Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಶಿರಸಿ-ಸಿದ್ಧಾಪುರ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋಟೆ ಅಭೇದ್ಯವೆ?

ಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಶಿರಸಿ-ಸಿದ್ಧಾಪುರ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋಟೆ ಅಭೇದ್ಯವೆ?

- Advertisement -
- Advertisement -

ಮಲೆನಾಡಿನ ಸೆರಗಲ್ಲಿರುವ ಉತ್ತರ ಕನ್ನಡದ ಶಿರಸಿ-ಸಿದ್ಧಾಪುರ ರಾಜ್ಯದಲ್ಲಿ ಗಮನ ಸೆಳೆದ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರದ ರಾಜಕೀಯ ಮಹಿಮೆಯೆ ಹಾಗೆ. ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ, ಎರಡು ಬಾರಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯ ತವರೂರು (ಸಿದ್ಧಾಪುರ) ಇದು. ರಾಜ್ಯದ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರೆನಿಸಿದ್ದ, ಮಾಜಿ ಮುಖ್ಯ ಮಂತ್ರಿ ಸಾರೆಕೊಪ್ಪ ಬಂಗಾರಪ್ಪರಿಗೆ ಹೆಣ್ಣು ಕೊಟ್ಟಿದ್ದ ಮಾವನ ಮನೆ (ಶಿರಸಿ) ಇಲ್ಲಿದೆ. ಈ ಇಬ್ಬರು ಪರಸ್ಪರ ಪ್ರತಿಸ್ಪರ್ಧಿ ಮುಂದಾಳುಗಳ ನಾಮಬಲದಲ್ಲಿ ಸುಮಾರು ಮೂರ್‍ನಾಲ್ಕು ದಶಕಗಳ ಕಾಲ ಉತ್ತರ ಕನ್ನಡದಲ್ಲಿ ಕದನ ಕುತೂಹಲದ ರಾಜಕಾರಣ ನಡೆದುಹೋಗಿದೆ. ಇವತ್ತಿಗೂ ಜಿಲ್ಲೆಯಲ್ಲಿ ಬಂಗಾರಪ್ಪ ಮತ್ತು ಹೆಗಡೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ವರ್ಗ ಸಂಘರ್ಷದ ರಾಜಕೀಯ ಆಖಾಡ

ಶಿರಸಿ-ಸಿದ್ಧಾಪುರ ಕ್ಷೇತ್ರದಿಂದ ಎರಡು ಬಾರಿ ಮತ್ತು ಹಳಿಯಾಳದಿಂದ ಒಂದು ಕಾಂಗ್ರೆಸ್ ಶಾಸಕರಾಗಿದ್ದ ಹೆಗಡೆ ರಾಜ್ಯದ ಹಣಕಾಸು ಮಂತ್ರಿಯಂತ ಮಹತ್ವದ ಸ್ಥಾನಮಾನಕ್ಕೇರಿದ್ದರು. ನಿಜಲಿಂಗಪ್ಪನವರ ಕಾಲಕೀರ್ದಿಯಲ್ಲಿ ಹೆಗಡೆ ಮತ್ತು ವಿರೇಂದ್ರ ಪಾಟೀಲ್ ’ಲವ-ಕುಶ’ ಎಂದೇ ಪ್ರಸಿದ್ದರಾಗಿದ್ದರು. ಇಂದಿರಾ ಕಾಂಗ್ರೆಸ್‌ಅನ್ನು ನಿಜಲಿಂಗಪ್ಪ ಬಿಟ್ಟಾಗ ಅವರನ್ನು ಹಿಂಬಾಲಿಸಿದ್ದ ಹೆಗಡೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರ ರಾಜ್ಯಸಭಾ ಸದಸ್ಯರಾಗಿದ್ದರು. ಗುಂಡೂರಾವ್ ಸರ್ಕಾರ ಪತನವಾಗಿ ಜನತಾ ಪಕ್ಷ, ಬಂಗಾರಪ್ಪ, ನಜೀರ್ ಸಾಬ್ ಮುಂತಾದವರಿದ್ದ ಪ್ರಗತಿರಂಗ ಸೇರಿ ರಚನೆಯಾದ ಜನತಾರಂಗ ಅಧಿಕಾರಕ್ಕೆ ಬಂದಾಗ ಹೆಗಡೆ ನೇರ ದಿಲ್ಲಿಯಿಂದ ಬಂದು ಮುಖ್ಯಮಂತ್ರಿಯಾದರು. ಮೌಲ್ಯಾಧಾರಿತ
ರಾಜಕಾರಣದ ’ಸ್ಲೋಗನ್’ ಮೂಲಕ ಶುದ್ಧತೆ-ಬದ್ಧತೆಯ ರಾಜಕಾರಣದ ನೇತಾರನಂತೆ ಬಿಂಬಿಸಿಕೊಂಡಿದ್ದರು. ಆದರೆ ಹೆಗಡೆ ರೇವಜೀತು, ಬಾಟ್ಲಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದು ಇತಿಹಾಸ.

