Homeಅಂತರಾಷ್ಟ್ರೀಯಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ...

ಇಟಲಿಯ ಸಂಸತ್ತಿನ ವಿಸರ್ಜನೆಯ ಸುತ್ತ…

- Advertisement -
- Advertisement -

ಇಟಾಲಿಯನ್ನರ ಜೀವನೋಪಾಯದ ವೆಚ್ಚಕ್ಕೆ ಬೆಂಬಲಕ್ಕೆ ಸಂಬಂಧಿಸಿದಂತೆ ಇಟಲಿಯ ಅಧ್ಯಕ್ಷ ಮಾರಿಯೋ ದ್ರಾಗಿ ಒಂದು ಪ್ರಸ್ತಾಪ ಇಟ್ಟಿದ್ದರು, ಅದನ್ನು ಈ ವರ್ಷದ ಜೂನ್ 14 ರಂದು ಇಟಲಿಯ ಫೈವ್ ಸ್ಟಾರ್ ಮೂವಮೆಂಟ್ ಬೆಂಬಲಿಸಲು ನಿರಾಕರಿಸಿತು. ಇಟಲಿಯ ಎಲ್ಲಾ ಪ್ರಜೆಗಳಿಗೆ ಒಂದು ಏಕರೂಪದ ಮೂಲ
ಆದಾಯವನ್ನು ಪ್ರತಿಪಾದಿಸುವ ಈ ಫೈವ್ ಸ್ಟಾರ್ ಮೂವಮೆಂಟ್, ಅಧ್ಯಕ್ಷ ಮಾರಿಯೊ ದ್ರಾಗಿ ತಂದ ಮಸೂದೆ ಭವಿಷ್ಯವನ್ನು ಚಿಂತಿಸಿಲ್ಲ ಎಂದು ಪ್ರತಿಪಾದಿಸಿತು. ಇದು ಇಟಲಿಯ ಸಂಸತ್ತಿನ ವಿಸರ್ಜನೆಗೆ ಕಾರಣವಾಯಿತು ಹಾಗೂ ಮಾರಿಯೊ ದ್ರಾಗಿ ನೇತೃತ್ವದ ಸಮ್ಮಿಶ್ರ ಸರಕಾರವು ತನ್ನ ನಿರ್ಣಾಯಕ ಬೆಂಬಲವನ್ನು ಕಳೆದುಕೊಂಡು, ಹೊಸದಾಗಿ ಚುನಾವಣೆ ನಡೆಸುವ ಅಗತ್ಯಕ್ಕೆ ಈಡುಮಾಡಿದೆ. ದ್ರಾಗಿ ನೇತೃತ್ವದ ಈ ಸರಕಾರ ಒಂದು ಅಸ್ಥಿರ ಸಮ್ಮಿಶ್ರವಾಗಿತ್ತು, ಅದು ತದ್ವಿರುದ್ಧ ಸಿದ್ಧಾಂತಗಳನ್ನುಳ್ಳ ರಾಜಕೀಯ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿತ್ತು. ಉಕ್ರೇನ್ ಮೇಲೆ ರಷಿಯಾದ ಆಕ್ರಮಣದ ನಂತರ ಫೈವ್ ಸ್ಟಾರ್ ಕೂಡ ತನ್ನೊಳಗೆ ವಿಭಜನೆ ಕಂಡಿತು. ಈ ಪಕ್ಷದ ಕೆಲವು ಸದಸ್ಯರು ನ್ಯಾಟೊ ಅಥವಾ ಯುರೋಪಿಯನ್ ಯುನಿಯನ್‌ನ ಬಿಕ್ಕಟ್ಟುಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಅಭಿಪ್ರಾಯ ಹೊಂದಿದ್ದರು ಹಾಗೂ ದ್ರಾಗಿ ರಷಿಯಾದ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದ ನಿಲುವನ್ನು ವಿರೋಧಿಸಿದರು.

