Homeಮುಖಪುಟಶೇನ್‌ ವಾರ್ನ್ ವಿದಾಯಕ್ಕೆ ಕಂಬನಿ ಮಿಡಿದ ಕ್ರಿಕೆಟ್‌ ಪ್ರೇಮಿಗಳು

ಶೇನ್‌ ವಾರ್ನ್ ವಿದಾಯಕ್ಕೆ ಕಂಬನಿ ಮಿಡಿದ ಕ್ರಿಕೆಟ್‌ ಪ್ರೇಮಿಗಳು

- Advertisement -
- Advertisement -

ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಲೆಗ್ ಸ್ಪಿನ್ನರ್ ಶೇನ್ ವಾರ್ನ್ (52) ಹೃದಯಾಘಾತದಿಂದ ನಿಧನರಾಗಿದ್ದು, ಕ್ರಿಕೆಟ್ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ಥಾಯ್ಲೆಂಡ್‌ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಸ್ಪಿನ್‌ ಮಾಂತ್ರಿಕ ಶೇನ್‌ವಾರ್ನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಶುಕ್ರವಾರ ಬೆಳಗಿನ ಜಾವ ಆಸ್ಟ್ರೇಲಿಯಾದ ಕ್ರಿಕೆಟಿಗ  ರಾಡ್ನಿ ಮಾರ್ಷ್ (74) ಹೃದಯಾಘಾತದಿಂದ ನಿಧನರಾದರು. ಗೆಳೆಯನ ವಿದಾಯಕ್ಕೆ ಶೇನ್‌ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ರಾತ್ರಿ ವೇಳೆಗೆ ಶೇನ್‌ ನಿಧನದ ಸುದ್ದಿ ಕ್ರಿಕೆಟ್ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿತು.

ಹದಿನೈದು ವರ್ಷಗಳ ಕಾಲ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ ತೋರಿದ ಪ್ರದರ್ಶನ ಕ್ರಿಕೆಟ್‌ ಪ್ರೇಮಿಗಳ ಮನಸೂರೆಗೊಂಡಿದೆ. ಅತಿಹೆಚ್ಚು ವಿಕೆಟ್‌ ಪಡೆದವರ ಪೈಕಿ ಶ್ರೀಲಂಕಾ ಆಟಗಾರ ಮುತ್ತಯ್ಯ ಮುರಳೀಧರನ್‌ ಮೊದಲ ಸ್ಥಾನದಲ್ಲಿದ್ದರೆ ಶೇನ್‌ ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ.

ವಾರ್ನ್‌ ತೆಗೆದುಕೊಂಡ ಮೊದಲ ವಿಕೆಟ್‌ ರವಿಶಾಸ್ತ್ರಿಯವರದ್ದಾಗಿತ್ತು. 1992, ಜನವರಿ 2ರಂದು ಸಿಡ್ನಿಯಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್‌ ಪಂದ್ಯದ ಮೂಲಕ ಶೇನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 145 ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯಗಳನ್ನಾಡಿದ್ದ ಅವರು 708 ವಿಕೆಟ್ ಪಡೆದಿದ್ದರು.  71 ರನ್‌ಗಳಿಗೆ 8 ವಿಕೆಟ್‌ ಪಡೆದದ್ದು ಶೇನ್‌ನ ಶ್ರೇಷ್ಠ ಸಾಧನೆ. 194 ಅಂತಾರಾಷ್ಟ್ರೀಯ ಏಕದಿನಗಳನ್ನು ಆಡಿದ್ದು 293 ವಿಕೆಟ್ ಪಡೆದಿದ್ದಾರೆ.

1993ರಲ್ಲಿ ನಡೆದ ಆಷಸ್ ಸರಣಿಯಲ್ಲಿ ವಾರ್ನ್ ಎಸೆದ ಸ್ಪಿನ್‌ಗೆ ಇಂಗ್ಲೆಂಡ್‌ನ ಮೈಕ್‌ ಗ್ಯಾಟಿಂಗ್‌ ಔಟಾಗಿದ್ದರು. ಈ ಎಸೆತವನ್ನು ‘ಶತಮಾನದ ಎಸೆತ’ ಎಂದು ಕ್ರಿಕೆಟ್ ಜಗತ್ತು ಬಣ್ಣಿಸಿದೆ.

