಾ ಪ್ರಕಟಣೆಯು, ತಿಂಗಳು ತಿಂಗಳು ಇತರ ಚಾನೆಲ್‌ಗಳ ರೇಟಿಂಗ್‌ಳನ್ನು ತಿರುಚುವ ಮುಖಾಂತರ ರಿಪಬ್ಲಿಕ್ ಟಿವಿಗೆ ಪ್ರಯೋಜನ ಮಾಡಿಕೊಡಲಾಗಿದೆ. ಅರ್ನಾಬ್ ಮತ್ತು ಪಾರ್ಥೋ ದಾಸ್‌ಗುಪ್ತಾ ನಡುವೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನೋಡಿ ಆಘಾತವಾಯಿತು ಎಂದು ಅದು ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ವರದಿ: ರಿಪಬ್ಲಿಕ್‌ಟಿವಿ ಮತ್ತು ಟೈಮ್ಸ್ ನೌಗೆ ಛೀಮಾರಿ ಹಾಕಿದ ಬಾಂಬೆ ಹೈಕೋರ್ಟ್
ಈ ವಿಷಯದ ಬಗ್ಗೆ ನ್ಯಾಯಾಲಯ ಆದೇಶ ನೀಡುವವರೆಗೂ ಟಿವಿಯನ್ನು ಬಾರ್ಕ್ ರೇಟಿಂಗ್ ವ್ಯವಸ್ಥೆಯಿಂದ ಹೊರಗಿಡುವಂತೆ ಅಸೋಸಿಯೇಷನ್ ಕರೆ ನೀಡಿದೆ. “ರೇಟಿಂಗ್‌ಗಳ ತಿರುಚುವಿಕೆಗೆ ಸಂಬಂಧಿಸಿ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವವರೆಗೆ ರಿಪಬ್ಲಿಕ್ ಟಿವಿಯನ್ನು ಭಾರತೀಯ ಬ್ರಾಡ್‌ಕಾಸ್ಟಿಂಗ್ ಫೌಂಡೇಷನ್ ಸದಸ್ಯತ್ವವನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕೆಂದು” ಅದು ಹೇಳಿದೆ.
“ಪ್ರಸ್ತುತ ವಾಟ್ಸಾಪ್ ಸಂದೇಶಗಳು ರೇಟಿಂಗ್‌ಗಳ ತಿರುಚುವಿಕೆಯನ್ನು ಪ್ರತಿಬಿಂಬಿಸುತ್ತದೆ ಮಾತ್ರವಲ್ಲದೆ, ವಿನಿಮಯವಾದ ಸಂದೇಶಗಳಲ್ಲಿ ಕಾರ್ಯದರ್ಶಿಗಳ ನೇಮಕ, ಕ್ಯಾಬಿನೆಟ್ ಪುನರ್ರಚನೆ, ಪ್ರಧಾನ ಮಂತ್ರಿಗಳ ಕಚೇರಿಗೆ ಪ್ರವೇಶ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳನ್ನು ನಿಯಂತ್ರಿಸುವ ಶಕ್ತಿಯಿದೆ ಎಂದು ತೋರಿಸುತ್ತದೆ” ಎಂದು ಅದು ಹೇಳಿದೆ.
ಬಾರ್ಕ್‌ನ ತಿರುಚಿದ ಡೇಟಾದಿಂದಾಗಿ ಸುದ್ದಿ ಪ್ರಸಾರಕರಿಗೆ ಅಪಾರ ಆರ್ಥಿಕ ನಷ್ಟವಾಗಿದೆ. ಆದ್ದರಿಂದ ಕೌನ್ಸಿಲ್ ಇದಕ್ಕೆ ವಿವರಣೆಯನ್ನು ನೀಡಬೇಕು ಎಂದು NBA ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಆಕ್ಷೇಪಾರ್ಹ ಕಾರ್ಯಕ್ರಮ: ರಿಪಬ್ಲಿಕ್ ಟಿವಿಗೆ 20,000 ಪೌಂಡ್ ದಂಡ ವಿಧಿಸಿದ ಬ್ರಿಟನ್!