ಈ ಸರಕಾರದ ಇತಿಹಾಸ

2018ರಲ್ಲಿ ಇಟಲಿಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಗಳು ನಡೆದವು. ಸರಳ ಬಹುಮತ ಪಡೆಯಲು ಯಾವುದೇ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಫೈವ್ ಸ್ಟಾರ್ ಪಾರ್ಟಿ ಅತ್ಯಂತ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿತು. ಫೈವ್ ಸ್ಟಾರ್ ಪಾರ್ಟಿಯನ್ನು 2009ರಲ್ಲಿ ಇಟಲಿಯ ಹಾಸ್ಯಗಾರ (ಕಮೇಡಿಯನ್) ಬೆಪ್ಪೆ ಗ್ರಿಲೋ ಸ್ಥಾಪಿಸಿದ್ದುದು. ಅವರು ತಮ್ಮ ಬ್ಲಾಗ್‌ನಲ್ಲಿ ಇಟಿಲಿಯ ರಾಜಕಾರಿಣಿಗಳ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಟೀಕೆ ಮಾಡಲು ಹಾಗೂ ವ್ಯಂಗ್ಯ ಮಾಡಲು ಪ್ರಾರಂಭಿಸಿದ್ದರು, ಅದುವೇ ಈ ವ್ಯವಸ್ಥೆಯನ್ನು ಬದಲಿಸಬಯಸುವ ಜನರ ಒಂದು ಚಳವಳಿಯಾಗಿ ರೂಪುಗೊಂಡಿತು. ಗ್ರಿಲೊ ಅವರ ಹಾಸ್ಯ ನಿಜಕ್ಕೂ ಕೀಳು ಮಟ್ಟದ, ಜನಾಂಗೀಯವಾದವುಳ್ಳ ಹಾಗೂ ಮಹಿಳಾದ್ವೇಷವನ್ನುಳ್ಳ ಹಾಸ್ಯವಾಗಿತ್ತು. ಆದರೆ ಅದು ಸಿದ್ಧಾಂತಗಳನ್ನು ಮೀರಿದ ಒಂದು ಭಾವವನ್ನು ಅದು ಜನರಿಗೆ ಮೂಡಿಸಿತು. ಅನೇಕ ಜನರಿಗೆ ಅವರು ಸತ್ಯವನ್ನು ನೇರಾನೇರವಾಗಿ ಹೇಳುತ್ತಿದ್ದಾನೆ ಅನಿಸಿತು. ಸಂಕೀರ್ಣ ಸಂಯೋಕ್ತಿಗಳನ್ನು ಹಾಗೂ ರಾಜಕೀಯ ಇಬ್ಬಂದಿತನದ ಮಾತುಗಳನ್ನು ಮೀರಿದ ಅವರ ಶೈಲಿಯನ್ನು ಗ್ರಿಲೊನ ಬೆಂಬಲಿಗರು ಇಷ್ಟಪಟ್ಟರು. ಅವರಿಗೆ ಯಾವುದೇ ಒಂದು ಸ್ಪಷ್ಟ ಸಿದ್ಧಾಂತವಿರಿಲಿಲ್ಲ.

