Homeಅಂತರಾಷ್ಟ್ರೀಯತೈವಾನ್ ಬಿಕ್ಕಟ್ಟು: ದೇಶಗಳ ನಡುವೆ ಒಂದು ಅಘೋಷಿತ ತಿಳಿವಳಿಕೆ

ತೈವಾನ್ ಬಿಕ್ಕಟ್ಟು: ದೇಶಗಳ ನಡುವೆ ಒಂದು ಅಘೋಷಿತ ತಿಳಿವಳಿಕೆ

- Advertisement -
- Advertisement -

ಆಗಸ್ಟ್ 2, 2022ರಂದು ಯುಎಸ್‌ಎಯ ಕಾಂಗ್ರೆಸಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನಿನಲ್ಲಿ ಬಂದಿಳಿದರು. ಅಲ್ಲಿನ ಸದನದ ಸ್ಪೀಕರ್ ಎಂಬುದು ಯುಎಸ್‌ಎಯ ಶಾಸಕಾಂಗದಲ್ಲಿಯೇ ಅತ್ಯುನ್ನತ ಹುದ್ದೆ; ಅಂದರೆ, ಅದು ಪ್ರತಿನಿಧಿಗಳ ಸದನದಲ್ಲಿ ಪ್ರಧಾನಿಯ ಸ್ಥಾನಕ್ಕೆ ಬಹುತೇಕ ಹತ್ತಿರ ಎನ್ನಬಹುದು. 1997ರಲ್ಲಿ ಆಗಿನ ಸ್ಪೀಕರ್ ನ್ಯೂಟ್ ಗಿಂಗ್ರಿಚ್ ಭೇಟಿಯ ಬಳಿಕ ತೈವಾನಿಗೆ ಅತ್ಯುನ್ನತ ಮಟ್ಟದ ಯುಎಸ್‌ಎ ಅಧಿಕಾರಿಯ ಭೇಟಿ ಇದಾಗಿದೆ.

ಪೆಲೋಸಿ ಅವರ ಭೇಟಿಯನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ (ಪಿಆರ್‌ಸಿ) ಖಂಡಿಸಿತು. ಭೇಟಿಯ ಬೆನ್ನಲ್ಲೇ ತೈವಾನಿನ ಸುತ್ತಲೂ ಮಿಲಿಟರಿ ಕಸರತ್ತು ಮತ್ತು ಕ್ಷಿಪಣಿಗಳ ಪರೀಕ್ಷೆ ನಡೆಸುವುದಾಗಿ ಚೀನಾ ಘೋಷಿಸಿತು. ಈ ಮಿಲಿಟರಿ ಕಸರತ್ತು ಈ ಪ್ರದೇಶದಲ್ಲಿ ಹಿಂದೆಂದೂ ನಡೆಯದ ಪ್ರಮಾಣದ ಸೇನಾಬಲದ ಪ್ರದರ್ಶನವಾಗಿದೆ. ಈ ಭೇಟಿ ಮತ್ತು ಅದಕ್ಕೆ ಚೀನಾದ ಪ್ರತಿಕ್ರಿಯೆಯು- ವಿಶ್ವದ ಅತ್ಯಂತ ಪ್ರಬಲ ದೇಶಗಳೆರಡರ ನಡುವಿನ ಸಂಬಂಧ ತೀರಾ ಹದಗೆಟ್ಟಿರುವುದನ್ನು ಸೂಚಿಸುತ್ತದೆ ಎಂಬುದು ತಜ್ಞರ ಭಯ.

ತೈವಾನ್ ಸ್ವತಂತ್ರ ದೇಶವಲ್ಲವೆ?

