Homeಕರೋನಾ ತಲ್ಲಣಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ: 400 ಸಾಮಾಜಿಕ ಕಾರ್ಯಕರ್ತರ...

ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ: 400 ಸಾಮಾಜಿಕ ಕಾರ್ಯಕರ್ತರ ಜನಾಗ್ರಹ

ನೀವು ದಿಟ್ಟ ಕ್ರಮಗಳ ಮೂಲಕ ಜನರ ನೆರವಿಗೆ ಧಾವಿಸದಿದ್ದರೆ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ಪ್ರತಿಭಟಿಸುವ ಅನಿವಾರ್ಯ ನಿರ್ಧಾರಗಳನ್ನು ನಾವೂ ಮಾಡಲೇಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

- Advertisement -
- Advertisement -

ಕೋವಿಡ್ ಎರಡನೇ ಅಲೆಯಿಂದ ಜನಜೀವನ ಜರ್ಜರಿತವಾಗಿದೆ. ಇಂತಹ ದುರಂತದ ಸಂದರ್ಭದಲ್ಲಿ ಸರ್ಕಾರ ಜನರ ಜೀವ ಮತ್ತು ಜೀವನ ಉಳಿಸಲು ಪಂಚ ತುರ್ತು ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ‘ಜನಾಗ್ರಹ ಆಂದೋಲನ’ದ ವತಿಯಿಂದ 400 ಜನ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಸಿಎಂ ಯಡಿಯೂರಪ್ಪನವರಿಗೆ ತುರ್ತು ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಯವರ ವಿಶೇಷ ಅಧಿಕಾರಿ ಸತೀಶ್‌ರವರಿಗೆ ಆಂದೋಲನದ ಪರವಾಗಿ ವಕೀಲರಾದ ವರದರಾಜೇಂದ್ರ ಮತ್ತು ರವಿಮೋಹನ್ ಆಗ್ರಹ ಪತ್ರವನ್ನು ಸಲ್ಲಿಸಿದ್ದು, ಪತ್ರಕ್ಕೆ ಸಾಣೆಹಳ್ಳಿಯ ಪಂಡಿತರಾಧ್ಯ ಶ್ರೀಗಳು, ಹಿರಿಯ ಸ್ವಾತಂತ್ರ ಹೋರಾಟಗಾರರದ ಹೆಚ್. ಎಸ್. ದೊರೆಸ್ವಾಮಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಶಸಿಕಾಂತ್ ಸೆಂದಿಲ್, ಹಿರಿಯ ಸಾಮಾಜಿಕ ಕಾರ್ಯಕರ್ತ ಕೆ.ಎಲ್. ಅಶೋಕ್, ದಲಿತ ಚಳವಳಿಯ ಮುಖಂಡ ಮಾವಳ್ಳಿ ಶಂಕರ್ ಮುಂತಾದವರು ಸಹಿ ಹಾಕಿದ್ದಾರೆ.

ವಕೀಲರಾದ ವರದರಾಜೇಂದ್ರರವರು ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಸತೀಶ್‌ರವರಿಗೆ ಜನಾಗ್ರಹ ಪತ್ರ ಸಲ್ಲಿಸಿದರು

 