ಅವರ ಬಹುತೇಕ ಬೆಂಬಲಿಗರು ಉನ್ನತ ವರ್ಗದ ವಿರುದ್ಧ ಬಂಡಾಯವೆದ್ದಿದ್ದರು. ಆದರೆ ಅವರಿಗೆ ಯಾವುದೇ ಗಟ್ಟಿಯಾದ ರಾಜಕೀಯ ಕಾರ್ಯಕ್ರಮಗಳು ಇರಲಿಲ್ಲ. ಅವರು ಕೇವಲ ಪ್ರತಿಕ್ರಿಯಾತ್ಮಕವಾಗಿಯೇ ಸೀಮಿತಗೊಂಡಿದ್ದರು. ಅವರಲ್ಲಿ ಬಹುತೇಕರು ಯುರೋಪಿಯನ್ ಯುನಿಯನ್ ಬಗ್ಗೆ ಸಂದೇಹ ಉಳ್ಳವರಾಗಿದ್ದರು. ಇಟಲಿಯ ಉನ್ನತ ವರ್ಗದ ರಾಜಕೀಯದ ಕಾರಣಕ್ಕಾಗಿ ಇದ್ದ ಅನೇಕ ಇಟಾಲಿಯನ್ನರ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಪ್ರತಿಕ್ರಿಯಾತ್ಮಕ ಪಕ್ಷವಾಗಿತ್ತು ಫೈವ್ ಸ್ಟಾರ್ ಪಾರ್ಟಿ. ಇಟಲಿ ಹಲವಾರು ಹಗರಣಗಳಿಂದ ಪೀಡಿತವಾಗಿತ್ತು, ಆ ಹಗರಣಗಳು ಕೆಲವೊಮ್ಮೆ ಲೈಂಗಿಕ ಹಗರಣಗಳಾಗಿದ್ದರೆ, ಕೆಲವೊಮ್ಮೆ ರಾಜಕೀಯ ಮತ್ತು ಆರ್ಥಿಕ ಹಗರಣಗಳಾಗಿದ್ದವು. ಫೈವ್ ಸ್ಟಾರ್‌ಅನ್ನು ಎಡಪಂಥದ ಪಕ್ಷ ಅಥವಾ ಬಲಪಂಥದ ಪಕ್ಷ ಎಂದು ವರ್ಗೀಕರಿಸುವುದು ಕಷ್ಟ. ಅವರು ಕೆಲವು ಪರಿಸರವಾದಿ ನೀತಿಗಳನ್ನು ಬೆಂಬಲಿಸಿದರು. ಎಲ್ಲಾ ಇಟಾಲಿಯನ್ನರಿಗೆ ಯುನಿವರ್ಸಲ್ (ಸಾರ್ವತ್ರಿಕ) ಮೂಲ ಆದಾಯದ ನೀತಿಗೆ ಬೆಂಬಲ ನೀಡಿದರು. ಅವರು ವಲಸೆಯನ್ನು ವಿರೋಧಿಸಿದರು ಹಾಗೂ ಇಟಲಿಯಲ್ಲಿರುವ ವಲಸಿಗ ಜನಸಮೂಹದ ವಿರುದ್ಧ ಅನ್ಯದ್ವೇಷಕ್ಕೆ ಉತ್ತೇಜನ ನೀಡಿದರು.

ಪ್ರಾರಂಭದಲ್ಲಿ ಫೈವ್ ಸ್ಟಾರ್ ಪಕ್ಷವು ಲೀಗ್‌ನೊಂದಿಗೆ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಲು ಪ್ರಯತ್ನಿಸಿತು; ಲೀಗ್ ಎಂದರೆ ಅದು ತೀವ್ರ ಬಲಪಂಥೀಯ ಪಕ್ಷ! ಒಂದು ವರ್ಷದ ನಂತರ, ಲೀಗ್ ಈ ಮೈತ್ರಿಯನ್ನು ಮುರಿದ ಕಾರಣದಿಂದ ಈ ಸಮ್ಮಿಶ್ರ ಸರಕಾರ ಕುಸಿಯಿತು. ಆಗ ಫೈವ್ ಸ್ಟಾರ್ ಪಕ್ಷವು ಎಡಪಂಥದ ಕಡೆಗೆ ವಾಲಿತು. ಮಧ್ಯಮ ಎಡಪಂಥೀಯ ಪಕ್ಷವಾದ ಡೆಮಾಕ್ರಟಿಕ್ ಪಾರ್ಟಿ ಮತ್ತು ಎಡಪಂಥೀಯ ಪಕ್ಷವಾದ ಫ್ರೀ ಆಂಡ್ ಈಕ್ವಲ್ ಪಾರ್ಟಿಯ ಜೊತೆಗೂಡಿ ಸಮ್ಮಿಶ್ರ ಸರಕಾರ ರಚಿಸಿತು. ಡೆಮಾಕ್ರಟಿಕ್ ಪಕ್ಷದ ಒಳಗೆ ನಡೆದ ಒಳಜಗಳಗಳ ಕಾರಣದಿಂದ ಆ ಸರಕಾರವೂ ಒಂದು ವರ್ಷದಲ್ಲಿ ಮುರಿದುಬಿದ್ದಿತು.

