ಕೋವಿಡ್ ಎರಡನೇ ಅಲೆಯಿಂದ ಜನಜೀವನ ಜರ್ಜರಿತವಾಗಿದೆ. ಇಂತಹ ದುರಂತದ ಸಂದರ್ಭದಲ್ಲಿ ಸರ್ಕಾರ ಜನರ ಜೀವ ಮತ್ತು ಜೀವನ ಉಳಿಸಲು ಪಂಚ ತುರ್ತು ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ಜನಾಗ್ರಹ ಆಂದೋಲನದ ವತಿಯಿಂದ ರಾಜ್ಯದಾದ್ಯಂತ ಮನೆ ಮುಂದೆ ಪ್ರತಿಭಟನೆಗಳು ಆರಂಭವಾಗಿದೆ.
ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ ಎಂದು ವಾರದ ಹಿಂದೆ 400 ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕರ್ತರು ಮತ್ತು ಹೋರಾಟಗಾರರು ರಾಜ್ಯ ಸರ್ಕಾರಕ್ಕೆ ತುರ್ತು ಪತ್ರ ಬರೆದಿದ್ದರು. ಸಣ್ಣ ಸಂಖ್ಯೆಯ ಬೆಡ್‌ಗಳನ್ನು ಹೆಚ್ಚಿಸಿರುವುದನ್ನು ಬಿಟ್ಟರೆ ಸರ್ಕಾರ ಉಳಿದ ಯಾವ ಕೆಲಸಗಳನ್ನು ಮಾಡಿಲ್ಲ ಮತ್ತು ಕನಿಷ್ಟ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಸರ್ಕಾರದ ಸಂವೇದನಾಶೂನ್ಯ ಧೋರಣೆಯನ್ನು ಖಂಡಿಸಿ, ಜನರ ಜೀವ ಮತ್ತು ಜೀವನ ಉಳಿಸುವ ದಿಟ್ಟ ಕ್ರಮಗಳಿಗೆ ಮುಂದಾಗಬೇಕೆಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ಊರುಗಳಲ್ಲೂ ಆಕ್ಸಿಜನ್ ಬೆಡ್ ಹೆಚ್ಚಿಸಿ, ಕೂಡಲೇ ಎಲ್ಲರಿಗೂ ಉಚಿತ ಲಸಿಕೆ ನೀಡಿರಿ, ಬಡ ಕುಟುಂಬಗಳಿಗೆ ಸಮಗ್ರ ಪಡಿತರ ವಿತರಿಸಿ, ಕೆಲಸವಿಲ್ಲದ ಕುಟುಂಬಗಳಿಗೆ ಕೋವಿಡ್ ನೆರವು ಧನ ನೀಡಿ, ಮಡಿದವರ ಕುಟುಂಬಕ್ಕೆ ಪರಿಹಾರ ಕೊಡಿ ಎಂಬುದು ನಮ್ಮ ಹಕ್ಕೊತ್ತಾಯಗಳಾಗಿವೆ ಎಂದು ಜನಾಗ್ರಹ ಆಂದೋಲನದ ವಕ್ತಾರರಾದ ಹೋರಾಟಗಾರ ಕೆ.ಎಲ್ ಅಶೋಕ್ ತಿಳಿಸಿದ್ದಾರೆ.
“ಸರ್ಕಾರದ ಮೇಲೆ ಒತ್ತಡ ತರುವ ಭಾಗವಾಗಿ ಇಂದು ರಾಜ್ಯದ ಬಹುತೇಕ ಜಿಲ್ಲಾ, ತಾಲ್ಲೂಕುಗಳಲ್ಲಿ ಜನರು ತಮ್ಮ ತಮ್ಮ ಮನೆಗಳ ಮುಂದೆಯೇ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಸರ್ಕಾರ ಈಗಲೂ ನಮ್ಮ ಪಂಚ ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂದಾಗದಿದ್ದರೆ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಜನರಿಗೆ ಆಸರೆಯಾಗುವ ಯಾವ ಕ್ರಮಗಳೂ ಇಲ್ಲದೆ, ಲಾಕ್ ಡೌನ್ ಮಾತ್ರ ಮುಂದುವರೆಯುತ್ತಿದೆ. ಈ ಸಮಯದಲ್ಲಿ ಜನರನ್ನು ಅಮಾನವೀಯವಾಗಿ ಥಳಿಸಲಾಗುತ್ತಿದೆ. ಹಾಗಾಗಿ ಸರ್ಕಾರದ ಈ ನಿಶ್ಚಲ ಮತ್ತು ಅಮಾನವೀಯ ಧೋರಣೆಯನ್ನು ಖಂಡಿಸಿ ಮತ್ತು ಪಂಚ ಕ್ರಮಗಳನ್ನು ಸರ್ಕಾರ ಕಾರ್ಯರೂಪಕ್ಕೆ ತರಲೇಬೇಕು ಎಂದು ಒತ್ತಾಯಿಸಬೇಕಿದೆ. ಪ್ರತಿಭಟನೆ ಮಾಡುವುದೇ ನಮ್ಮ ಗುರಿಯಲ್ಲ. ಇದು ಅನಿವಾರ್ಯ ಕ್ರಿಯೆ. ಒಂದು ವೇಳೆ ಸರ್ಕಾರ ಜನಪರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದರೆ ಸಾವಿರಾರು ಜನ ಕಾರ್ಯಕರ್ತರು ಸರ್ಕಾರದ ಜೊತೆ ಕೈಗೂಡಿಸಿ ಜನರನ್ನು ಉಳಿಸುವ ಕೈಂಕರ್ಯದಲ್ಲಿ ಭಾಗಿಯಾಗುತ್ತೇವೆ ಎಂಬ ಭರವಸೆಯನ್ನೂ ಇದರ ಜೊತೆಯಲ್ಲೇ ನೀಡುತ್ತಿದ್ದೇವೆ ಎಂದು ಜನಾಗ್ರಹ ಆಂದೋಲನ ತಿಳಿಸಿದೆ.
ಕೋವಿಡ್ ಎರಡನೇ ಅಲೆಯಿಂದ ಜನಜೀವನ ಜರ್ಜರಿತವಾಗಿದೆ. ಇಂತಹ ದುರಂತದ ಸಂದರ್ಭದಲ್ಲಿ ಸರ್ಕಾರ ಜನರ ಜೀವ ಮತ್ತು ಜೀವನ ಉಳಿಸಲು ಪಂಚ ತುರ್ತು ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ಬಳ್ಳಾರಿಯ ಕಮಲಪುರದಲ್ಲಿ ಪ್ರತಿಭಟನೆ..#CovidCrisis pic.twitter.com/Kenuvn0yL4
— Naanu Gauri (@naanugauri) May 15, 2021
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ಮುಖಂಡರಾದ ಮಾವಳ್ಳಿ ಶಂಕರ್, ಹೋರಾಟಗಾರ್ತಿ ಬಿ.ಟಿ ಲಲಿತಾ ನಾಯಕ್, ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ಗೌರಿ ಮುಂತಾದವರು ತಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಫೋಟೊ ಗ್ಯಾಲರಿ ಇಲ್ಲಿದೆ.











(ವರದಿಯನ್ನು ಅಪ್ಡೇಟ್ ಮಾಡಲಾಗುತ್ತದೆ.)
ಇದನ್ನೂ ಓದಿ: ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ: 400 ಸಾಮಾಜಿಕ ಕಾರ್ಯಕರ್ತರ ಜನಾಗ್ರಹ