ರಾಮಕೃಷ್ಣ ಹೆಗಡೆ

ಹೆಗಡೆ ಉತ್ತರ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸ್ವಜಾತಿ ಹವ್ಯಕ ಬ್ರಾಹ್ಮಣರ
ಪ್ರಶ್ನಾತೀತ ನಾಯಕರಾಗಿದ್ದ ಸಮಯವದು. ಸಿದ್ಧಾಪುರಕ್ಕೆ ಹೊಂದಿಕೊಂಡೆ ಇರುವ ಸೊರಬದ ಪ್ರಜಾ ಸೋಷಲಿಸ್ಟ್ ಪಕ್ಷದ ಶಾಸಕರಾಗಿದ್ದ ಬಂಗಾರಪ್ಪ ಉತ್ತರ ಕನ್ನಡದಲ್ಲೂ ರಾಜಕಾರಣ ಶುರು ಹಚ್ಚಿಕೊಂಡಿದ್ದರು. ಜಿಲ್ಲೆಯಲ್ಲಿ ಹವ್ಯಕ ಬ್ರಾಹ್ಮಣರಿಗಿಂತ ಸ್ವಲ್ಪ ಜಾಸ್ತಿಯೆ ಇರುವ ಸ್ವಜಾತಿ ದೀವರು (ಈಡಿಗರು) ಮತ್ತು ಇತರ ಹಿಂದುಳಿದ ಜಾತಿಗಳ ಆರಾಧ್ಯ ಮುಖಂಡರಾಗಿ ಬಂಗಾರಪ್ಪ ರೂಪುಗೊಂಡಿದ್ದರು. ಜಿಲ್ಲೆಯಲ್ಲಿ ಒಂಥರಾ ವರ್ಗ ಸಂಘರ್ಷದ ರಾಜಕೀಯ ನೆಲೆಗೊಂಡಿತ್ತು. ಬಂಗಾರಪ್ಪ ಕಾಂಗ್ರೆಸ್ ಸೇರಿ ದೇವರಾಜ್ ಅರಸರ ಸರಕಾರದಲ್ಲಿ ಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಭಾವಳಿ ಹೆಚ್ಚಿಸಿಕೊಂಡರೆ ಇತ್ತ ಉತ್ತರಕನ್ನಡದಲ್ಲು ಅದರ ಪರಿಣಾಮಬೀರಿತು. ಬಂಗಾರಪ್ಪ ವಿವಿಧ ಪಕ್ಷಗಳನ್ನು ಕಟ್ಟಿದಾಗಲೆಲ್ಲ ಅದು ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು.

ಶಿರಸಿ-ಸಿದ್ಧಾಪುರದಲ್ಲಿ ಹೆಗಡೆ-ಬಂಗಾರಪ್ಪ ವರ್ಚಸ್ಸು ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿರುತ್ತಿತ್ತು. 1957 ಮತ್ತು 1962ರಲ್ಲಿ ಶಿರಸಿಯಿಂದ ಗೆದ್ದಿದ್ದಹೆಗಡೆ ಆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ಹಳಿಯಾಳಕ್ಕೆ ವಲಸೆ ಹೋದರು. ಆ ನಂತರ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದ ಹೆಗಡೆ ಎಮೆರ್ಜೆನ್ಸಿಯಲ್ಲಿ ಜೈಲಿಗೆ ಹಾಕಲ್ಪಟ್ಟಿದ್ದರು. ಜೈಲಿಂದ ಬಂದ ಹೆಗಡೆ 1978ರಲ್ಲಿ ಜನತಾ ಪಕ್ಷದ ಹುರಿಯಾಳಾಗಿ ಕೆನರಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರೂ ಗೆಲ್ಲಲಾಗಲಿಲ್ಲ. ಇತ್ತ ಶಿರಸಿ ಮೀಸಲು ಕ್ಷೇತ್ರದಲ್ಲಿ 1967ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಮೂಲದ ಎಚ್.ಎಮ್ ಜಯಪ್ರಕಾಶನಾರಾಯಣ್ ಪ್ರಜಾ ಸೋಶಲಿಸ್ಟ್ ಪಕ್ಷದಿಂದ ಶಾಸಕರಾದರು. 1972ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಜಯಪ್ರಕಾಶನಾರಾಯಣರಿಗೆ 1978ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಬಂಗಾರಪ್ಪ ಪ್ರಭಾವದಿಂದ ರೇವಣಕರ್ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿದ್ದರು. ಆದರೆ ಹೆಗಡೆ ಅನುಯಾಯಿ ಉಮಾಕಾಂತ ಬೋರ್ಕರ್ ಜನತಾ ಪಕ್ಷದಿಂದ ಎಮ್‌ಎಲ್‌ಎ ಆದರು.