ಯುರೋಪಿಯನ್ ಯುನಿಯನ್ ತನ್ನ ಸದಸ್ಯ ರಾಷ್ಟ್ರಗಳಿಗೆ ಉತ್ತೇಜನ (ಸ್ಟಿಮ್ಯುಲಸ್) ಪ್ಯಾಕೇಜ್ ನೀಡಿದಾಗ ಈ ಬಿರುಕು ಕಾಣಿಸಿಕೊಂಡಿತು. ಡೆಮಾಕ್ರಟಿಕ್ ಪಕ್ಷದ ಒಳಗೇ ಎರಡು ಬಣಗಳಿದ್ದವು. ಒಂದು ಬಣ, ಈ ಪ್ಯಾಕೇಜ್‌ಅನ್ನು ಮೂಲಸೌಕರ್ಯಗಳ ಯೋಜನೆಗಳ ಮೇಲೆ ವ್ಯಯಿಸಬೇಕು ಎಂದು ಅಭಿಪ್ರಾಯಪಟ್ಟಿತು. ಇನ್ನೊಂದು ಬಣವು, ಇದನ್ನು ಒಂದು ತಜ್ಞರ ಸಮಿತಿಯ ನಿರ್ದೇಶನದ ಮೇರೆ ಬಳಸಬೇಕು ಎಂದಿತು. ಈ ಜಗಳವು ರಾಜಕೀಯ ಜಗಳಕ್ಕೆ ಮತ್ತು ಧ್ರುವೀಕರಣಕ್ಕೆ ಕಾರಣವಾಗಿ, ಸರಕಾರ ಬೀಳಲೂ ಕಾರಣವಾಯಿತು.

ದ್ರಾಗಿಯ ಪ್ರವೇಶ

ಎಡಪಕ್ಷಗಳ ಜೊತೆಗಾಗಲಿ ಬಲಪಂಥೀಯ ಪಕ್ಷಗಳ ಜೊತೆಗಾಗಲೀ ಸ್ಥಿರವಾದ ಸರಕಾರ ನೀಡಲು ವಿಫಲವಾಗಿದ್ದರಿಂದ, ಇದರ ನಂತರ ಫೈವ್ ಸ್ಟಾರ್ ಪಕ್ಷಕ್ಕೆ ಇನ್ನೆಂದೂ ಸರಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂಬ ಅನಿಸಿಕೆ ವ್ಯಾಪಕವಾಯಿತು. ಆದರೆ ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಂಡಿದ್ದ ಕಾರಣದಿಂದಾಗಿ ಚುನಾವಣೆ ನಡೆಸುವುದೂ ಕಷ್ಟವಾಗಿತ್ತು. ಬ್ಯಾಂಕ್ ಆಫ್ ಇಟಲಿಯ ಮಾಜಿ ಗವರ್ನರ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ದ್ರಾಗಿ ಒಬ್ಬ ತಟಸ್ಥ ತಾಂತ್ರಿಕ ತಜ್ಞ ಅಧಿಕಾರಿಯಾಗಿ ಕಾಣಿಸಿಕೊಂಡರು. ಜನಪ್ರಿಯ ಭಾವನೆಗಳಿಗೆ ಸ್ಪಂದಿಸುವ ಹಾಗೂ ಅದರೊಂದಿಗೆ ಗುರಿರಹಿತವಾಗಿರುವ ಫೈವ್ ಸ್ಟಾರ್ ಪಕ್ಷದ ರೀತಿಯಲ್ಲಿ ಇರದೇ, ದ್ರಾಗಿ ತಜ್ಞರ ಅಭಿಪ್ರಾಯ ಕೇಳಿ, ಅದರನುಗುಣವಾಗಿ ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದರು. ಅವರು ಒಬ್ಬ ಬ್ಯಾಂಕರ್ ಮತ್ತು ಆಡಳಿತಗಾರರಾಗಿ ಪ್ರಸಿದ್ಧರಾಗಿದ್ದರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಇಟಲಿಯನ್ನು ನಿಭಾಯಿಸಲು ಇದನ್ನು ಒಂದು ಮಹತ್ವದ ಹೆಜ್ಜೆಯಾಗಿ ನೋಡಲಾಯಿತು. ಅತ್ಯಗತ್ಯ ಆದರೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ದ್ರಾಗಿ ಸಮರ್ಥರು ಹಾಗೂ ಅವರು ನೀತಿಗಳನ್ನು ಅನುಷ್ಠಾನಗೊಳಿಸುವುದರಲ್ಲಿ ದಕ್ಷ ಎಂಬ ಅಭಿಪ್ರಾಯವಿತ್ತು. ವಿಶ್ವದ ಇತರೆಡೆಯಲ್ಲಿ ಉಲ್ಬಣಗೊಳ್ಳುವುದಕ್ಕೆ ಒಂದು ವರ್ಷ ಮುನ್ನವೇ ಸಾಂಕ್ರಾಮಿಕವು ಇಟಲಿಯಲ್ಲಿ ತನ್ನ ಗಂಭೀರ ಪರಿಣಾಮಗಳನ್ನು ತೋರಿಸಿತ್ತು.

