ದೆಹಲಿ ಗಲಭೆಗೂ ಮುಂಚೆ ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕರುಗಳಾದ ಕಪಿಲ್ ಮಿಶ್ರಾ, ಅನುರಾಗ್ ಠಾಕುರ್, ಪರ್ವೇಶ್ ವರ್ಮ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಕೋರಿದ್ದ ಅಪೀಲಿನ ಕುರಿತು ತ್ವರಿತ ತೀರ್ಪು ನೀಡುವಂತೆ ದಿಲ್ಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.
ಬೃಂದಾ ಕಾರಟ್ ತಮ್ಮ ಅಪೀಲಿನಲ್ಲಿ, ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಈ ಬಿಜೆಪಿ ನಾಯಕರ ಧ್ವೇಷ ಭಾಷಣವೆ ಪ್ರಚೋದನೆ ನೀಡಿತ್ತೆಂದು ಆರೋಪಿಸಿದ್ದರು.
ಬೃಂದಾ ಕಾರಟ್ ಅವರ ಅಪೀಲಿನ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠ, ಅಪೀಲಿನ ವಿಚಾರಣೆ ನಡೆಸುತ್ತಿರುವ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ.
ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು ಬೃಂದಾ ಕಾರಟ್ ಅಪೀಲಿನ ಮೇಲಿನ ಆದೇಶವನ್ನು ಕಾದಿರಿಸಿದ ನಂತರ ಅವರ ವಕೀಲರು ದಿಲ್ಲಿ ಹೈಕೋರ್ಟಿನ ಮೊರೆ ಹೋಗಿದ್ದರು.
ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಕಾನೂನು, ನೀತಿ ನಿಯಮಾವಳಿಗಳು ಹಾಗೂ ಅನ್ವಯವಾಗುವ ಸರಕಾರದ ನೀತಿಗಳಂತೆ ಆದಷ್ಟು ಬೇಗ ಇತ್ಯರ್ಥಪಡಿಸಬೇಕೆಂದು ದಿಲ್ಲಿ ಹೈಕೋರ್ಟ್ ಆದೇಶಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಗಲಭೆಯು 50 ಕ್ಕಿಂತ ಹೆಚ್ಚು ಜನರನ್ನು ಬಲಿ ಪಡೆದಿತ್ತು.
ಓದಿ: ದೆಹಲಿ ಗಲಭೆ: 16 ಆರ್‌ಎಸ್‌ಎಸ್ ಆರೋಪಿಗಳ ವಿರುದ್ಧ ದೆಹಲಿ ಪೊಲೀಸ್ ಚಾರ್ಜ್‌ಶೀಟ್