2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಕೆಲ ಪಂದ್ಯಗಳು ಮಳೆಗೆ ಆಹುತಿಯಾದರೂ ಹಲವು ಪಂದ್ಯಗಳ ಫಲಿತಾಂಶಕ್ಕಾಗಿ ಕೊನೆಯ ಎಸೆತದವರೆಗೂ ಕಾಯಬೇಕಾದ ರೋಚಕತೆ ಸೃಷ್ಟಿಯಾಗಿತ್ತು. ಸದ್ಯಕ್ಕೆ ಸೂಪರ್ 12 ವರೆಗಿನ ಪಂದ್ಯಗಳು ಮುಗಿದಿದ್ದು ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಆದರೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿದ್ದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇತ್ತೀಚಿಗೆ ತಾನೇ ಏಷ್ಯಾ ಕಪ್ ಗೆದ್ದಿದ್ದ ಶ್ರೀಲಂಕಾ ತಂಡಗಳು ಅನನುಭವಿ ತಂಡಗಳ ಎದುರು ಸೋತು ಟೂರ್ನಿಯಿಂದ ಹೊರನಡೆದಿವೆ. 2 ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವು ಅರ್ಹತಾ ಹಂತದಲ್ಲಿಯೇ ಸೋತು ಮುಖಭಂಗ ಅನುಭವಿಸಿತ್ತು.
ಆದರೆ ಅನನುಭವಿ ಪುಟ್ಟ ತಂಡಗಳು ಬಲಿಷ್ಠ ತಂಡಗಳನ್ನು ಮಣಿಸಿ ಸಾಧನೆಗೈದಿವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅದ್ಭುತ ಪ್ರದರ್ಶನ ನೀಡಿವೆ. ಇದನ್ನೇ ಸ್ಪಿರಿಟ್ ಆಫ್ ಕ್ರಿಕೆಟ್ ಎಂದು ಕರೆಯುವುದು. ಇಲ್ಲಿ ಬಲಿಷ್ಠ ತಂಡಗಳೇ ಯಾವತ್ತಿಗೂ ಗೆಲ್ಲುತ್ತಾರೆ ಎನ್ನಲಾಗುವುದಿಲ್ಲ. ಸಿಕ್ಕ ಅವಕಾಶ ಬಳಸಿಕೊಂಡ ಪುಟ್ಟ ತಂಡಗಳು ತಮ್ಮ ಪ್ರದರ್ಶನದ ಮೂಲಕ ಜಗತ್ತೆ ತಮ್ಮತ್ತ ನೋಡುವಂತೆ ಮಾಡಿವೆ. ಆ ರೀತಿಯಾಗಿ ಈ ಬಾರಿಯ ಟೂರ್ನಿಯಲ್ಲಿ ಬಲಿಷ್ಟ ತಂಡಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಪುಟ್ಟ ಆದರೆ ದಿಟ್ಟ ತಂಡಗಳ ಪರಿಚಯ ಇಲ್ಲಿದೆ.
ನೆದರ್ಲೆಂಡ್ಸ್: ಅರ್ಹತಾ ಪಂದ್ಯಗಳಲ್ಲಿ ನಮೀಬಿಯಾ ಮತ್ತು ಯುಎಇ ವಿರುದ್ಧ ಗೆದ್ದು ಸೂಪರ್ 12 ಪ್ರವೇಶಿಸಿದ ನೆದರ್ಲೆಂಡ್ ತಂಡವು ಅಲ್ಲಿ ಜಿಂಬಾಬ್ವೆ ತಂಡದ ಎದುರು ಜಯ ಕಂಡಿತ್ತು. ಅದರೆ ಅದು ಹೆಚ್ಚು ಗಮನ ಸೆಳೆದಿದ್ದು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಟೂರ್ನಿಯಿಂದ ಹೊರಹಾಕಿದ ನಂತರ. ಭಾನುವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲ್ಲಲೇಬೇಕಾಗಿತ್ತು. ಆದರೆ ನೆದರ್ಲೆಂಡ್ಸ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 13 ರನ್‌ಗಳ ಸೋಲೊಪ್ಪಿಕೊಂಡಿತು. ಆ ಮೂಲಕ ಮೊದಲ ಬಾರಿಗೆ ನೆದರ್ಲೆಂಡ್ಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ದಾಖಲೆ ನಿರ್ಮಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕಂಡು ಕೇವಲ 145 ರನ್ ಅಷ್ಟೇ ಗಳಿಸಿತು. ನೆದರ್ಲೆಂಡ್ಸ್ ತಂಡವು ಸೂಪರ್ 12 ಹಂತದ 5 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಮುಂದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವ ಸಂಭವವಿದೆ.