ದೊಡ್ಡ ವ್ಯಾಪಾರಿಗಳು ದ್ರಾಗಿಯನ್ನು ಸ್ವಾಗತಿಸಿದರು, ಏಕೆಂದರೆ ಒಬ್ಬ ಬ್ಯಾಂಕರ್ ಆಗಿ ದ್ರಾಗಿ, ಅವರಿಗೆ ಹತ್ತಿರದಿಂದ ಬಲ್ಲವರಾಗಿದ್ದರು. ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ಭಾವನೆಗಳು ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಂಪತ್ತಿನ ಮರುಹಂಚಿಕೆಯ ಕಡೆಗೆ ತಿರುತ್ತಿದ್ದಾಗ ಈ ದೊಡ್ಡ ವ್ಯಾಪಾರಿಗಳು ದ್ರಾಗಿಯ ಜೊತೆ ನಿಕಟ ಸಂಬಂಧ ಇಟ್ಟುಕೊಂಡು, ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡರು. ಫೈವ್ ಸ್ಟಾರ್‌ನ ಬೆಂಬಲಿಗರು ದ್ರಾಗಿಯನ್ನು ಯುರೋಪಿಯನ್ ಯೂನಿಯನ್‌ನ ಕೈಗೊಂಬೆಯಾಗಿ ಕಂಡರು. ದ್ರಾಗಿಯ ಒಬ್ಬ ಬ್ಯಾಂಕರ್ ಮತ್ತು ಬ್ಯೂರೊಕ್ರೆಟ್ ಎಂಬ ಅಸ್ಮಿತೆಯು ಅವರ ಅತಿದೊಡ್ಡ ಮಿತ್ರಪಕ್ಷದ ಬೆಂಬಲಿಗರ ಮಧ್ಯೆ ಅತ್ಯಂತ ಕುಪ್ರಸಿದ್ಧ ವ್ಯಕ್ತಿಯನ್ನಾಗಿಸಿತು.