ಬಂಗಾರಪ್ಪ ಶಿಷ್ಯ ಕಾನಡೆ

ಸಿದ್ಧಾಪುರದ ತಾಲೂಕು ಕಚೇರಿಯೆದುರಿನ ದೊಡ್ಡ ಆಲದ ಮರದಡಿ ಕುಳಿತು ಕಾಯಕವೆ ಕೈಲಾಸ ಎನ್ನುತ್ತ ಚಪ್ಪಲಿ ಹೊಲಿಯುವ ದುಡಿಮೆ ಮಾಡುತ್ತಿದ್ದ ತೀರ ಕೆಳಸ್ತರದ ದಲಿತ ಸಮುದಾಯದ ಕಾನಡೆಯವರನ್ನು ಬಂಗಾರಪ್ಪ 1983ರಲ್ಲಿ ಜನತಾರಂಗದ ಅಭ್ಯರ್ಥಿ ಮಾಡಿದ್ದರು. ಆಗ ಬಂಗಾರಪ್ಪ ಮತ್ತು ಹೆಗಡೆ ಮೈತ್ರಿ ಪಕ್ಷದಲ್ಲಿದ್ದರು. ಹಾಗಾಗಿ ಕಾನಡೆ ನಿರಾಯಾಸವಾಗಿ ಗೆದ್ದರು. 1985ರ ಮಧ್ಯಂತರ ಚುನಾವಣೆ ಸಂದರ್ಭದಲ್ಲಿ ಬಂಗಾರಪ್ಪ ಕಾಂಗ್ರೆಸ್ ಸೇರಿದ್ದರು. ಮತ್ತೆ ಕಾನಡೆಗೆ ಬಂಗಾರಪ್ಪ ಕಾಂಗ್ರೆಸ್ ಟಿಕೆಟ್ ಕೊಡಿಸಿ ಗೆಲ್ಲಿಸಿದರು. 1989ರಲ್ಲೂ ಕಾನಡೆ ಬಂಗಾರಪ್ಪರ ನಾಮಬಲದಲ್ಲೆ ಶಾಸಕರಾದರು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಿನ್ನೆಲೆಯಿಲ್ಲದ ಕಾನಡೆ ಮೂರು ಬಾರಿ ಶಾಸಕನಾಗಿದ್ದು ಜನತಂತ್ರದ ಚಂದವೆಂದೆ ವ್ಯಾಖ್ಯಾನಿಸಲಾಗುತ್ತಿದೆ. ಜನ ಸಾಮಾನ್ಯರೊಂದಿಗೆ ಹಮ್ಮುಬಿಮ್ಮು ಇಲ್ಲದೆ ಬೆರೆಯುತ್ತಿದ್ದ ಕಾನಡೆ ಮೇಲೆ ಪುಂಡಾಟದ ಆರೋಪ ದೊಡ್ಡ ಪ್ರಮಾಣದಲ್ಲೆ ಇತ್ತು. 1994ರ ಎಲೆಕ್ಷನ್ ಹೊತ್ತಿಗೆ ಬಂಗಾರಪ್ಪ ಮತ್ತು ಕಾನಡೆ ಸಂಬಂಧ ಮುರಿದುಬಿದ್ದಿತ್ತು. ಆಗ ಬಂಗಾರಪ್ಪ ಕೆಸಿಪಿ ಕಟ್ಟಿದ್ದರು. ತಮ್ಮ ಪಕ್ಷದಿಂದ ಅಭ್ಯರ್ಥಿ ಹಾಕಿದ್ದಂದ ಕಾಂಗ್ರೆಸ್‌ನಿಂದ ನಿಂತಿದ್ದ ಕಾನಡೆಗೆ ಗೆಲ್ಲಲಾಗಲಿಲ್ಲ. ಇದರ ಲಾಭ ಜನತಾದಳದ ಪಿ.ಎಸ್ ಜೈವಂತ್ ಪಡೆದುಕೊಂಡರು. ಹೆಗಡೆ ಸ್ಥಾಪಿಸಿದ್ದ ಲೋಕಶಕ್ತಿಗೆ ಹೋಗದೆ ದಳದಲ್ಲಿ ಉಳಿದಿದ್ದ ಜೈವಂತ್, ಜೆ.ಎಚ್.ಪಟೇಲರ ಮಂತ್ರಿ ಮಂಡಲದಲ್ಲಿ ಅಬಕಾರಿ ಮಂತ್ರಿಯಾಗಿದ್ದರು.

ಬಂಗಾರಪ್ಪ

ಹೆಗಡೆ ಬಳಗಕ್ಕೆ ಜೈವಂತ್ ಮೇಲೆ ಸಿಟ್ಟಿತ್ತು. ಅವರನ್ನು ಸೋಲಿಸುವ ಹಠಕ್ಕೆ ಬಿದ್ದಿದ್ದರು. 1999ರ ಚುನಾವಣೆ ವೇಳೆಯಲ್ಲಿ ಹೆಗಡೆಯವರ ಲೋಕಶಕ್ತಿ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿತ್ತು. ಮಂತ್ರಿ ಜೈವಂತ್‌ಗೆ ಜನತಾದಳದ ಟಿಕೆಟ್ಟೂ ಸಿಗದಂತೆ ವಿರೋಧಿಗಳು ತಂತ್ರ ಹೂಡಿದ್ದರು. ಹಾಗಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಕಾನಡೆಯನ್ನು ಕಣಕ್ಕಿಳಿಸಿತ್ತು. ಮತ ಹರಿದು ಹಂಚಿಹೋಗಿ ಬಿಜೆಪಿ ಲೋಕಶಕ್ತಿ ಕೂಟದ ವಿವೇಕಾನಂದ ವೈದ್ಯ ಗೆಲ್ಲಲು ಅವಕಾಶವಾಯಿತು. 2004ರಲ್ಲಿ ಕಾಂಗ್ರೆಸ್ ಮಾರ್ಗರೆಟ್ ಆಳ್ವ ಮತ್ತು ದೇಶಪಾಂಡೆ ಬಣದ ಬಡಿದಾಟ ಮತ್ತು ಬಂಗಾರಪ್ಪ ಬಿಜೆಪಿಯಲ್ಲಿಂದ ವೈದ್ಯ ಎರಡನೆ ಬಾರಿ ಶಾಸಕರಾದರು.