ಜನರ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಮೇ 6ರಿಂದ ‘ಜನಾಗ್ರಹ ಆಂದೋಲನ’ ಪ್ರಾರಂಭವಾಗಿದ್ದು, ಹೆಲ್ಪ್ ಲೈನ್ ನಡೆಸಿ ಜನರಿಗೆ ವೈದ್ಯಕೀಯ ನೆರವು ಹಾಗೂ ಆಹಾರದ ಆಸರೆ ನೀಡಲು ಪ್ರಯತ್ನಿಸಲಾಗುತ್ತಿದ್ದು, ಅದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರವನ್ನು ಜಾಗೃತಗೊಳಿಸುವ ಪ್ರಯತ್ನ ನಡೆಸಲಾಗಿತ್ತು. ಇದರ ಭಾಗವಾಗಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಆಕ್ಸಿಜನ್ ಸಹಿತ ಬೆಡ್‌ಗಳ ಸಂಖ್ಯೆಯನ್ನು ಯದ್ಧೋಪಾದಿಯಲ್ಲಿ ಹೆಚ್ಚಿಸುವುದು, ಎಲ್ಲಾ ವಯಸ್ಸಿನವರಿಗೂ ಉಚಿತ ವ್ಯಾಕ್ಸಿನ್ ನೀಡುವುದು, ಎಲ್ಲಾ ಕುಟುಂಬಗಳಿಗೂ ಉಚಿತವಾಗಿ ಸಮಗ್ರ ಪಡಿತರ ಕಿಟ್ ನೀಡುವುದು, ದುಡಿಮೆ ಕಳೆದುಕೊಂಡಿರುವ ಶ್ರಮಿಕ ಕುಟುಂಬಗಳಿಗೆ ಕನಿಷ್ಟ 5000 ರೂಗಳ ಮಾಸಿಕ ಆರ್ಥಿಕ ನೆರವನ್ನು ನೀಡುವುದು ಮತ್ತು ದುಡಿಯುವ ವ್ಯಕ್ತಿ ಮಡಿದ ಕುಟುಂಬಕ್ಕೆ 5ಲಕ್ಷ ಪರಿಹಾರ ಧನ ನೀಡುವುದನ್ನು ಸರ್ಕಾರ ತೆಗೆದುಕೊಳ್ಳಲೇಬೇಕಾದ ಕ್ರಮಗಳೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಯೋಜನೆಗಾಗಿ ಕಾರ್ಪೊರೇಟ್ ಕಂಪನಿಗಳ ವಹಿವಾಟಿನ ಮೇಲೆ ಶೇ. 2ರ ಕೊರೋನಾ ಸುಂಕವನ್ನು ಹಾಕುವ, ಕೋಟ್ಯಾಧಿಪತಿ ರಾಜಕಾರಣಿಗಳು ಹಾಗೂ ಉದ್ದಿಮೆಪತಿಗಳ ಆದಾಯದ ಮೇಲೆ ಶೇ. 5ರ ತೆರಿಗೆ ವಿಧಿಸುವ ಹಾಗೂ ಸೆಂಟ್ರಲ್ ವಿಸ್ಟಾದಂತಹ ದುಂದು ಯೋಜನೆಗಳನ್ನು ರದ್ದುಗೊಳಿಸಿ ಎಲ್ಲಾ ಹಣವನ್ನು ಕೋವಿಡ್ ನಿಭಾವಣೆಗೆ ತಿರುಗಿಸುವ ಸಲಹೆಗಳನ್ನು ಪತ್ರದಲ್ಲಿ ಮುಂದಿಡಲಾಗಿದೆ.

ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ ಹಾಗೂ ಆರ್ಥಿಕ ನೆರವು: ಸರ್ಕಾರ ತುರ್ತಾಗಿ ಕೈಗೆತ್ತಿಕೊಳ್ಳಲೇಬೇಕಾದ ಪಂಚ ಕ್ರಮಗಳು 

1.     ರಾಜ್ಯದ ಎಲ್ಲಾ ಊರುಗಳಲ್ಲಿ ಕೊರೋನಾ ಕೇರ್ ಸೆಂಟರ್ ಮತ್ತು ಆಕ್ಸಿಜನ್ ಸಹಿತ ಬೆಡ್ ಗಳ ಸಂಖ್ಯೆಯನ್ನು ತೀವ್ರಗತಿಯಲ್ಲಿ ಪ್ರತಿನಿತ್ಯ ಹೆಚ್ಚಿಸಬೇಕು ಮತ್ತು ನಿತ್ಯವೂ ಇದರ ಮಾಹಿತಿಯನ್ನು ಜನರಿಗೆ ನೀಡಬೇಕು.

2.     ಎಲ್ಲಾ ವಯಸ್ಸಿನ ಜನರಿಗೂ ವ್ಯಾಕ್ಸಿನ್ ಅನ್ನು ಸರ್ಕಾರವೇ ಉಚಿತವಾಗಿ ವ್ಯವಸ್ಥೆ ಮಾಡಬೇಕು ಮತ್ತು ತಡಮಾಡದೆ ನೀಡಬೇಕು.

3.     ರಾಜ್ಯದ ಎಲ್ಲಾ ಕುಟುಂಬಗಳಿಗೂ ಸರ್ಕಾರವೇ ಸಮಗ್ರ ಪಡಿತರ ಕಿಟ್ ಅನ್ನು ಉಚಿತವಾಗಿ ವಿತರಿಸಬೇಕು.