ಫೈವ್ ಸ್ಟಾರ್ ಬೆಂಬಲಿಗರನ್ನು ಹೊರತುಪಡಿಸಿದರೆ ದ್ರಾಗಿಯನ್ನು ಸಾಮಾನ್ಯವಾಗಿ ಇತರ ಎಲ್ಲರೂ ಒಪ್ಪಿಕೊಂಡಿದ್ದರು. ಅನೇಕರು ಸಾಂಕ್ರಾಮಿಕ ಮುಂದುವರೆದಿದ್ದ ಸಮಯದಲ್ಲಿ ಇಟಲಿಯ ಸರಕಾರಕ್ಕೆ ಅವರು ನೀಡಿದ ನಿರ್ದೇಶನ ಮತ್ತು ಸ್ಥಿರತೆಯನ್ನು ಮೆಚ್ಚಿಕೊಂಡರು. ಅದರ ಪರಿಣಾಮವಾಗಿ, ಇತರ ಬಹುತೇಕ ಎಡಪಂಥೀಯ ಮತ್ತು ಬಲಪಂಥೀಯ ಪಕ್ಷಗಳು ದ್ರಾಗಿ ಸರಕಾರಕ್ಕೆ ಶರತ್ತುಬದ್ಧ ಬೆಂಬಲ ನೀಡಿದವು. ಇಟಲಿಯ ಎಲ್ಲಾ ರಾಜಕೀಯ ಪಕ್ಷಗಳು ತನಗೆ ಬೆಂಬಲ ನೀಡಿದ್ದರಿಂದ ಸಾಂಕ್ರಾಮಿಕದ ಸಮಯದಲ್ಲಿ ದ್ರಾಗಿ ಸರಕಾರವನ್ನು ಸ್ಥಿರವಾಗಿ ನಡೆಸಿಕೊಂಡು ಹೋದರು. ಆದರೆ, ಕೋವಿಡ್ ಬಿಕ್ಕಟ್ಟು ಕೊನೆಗೊಳ್ಳುತ್ತಿದ್ದಂತೆ ವಾತಾವರಣ ಬಿಗುವಾಯಿತು.

ಸಮ್ಮಿಶ್ರ ಸರಕಾರದಲ್ಲಿ ಬಿರುಕುಗಳು

ರಷಿಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಫೈವ್ ಸ್ಟಾರ್‌ನಲ್ಲಿ ಒಳಜಗಳಗಳು ಶುರುವಾದವು. ಅಲ್ಲಿ ಎರಡು ಬಣಗಳು ಕಾಣಿಸಿಕೊಂಡವು. ಒಂದು ಬಣ ರಷಿಯಾ ಪರವಾಗಿತ್ತು. ರಷಿಯಾ ಪರ ಬಣವು, ಪೂರ್ವ ದೇಶಗಳಲ್ಲಿ ನ್ಯಾಟೋ ಮಾಡಿದ ವಿಸ್ತರಣೆ ಹಾಗೂ ಅದರಿಂದ ಉಕ್ರೇನ್ ಬಿಕ್ಕಟ್ಟು ಸೃಷ್ಟಿಯಾದದ್ದಕ್ಕಾಗಿ ನ್ಯಾಟೊವನ್ನು ಕಟುವಾಗಿ ಟೀಕಿಸಿತು. ಅವರು ಒಂದು ರಾಜತಾಂತ್ರಿಕ ಪರಿಹಾರಕ್ಕೆ ಒತ್ತುನೀಡಿದರು ಹಾಗೂ ಉಕ್ರೇನ್‌ಗೆ ನೆರವು ನೀಡಲು ಹಿಂಜರಿಕೆ ತೋರಿದರು. ನೆರವು ನೀಡಿದರೆ, ಆ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕ ಹೊಂದಿದ್ದರು. ಇನ್ನೊಂದು ಬಣವು, ರಷಿಯಾ ಪರ ರಾಜಕಾರಣಿಗಳು ಯುರೊಪಿಯನ್ ಯೂನಿಯನ್‌ನಲ್ಲಿ ಇಟಲಿಯ ಸ್ಥಾನವನ್ನು ದುರ್ಬಲವಾಗಿ ಅಂದಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅವರುಗಳು ಒಂದು ಹೊಸ ಪಕ್ಷ ಸ್ಥಾಪಿಸಿ, ಫೈವ್ ಸ್ಟಾರ್ ತೊರೆದರು.