ಸಾಮಾನ್ಯ ಕ್ಷೇತ್ರವೂ ಕಾಗೇರಿ ಎಂಟ್ರಿಯೂ

ಶಿರಸಿ, ಸಿದ್ಧಾಪುರದಲ್ಲಿ ಇವತ್ತಿಗೂ ಬಂಗಾರಪ್ಪ ಮತ್ತು ಹೆಗಡೆ ಅಭಮಾನಿಗಳು ಇದ್ದಾರಾದರೂ ಮೊದಲಿನ “ಪ್ರಜ್ಞೆ” ಹಿಂದುತ್ವದ ಹಾವಳಿಯಲ್ಲಿ ಇಲ್ಲವಾಗಿದೆಯೆಂದು ಬಂಗಾರಪ್ಪ ಜತೆ ರಾಜಕಾರಣ ಮಾಡಿದ ಹಿರಿಯರು ಹೇಳುತ್ತಾರೆ. 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಶಿರಸಿ-ಸಿದ್ಧಾಪುರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಅದುವರೆಗೆ ಪಕ್ಕದ ಅಂಕೋಲಾ-ಯಲ್ಲಾಪುರ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿದ್ದ ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತವರು (ಶಿರಸಿ) ಕ್ಷೇತ್ರಕ್ಕೆ ಬಂದರು. ಈ ಅಂಕೋಲಾ-ಯಲ್ಲಾಪುರ ಹವ್ಯಕರ ಮೀಸಲು ಕ್ಷೇತ್ರವೆಂದು ಗುರುತಿಸಲ್ಪಟ್ಟಿತ್ತು. ಎಲ್ಲ ಪಕ್ಷದವರೂ ಇಲ್ಲಿ ಹವ್ಯಕ ಬ್ರಾಹ್ಮಣರಿಗೆ ಟಿಕೆಟ್ ಕೊಡುತ್ತಿದ್ದುದರಿಂದ ಆ ಅಡ್ಡ ಹೆಸರು ಬಂದಿತ್ತು.

2008ರ ಹೊತ್ತಿಗೆ ಕಾಂಗ್ರೆಸ್‌ನ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವ ಬಣಗಳ ಕಿತ್ತಾಟ ತಾರಕ ತಲುಪಿತ್ತು. ಮಾರ್ಗರೆಟ್ ತಮ್ಮ ಶಿಷ್ಯ ರವೀಂದ್ರನಾಥ್ ನಾಯ್ಕ್‌ಗೆ ಟಿಕೆಟ್ ಕೊಡಿಸಿದ್ದರು. ದೇಶಪಾಂಡೆ ನಿಷ್ಠಾವಂತ ಷಣ್ಮುಖ ಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಂಗಾರಪ್ಪರ ಭಾಮೈದ-ಈಗಿನ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್ ಬಂಗಾರಪ್ಪನವರ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಹಿಂದುಳಿದ ವರ್ಗದ ಮತ ಬ್ಯಾಂಕ್ ವಿಭಜನೆಯಾಗಿ ಬಿಜೆಪಿಯ ಕಾಗೇರಿ ಗೆದ್ದರು. ಆದರೆ ಎದುರಾಳಿಗಳಿಗೆ ಬಿದ್ದ ಒಟ್ಟೂ ಮತ ಕಾಗೇರಿ ಪಡೆದಿದ್ದಕ್ಕಿಂತ ಜಾಸ್ತಿಯಿತ್ತು. 2013ರಲ್ಲಿ ಕಾಗೇರಿ ಎರಡನೆ ಬಾರಿ ಸ್ಪರ್ಧೆಗಿಳಿದಾಗ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಹೊನ್ನಾವರ ಕತ್ತುಕತ್ತಿನ ಪೈಪೋಟಿ ನೀಡಿ ಬೆವರಿಳಿಸಿದ್ದರು. ಮಾರ್ಗರೆಟ್ ಆಳ್ವರ ಪರಮಾಪ್ತ ದೀಪಕ್ ಹೊನ್ನಾವರ 39,795 ಮತ ಪಡೆದರೆ, ಕಾಗೇರಿಗೆ 42,854 ಓಟು ಬಂದಿತ್ತು. ಜೆಡಿಎಸ್ ಅಭ್ಯರ್ಥಿಯಾಗಿದ್ದ ರಾಮಕೃಷ್ಣ ಹೆಗಡೆಯವರ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ 39,761 ಮತ ಗಳಿಸಿದ್ದರು. ಇಬ್ಬರು ಪ್ರಬಲ ಎದುರಾಳಿಗಳ ಎದುರು ಕಾಗೇರಿ ತಿಣುಕಾಡಿ 3,059 ಮತದಂತರದಿಂದ ಬಚಾವ್ ಆಗಿದ್ದರು! 2018ರಲ್ಲೂ ಕಾಗೇರಿಯವರದು ಪ್ರಯಾಸದ ಗೆಲುವೆ ಎಂದು ವಿಶ್ಲೇಷಿಸಲಾಗುತ್ತದೆ. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಮತ್ತು ಜೆಡಿಎಸ್‌ನ ಶಶಿಭೂಷಣ ಹೆಗಡೆಗೆ ಬಿದ್ದ ಮತ (79,759) ಕಾಗೇರಿಗೆ ಬಂದಿದ್ದ ಮತಕ್ಕಿಂತ (70,595) ಹೆಚ್ಚು!

