Homeಅಂಕಣಗಳುಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಬಂಗಾಳಿ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ’ಉಲೋಂಗೋ ರಾಜಾ (ಬೆತ್ತಲೆ ರಾಜ)’ ಕವಿತೆಯೊಂದು ಇಂದಿಗೂ ಪ್ರಸ್ತುತವಾಗಿರುವುದರ ಕುರಿತು ಡಿ.ಉಮಾಪತಿಯವರ ಬರಹ...

- Advertisement -
- Advertisement -

ಪ್ರಾಣವಾಯುವಿಗಾಗಿ ಚಡಪಡಿಸಿ ಮನೆ ಮನೆಗಳಲ್ಲಿ ಚಿತೆಗಳು ಉರಿಯತೊಡಗಿ ಪ್ರಜೆಗಳ ಅಸಹಾಯಕ ಆಕ್ರಂದನ ಮುಗಿಲು ಮುಟ್ಟಿದೆ. ದೇಶದ ಉದ್ದಗಲಗಳನ್ನು ಮರಣ ಮೌನ ಆವರಿಸಿ ಹೊದ್ದಿದೆ. ನಗರಗಳಲ್ಲಿ ಆಂಬ್ಯುಲೆನ್ಸ್‌ಗಳು ಹಗಲುರಾತ್ರಿ ಊಳಿಡತೊಡಗಿವೆ. ರುಗ್ಣಾಲಯಗಳು- ರುದ್ರಭೂಮಿಗಳು ತುಂಬಿತುಳುಕಿವೆ. ಗಂಗೆಯ ದಡದಲ್ಲಿ ಉರಿವ ಹೆಣಗಳ ಲೆಕ್ಕ ಕಳೆದುಹೋಗಿದೆ. ಯಮುನೆಗೆ ತೇಲಿಬಿಟ್ಟ ಕೋವಿಡ್ ಪೀಡಿತರ ಶವಗಳು ಭಯಭೀತಿಯ ಅಲೆಗಳನ್ನು ಎಬ್ಬಿಸಿವೆ. ಕೋವಿಡ್‌ನ ಮೂರನೆಯ ಅಲೆ ಹೆಡೆಯೆತ್ತಿದೆ ಎನ್ನಲಾಗುತ್ತಿದೆ. ಆಹುತಿಯ ಸರದಿ ಹಸುಮಕ್ಕಳದಂತೆ. ಮೂರನೆಯ ಅಲೆ ಹೆಡೆ ಮುದುರದಿದ್ದರೆ ಎರಗಲಿರುವ ವಿಪತ್ತು, ಮೊರೆಯಲಿರುವ ಶೋಕಸಾಗರ ಊಹೆಗೂ ನಿಲುಕದ್ದು.

ಬಂಗಾಳವನ್ನು ಗೆಲ್ಲಲು ಸಿಡಿಲಾಗಿ ಘರ್ಜಿಸಿದ್ದ ಚಕ್ರವರ್ತಿಗಳು ಘೋರ ಸೋಲಿನ ನಂತರ ಗಾಢ ಮೌನಕ್ಕೆ ಶರಣುಹೋಗಿದ್ದಾರೆ. ದೇಶವನ್ನು ಕವಿದಿರುವ ದುರಂತಕ್ಕೆ ಅವರು ಕಿವುಡರು ಮತ್ತು ಕುರುಡರು. ನಿರುಪಾಯರು, ನಿಷ್ಕ್ರಿಯರು, ನಿಶ್ಯಕ್ತರು. ಸರ್ವಶಕ್ತರೆಂಬಂತೆ ಗುಡುಗುತ್ತಿದ್ದ ನಾಯಕರ ನಿಜಟೊಳ್ಳು, ಮಹಾಸಂಕಟ ಒಡ್ಡಿರುವ ಅಗ್ನಿಪರೀಕ್ಷೆಯಲ್ಲಿ ನಗ್ನವಾಗಿ ನಿಂತಿದೆ.

ಪ್ರಜೆಗಳ ಕಷ್ಟ ಸಂಕಟಗಳು ಕತ್ತಲೆ ಕಣ್ಣೀರುಗಳು ’ಉಕ್ಕಿನ ಮನುಷ್ಯ’ನನ್ನು ಬಾಧಿಸಿರುವ ಸುಳಿವುಗಳಿಲ್ಲ. ಐವತ್ತಾರು ಅಂಗುಲ ಹರವಿನ ಎದೆಯಲ್ಲಿ ಅನುಕಂಪದ ಜಲವಿರಲಿ, ಅದರ ಪಸೆಯೂ ಕಾಣದಲ್ಲ ಎಂಬ ಕಠೋರ ಸತ್ಯ ಬೆಚ್ಚಿಬೀಳಿಸುತ್ತದೆ.