ತೈವಾನ್ ಚೀನಾದಿಂದ ವಾಸ್ತವ ರೂಪದಲ್ಲಿ ಪ್ರತ್ಯೇಕವಾದ ನಂತರ, ಅದರ ಕಾನೂನು ಸ್ಥಾನಮಾನ ಅಸ್ಪಷ್ಟವಾಗಿದೆ. ಯುಎಸ್‌ಎ ಸೇರಿದಂತೆ ಪ್ರಪಂಚದ ಬಹುತೇಕ ದೇಶಗಳು ತೈವಾನಿಗೆ ಅಧಿಕೃತ ರಾಷ್ಟ್ರದ ಮಾನ್ಯತೆ ನೀಡಿಲ್ಲ. ಆದರೆ, ಹೆಚ್ಚಿನ ದೇಶಗಳು ತೈವಾನ್ ಸರಕಾರದ ಜೊತೆ ನಿರ್ದಿಷ್ಟವಾದ ವ್ಯಾವಹಾರಿಕ ತಿಳಿವಳಿಕೆಯನ್ನು ಹೊಂದಿವೆ. ಚೀನಾದ ಕ್ರಾಂತಿಯ ನಂತರದಿಂದ ತೈವಾನ್, ಪಾಶ್ಚಾತ್ಯ ಶಕ್ತಿಗಳಿಗೆ ಚೀನಾ ವಿರುದ್ಧ ಒಂದು ಕಾರ್ಯವ್ಯೂಹಾತ್ಮಕ ಪ್ರದೇಶವಾಗಿ ಮಹತ್ವದ ಸ್ಥಾನವನ್ನು ಹೊಂದಿದೆ. ತೈವಾನಿನ ವಿಷಯದಲ್ಲಿ ತನ್ನ ನಿಲುವಿನ ಬಗ್ಗೆ ಯುಎಸ್‌ಎಯು ಆಸ್ಪಷ್ಟತೆಯನ್ನು ತೋರಿಸುತ್ತಾಬಂದಿದೆ. ಅದು ಪಿಆರ್‌ಸಿಯ ’ಒಂದು ಚೀನಾ’ ಧೋರಣೆಯನ್ನು ಬಹಿರಂಗವಾಗಿ ಬೆಂಬಲಿಸುವುದೂ ಇಲ್ಲ; ತೈವಾನಿನ ಸ್ವಾತಂತ್ರ್ಯವನ್ನು ಒಪ್ಪುವುದೂ ಇಲ್ಲ.