ಕಾಗೇರಿ ಸಾಧನೆ ಎನು?

ನಾಜೂಕಾಗಿ ರಾಜಕಾರಣ ಮಾಡುವ ಕಾಗೇರಿ ಜನರೊಂದಿಗೆ ಬೆರೆಯುತ್ತಾರಾದರೂ ಸಮಷ್ಟಿಯ ಕೆಲಸಗಾರನಲ್ಲ; ಕ್ಷೇತ್ರದ ಬೇಕುಬೇಡಗಳ ಪಟ್ಟಿ ಅವರು ಮಾಡಿಕೊಂಡಿಲ್ಲವೆಂಬ ಆರೋಪವಿದೆ. ಮೊದಲೆರಡು ಅವಧಿಯಲ್ಲಿ ಏನೂ ಕೆಲಸ ಮಾಡದ ಕಾಗೇರಿ ಈ ಸಲ ಒಂದಿಷ್ಟು ಕಾಮಗಾರಿ ಮಾಡಿಸಿದ್ದಾರೆಂದು ಜನರು ಹೇಳುತ್ತಾರೆ. ಸಿದ್ದಾಪುರದಲ್ಲಿ ವಿಶಾಲ ಬಸ್ ನಿಲ್ದಾಣ, ಪಟ್ಟಣದಲ್ಲಿ ರಸ್ತೆ ಅಗಲೀಕರಣ, ಶಿರಸಿ ನಗರದ ರಸ್ತೆ ಅಗಲಮಾಡುವ ಯೋಜನೆ ಬಂದಿದೆ ಎನ್ನುವ ಮಂದಿ ಶಿರಸಿ ಮತ್ತು ಸಿದ್ದಾಪುರಕ್ಕೆ ವ್ಯವಸ್ಥಿತ ಕುಡಿಯುವ ನೀರು ಸರಬರಾಜು ಪ್ಲಾನ್ ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಪಶ್ಚಿಮಘಟ್ಟದ ಅಂಚಿನ ಶಿರಸಿ-ಸಿದ್ಧಾಪುರದ ಗುಡ್ಡಗಾಡು ಹಳ್ಳಿಗಳಲ್ಲಿ ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕವಿಲ್ಲ. ಶಾಲೆಗೆ ಹೋಗುವ ಮಕ್ಕಳು ಅನಾರೋಗ್ಯ ಪೀಡಿತರು. ಬಸುರಿ, ಬಾಣಂತಿಯರ ಗೋಳು ಹೇಳತೀರದು.ಕಾಗೇರಿಗೆ ಜಾತಿ, ಕುಟುಂಬ ಪ್ರೀತಿ ಜಾಸ್ತಿಯೆನ್ನುವ ಜನರು ಇದಕ್ಕೆ ಉದಾಹರಣೆಯಾಗಿ ಸಿದ್ಧಾಪುರದ ಮಗೇಗಾರ್ ಎಂಬಲ್ಲಿ 10 ಕೋಟಿ ರೂ ವೆಚ್ಚದ ರಸ್ತೆ ನಿರ್ಮಿಸಿರುವುದನ್ನು ತೋರಿಸುತ್ತಾರೆ.

ದೇಶಪಾಂಡೆ

10 ಮನೆಗಳೂ ಇಲ್ಲದ ಈ ಊರಲ್ಲಿ ತನ್ನ ಸೋದರ ಮಾವನ ಮನೆ ಇರುವುದರಿಂದ ಈ ಮುತುವರ್ಜಿ ವಹಿಸಿದ್ದಾರೆಂದು ಹೇಳುತ್ತಾರೆ. ಸಿದ್ಧಾಪುರ ತಾಲೂಕಿಗೆ ನೆರೆ ಪರಿಹಾರವೆಂದು ಬಂದಿರುವ 8 ಕೋಟಿ ರೂಗಳಲ್ಲಿ 6 ಕೋಟಿ ಬ್ರಾಹ್ಮಣರು ಹೆಚ್ಚಿರುವ ಅಣಲೆಬೈಲ್ ಜಿ.ಪಂ.ಕ್ಷೇತ್ರಕ್ಕೆ ಕೊಡಲಾಗಿದೆಯಂತೆ. ಕಳೆದ ಅವಧಿಯಲ್ಲಿ ಪಕ್ಕದ ಸಾಗರದ ಶಾಸಕ ಕಾಗೋಡು ತಿಮ್ಮಪ್ಪ ವಿಧಾನಸಭೆ ಅಧ್ಯಕ್ಷರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆಂದು 4-5 ಸಾವಿರ ಕೋಟಿ ರೂ. ಅನುದಾನ ತಂದಿದ್ದರು. ಇವತ್ತು ಅದೆ ಸ್ಥಾನದಲ್ಲಿರುವ ಕಾಗೇರಿ ಸ್ವಕ್ಷೇತ್ರಕ್ಕೆ ತಂದಿರುವುದು ಬರಿ 4-5 ನೂರು ಕೋಟಿಯೆಂದು ಜನರು ನೋವಿನಿಂದ ಹೇಳುತ್ತಾರೆ. ಕಾಗೇರಿ ಕಂಟ್ರಾಕ್ಟರ್ಸ್ ಲಾಬಿ ಪೋಷಿಸಿದ್ದಾರೆಂಬ ಆಕ್ಷೇಪ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಸಂಘ ಪರಿವಾರದಲ್ಲಿ ಪ್ರಭಾವಿಯಾಗಿರುವ, ಆರು ಬಾರಿ ಗೆದ್ದಿರುವ ಬಿಜೆಪಿಯ ಹಿರಿಯ ಶಾಸಕ ಕಾಗೇರಿ ಮನಸ್ಸು ಮಾಡಿದ್ದರೆ ಶಿರಸಿ-ಸಿದ್ಧಾಪುರವನ್ನು ಸಾಗರ, ಶಿಕಾರಿಪುರದಷ್ಟೆ ಅಭವೃದ್ಧಿಪಡಿಸಬಹುದಿತ್ತೆಂಬುದು ಸಾಮಾನ್ಯ ಅಭಿಪ್ರಾಯ.