ಕ್ರಿಕೆಟ್‌ ದಿಗ್ಗಜನ ವಿದಾಯಕ್ಕೆ ಕನ್ನಡಿಗರು ಕಂಬನಿ ಮಿಡಿದಿದ್ದಾರೆ. ಶೇನ್‌ ವಾರ್ನ್‌ ಅವರ ಕ್ರೀಡಾ ಲೋಕವನ್ನು ಸ್ಮರಿಸಿದ್ದಾರೆ. (ಆಯ್ದ ಬರಹಗಳು ಇಲ್ಲಿವೆ.)

***

ಟೆಸ್ಟ್‌ ಕ್ರಿಕೆಟ್‌ ಸೊಬಗು ಹೆಚ್ಚಿಸಿದ ಮಾಂತ್ರಿಕ

ಟೆಸ್ಟ್ ಕ್ರಿಕೆಟ್ ಆಟದ ಸೊಬಗನ್ನು ಬರಪೂರ ನಮಗೆ ಉಣಬಡಿಸುದವನು ಶೇನ್ ವಾರ್ನ್, ಮೂರು ನಾಲ್ಕು ಹೆಜ್ಜೆಗಳನ್ನು ಸಾವಧಾನವಾಗಿ ನೆಡೆದುಕೊಂಡು ಬಂದವನಂತೆ ಇಡೀ ದೇಹದ ಬಾರವನ್ನು ಬಾಲಿನ ಮೇಲೆ ಹಾಕಿ ಲೆಗ್ ಸ್ಪಿನ್ ಮಾಡುತ್ತಿದ್ದ ಶೇನ್ ವಾರ್ನ್ ನನ್ನು ನೋಡುವುದೇ ಹಬ್ಬದಂತಿರುತ್ತಿತ್ತು. ಬಾಲನ್ನು ಅಷ್ಟೊಂದು ಸ್ಪಿನ್ ಹೇಗೆ ಮಾಡುತ್ತಾನಪ್ಪನೆಂದು ಆಶ್ಚರ್ಯವಾಗುತ್ತಿತ್ತು.ಬಾಲನ್ನು ತಿರುತಿರುಗಿಸಿ ಬಿಡುತ್ತಿದ್ದರೆ ಬ್ಯಾಟ್ಸ್‌ಮನ್ ಕಂಗಾಲಾಗಿ ವಿಕೆಟ್ ಒಪ್ಪಿಸುತ್ತಿದ್ದ…

ಶೇನ್‌ ವಾರ್ನ್ ಬದುಕಲ್ಲಿ ಹಲವಾರು ಏರುಪೇರುಗಳಿವೆ. ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದು ಒಂದು ವರ್ಷ ಆಟದಿಂದ ನಿಷೇದಕ್ಕೊಳದಾರು. ಮತ್ತೆ ಬೂದಿಯಿಂದ ಮೇಲೆದ್ದವನಂತೆ 700 ಟೆಸ್ಟ್ ವಿಕೆಟ್‌‌ಗಳ ಸಾಧನೆ ಮಾಡಿದ. ನಮ್ಮನ್ನು ರಂಜಿಸಿದ ಶೇನ್ ವಾರ್ನ್‌‌ಗೆ ಭಾವಪೂರ್ಣ ವಿದಾಯಗಳು.

