ಕೃಷಿ-ರಾಸಾಯನಿಕ ಕಾರ್ಖಾನೆಯ ಬಾಯ್ಲರ್ ಸ್ಫೋಟ; 40 ದಿನಗಳಲ್ಲಿ 2 ನೇ ಬಾರಿ
PC: Justdial.com

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ್‌ನಲ್ಲಿನ ಕೃಷಿ ಕೈಗಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟದಲ್ಲಿ 62 ವರ್ಷದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗುರುವಾರ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂದ್ಯಾಲ್ ಪಟ್ಟಣದ ಹೊರವಲಯದಲ್ಲಿರುವ ಉದುಮಲ್‌ ಪುರಂನಲ್ಲಿ ನಂದಿ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಎಸ್‌ಪಿವೈ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಮುಂಜಾನೆ 2.45 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ನಂದ್ಯಾಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಚಿದಾನಂದ ರೆಡ್ಡಿ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಲಕ್ಷ್ಮಣ ಮೂರ್ತಿ ಎಂದು ಗುರುತಿಸಲಾಗಿದೆ.

“ಕಾರ್ಖಾನೆಗಳ ಇನ್ಸ್‌ಪೆಕ್ಟರ್ ಆಗಮನದ ನಂತರ ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುತ್ತದೆ. ನಾವು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ” ಎಂದು ಡಿಎಸ್ಪಿ ಹೇಳಿದ್ದಾರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಳೆದ 40 ದಿನಗಳಲ್ಲಿ ಇದೇ ಕಾರ್ಖಾನೆಯಲ್ಲಿ ನಡೆದ ಎರಡನೇ ಘಟನೆಯಾಗಿದೆ ಇದು. ಜೂನ್ 27 ರಂದು, ಅಮೋನಿಯಾ ಅನಿಲದ ಸೋರಿಕೆ ಸಂಭವಿಸಿದ ಪರಿಣಾಮವಾಗಿ ಕಂಪನಿಯ 50 ವರ್ಷದ ಜನರಲ್ ಮ್ಯಾನೇಜರ್ ಸಾವನ್ನಪ್ಪಿದ್ದರು.

ಕಂಪನಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕಾರ್ಖಾನೆಯ ಕ್ಯಾಪ್ಟಿವ್ ವಿದ್ಯುತ್ ಸ್ಥಾವರದಲ್ಲಿ ಕೆಲವು ಕಾರ್ಮಿಕರು ಬಾಯ್ಲರ್‌ನಲ್ಲಿ ರಿಪೇರಿ ನಡೆಸುತ್ತಿರುವಾಗ ಈ ಘಟನೆ ಸಂಭವಿಸಿದೆ.

ಅಧಿಕ ಒತ್ತಡದಿಂದಾಗಿ ಬಾಯ್ಲರ್‌ನಲ್ಲಿನ ಕುದಿಯುವ ಬಿಸಿನೀರು ಕಾರ್ಮಿಕರ ಮೇಲೆ ಬಿದ್ದಿದೆ. ಕಾರ್ಮಿಕರಲ್ಲಿ ಒಬ್ಬರಾದ ಲಕ್ಷ್ಮಣಮೂರ್ತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಇತರ ಇಬ್ಬರು ಸಣ್ಣಪುಟ್ಟ ಸುಟ್ಟಗಾಯಗಳಾಗಿದೆ ಎಂದು ಅವರು ಹೇಳಿದರು.

ಸಂತ್ರಸ್ತನನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದರು. ಗಾಯಗೊಂಡ ಇತರ ಇಬ್ಬರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ.


ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

LEAVE A REPLY

Please enter your comment!
Please enter your name here