4.     ಕೆಲಸ ಕಳೆದುಕೊಂಡಿರುವ ಅಸಂಘಟಿತ ಕಾರ್ಮಿಕ, ಆಟೋ – ಟ್ಯಾಕ್ಸಿ ಚಾಲಕ, ನೇಕಾರ ಕಾರ್ಮಿಕ, ಕೃಷಿ ಕಾರ್ಮಿಕ, ಸಣ್ಣ ವ್ಯಾಪಾರಿ, ಸ್ವಯಂ ಉದ್ಯೋಗಿ ಮುಂತಾದ ಶ್ರಮಿಕ ವರ್ಗದ ಜನರಿಗೆ [ದೆಹಲಿ ಸರ್ಕಾರದ ಮಾದರಿಯಲ್ಲಿ] ಮಾಸಿಕ ಕನಿಷ್ಟ 5 ಸಾವಿರ ರೂಗಳ ಆರ್ಥಿಕ ನೆರವನ್ನು ನೀಡಲೇಬೇಕು. ಕಛೇರಿಗಳ ಸುತ್ತ ಅಲೆದಾಡಿಸದೆ ಅದನ್ನು ಕೂಡಲೇ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು.

5.     ಕೋರಾನಾದಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಕನಿಷ್ಟ 5 ಲಕ್ಷದ ಪರಿಹಾರ ದನವನ್ನು ನೀಡಬೇಕು.

 

ಇದಕ್ಕಾಗಿ ಹಣಕಾಸಿನ ವ್ಯವಸ್ಥೆ ಹೇಗೆ ಒದಗಿಸಬಹುದೆ ಎಂಬುದಕ್ಕೆ ಮೂರು ಸಲಹೆಗಳನ್ನು ಸಹ ಪತ್ರದಲ್ಲಿ ವಿವರಿಸಲಾಗಿದೆ. ಅವುಗಳೆಂದರೆ

1.   ಕರ್ನಾಟಕದಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ವಹಿವಾಟಿನ ಮೇಲೆ ಶೇ. 2ರ ಕೋರೋನಾ ಸೆಸ್ ನಿಗದಿ ಮಾಡಿ. ಹಾಗೇ ಕರ್ನಾಟಕದ ಎಲ್ಲಾ ಕೋಟ್ಯಾಧಿಪತಿ ಉದ್ದಿಮೆಪತಿಗಳು ಮತ್ತು ರಾಜಕಾರಣಿಗಳ ವಾರ್ಷಿಕ ಆದಾಯದ ಶೇ. 5ನ್ನು ಸುಂಕವಾಗಿ ಸಂಗ್ರಹಿಸಿ. ಕೂಡಲೇ ಈ ಹಣವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸುಗ್ರೀವಾಜ್ಞೆ ಹೊರಡಿಸಿ.

2.    ಮೆಟ್ರೋ ವಿಸ್ತರಣೆ, ರಸ್ತೆ ವಿಸ್ತರಣೆ, ಸರ್ಕಾರಿ ಸೌಧಗಳ ನಿರ್ಮಾಣ, ಮಠಗಳಿಗೆ ಅನುದಾನ ಮುಂತಾದ ಬಹುತೇಕ ತುರ್ತಲ್ಲದ ಯೋಜನೆಗಳಿಗೆ ಮಂಜೂರು ಮಾಡಿರುವ ಹಣವನ್ನು ಕೋವಿಡ್ ನಿಭಾವಣೆಗೆ ಡೈವರ್ಟ್ ಮಾಡಿ.

3.   ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬರ ಪರಿಹಾರದ, ನೆರೆ ಪರಿಹಾರದ, ಜಿ ಎಸ್ ಟಿ ಬಾಬ್ತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ. ‘ಸೆಂಟ್ರಲ್ ವಿಸ್ಟಾ’ [20 ಸಾವಿರ ಕೋಟಿ ಮೌಲ್ಯದ ಮೋದಿ ಮಹಲ್] ನಂತಹ ಐಶಾರಾಮಿ ದುಂದು ವೆಚ್ಚಗಳನ್ನು ರದ್ದುಗೊಳಿಸಿ ರಾಜ್ಯಗಳಿಗೆ ಕೋವಿಡ್ ನೆರವು ನೀಡಲು ಮುಂದಾಗಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿ ಎಂದು ತಿಳಿಸಲಾಗಿದೆ.