ನ್ಯಾನ್ಸಿ ಪೆಲೋಸಿ

ಐತಿಹಾಸಿಕವಾಗಿ ಫೋರ್ಮೋಸ (ತೈವಾನ್) ಚೀನಾದ ಪೂರ್ವ ತೀರದಾಚೆ ಇರುವ ದ್ವೀಪವಾಗಿರುವುದರಿಂದ, ವ್ಯೂಹಾತ್ಮಕವಾಗಿ ವಸಾಹತುಶಾಹಿ ಶಕ್ತಿಗಳ ನಡುವೆ ಸ್ಪರ್ಧೆಗೆ ಕಾರಣವಾಗಿತ್ತು. ಚೀನಾದ ಸಾಮ್ರಾಜ್ಯಗಳು ಶತಮಾನಗಳಿಂದ ಬ್ರಿಟಿಷರು, ಡಚ್ಚರು, ಫ್ರೆಂಚರು ಮುಂತಾದ ವಸಾಹತುಶಾಹಿ ಶಕ್ತಿಗಳನ್ನು ದೂರ ಇಡಲು ಕಾದಾಡುತ್ತಲೇ ಇರಬೇಕಾಗಿತ್ತು. 1894ರಲ್ಲಿ ಜಪಾನ್ ತೈವಾನನ್ನು ಆಕ್ರಮಿಸಿತು. ಜಪಾನಿನ ಆಡಳಿತ ಅಲ್ಲಿ ಎರಡನೇ ಮಹಾಯುದ್ಧ ಮುಗಿಯುವ ತನಕವೂ ಮುಂದುವರಿದಿತ್ತು. ನಂತರ ಜಪಾನ್- ಎರಡನೇ ವಿಶ್ವ ಯುದ್ಧದಲ್ಲಿ ಗೆದ್ದ ಮಿತ್ರಪಕ್ಷಗಳ ಜೊತೆಗೆ ಕಾದಾಡಿದ್ದ ಚೀನಾಕ್ಕೆ ಅದನ್ನು ಬಿಟ್ಟು ಕೊಡಬೇಕಾಯಿತು. ಇದು 1927ರಿಂದ 1949ರ ತನಕ ನಡೆದ ಚೀನಾದ ಅಂತರ್ಯುದ್ಧದ ಕೊನೆಯ ವರ್ಷಗಳಲ್ಲಿ ಆಗಿತ್ತು. ಈ ಯುದ್ಧವು ಕ್ವಿಂಗ್ ರಾಜಮನೆತನದಿಂದ ಅಧಿಕಾರ ಕಿತ್ತುಕೊಂಡ ರಾಷ್ಟ್ರೀಯವಾದಿಗಳು (ನ್ಯಾಷನಲಿಸ್ಟ್ಸ್) ಮತ್ತು ಅವರ ವಿರುದ್ಧ ಬಂಡೆದ್ದಿದ್ದ ಕಮ್ಯುನಿಸ್ಟರ ನಡುವೆ ನಡೆದಿತ್ತು. ತೈವಾನಿನ ನಿಯಂತ್ರಣವು ಚೀನಾದ ಕೈಗೆ ಬಂದಾಗ, ರಾಷ್ಟ್ರೀಯವಾದಿಗಳು ಅಲ್ಲಿ ಅಧಿಕಾರದಲ್ಲಿ ಇದ್ದರು. ಅಂತರ್ಯುದ್ಧದಲ್ಲಿ ರಾಷ್ಟ್ರೀಯವಾದಿಗಳು ಕಮ್ಯುನಿಸ್ಟರ ಎದುರು ಸೋತುಹೋದರು. ಚೀನಾದ ಕಮ್ಯುನಿಸ್ಟ್ ಪಕ್ಷವು ತಾನೇ ಚೀನಾದ ಅಧಿಕೃತ ಆಡಳಿತಗಾರ ಎಂದು ಘೋಷಿಸಿ, 1951ರ ವೇಳೆಗೆ ಚೀನಾದ ಇಡೀ ಮುಖ್ಯಭೂಮಿಯ ಮೇಲೆ ನಿಯಂತ್ರಣ ಸಾಧಿಸಿತು. ರಾಷ್ಟ್ರೀಯವಾದಿ ಸರಕಾರವು ತೈವಾನಿಗೆ ಓಡಿಹೋಗಿ, ತೈಪೆಯಲ್ಲಿ ರಾಜಧಾನಿಯನ್ನು ಸ್ಥಾಪಿಸಿ, ತಾನೇ ಚೀನಾದ ಅಧಿಕೃತ ಆಡಳಿತಗಾರ ಎಂದು ಘೋಷಿಸಿತು. ಅದು ರಿಪಬ್ಲಿಕ್ ಆಫ್ ಚೈನಾ (ಆರ್‌ಓಸಿ) ಎಂಬ ಹೆಸರಿನಲ್ಲಿ ಇಡೀ ಚೀನಾವನ್ನು ಅಂತಾರಾಷ್ಟ್ರೀಯವಾಗಿ ಪ್ರತಿನಿಧಿಸತೊಡಗಿತು.