ಎಲ್ಲ ಸುಂದರ ಸಾಂಗತ್ಯಗಳನ್ನು ತಿರಸ್ಕರಿಸಿ ನೀರಿನಲ್ಲಿ ಕಾಣುವ ತನ್ನ ಪ್ರತಿಬಿಂಬದೊಂದಿಗೆ ಅನುರಕ್ತನಾಗಿ ಬದುಕೆಲ್ಲ ಸ್ವಮೋಹಿಯಾಗೇ ಕಳೆದ ಗ್ರೀಕ್ ಪುರಾಣದ ಸುಂದರಾಂಗ ನಾರ್ಸಿಸ್‌ನಂತೆಯೂ, ರೋಮ್ ಹೊತ್ತಿ ಉರಿದಾಗ ಪಿಟೀಲು ಬಾರಿಸಿ ಮೈ ಮರೆತಿದ್ದ ನೀರೋ ದೊರೆಯಂತೆಯೂ ಏಕಕಾಲಕ್ಕೆ ಎದ್ದು ಕಾಣುತ್ತಾರೆ ಈ ಪ್ರಚಂಡ ನಾಯಕ.

ನಗರಗಳು, ಊರುಗಳು ಕೇರಿಗಳು ಹಳ್ಳಿಗಳು ಹಟ್ಟಿಗಳು ಸಾವಿನ ಕಿಚ್ಚಿನಲ್ಲಿ ಬೆಂದಿರುವ ಹೊತ್ತಿನಲ್ಲಿ ಹೊಸ ಸಂಸದ್ ಭವನ, ಹೊಸ ಪ್ರಧಾನಿ ನಿವಾಸವನ್ನು ಒಳಗೊಂಡ 20 ಸಾವಿರ ಕೋಟಿ ರುಪಾಯಿ ವೆಚ್ಚದ ಸೆಂಟ್ರಲ್ ವಿಸ್ಟಾ ನಿರ್ಮಾಣ ಭರದಿಂದ ಸಾಗಿದೆ. ನಿರ್ಮಾಣ ಕಾರ್ಯವನ್ನು ಅಗತ್ಯ ಸೇವೆ ಎಂದು ಘೋಷಿಸಿರುವ ನಡೆ ಆಘಾತಕಾರಿ. ಆಕ್ಸಿಜನ್ ಕೊರತೆಯಿದೆ ಎಂದವರನ್ನು ಉತ್ತರಪ್ರದೇಶ ಸರ್ಕಾರ ಭಯೋತ್ಪಾದನೆ ನಿಗ್ರಹ ಕಾಯಿದೆಯಡಿ ಜೈಲಿಗೆ ತಳ್ಳುತ್ತಿದೆ. ಸಂವೇದನಾರಹಿತ ನಡೆಯ ಪರಾಕಾಷ್ಠೆ. ವಿಷಪೂರಿತ ವ್ಯಕ್ತಿಪೂಜೆ ಚರಮಸೀಮೆ ತಲುಪಿದೆ.

ಬಂಗಾಳಿ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕವಿತೆಯೊಂದು ನೆನಪಾಗುತ್ತಿದೆ. ಅಭಿಮಾನಿಗಳು ಕ್ಷಮಿಸಬೇಕು. ಇದು ಇಂದಿನ ಭಾರತದಲ್ಲಿ ಬರೆದ ಕವಿತೆಯಲ್ಲ. ರಚಿಸಿ ಕನಿಷ್ಠ ಐವತ್ತು ವರ್ಷಗಳಾದರೂ ಉರುಳಿವೆ. ಕವಿತೆಯ ಶೀರ್ಷಿಕೆ ’ಉಲೋಂಗೋ ರಾಜಾ’ (ಬೆತ್ತಲೆ ರಾಜ). 1971ರಲ್ಲಿ ಪ್ರಕಟವಾದ ’ಉಲೋಂಗೋ ರಾಜಾ’ ಕವಿತಾ ಸಂಗ್ರಹಕ್ಕೆ 1974ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯುತ್ತದೆ.