ಈ ಪತ್ರವನ್ನು ಔಪಚಾರಿಕವಾಗಿ ಬರಿಯುತ್ತಿಲ್ಲ. ಬದಲಿಗೆ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡು, ರಾಜ್ಯದ ಜನರು ಉಳಿಯಬೇಕಾದರೆ ಸರ್ಕಾರ ಇದನ್ನು ಮಾಡಲೇಬೇಕು ಎಂಬ ಒತ್ತಾಸೆಯೊಂದಿಗೆ ಬರಿಯುತ್ತಿದ್ದೇವೆ. ಇವ್ಯಾವುವೂ ಅಸಾಧ್ಯವಾದ ಬೇಡಿಕೆಗಳಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಮುಂತಾದ ಸರ್ಕಾರಗಳು ಈಗಾಗಲೇ ಈ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಾಗಿದೆ. ಮುಖ್ಯಮಂತ್ರಿಗಳಾಗಿ ನೀವು ದಿಟ್ಟ ಕ್ರಮಗಳ ಮೂಲಕ ಜನರ ನೆರವಿಗೆ ಧಾವಿಸದಿದ್ದರೆ ಕೋವಿಡ್ ನಿಯಮಗಳನ್ನು ಪಾಲಿಸುತ್ತಲೇ ಪ್ರತಿಭಟಿಸುವ ಮತ್ತು  “ನಿಮ್ಮ ಬಳಿಗೂ ಬರುವ” ಅನಿವಾರ್ಯ ನಿರ್ಧಾರಗಳನ್ನು ನಾವೂ ಮಾಡಲೇಬೇಕಾಗುತ್ತದೆ. ಏಕೆಂದರೆ ನಮ್ಮ ಜೀವಕ್ಕಿಂತಲೂ ಜನರ ಜೀವನ ಮುಖ್ಯವಿದೆ. ಅದರ ಪತನವನ್ನು ನೋಡುತ್ತಾ ಕೈ ಕಟ್ಟಿ ಕೂರಲಂತೂ ನಮಗೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರವನ್ನು ಸಹ ನೀಡಲಾಗಿದೆ.

ಚಿತ್ರನಟ ಚೇತನ್, ಬಿ.ಟಿ.ಲಲಿತಾನಾಯ್ಕ್, ಡಾ. ಗಣೇಶ್ ದೇವಿ, ಡಾ.ಸಿ.ಎಸ್.ದ್ವಾರಕನಾಥ್, ಡಾ.ಪ್ರಕಾಶ್ ಕಮ್ಮರಡಿ, ಡಾ.ಭೂಮಿಗೌಡ, ದಿನೇಶ್ ಅಮಿನ್ ಮಟ್ಟು, ಪ್ರೊ.ಪುರುಷೋತ್ತಮ ಬಿಳಿಮಲೆ, ಕೆ.ನೀಲಾ, ಕಲಬುರ್ಗಿ, ಯಾಸಿನ್ ಮಲ್ಪೆ, ಉಡುಪಿ, ಬಿ.ಸುರೇಶ್, ಬಡಗಲಪುರ ನಾಗೇಂದ್ರ, ಸ್ವರ್ಣ ಭಟ್, ರಾಯಚೂರು, ಕಡಿದಾಳ್ ಶಾಮಣ್ಣ, ಶಿವಮೊಗ್ಗ, ಡಾ.ಎಚ್.ಎಸ್.ಅನುಪಮಾ, ನೂರ್ ಶ್ರೀಧರ್, ಎಚ್.ಆರ್.ಬಸವರಾಜಪ್ಪ, ಕುರುಬೂರು ಶಾಂತಕುಮಾರ್, ಗುರುಪ್ರಸಾದ್ ಕೆರಗೋಡು ಸಹಿ ಮಾಡಿದವರಲ್ಲಿ ಸೇರಿದ್ದಾರೆ.


ಇದನ್ನೂ ಓದಿ: ಸರ್ಕಾರ ಜನರ ಮೇಲೆ ದರ್ಪ ಪ್ರದರ್ಶಿಸುವುದು ಬಿಟ್ಟು ಪರಿಹಾರ ನೀಡಲಿ- ಎಚ್.ಡಿ.ಕುಮಾರಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...