ಎರಡು ಚೀನಾಗಳು

1954ರಲ್ಲಿ, ಪಿಆರ್‌ಸಿ ಏನಾದರೂ ಈ ದ್ವೀಪದ ಮೇಲೆ ಆಕ್ರಮಣ ಮಾಡಿದರೆ ಆರ್‌ಓಸಿಯನ್ನು ರಕ್ಷಿಸುವ ಭರವಸೆ ನೀಡುವಂತಹ ಒಪ್ಪಂದಕ್ಕೆ ಯುಎಸ್‌ಎ ಸಹಿ ಹಾಕಿತು. ಇದು ತೈವಾನನ್ನು ಪಿಆರ್‌ಸಿ ಜೊತೆಗೆ ಸೇರಿಸಿಕೊಳ್ಳಲು ಚೀನಾ ಹಿಂದೇಟು ಹಾಕುವಂತೆ ಮಾಡಿತು. ಕೊರಿಯಾ, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಲಾವೋಸ್‌ನಲ್ಲಿ ಯುದ್ಧದಲ್ಲಿ ತೊಡಗಿದ್ದ ಯುಎಸ್‌ಎ, ಪೂರ್ವ ಏಷ್ಯಾದಲ್ಲಿ ಪ್ರಬಲವಾದ ಸೇನಾ ಅಸ್ತಿತ್ವವನ್ನು ಕಾದುಕೊಂಡಿತ್ತು. ಒಂದು ವೇಳೆ ಪಿಆರ್‌ಸಿಯು ಆರ್‌ಓಸಿಯ ಮೇಲೆ ಆಕ್ರಮಣ ಮಾಡಿದರೆ, ಅದು ಇನ್ನೊಂದು ಘರ್ಷಣೆಗೆ ಕಾರಣವಾಗುತ್ತಿತ್ತು. ಆ ಹೊತ್ತಿಗೆ ಪಿಆರ್‌ಸಿ ಅದಕ್ಕೆ ಸಿದ್ಧವಾಗಿರಲಿಲ್ಲ. 1964ರಲ್ಲಿ ಚೀನಾವು ಪರಮಾಣು ಅಸ್ತ್ರಗಳ ಪರೀಕ್ಷೆ ಮತ್ತು ಅಭಿವೃದ್ಧಿ ಆರಂಭಿಸಿತು. ಇದುವೇ ಯುಎಸ್‌ಎಯು ಚೀನಾದ ಮೇಲೆ ಆಕ್ರಮಣ ಮಾಡದಿರಲು ಮುಖ್ಯ ಕಾರಣವಾಗಿರಬಹುದು.

ಪಿಆರ್‌ಸಿ ಮತ್ತು ಸೋವಿಯತ್ ಒಕ್ಕೂಟದ ನಡುವೆ ಬಿರುಕು ಉಂಟಾದ ನಂತರವಷ್ಟೇ- 1979ರಲ್ಲಿ ಯುಎಸ್‌ಎಯು ಪಿಆರ್‌ಸಿಗೆ ಏಕೈಕ ಕಾನೂನುಬದ್ಧ ಸರಕಾರ ಎಂಬ ಮಾನ್ಯತೆ ನೀಡಿತು. ಇದು ತೈವಾನಿನ ಸರಕಾರಕ್ಕೆ ಅದರ ಅಧಿಕೃತ ಮಾನ್ಯತೆಯನ್ನು ಕೊನೆಗೊಳಿಸಿತು. ಆಗಿನಿಂದ ಯುಎಸ್‌ಎಯ ನಿಲುವು, ’ಒಂದೇ ಚೀನಾ ಇರುವುದು ಮತ್ತು ತೈವಾನ್ ಚೀನಾದ ಭಾಗ’ ಎಂಬ ಚೀನೀ ನಿಲುವಿಗೆ ಮಾನ್ಯತೆ ನೀಡುತ್ತದೆ. ಆದರೆ, ಈ ನಿಲುವನ್ನು ಉದ್ದೇಶಪೂರ್ವಕ ಕಾರಣಕ್ಕಾಗಿಯೇ ಅಸ್ಪಷ್ಟವಾಗಿಯೇ ಇಟ್ಟುಕೊಳ್ಳಲಾಗಿದೆ. ಚೀನಾದ ಸರಕಾರವು ವ್ಯಾಖ್ಯಾನಿಸುವ ರೀತಿಯಲ್ಲಿ ಒಂದೇ ಚೀನಾ ಇರುವುದೆಂಬುದನ್ನಾಗಲೀ, ತೈವಾನ್ ಚೀನಾದ ಭಾಗ ಎಂಬುದನ್ನಾಗಲೀ ಯುಎಸ್‌ಎ ಒಪ್ಪುವುದಿಲ್ಲ ಮತ್ತು ಅದಕ್ಕೆ ಮಾನ್ಯತೆ ನೀಡುವುದಿಲ್ಲ. ಆದರೆ, ಅದು ಹಾಗೆ ಒಪ್ಪುತ್ತದೆ ಎಂದು ವ್ಯಾಖ್ಯಾನಿಸುವುದಕ್ಕೂ ಸಾಕಷ್ಟು ಅವಕಾಶಗಳು ಇವೆ. ಎರಡೂ ದೇಶಗಳ ಹಿತಾಸಕ್ತಿಗಳಿಗೆ ಇದು ತೃಪ್ತಿಕರವಾಗಿರುವುದರಿಂದ ಪಿಆರ್‌ಸಿಯಾಗಲಿ, ಯುಎಸ್‌ಎ ಆಗಲೀ, ಈ ಕುರಿತು ಸ್ಪಷ್ಟನೆ ನೀಡುವ ಗೋಜಿಗೇ ಹೋಗಿಲ್ಲ.