– ಕಾಂತರಾಜು ಕೆ. ಗೊಲ್ಲರಹಟ್ಟಿ

***

‘2008ರ ಐಪಿಎಲ್‌ ಸೀಸನ್‌ ನೆನಪಾಗುತ್ತದೆ’

ಶೇನ್ ವಾರ್ನ್ ಅಂದರೆ ನನಗೆ ನೆನಪಾಗೋದೇ 2008ರ ಮೊದಲ ಐಪಿಎಲ್ ಸೀಸನ್. ರಾಜಾಸ್ಥಾನ್ ರಾಯಲ್ಸ್‌ ತಂಡದ ಕ್ಯಾಪ್ಟನ್ ಆಗಿದ್ದದ್ದು ಶೇನ್ ವಾರ್ನ್. ಟೂರ್ನಿ ಶುರುವಾದಾಗ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿ ಗೆಲ್ಲಬಹುದೆಂದು ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ಕಾರಣ ಅಲ್ಲಿದ್ದದ್ದು ಕೆಲವೇ ಕೆಲವು ಅನುಭವಸ್ಥ ಆಟಗಾರರು. ಉಳಿದವರೆಲ್ಲ ಅನನುಭವಿ ಯುವಕರೇ.

ಆರಂಭದ ಪಂದ್ಯಗಳನ್ನು ಒಂದರ ಹಿಂದೊಂದು ಸೋತು ಹೋಗುವಾಗ, ಲೀಗ್ ರೌಂಡಿನಿಂದಲೇ ಹೊರಬಿದ್ದು ಇನ್ನೇನು ಟೂರ್ನಿಯಿಂದಲೇ ಹೊರ ಹೋಗಬಹುದು ಅಂತ ಅಂದಾಜಿಸಲಾಗಿತ್ತು. ನನಗೆ ನೆನಪಿದ್ದಂತೆ ರಾಜಸ್ಥಾನ್ ರಾಯಲ್ಸ್ ಆಗ ಕಡೆಯ ಸ್ಥಾನದಲ್ಲಿತ್ತು. ಮುಂದಿನ ಹಂತಕ್ಕೆ ಹೋಗಬೇಕೆಂದರೆ ಉಳಿದ ಆರೇಳು ಪಂದ್ಯಗಳಲ್ಲಿ ಒಂದರಲ್ಲಿಯೂ ಸೋಲದೆ ಎಲ್ಲವನ್ನು ಗೆಲ್ಲಬೇಕಿತ್ತು.

ಆಗ ಆ ಯುವಕರನ್ನೇ ಕಟ್ಟಿಕೊಂಡು, ಅವರ ಸಾಮರ್ಥ್ಯವನ್ನು ಬಳಸಿಕೊಂಡು ಅತ್ಯುತ್ತಮ ಗೇಮ್‌ಪ್ಲಾನ್‌ನಿಂದ ಗೆದ್ದದ್ದು ಶೇರ್ನ್ ವಾರ್ನ್. ಸೋತ ಪಂದ್ಯವೊಂದರ ನಂತರದ ಸಂದರ್ಶನದಲ್ಲಿ ಸಂದರ್ಶನಕಾರ ಕೇಳಿದಾಗ ಶೇನ್ ವಾರ್ನ್ ಹೇಳಿದ್ದೊಂದೇ…..” ಟೂರ್ನಿ ಗೆಲ್ಲುವುದು ಎರಡನೇ ವಿಷಯ. ಈಗ ನಮ್ಮೆಲ್ಲರ ಮುಂದಿರುವ ಗುರಿ ಉಳಿದ ಪಂದ್ಯಗಳನ್ನು ಗೆಲ್ಲುವುದಷ್ಟೇ. ಹಾಗಾಗಿ ಟೂರ್ನಿಯ ಬಗ್ಗೆ ಆಲೋಚಿಸದೆ ಮುಂದೆ ಆಡಲಿರುವ ಒಂದೊಂದು ಪಂದ್ಯದ ಬಗ್ಗೆ ಮಾತ್ರ ಗಮನಹರಿಸಿ, ನಮ್ಮ ಶ್ರಮಹಾಕಿ ಅವುಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ” ಅಂತ. ಅಕ್ಷರಶಃ ಉಳಿದ ಏಳೂ ಪಂದ್ಯಗಳೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ “ಮಾಡು ಇಲ್ಲವೇ ಮಡಿ” ಎಂಬಂತಾಗಿತ್ತು. ಆ ಕ್ಷಣದಲ್ಲೂ ಯಾರಿಗೂ ಆ ತಂಡದ ಬಗ್ಗೆ ನಂಬಿಕೆ ಇರಲಿಲ್ಲ.