ಬರಿ ಬೆತ್ತಲಾಗಿ ನಿಂತಿರುವನು ಚಕ್ರವರ್ತಿ ನೋಡ್ರಪ್ಪೋ ನೋಡ್ರಿ
ಆದರೇನಿದು! ಎಲ್ಲ ಮೆಚ್ಚಿ ಚಪ್ಪಾಳೆ ತಟ್ಟುತ್ತಿದ್ದಾರಲ್ಲ
ಹುರುಪಿನಿಂದ ಕೂಗುತ್ತಿದ್ದಾರೆ- ಶಹಭಾಷ್ ಶಹಭಾಷ್.
ಕೆಲವರು ಮುಳುಗಿರುವರು ಮಿಥ್ಯಾಭಿಪ್ರಾಯಗಳಲಿ, ಮತ್ತೆ ಕೆಲವರು ಭಯದಲ್ಲಿ.
ಇತರರು ಗಿರವಿ ಇರಿಸಿರುವರು ತಮ್ಮ ಮೆದುಳುಗಳನು.

ಕೆಲವರು ಕಪಟಿಗಳು, ಇನ್ನು ಕೆಲವರು ಪರೋಪಜೀವಿಗಳು
ಸ್ವಜನಪಕ್ಷಪಾತದ ಲಾಭದಾಸೆ ಇತರೆ ಹಲವರಿಗೆ

ಆಹಾ! ಅದೆಷ್ಟು ದಿವ್ಯ ಅರಸನ ನಿಲುವಂಗಿ !
ಹೊರಗಣ್ಣಿಗೆ ಅದು ಗೋಚರಿಸುವುದೇ ಇಲ್ಲವಲ್ಲ
ಆದರೂ ಅದು ಅರಸನ ಮೈಮೇಲಿರುವುದು ಹೌದೇ ಹೌದು ಅಂತಾರಪ್ಪ

ಕತೆ ಅಗಣಿತ ಜನಜನಿತ
ಕೇವಲ ಭಟ್ಟಂಗಿಗಳು, ಬೂಟುನೆಕ್ಕುವವರು
ತಿಳಿಗೇಡಿಗಳು ಮತ್ತು ಹೇಡಿಗಳು
ಸುಲಿಗೆಕೋರರು ಮತ್ತು ಟೋಪಿ ಹಾಕೋರು ಮಾತ್ರವೇ
ಕತೆಯಲ್ಲಿರಲಿಲ್ಲ.

ಅಲ್ಲೊಂದು ಮಗು ಕೂಡ ಇತ್ತು
ಹೌದು ಮಗು-ಅಧಿಕೃತ, ನಿಷ್ಕಪಟ, ಪ್ರಾಮಾಣಿಕ ಹಾಗೂ ದಿಟ್ಟ ಮಗು

ಮತ್ತೆ ಇಳಿದಿರುವನು ಚಕ್ರವರ್ತಿ ಬೀದಿಗಳಿಗೆ
ಸುರಿದು ನೆರೆದ ಜನ ಸಿಡಿಸಿರುವರು ಚಪ್ಪಾಳೆಗಳ

ಬಾಲಂಗೋಚಿಗಳು ಭಟ್ಟಂಗಿಗಳೇ ಚಕ್ರವರ್ತಿಯ ಸುತ್ತಮುತ್ತೆಲ್ಲ
ಭೋಪರಾಕು ನುಡಿವ ವಿನಾ ಬೇರೇನಿಲ್ಲ

ಕಾಲಿಗೆ ಅಡ್ಡ ಬೀಳುವ ಅಡಿಯಾಳುಗಳ ಈ ಸಂದಣಿಯಲಿ
ಕಾಣದಾಗಿದೆ ಅಬೋಧ ಕಂದ ಎಲ್ಲೆಲ್ಲೂ.

ಎಲ್ಲಿ ಹೋಯಿತು ಕೂಸು?
ಹಿಡಿದಿಡಲಾಗಿದೆಯೇ ಅದನ್ನು ಒತ್ತೆಯಾಳಾಗಿ
ಗುಪ್ತ ಪರ್ವತದ ಗವಿಯಲ್ಲಿ?
ಅಥವಾ ಮಣ್ಣು, ಹುಲ್ಲು, ಕಲ್ಲುಗಳೊಡನೆ ಆಟವಾಡುತ್ತ
ಆಡುತ್ತ ನಿದ್ದೆ ಹೋಯಿತೇ ಅದು ಮಲಗಿ
ದೂರದೂರದ ನೀರವ ನದೀ ತೀರದಲ್ಲಿ
ಇಲ್ಲವೇ ಮರವೊಂದರ ತಂಪು ನೆರಳಲ್ಲಿ?