ಪ್ರಸ್ತುತ ಪರಿಸ್ಥಿತಿ ಏನು?

1990ರಿಂದ ಜಗತ್ತಿನಲ್ಲಿ ಚೀನಾದ ಸ್ಥಾನಮಾನ ಬೆಳೆದಿದೆ. 1980ರ ದಶಕದಲ್ಲಿ ಅದು ಚದರಿಹೋಗುತ್ತಿದೆ ಎಂಬಂತೆ ಕಾಣುತ್ತಿತ್ತು. ಆದರೆ, 1990 ಮತ್ತು 2000ದ ದಶಕಗಳಲ್ಲಿ ಚೀನಾವು ಉತ್ಪಾದನೆ, ಹಣಕಾಸು, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಪ್ರಗತಿ ಸಾಧಿಸಿದೆ. ಈ ಅಭಿವೃದ್ಧಿಯು ಪಾಶ್ಚಾತ್ಯ ದೇಶಗಳಿಗೆ ಸಂಬಂಧಿಸಿ ಚೀನಾದ ಸ್ಥಾನವನ್ನು ಸರಿಸಮಾನಗೊಳಿಸಿದೆ. 2008ರ ಆರ್ಥಿಕ ಬಿಕ್ಕಟ್ಟು ಚೀನಾದ ಆರ್ಥಿಕ ಸ್ಥಾನಮಾನದಲ್ಲಿ ಭಾರೀ ಪಲ್ಲಟ ಉಂಟುಮಾಡಿತು. ಚೀನಾದ ಸುತ್ತ ಉಳಿದಿದ್ದ ತಮ್ಮ ಕೆಲವು ನೆಲೆಗಳು ಬೇಗನೇ ಮಾಯವಾಗಬಹುದು ಎಂದು ಪಾಶ್ಚಾತ್ಯ ಶಕ್ತಿಗಳು ಹೆದರಿದವು. ಚೀನಾವು ನಿಧಾನವಾಗಿ ಹಾಂಕಾಂಗ್‌ಅನ್ನು ಚೀನೀ ರಾಜಕೀಯ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳಲು ಆರಂಭಿಸಿತು. ಚೀನಾವು ಜಗತ್ತಿನಾದ್ಯಂತ ತನ್ನ ಆರ್ಥಿಕ ಪ್ರಭಾವವನ್ನು ಬೆಳೆಸಿಕೊಳ್ಳುತ್ತಾ ಬಂದಿದೆ. ಚೀನಾವು ತೈವಾನಿನ ಮೇಲೆ ತನ್ನ ಅಧಿಕಾರ ಸ್ಥಾಪನೆಯನ್ನು ಇನ್ನಷ್ಟು ಬಲಗೊಳಿಸಬಹುದು ಎಂಬ ಭಯ ಪಾಶ್ಚಾತ್ಯ ಶಕ್ತಿಗಳಿಗೆ ಇದೆ.