ಆಗಲೇ ನೋಡಿ ನಡೆದದ್ದು ಪವಾಡ. ಒಂದೊಂದೇ…. ಒಂದೊಂದೇ ಪಂದ್ಯವನ್ನು ಶೇನ್ ವಾರ್ನ್ ನಾಯಕತ್ವದ ತಂಡ ಗೆಲ್ಲುತ್ತಲೇ ಹೋಯಿತು. ಬ್ಯಾಟಿಂಗ್ ಕೈಕೊಟ್ಟಾಗ ಬೌಲರ್‌ಗಳು ಆಸರೆಯಾದರು. ಬೌಲಿಂಗ್ ಕೈಕೊಟ್ಟಾಗ ಬ್ಯಾಟ್ಸ್‌ಮನ್‌ಗಳೇ ಆಸರೆಯಾದರು. ಹೀಗೆ ಪಂದ್ಯದಿಂದ ಪಂದ್ಯಕ್ಕೆ ರಾಜಾಸ್ಥಾನ್ ರಾಯಲ್ಸ್ ತಾನೆಷ್ಟು ಬಲಿಷ್ಠ ಅನ್ನುವುದನ್ನು ಸಾಬೀತುಪಡಿಸುತ್ತಲೇ ಹೋಯಿತು. ಲೀಗ್ ಹಂತ ಮುಗಿಯುವಷ್ಟರಲ್ಲಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆಗಲೂ ಅತಿಯಾದ ಆತ್ಮವಿಶ್ವಾಸದಿಂದ ಏಕಾಗ್ರತೆ ಕಳೆದುಕೊಳ್ಳಲಿಲ್ಲ. Knockout ಹಂತದಲ್ಲೂ ಅದೇ ಪ್ರದರ್ಶನ ಮುಂದುವರೆಸಿ ಫೈನಲ್‌ ಪಂದ್ಯವನ್ನು ಸಹ ಗೆದ್ದುಕೊಂಡಿತು.

ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನವನ್ನು ನೀಡಿದ್ದಾಗ್ಯೂ ಅಂಥ ಅನನುಭವಿ ಯುವಕರ ತಂಡಕ್ಕೆ ಮಾನಸಿಕ ಸ್ಥೈರ್ಯ ತುಂಬಿ, ಎಲ್ಲರನ್ನು ಹುರಿದುಂಬಿಸುತ್ತ ಸರಣಿ ಗೆಲ್ಲಲು ಕಾರಣವಾದ ಶೇನ್ ವಾರ್ನ್ ಸಹಜವಾಗಿ ಎಲ್ಲರ ಪಾಲಿಗೆ ಹೀರೋ ಆದರು. ಅದ್ಭುತ ಆಟಗಾರರಿರುವ ತಂಡವನ್ನು ಮುನ್ನಡೆಸುವುದು ಸುಲಭ. ಆದರೆ ಹೆಸರೇ ಗೊತ್ತಿಲ್ಲದ ಆಟಗಾರರ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ತಂಡವನ್ನು ಮುನ್ನಡೆಸಿ ಪಂದ್ಯ ಗೆಲ್ಲಿಸುವುದಿದೆಯಲ್ಲ, ಅದು ನಿಜವಾದ ನಾಯಕನಿಗೆ ಮಾತ್ರ ಸಾಧ್ಯ. ನಾಯಕತ್ವದ ಗುಣ ಹೇಗಿರಬೇಕೆಂದು ಶೇನ್ ವಾರ್ನ್ ಆ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದನ್ನು ನೋಡಿದರೆ ಅರ್ಥವಾಗುತ್ತಿತ್ತು.