ಐರ್ಲೆಂಡ್: ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ನೀಡಿದ 176 ರನ್‌ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಬೆನ್ನತ್ತಿದ್ದ ಐರ್ಲೆಂಡ್ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿಯೂ ಸಹ ಕೇವಲ 1 ವಿಕೆಟ್ ಕಳೆದುಕೊಂಡು 146 ರನ್‌ಗಳ ಗುರಿ ಬೆನ್ನತ್ತಿತ್ತು. ಆ ಮೂಲಕ ವೆಸ್ಟ್ ಇಂಡೀಸ್ ತಂಡ ಅರ್ಹತೆ ಪಡೆಯದೆ ಟೂರ್ನಿಯಿಂದ ಹೊರಬೀಳಲು ಕಾರಣವಾಗಿತ್ತು ಐರ್ಲೆಂಡ್.
ಸೂಪರ್ 12 ಪಂದ್ಯದಲ್ಲಿ ಐರ್ಲೆಂಡ್ ತಂಡ ಕ್ರಿಕೆಟ್ ಜನಕ ಎಂದು ಕರೆಯಲ್ಪಡುವ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಡಕ್ವರ್ತ್ ಲೂಯಿಸ್ ನಿಯಮದಿಂದ ಐರ್ಲೆಂಡ್ ತಂಡವು 5 ರನ್‌ಗಳ ಜಯಗಳಿಸಿ ಸಂಭ್ರಮಿಸಿತ್ತು. ಐರ್ಲೆಂಡ್ ನೀಡಿದ 157 ರನ್ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ 14.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿದಾಗ ಭಾರೀ ಮಳೆ ಸುರಿದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ ವಿಜಯಿ ಎಂದು ಘೋಷಿಸಲಾಯಿತು. ನಿಯಮದ ಪ್ರಕಾರ ಇಂಗ್ಲೆಂಡ್ 05 ರನ್ ಹಿಂದಿತ್ತು.
ನಮೀಬಿಯಾ: ಶ್ರೀಲಂಕಾ ತಂಡ ಇತ್ತೀಚಿಗಷ್ಟೇ ಏಷ್ಯಾ ಕಪ್ ಗೆದ್ದು ಬೀಗಿತ್ತು. ಆದರೆ ಅದದನ್ನು ಟಿ20 ವಿಶ್ವಕಪ್‌ನ ಮೊದಲ ಅರ್ಹತಾ ಪಂದ್ಯದಲ್ಲಿಯೇ ನಮೀಬಿಯಾ ತಂಡ ಭಾರೀ ಅಂತರದಿಂದ ಸೋಲಿಸಿಬಿಟ್ಟಿತ್ತು!. 20 ಓವರ್‌ಗಳಲ್ಲಿ 163 ರನ್ ಗಳಿಸಿದ್ದ ನಮೀಬಿಯಾದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಶ್ರೀಲಂಕಾ ಕುಸಿದಿಬಿತ್ತು. ಕೇವಲ 108 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 55 ರನ್‌ಗಳ ಸೋಲು ಅನುಭವಿಸಿತು. ಆದರೆ ಆನಂತರದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ನಮೀಬಿಯಾ ಸೂಪರ್ 12 ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಜಿಂಬಾಬ್ವೆ: ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಎದುರು ಗೆದ್ದು ಸೂಪರ್ 12 ಪ್ರವೇಶಿಸಿದ್ದ ಜಿಂಬಾಬ್ವೆ ತಂಡವು ಅಲ್ಲಿ ಪಾಕಿಸ್ತಾನ ತಂಡವನ್ನು 1 ರನ್‌ನಿಂದ ಸೋಲಿಸಿ ಅಚ್ಚರಿ ಉಂಟು ಮಾಡಿತ್ತು. ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತದ ಎದುರು ಸೋತು ನಿರಾಶೆ ಅನುಭವಿಸಿದ್ದ ಪಾಕ್‌ಗೆ ಜಿಂಬಾಬ್ವೆ ನೀಡಿದ ಆಘಾತ ಸಾಮಾನ್ಯವಾದುದ್ದಲ್ಲ. ಅದು ಸೆಮಿಫೈನಲ್ ಪ್ರವೇಶಿಸದೆ ಟೂರ್ನಿಯಿಂದ ಹೋರಬೀಳುವ ಆತಂಕ ಎದುರಿಸುತ್ತಿತ್ತು. ಆದರೆ ಇನ್ನೊಂದೆಡೆ ನೆದರ್ಲೆಂಡ್ಸ್ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿದ ಕಾರಣ ಪಾಕಿಸ್ತಾನ ಕೊನೆಗೂ ಸೆಮಿಫೈನಲ್ ಪ್ರವೇಶಿಸಿದೆ.
ಸ್ಕಾಟ್ಲೆಂಡ್: ಸ್ಕಾಟ್ಲೆಂಡ್ ತಂಡವು ಸೂಪರ್ 12 ಪ್ರವೇಶಿಸಲು ಸಾಧ್ಯವಾಗದಿದ್ದರೂ ಅದು ಅರ್ಹತಾ ಸುತ್ತಿನಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಅದು ಸಹ ಸೂಪರ್ 12 ಪ್ರವೇಶಿಸದಂತೆ ತಡೆದಿತ್ತು.
ಆಫ್ಘಾನಿಸ್ತಾನ: ಹಿಂದಿನ ವಿಶ್ವಕಪ್‌ನಲ್ಲಿನ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನ ತಂಡವು ಸೂಪರ್ 12 ಹಂತಕ್ಕೆ ನೇರ ಪ್ರವೇಶ ಪಡೆದಿತ್ತು. ಆದರೆ ಮಳೆಯಿಂದಾಗಿ ಅದರ 2 ಪಂದ್ಯಗಳು ರದ್ದಾದವು. ಆದರೂ ಅದು ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಸನಿಹ ತಲುಪಿತು. ಆಸ್ಟ್ರೇಲಿಯಾ ನೀಡಿದ 169 ರನ್‌ಗಳ ಗುರಿ ಬೆನ್ನತ್ತಿದ್ದ ಆಫ್ಘಾನಿಸ್ತಾನ ತಂಡವು 164 ರನ್ ಗಳಿಸಿ ಕೇವಲ 4 ರನ್ ಅಂತರದಿಂದ ಸೋಲು ಕಂಡಿತು. ಹಾಗಾಗಿ ಗೆದ್ದರೂ ನೆಟ್ ರನ್ ರೇಟ್ ಹೆಚ್ಚು ಮಾಡಿಕೊಳ್ಳಲು ಸಾಧ್ಯವಾಗದ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ನಷ್ಟೆ (07) ಅಂಕಗಳನ್ನು ಹೊಂದಿದ್ದರೂ ಸೆಮಿಫೈನಲ್ ಪ್ರವೇಶಿಸದೆ ಟೂರ್ನಿಯಿಂದ ಹೊರಬೀಳಬೇಕಾಯಿತು.
ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮತ್ತೆ ಭಾರತ-ಪಾಕ್ ಮುಖಾಮುಖಿಯಾಗಬಹುದು: ಮರುಕಳಿಸುವುದೇ 2007ರ ಫೈನಲ್?