ಅನುಕೂಲಕರ ಗೊಂದಲ

ಒಂದು ಸಾರ್ವಭೌಮ ರಾಷ್ಟ್ರವಾಗಿ ತೈವಾನಿನ ಸ್ಥಾನಮಾನ ಆಸ್ಪಷ್ಟವಾಗಿದೆ. ಪಾಶ್ಚಾತ್ಯ ಶಕ್ತಿಗಳು, ಪಿಆರ್‌ಸಿ ಮತ್ತು ತೈವಾನಿನ ಸರಕಾರ ಕೂಡಾ ತಮ್ಮತಮ್ಮ ಅನುಕೂಲಕ್ಕಾಗಿ ಈ ಆಸ್ಪಷ್ಟತೆಯನ್ನು ಮುಂದುವರಿಯಲು ಬಿಟ್ಟಿವೆ. ಈ ಆಸ್ಪಷ್ಟತೆಯನ್ನು ಭೇದಿಸಲು ಹೊರಟರೆ ಅದು ಸಂಘರ್ಷಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ಉಂಟುಮಾಡಬಹುದು. ಪೆಲೋಸಿಯವರ ಭೇಟಿಯು ಇಂತದ್ದಕ್ಕೆ ಒಂದು ಉದಾಹರಣೆ. ತೈವಾನಿನ ಸ್ವಾತಂತ್ರ್ಯಕ್ಕೆ ಬಹಿರಂಗ ಬೆಂಬಲ ನೀಡುವುದಕ್ಕೆ ಯಾವುದೇ ಪ್ರಮುಖ ಶಕ್ತಿಗಳು ಮುಂದಾಗಿಲ್ಲ. ಈಗಲೂ ತೈವಾನಿನ ಮೇಲೆ ಚೀನಾದ ಹಕ್ಕು ಸ್ಥಾಪನೆ ಕೂಡಾ ಕೇವಲ ನಾಮಮಾತ್ರದ್ದಾಗಿದೆ. ತೈವಾನ್ ಚೀನಾದೊಂದಿಗೆ ಉತ್ತಮವಾದ ವ್ಯಾಪಾರ ಸಂಬಂಧಗಳನ್ನು ಹೊಂದಿದೆ. ತೈವಾನಿನ ಜನರ ನಡುವೆ ನಡೆಸಿದ ಮತಗಣನೆಯು – ಹೆಚ್ಚಿನವರು ಯಥಾಸ್ಥಿತಿಯ ಮುಂದುವರಿಕೆಯನ್ನು ಬೆಂಬಲಿಸುತ್ತಾರೆ ಎಂದು ಸೂಚಿಸುತ್ತದೆ.

ಚೀನಿ ರಾಷ್ಟ್ರೀಯ ಅಸ್ಮಿತೆ ಅಥವಾ ಗುರುತು ಎಂಬುದು – ನಿರ್ದಿಷ್ಟವಾದ ವಸಾಹತುಶಾಹಿ ಅನುಭವದೊಂದಿಗೆ ತಳುಕು ಹಾಕಿಕೊಂಡಿದೆ. ಪಾಶ್ಚಾತ್ಯ ರಾಷ್ಟ್ರಗಳು ಚೀನಾದ ಮೇಲೆ ಆಕ್ರಮಣ ಮಾಡಿದರು; ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ – ಆಫೀಮನ್ನು ಹರಡಿದರು; ಆರ್ಥಿಕ ದಾಸ್ಯಕ್ಕೆ ಗುರಿಪಡಿಸಿದರು; ಸಾಮಾಜಿಕ ಹಾಗೂ ರಾಜಕೀಯ ಸಂಘರ್ಷವನ್ನು ಪ್ರಚೋದಿಸಿ, ಪ್ರೋತ್ಸಾಹಿಸಿದರು. ಚೀನಾದ ಕ್ರಾಂತಿಯ ನಂತರದಿಂದ, ವಿಶೇಷವಾಗಿ ಈಗ, ತೈವಾನ್ ತಮ್ಮ ದೇಶದ ಭಾಗ ಮತ್ತು ಪಾಶ್ಚಾತ್ಯ ದೇಶಗಳು ಅದನ್ನು ರಕ್ಷಿಸುತ್ತಿರುವುದು ಚೀನೀ ರಾಷ್ಟ್ರಕ್ಕೆ ಬೆದರಿಕೆ ಎಂಬಂತೆ ಹೆಚ್ಚಿನ ಚೀನೀಯರು ನೋಡುತ್ತಿದ್ದಾರೆ. ತೈವಾನ್ ಕುರಿತ ಯುಎಸ್‌ಎಯ ಆಸ್ಪಷ್ಟತೆಯನ್ನು ಚೀನಾದಲ್ಲಿರುವ ಹೆಚ್ಚಿನ ಜನರು, ಚೀನಾದ ’ಒಂದು ಚೀನಾ’ ಧೋರಣೆಯ ಅಂಗೀಕಾರ ಎಂಬಂತೆ ಕಾಣುತ್ತಿದ್ದಾರೆ.