ಇಷ್ಟೆಲ್ಲ ಆವೃತ್ತಿಗಳು ಮುಗಿದಿದ್ದರೂ ಆ ಮೊದಲನೇ ಆವೃತ್ತಿ ನೆನಪಿರುವುದೇ ಶೇನ್ ವಾರ್ನ್ ಅನ್ನುವ ಲಿಜೆಂಡ್ ಕ್ರಿಕೆಟಿಗನ ಕಾರಣಕ್ಕಾಗಿ. ಅಂಥ ಶೇರ್ನ್ ವಾರ್ನ್….. ಇಂದು ನಮ್ಮನ್ನು ಅಗಲಿದ್ದಾರೆ. ಹೋಗಿ ಬನ್ನಿ ಅಂತ ಕಳುಹಿಸಿಕೊಡುವುದೊಂದೇ ನಮಗಿರುವ ಆಯ್ಕೆ….. ಅವರಾತ್ಮಕ್ಕೆ ಶಾಂತಿ ಸಿಗಲಿ…

– ಸಂತೋಷ್‌ಕುಮಾರ್‌ ಎಲ್.ಎಂ.

***

‘ಅವಸರದ ಗೂಗ್ಲಿ’

ಇದೇನಾಗೋಯ್ತು, ಉತ್ಕಟ ಜೀವನ ಪ್ರೀತಿಯ ಶೇನ್ ಇಷ್ಟು ಬೇಗ ಜೀವ ಚೆಲ್ಲಿ ಹೊರಟೋದ ಅಂದ್ರೆ ನಂಬೋಕೆ ಆಗ್ತಿಲ್ಲ. ಲಂಕೇಶ್ ಮೇಷ್ಟ್ರು ಹಲವು ಬಾರಿ ಕ್ರಿಕೆಟ್ ಜಗತ್ತಿನ ಜಂಟಲ್ ಮನ್ ಶೇನ್ ವಾರ್ನ್ ಬಗ್ಗೆ ಬರೆದದ್ದು ನೆನಪಾಗ್ತಿದೆ. ಜಗತ್ತಿನ ಶ್ರೇಷ್ಠ ಲೆಗ್ ಸ್ಪಿನ್ನರುಗಳಲ್ಲೊಬ್ಬನಾದ ಶೇರ್ನ್ ಅವನನ್ನು ಇಷ್ಟ ಪಡುವವರಿಗೆ ಹೀಗೊಂದು ಅವಸರದ ಗೂಗ್ಲಿ ಎಸೆದು ತಬ್ಬಿಬ್ಬಾಗಿಸಿ ಹೊರಟೋಗಬಹುದೆಂದು ಯಾರೂ ಎಣಿಸಿರಲು ಸಾಧ್ಯವಿಲ್ಲ. What a shock..!

– ದಾದ ಕಲಂದರ್‌

***

‘ಕ್ರಿಕೆಟ್ ಜ್ವರ ತೀವ್ರವಾಗಿದ್ದ ದಿನಗಳವು….’

ನಮಗೆ ನಮ್ಮ ಹೈಸ್ಕೂಲ್ ದಿನಗಳಲ್ಲಿ ಕ್ರಿಕಿಟ್ ಜ್ವರ ತೀವ್ರವಾಗಿದ್ದ ದಿನಗಳಲ್ಲಿ ಶೇನ್ ವಾರ್ನ್ ಬಗ್ಗೆ ಮಾತಾಡದ ದಿನಗಳೇ‌ ಇರುತ್ತಿರಲಿಲ್ಲ.