ಶಿರಸಿ ಕ್ಷೇತ್ರ ಸಮೀಕ್ಷೆಯ ವಿಡಿಯೋ ನೋಡಿ

ಕ್ಷೇತ್ರಕ್ಕೇನು ಬೇಕು? ಏನು ಬೇಡ?

ಶಿರಸಿ ಉತ್ತರ ಕನ್ನಡದ ರಾಜಕೀಯ ರಾಜಧಾನಿ; ಪ್ರಮುಖ ವಾಣಿಜ್ಯ ನಗರ. ಶಿರಸಿ, ಸಿದ್ಧಾಪುರ ತಾಲೂಕಿನ ಆರ್ಥಿಕತೆ ಜೀವಾಳ ಅಡಿಕೆ ವಹಿವಾಟು. ಮೇಲು ವರ್ಗದವರು ಮತ್ತು ಕೆಳ ವರ್ಗದವರಿಗೆ ತೋಟ-ಗದ್ದೆಗಳೆ ತುತ್ತಿಗಾದಾರ. ಮೇಲ್ವರ್ಗದವರಿಗೆ ಹತ್ತಾರು ಎಕರೆ ಅಡಿಕೆ ತೋಟವಿದ್ದರೆ, ಹಿಂದುಳಿದವರು ಅಂಗೈ ಅಗಲದ ತೋಟದಿಂದ ಬದುಕು ಕಟ್ಟಿಕೊಂಡಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದಾಗಿದೆ. ಕೃಷಿಗೆ ಬೇಕಾಗಿರುವ ನೀರಾವರಿ ಯೋಜನೆ ಕೈಗೊಂಡಿದ್ದರೆ ಇನ್ನೊಂದಿಷ್ಟು ಎಕರೆ ನೆಲ ಹಸಿರಾಗಿ ಯುವಕರು ಬೆಂಗಳೂರು, ಶಿವಮೊಗ, ಹುಬ್ಬಳ್ಳಿ ಕಡೆ ವಲಸೆ ಹೋಗುವುದು ತಪ್ಪುತ್ತಿತ್ತೆಂದು ಹಿರಿಯರು ಹೇಳುತ್ತಾರೆ. ಕೈಗಾರಿಕೆ, ಗುಡಿ ಕೈಗಾರಿಕೆ ಸ್ಥಾಪನೆ ಬಗ್ಗೆ ಇಲ್ಲಿಯ ಸಂಸದರು ಮತ್ತು ಶಾಸಕರೇಕೆ ಪ್ರಯತ್ನಿಸುತ್ತಿಲ್ಲ ಎಂಬುದು ಕ್ಷೇತ್ರವಾಸಿಗಳಿಗೆ ಬಿಡಿಸದ ಒಗಟಾಗಿ ಕಾಡುತ್ತಿದೆ.