ಪಾಶ್ಚಾತ್ಯ ಶಕ್ತಿಗಳು ಚೀನಾದ ಮಾನವ ಹಕ್ಕುಗಳ ಉಲ್ಲಂಘನೆಗಳ ವಿಷಯ ಮತ್ತು ಟಿಬೆಟ್ ಹಾಗೂ ಹಾಂಕಾಂಗ್‌ನ ಮೇಲೆ ಅದು ಹಕ್ಕು ಸ್ಥಾಪಿಸಿದ ಐತಿಹಾಸಿಕ ವಿಷಯವನ್ನು ಜೊತೆಗೂಡಿಸಿ ಚರ್ಚಿಸುತ್ತವೆ. ಇವೆರಡೂ ಮುಖ್ಯವಾದವು; ಆದರೆ, ಬೇರೆಬೇರೆ ವಿಷಯಗಳು. ಕೊನೆಗೂ ನೋಡಿದಲ್ಲಿ, ಈ ಅಸ್ಪಷ್ಟತೆಯನ್ನು ನಿವಾರಿಸಲು ಯಾವುದೇ ಕಡೆಯವರೂ ಬಯಸುತ್ತಿಲ್ಲ. ಅದು ಅವರೆಲ್ಲರಿಗೂ ಅನುಕೂಲಕರವಾಗಿಯೇ ಕೆಲಸಮಾಡಿದೆ.

ಚೀನಾ ಮತ್ತು ಯುಎಸ್‌ಎ ನಡುವಿನ ಉದ್ವಿಗ್ನತೆಯು ಜಾಗತಿಕ ಚಿಂತೆಯ ವಿಷಯ. ರಷ್ಯಾದಂತೆಯೇ, ಚೀನಾದ ಸುತ್ತಲೂ ಯುಎಸ್‌ಎಯ ಪ್ರಭಾವವು ಚೀನಾದ ಆಸ್ತಿತ್ವಕ್ಕೇ ಬೆದರಿಕೆ ಒಡ್ಡುತ್ತದೆ ಮತ್ತದು ಚೀನಾವು ದುಡುಕಿನ ಕ್ರಮ ಕೈಗೊಳ್ಳಲಾಗುವುದಕ್ಕೆ ಪ್ರಚೋದನೆಯಾಗಬಹುದು ಎಂಬಂತೆ ಕಾಣಲಾಗುತ್ತಿದೆ. ಚೀನಾ ಒಂದು ಪರಮಾಣು ಶಸ್ತ್ರಾಸ್ತ್ರ ಶಕ್ತ ರಾಷ್ಟ್ರ. ಆದುದರಿಂದ, ಯುದ್ಧದ ಸಾಧ್ಯತೆಯು ಇಡೀ ಭೂಮಿಗೇ ಅಪಾಯ. ಈ ಸಂಘರ್ಷವು ಪರಮಾಣು ಯುದ್ಧದ ತನಕ ಹೋಗದಿದ್ದರೂ, ಚೀನಾ ಮತ್ತು ಯುಎಸ್‌ಎ ಎರಡೂ ಜಾಗತಿಕ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರಧಾರಿಗಳು. ಆದುದರಿಂದ ಈ ಎರಡೂ ದೇಶಗಳ ನಡುವಿನ ಶತ್ರುತ್ವವು ಪ್ರತಿಯೊಬ್ಬರ ಜೀವನದ ಹಲವಾರು ವಿಷಯಗಳ ಮೇಲೆ ಸುಲಭವಾಗಿ ದುಷ್ಪರಿಣಾಮ ಬೀರಬಹುದು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...