ಆಸ್ಟ್ರೇಲಿಯಾ ಬಾರತ ಆಟ ಅಂದರೆ ಹುಚ್ಚು ಹಿಡಿಸಿಕೊಂಡು ಕೂರಲು ಆ ಕಡೆ ಶೇನ್ ವಾರ್ನ್ ರ ಮ್ಯಾಜಿಕಲ್ ಲೆಗ್ ಸ್ಪಿನ್ ಬೌಲಿಂಗ್ ಆದರೆ ಅದಕ್ಕೆ ಎದುರಾಗಿ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್…‌ ಬರೀ ಒನ್ ಡೇ ಅಲ್ಲ ಐದು ದಿನಗಳ ಟೆಸ್ಟ್ ಮ್ಯಾಚುಗಳನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾವೊಂದಿಶ್ಟು ಒಂದೇ ವಾರಗೆಯ ಗೆಳೆಯರು ಕೆಲ ವರ್ಶ ಕಾಲ ಕುಂತ್ರೂ ಕ್ರಿಕೆಟ್, ನಿಂತ್ರೂ ಕ್ರಿಕೆಟ್, ಮಲಗಿದ್ರೂ ಕ್ರಿಕೆಟ್ ಅನ್ನುವಂಗೆ ಕ್ರಿಕೆಟ್ ಮಯ ಆಗೋಗಿದ್ವಿ. ಹತ್ತನೇ‌‌ ತರಗತಿ ಪಾಸಾದ ಮೇಲೆ ಊರಲ್ಲೇ ಕಾಲೇಜಿದ್ರೂ ಶಿವಮೊಗ್ಗ ಕಾಲೇಜಿಗೆ ನನ್ನನ್ನು ಸೇರಿಸಲು ಈ ಕ್ರಿಕೆಟ್ ಕೂಡಾ ಕಾರಣವಾಗಿತ್ತು. ಶಿವಮೊಗ್ಗ ಹೋದ ಮೇಲೆ ಕ್ರಿಕೆಟ್ ಏನೋ ಬಿಟ್ಟರೂ ಅದಕ್ಕಿಂತ ದೊಡ್ಡ ಹುಚ್ಚು “ಸಮಾಜ, ಕ್ರಾಂತಿ, ಹೋರಾಟ” ಅಂಟಿಕೊಂಡಿದ್ದು ಬ್ಯಾರೆ ಕತೆ. ಅದರ ಬಗ್ಗೆ ಕೊಂಚವೂ ಬೇಸರವಿಲ್ಲ.

ಈ ಐಪಿಎಲ್, ಟ್ವೆಂಟಿ ಟ್ವೆಂಟಿ ಬಂದ ಮೇಲೆ ನಮ್ಮ ಕ್ರಿಕೆಟ್ ಹುಚ್ಚೂ ಕಡಿಮೆ ಆಗಿತ್ತು..‌ ಶೇನ್ ವಾರ್ನ್ ತೀರಿಕೊಂಡ ಸುದ್ದಿ ಕೇಳಿ ಒಮ್ಮೆ ಆ ಕ್ರಿಕೆಟ್ ಪ್ರೇಮದ ದಿನಗಳು ನೆನಪಾದವು.

– ಹರ್ಷಕುಮಾರ್‌ ಕುಗ್ವೆ

***

‘ಶೇನ್‌ ವಾರ್ನ್ ಲೇಸರ್‌ ಟ್ರೀಟ್ಮೆಂಟ್‌’

ಆದರೆ ಶೇನ್ ವಾರ್ನ್ ಅವರನ್ನು ವಯಕ್ತಿಕ ಕಾರಣಕ್ಕಾಗಿ ಸ್ವಲ್ಪ ದಿನ ಫಾಲೋ ಮಾಡ್ತಿದ್ದೆ. ವಾರ್ನ್ ತನ್ನ ತಲೆಗೂದಲು ಉದರದ ಹಾಗೇ ‘ಲೇಸರ್ ಟ್ರೀಟ್ಮೆಂಟ’ ತಗೊಂಡ್ರು… ಈ ಟ್ರೀಟ್ಮೆಂಟ್ ಎಷ್ಟು ಫಲಕಾರಿ ಅಂತ ಅಗಾಗ ಅವರ ತಲೆ ಗಮನಿಸುತ್ತಿದ್ದೆ. ಶೇನ್ ವಾರ್ನ್ ಗೆ ಪ್ರೀತಿಯ ವಿದಾಯ

 – ಯದುನಂದನ್ ಕೀಲಾರ

***

– ಹೀಗೆ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳು ಶೇನ್‌ ವಾರ್ನ್ ಅವರ ಕ್ರಿಕೆಟ್‌ ಜಗತ್ತನ್ನು ಮೆಲುಕು ಹಾಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...