ಅಘನಾಶಿನಿಯಂಥ ಸಮೃದ್ಧ ನದಿಯಿದ್ದರೂ ಶಿರಸಿ-ಸಿದ್ಧಾಪುರದವರಿಗೆ ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ. ಸಿದ್ಧಾಪುರದ ಅಂಚಿನಲ್ಲೆ ವಿಶ್ವ ಪ್ರಸಿದ್ಧ ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದರೂ ಪ್ರಯೋಜನ ಇಲ್ಲವಾಗಿದೆ. ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳಿಲ್ಲದ ಕ್ಷೇತ್ರವಿದು. ಬಹು ದಿನದ ತಾಳಗುಪ್ಪ-ಹಾವೇರಿ ರೈಲು ಮಾರ್ಗದ ಕನಸು ನನಸಾಗುತ್ತಿಲ್ಲ. ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಶಾಸಕರು, ಸಂಸದರು ತಲೆ ಕೆಡಿಸಿಕೊಳ್ಳುತ್ತಿಲ್ಲವೆಂಬುದು ಸಾಮಾನ್ಯ ಅನಿಸಿಕೆ. ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಶಿರಸಿ ಜಿಲ್ಲೆ ರಚನೆಗಾಗಿ ಹೋರಾಟ ನಡೆಯುತ್ತಿದೆ. ಹಿಂದೆ ಶಿಕ್ಷಣ ಮಂತ್ರಿಯಾಗಿದ್ದಾಗ ಶಿರಸಿ ಭಾಗಕ್ಕೆ ಪ್ರತ್ಯೇಕ ಪಿಡಬ್ಲ್ಯೂಡಿ, ಜಿ.ಪಂ.ಇಂಜಿನಿಯರಿಂಗ್ ವಿಭಾಗ, ಶೈಕ್ಷಣಿಕ ಜಿಲ್ಲಾ ರಚನೆ ಮಾಡಿದ್ದ ಕಾಗೇರಿ ಪ್ರತ್ಯೇಕ ಜಿಲ್ಲಾ ರಚನೆಗೆ ಬದ್ಧತೆ ತೋರಿಸುತ್ತಿಲ್ಲವೇಕೆಂಬ ಚರ್ಚೆಗಳಾಗುತ್ತಿದೆ. ತಲತಲಾಂತರದಿಂದ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು, ಸೂರು ಕಟ್ಟಿಕೊಂಡು ಸಾವಿರಾರು ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಕುಟುಂಬಗಳು ಬದುಕುತ್ತಿವೆ. ಸಾಗುವಳಿ ಹಕ್ಕಿಗಾಗಿ ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ ಹೋರಾಡುತ್ತಿರುವ ಈ ಅರಣ್ಯದ ಅಂಚಿನ ವಾಸಿಗಳು ಶಾಸಕ ಕಾಗೇರಿ ತಮ್ಮ ಸಮಸ್ಯಗೆ ಸ್ಪಂದಿಸುತ್ತಿಲ್ಲವೆಂಬ ಸಿಟ್ಟಿನಲ್ಲಿದ್ದಾರೆ.

ಶಾಸಕಗಿರಿ ಉಮೇದುವಾರರು

ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿರುವ ಸಹ್ಯಾದ್ರಿ ಗಿರಿ-ಶಿಖರ ಶ್ರೇಣಿ, ನದಿ, ಕೊಳ್ಳ, ಜಲಪಾತ, ದೇವಸ್ಥಾನ, ಮಠಗಳಿರುವ ಶಿರಸಿ ಮತ್ತು ಸಿದ್ಧಾಪುರ ಪ್ರಕೃತಿ ಸೌಂದರ್ಯದ ತಾಣ. ಹವ್ಯಕರ ಎರಡು ಪ್ರತಿಸ್ಪರ್ಧಿ ಮಠಗಳಾದ ಸ್ವರ್ಣವಲ್ಲಿ ಮತ್ತು ರಾಮಚಂದ್ರಾಪುರ ಮಠಗಳ ಪ್ರಭಾವ ರಾಜಕೀಯ ಹಾಗು ಸಾಮಾಜಿಕ ವಲಯದಲ್ಲಿದೆ ಈ ಕ್ಷೇತ್ರ. ಸುಮಾರು 40 ಸಾವಿರ ದೀವರು, 35 ಸಾವಿರ ಹೈಗರು, 12 ಸಾವಿರ ಕರಿ ಒಕ್ಕಲಿಗ ಮತ್ತು ಕೊಟ್ಟೆ ಒಕ್ಕಲಿಗರು, 18 ಸಾವಿರದಷ್ಟು ಅಲ್ಪ ಸಂಖ್ಯಾತರ ಜತೆಗೆ ದಲಿತರು ಮತ್ತು ಲಿಂಗಾಯತರು ಗಣನೀಯವಾಗಿದ್ದಾರೆ. ಕಾಗೇರಿಯೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳಾಗಲಿದ್ದಾರೆಂಬ ಸಾಮಾನ್ಯ ಭಾವನೆಯಿದೆ ಜನರಲ್ಲಿ.