ಇಟಾಲಿಯನ್ನರ ದೈನಂದಿನ ಜೀವನ ವೆಚ್ಚಕ್ಕೆ ದ್ರಾಗಿಯವರು ಮುಂದಿಟ್ಟ ಪ್ರಸ್ತಾಪವನ್ನು ಫೈವ್ ಸ್ಟಾರ್‌ನ ನಾಯಕ, ಅದು ಸಾಕಾಗುವುದಿಲ್ಲ ಎಂದು ಹೇಳಿ ವಿರೋಧಿಸಿದಾಗ, ಪರಿಸ್ಥಿತಿ ಬಿಗಡಾಯಿಸಿತು. ತನ್ನ ಪ್ರಸ್ತಾಪಕ್ಕೆ ಬಂದ ಈ ವಿರೋಧವನ್ನು ತನ್ನ ಸರಕಾರದ ಕೊನೆಗಾಲಕ್ಕೆ ಬಂದ ಲಕ್ಷಣ ಎಂದು ಪರಿಗಣಿಸಿ ದ್ರಾಗಿ ರಾಜೀನಾಮೆ ನೀಡಿದರು.

ಇಟಲಿಯ ಭವಿಷ್ಯ

ಮತದಾರ ಸಮೀಕ್ಷೆಗಳಲ್ಲಿ ಮುಂದಿನ ಚುನಾವಣೆಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಯಾವ ಮುನ್ಸೂಚನೆಯೂ ಸಿಕ್ಕಿಲ್ಲ. ಮುಂಬರುವ ಸರಕಾರವೂ ಸಮ್ಮಿಶ್ರ ಸರಕಾರವಾಗಲಿದೆ ಎನ್ನಬಹುದಾಗಿದೆ. ಫೈವ್ ಸ್ಟಾರ್ ತನ್ನ ಹೆಚ್ಚಿನ ಬೆಂಬಲವನ್ನು ಕಳೆದುಕೊಂಡಿದೆ ಹಾಗೂ ಅದರ ಮಿತ್ರಪಕ್ಷಗಳೂ ಪೈವ್ ಸ್ಟಾರ್‌ನ ಮೈತ್ರಿಯ ಭಾಗವಾಗಿ ಮಾಡಿದ ರಾಜಕೀಯ ಆಟಗಳ ಕಾರಣದಿಂದಾಗಿ ತಮ್ಮ ಬೆಂಬಲ ಕಳೆದುಕೊಂಡಿವೆ. ಮುಂದಿನ ಚುನಾವಣೆಯಲ್ಲಿ ಲಾಭವನ್ನು ಪಡೆದುಕೊಳ್ಳುವ ಅವಕಾಶ ಇರುವುದು ಬ್ರದರ್ಸ್ ಆಫ್ ಇಟಲಿಗೆ. ಬ್ರದರ್ಸ್ ಆಫ್ ಇಟಲಿಯು ಎಂದೂ ಫೈವ್ ಸ್ಟಾರ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿಲ್ಲ ಹಾಗೂ ಇತರ ಪಕ್ಷಗಳಂತೆ ರಾಜಕೀಯ ಕಳಂಕ ಹಚ್ಚಿಕೊಂಡಿಲ್ಲ. ಈ ಪಕ್ಷ ವಲಸೆಯ ವಿರುದ್ಧ ಫೈವ್ ಸ್ಟಾರ್ ಪಕ್ಷಕ್ಕಿಂತ ಕಟುವಾದ ನಿಲುವು ತೆಗೆದುಕೊಂಡಿದೆ. ಚುನಾವಣೆಯ ನಂತರ ಭವಿಷ್ಯದ ಸರಕಾರಕ್ಕೆ ಅನ್ಯದ್ವೇಷ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಬ್ರದರ್ಸ್ ಆಫ್ ಇಟಲಿಯು ಅಲ್ಲಿಯ ವಲಸಿಗರ ಜನಸಮೂಹದ ವಿರುದ್ಧ ತನ್ನ ದ್ವೇಷ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲಿದೆ ಹಾಗೂ ಇಟಲಿಯ ಅನೌಪಚಾರಿಕ ವಲಯದ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ತನ್ನ ಆದ್ಯತೆಯ ವಿಷಯವನ್ನಾಗಿಸಿಕೊಳ್ಳುತ್ತದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: “ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು…” ಸ್ವೀಕರಿಸಿದ ಪ್ರಮಾಣವಚನ ಮರೆತುಹೋಯಿತೇ ಮುಖ್ಯಮಂತ್ರಿಗಳಿಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...