ಅಕ್ರಮ ಆನ್‌ಲೈನ್ ಆರೋಗ್ಯ ಸೇವೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಇಂದು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಡಾ. ರೋಹಿತ್ ಜೈನ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ವಿಭಾಗೀಯ ಪೀಠ ಈ ಆದೇಶವನ್ನು ಅಂಗೀಕರಿಸಿದೆ.
ಅರ್ಜಿದಾರರ ಪ್ರಕಾರ, ಕೊರೊನಾ ಮಾದರಿಗಳನ್ನು ಒಳಗೊಂಡಂತೆ ರೋಗನಿರ್ಣಯದ ಮಾದರಿಗಳನ್ನು ಸಂಗ್ರಹಿಸುತ್ತಿದ್ದ ತಮ್ಮನ್ನು ವೈದ್ಯಕೀಯ ರೋಗನಿರ್ಣಯ ಪ್ರಯೋಗಾಲಯಗಳು ಎಂದು ತಪ್ಪಾಗಿ ಬಿಂಬಿಸುವ ಕೆಲವು ಆನ್‌ಲೈನ್ ಆರೋಗ್ಯ ಸೇವಾ ಸಂಗ್ರಾಹಕರನ್ನು ನಿಷೇಧಿಸುವ ಅವಶ್ಯಕತೆಯಿದೆ ಎಂದಿದ್ದರು.
ಈ “ಅನಧಿಕೃತ ಪ್ರಯೋಗಾಲಯಗಳು” ಸಾಮಾನ್ಯ ಜನರ ಜೀವನ ಮತ್ತು ಸುರಕ್ಷತೆಗೆ ದೊಡ್ಡ ಅಪಾಯವನ್ನುಂಟುಮಾಡಿದೆ, ಏಕೆಂದರೆ ಅವುಗಳು ಸಂಪೂರ್ಣವಾಗಿ ಅವೈಜ್ಞಾನಿಕ ರೋಗನಿರ್ಣಯ ಪರೀಕ್ಷಾ ವರದಿಗಳನ್ನು ಒದಗಿಸುವ ಅನರ್ಹ ತಂತ್ರಜ್ಞರಿಂದ ನಡೆಸಲ್ಪಡುತ್ತವೆ ಎಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದರು.
ಅಕ್ರಮ ಆನ್‌ಲೈನ್ ಆರೋಗ್ಯ ಸೇವಾ ಸಂಗ್ರಾಹಕರು ಎನ್‌ಎಬಿಎಲ್‌ನಿಂದ, ಐಸಿಎಂಆರ್‌ನಿಂದ ಅಥವಾ ಇತರ ಯಾವುದೇ ಆರೋಗ್ಯ ನಿಯಂತ್ರಕ ಸಂಸ್ಥೆಯೊಂದಿಗೆ ಅನುಮೋದನೆ ಪಡೆದಿಲ್ಲ ಎಂದು ಹೇಳಿರುವ ಅರ್ಜಿದಾರರು ಅವರ ಸೇವೆಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಕೋರಿದರು.
ಈ ಕುರಿತು ಅರ್ಜಿದಾರರ ಪ್ರಾತಿನಿಧ್ಯವನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಅರ್ಜಿದಾರರ ವಿಚಾರಣೆಯ ನಂತರ, ಯಾವುದೇ ಕಾನೂನು, ನಿಯಂತ್ರಣ ಅಥವಾ ಸರ್ಕಾರದ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಕಾನೂನಿನ ಪ್ರಕಾರ ಕಾನೂನುಬಾಹಿರ ಆನ್‌ಲೈನ್ ಆರೋಗ್ಯ ಸೇವೆ ನೀಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ಓದಿ: ಈ ಸಾಂಕ್ರಾಮಿಕ ಹೊಸ ವ್ಯವಸ್ಥೆಗೆ ದಾರಿದೀಪವಾಗಬಲ್ಲದೆ? – ಅರುಂಧತಿ ರಾಯ್