ಮಾರ್ಗರೆಟ್ ಆಳ್ವ

ಆದರೆ ಈಗ ಎದ್ದಿರುವ ಮತ್ತೊಂದು ವದಂತಿಯ ಪ್ರಕಾರ ಕಾಗೇರಿಗೆ ಆಂಟಿ ಇನ್ಕಂಬನ್ಸ್ ಇರುವುದರಿಂದ ಬೆಂಗಳೂರಿನ ಕಡೆ ಅವರನ್ನು ಕಳಿಸಿ ಅಥವಾ ಎಂಪಿ ಸ್ಥಾನಕ್ಕೆ ಅಣಿಗೊಳಿಸಿ ಅಡಿಕೆ ವಹಿವಾಟಿನ ಹಣವಂತ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಹೆಬ್ಬಾರ್‌ರನ್ನು ಆಖಾಡಕ್ಕಿಳಿಸಲು ಸಂಘ ಸೂತ್ರಧಾರರು ಯೋಚಿಸುತ್ತಿದ್ದಾರೆನ್ನಲಾಗಿದೆ. ಸಂಸದ ಅನಂತಕುಮಾರ್ ಹೆಗಡೆ ಅಲ್ಲಲ್ಲಿ ಭಾಷಣ ಮಾಡುತ್ತಿರುವ ಧಾಟಿ ನೋಡಿದರೆ, ಮತ್ತೆ ಲೋಕಸಭೆ ಚುನಾವಣೆಗೆ ನಿಲ್ಲುವ ಯೋಚನೆ ಅವರಿಗೆ ಇದ್ದಂತಿಲ್ಲ. ಬಹಳ ದಿನಗಳಿಂದ ಹೆಗಡೆ ಕಣ್ಣು ಶಿರಸಿ ಕ್ಷೇತ್ರದ ಮೇಲಿದೆ. ಆದರೆ ಮುಖ್ಯಮಂತ್ರಿಯಾಗುವ ಯೋಚನೆಯಲ್ಲಿರುವ ಕಾಗೇರಿ ಅಷ್ಟು ಸುಲಭಕ್ಕೆ ಕ್ಷೇತ್ರ ಬಿಟ್ಟು ಕೊಡುತ್ತಾರೆಯೆ ಎಂಬುದು ಮುಖ್ಯ ಪ್ರಶ್ನೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿ ಆರಂಭವಾಗಿದ್ದು ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಪ್ತ ವಲಯದ ಸುಷ್ಮಾ ರೆಡ್ಡಿ ಮತ್ತು ಮಾರ್ಗರೆಟ್ ಆಳ್ವ ಮಗ ಕರಾವಳಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವ ಹೆಸರು ಕೇಳಿಬರುತ್ತಿದೆ. 2013ರ ಚುನಾವಣೆಯಲ್ಲಿ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ದೀಪಕ್ ಹೊನ್ನಾವರ್ ಸೋದರಿಯಾದ ಸುಷ್ಮಾಗೆ ಆರ್ಥಿಕ ಬಲವಿದೆ. ಅಂತಿಮವಾಗಿ ಜಾತಿ, ಹಣಕಾಸಿನ ಸ್ಥಿತಿ ಅವಲೋಕಿಸಿ ಭೀಮಣ್ಣ ನಾಯ್ಕ್‌ಗೆ ಕಾಂಗ್ರೆಸ್ ಟಿಕೆಟ್ ಸಿಗಬಹುದಾದರೂ ಅವರು ಗೆಲ್ಲುವುದು ಕಷ್ಟವೆಂದು ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರು ಬೇಸರದಿಂದ ನುಡಿಯುತ್ತಾರೆ. ಬಂಗಾರಪ್ಪನವರ ಕಾಲದಿಂದ ಲೋಕಸಭೆ, ಕಾಂಗ್ರೆಸ್‌ನಿಂದ ವಿಧಾನಸಭೆ ಮತ್ತು ಈಚೆಗೆ ಮುಗಿದ ಸ್ಥಳಿಯಾಡಳಿತ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆವರೆಗೆ ಐದು ಚುನಾವಣೆಗಳಲ್ಲಿ ಸೋತಿರುವ ಭೀಮಣ್ಣ ನಾಯ್ಕ್‌ರಿಗೆ ಚುನಾವಣೆ ಎದುರಿಸುವ ಸ್ಟ್ಯಾಟರ್ಜಿ, ಸೋಷಿಯಲ್ ಇಂಜಿನಿಯರಿಂಗ್ ಗೊತ್ತಿಲ್ಲವೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ.

ಜೆಡಿಎಸ್‌ನಲ್ಲಿರುವ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಖಂಡಿತ ಗೆಲ್ಲುತ್ತಾರೆಂದು ಕ್ಷೇತ್ರದಲ್ಲಿ ಯಾರನ್ನು ಕೇಳಿದರೂ ಹೇಳುತ್ತಾರೆ. ವೈಯಕ್ತಿಕ ವರ್ಚಸ್ಸು, ಅಜ್ಜನ ಇಮೇಜ್ ಇರುವ ಶಶಿಭೂಷಣ ಎರಡು ಬಾರಿ ಕಾಗೇರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದರು. 2013ರಲ್ಲಿ ಕೇವಲ 3,093 ಮತದ ಅಂತರದಿಂದ ಸೋತಿದ್ದರು. ಜೆಡಿಎಸ್‌ನಿಂದ ನಿಂತರೆ ಗೆಲ್ಲುವುದಿಲ್ಲ ಎಂಬುದು ಖಾತ್ರಿಯಾಗಿರುವ ಶಶಿಭೂಷಣ ಹೆಗಡೆಗೆ ಕಾಂಗ್ರೆಸ್‌ನಿಂದ ಆಫರ್ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸದಿರುವ ಬಗ್ಗೆ ಶಶಿಭೂಷಣ ಹೆಗಡೆ ಗೊಂದಲದಲ್ಲಿದ್ದಾರೆ, ಕಾಂಗ್ರೆಸ್‌ನಿಂದ ಟಿಕೆಟ್ ಪಕ್ಕಾ ಆದರಷ್ಟೆ ಜೆಡಿಎಸ್ ಬಿಡಲು ಅವರು ಸಿದ್ಧರಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ನಿಧಾನಕ್ಕೆ ಆಖಾಡ ಹದಗೊಳ್ಳುತ್ತಿದೆ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ರಾಜಕೀಯ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಯಲ್ಲಾಪುರ ರಣಕಣ: ಮಂತ್ರಿ ಹೆಬ್ಬಾರ್‌ಗೆ ಸೆಡ್ಡು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...