ಹೊರಡಿ ಯಾವ ದಾರಿ ಹಿಡಿದಾದರೇನು
ಅರಸಿ ಹುಡುಕಿರಿ ಹಸುಕಂದನ
ಚಕ್ರವರ್ತಿಯ ಮುಖಾಮುಖಿ ಆಗಬೇಕಿದೆ ಅದು
ನಿರ್ಭೀತಿಯಿಂದ ನಿಲ್ಲಬೇಕಿದೆ ಅವನೆದುರು
ಮುಳುಗಿಸಿಬಿಡಲಿ ಅದರ ದನಿಯು, ಜನಜಂಗುಳಿಯ ಮೊರೆತವನು

ಮತ್ತು ಮೊಳಗಿ ಬೆಳಗಿ ಕೇಳಲಿ ಮಗು,
ಹೇ ಅರಸ, ಎಲ್ಲಿ ಹೋದವಯ್ಯಾ ನಿನ್ನ ಉಡುಗೆ ವಸ್ತ್ರಗಳು?
ಬೆತ್ತಲೆ ಇದ್ದೀ ಯಾಕೆ?

Emperor’s New Clothes ಕತೆ ನೂರಾರು ಭಾಷೆಗಳಿಗೆ ಅನುವಾದಗೊಂಡಿದೆ. ಚೆಂದದ ದಿರಿಸು ಧರಿಸುವ ಶೋಕೀಲಾಲ ಸ್ಪಪ್ರತಿಷ್ಠೆಯ ಚಕ್ರವರ್ತಿಯೊಬ್ಬನ ಕತೆಯಿದು. ಜಗತ್ತಿನಲ್ಲೇ ಅತ್ಯಂತ ಸುಂದರ ಪೋಷಾಕುಗಳನ್ನು ಚಕ್ರವರ್ತಿಗಾಗಿ ತಯಾರು ಮಾಡಿಕೊಡುವುದಾಗಿ ಹೇಳುತ್ತಾರೆ ಇಬ್ಬರು ನೇಕಾರರು. ಅವರನ್ನು ನೇಮಕ ಮಾಡಿಕೊಳ್ಳುತ್ತಾನೆ ಚಕ್ರವರ್ತಿ. ಯಾರ ಕಣ್ಣಿಗೂ ಕಾಣದಷ್ಟು ಸೂಕ್ಷ್ಮವಾದ ಅದೃಶ್ಯ ವಸ್ತ್ರವನ್ನು ತಾವು ಉಡುಪು ತಯಾರಿಸಲು ಬಳಸುವುದಾಗಿ ಅವರು ಹೇಳಿರುತ್ತಾರೆ. ತನ್ನ ಸ್ಥಾನಮಾನಕ್ಕೆ ಅರ್ಹನಲ್ಲದವನು ಅಥವಾ ತೀರಾ ಬೆಪ್ಪುತಕ್ಕಡಿಯಾದವನು ಈ ಉಡುಪು ತೊಟ್ಟರೆ ಅದು ಜನರ ಕಣ್ಣಿಗೆ ಕಾಣುತ್ತದೆ. ಶ್ರೇಷ್ಠನು ತೊಟ್ಟರೆ ಕಾಣುವುದಿಲ್ಲ ಎಂದು ನೇಕಾರರು ವಾಸ್ತವವಾಗಿ ಚಕ್ರವರ್ತಿಗೆ ಟೋಪಿ ಹಾಕಿರುತ್ತಾರೆ.

ಅಂತಹ ಅತಿಸೂಕ್ಷ್ಮ ಮತ್ತು ಅತಿಸುಂದರ ಬಟ್ಟೆಯನ್ನು ನೇಯುತ್ತಿರುವುದಾಗಿ ಅವರು ನಟಿಸುತ್ತಾರೆ. ನೇಯುವ ಹಂತದಲ್ಲಿ ಕೂಡ ಈ ಬಟ್ಟೆ ಚಕ್ರವರ್ತಿಗಾಗಲಿ, ಅವನ ಮಂತ್ರಿಗಳಿಗಾಗಲಿ ಕಾಣುವುದಿಲ್ಲ. ಆದರೆ ತಮಗೆ ಕಂಡಿತು ಎಂದು ಅವರು ಸುಮ್ಮಸುಮ್ಮನೇ ಒಪ್ಪಿಕೊಂಡುಬಿಡುತ್ತಾರೆ. ಬಟ್ಟೆ ಕಂಡಿತು ಎಂದರೆ ತಮ್ಮ ಸ್ಥಾನಮಾನಗಳಿಗೆ ಅನರ್ಹರು ಎನಿಸಿಕೊಳ್ಳಬೇಕಾದೀತು ಎಂಬ ಭಯ. ಪೋಷಾಕು ಸಿದ್ಧವಾಯಿತೆಂದು ನೇಕಾರರು ಘೋಷಿಸುತ್ತಾರೆ. ಚಕ್ರವರ್ತಿಗೆ ಅದನ್ನು ತೊಡಿಸುವ ಹಾವಭಾವವನ್ನೂ ಮಾಡುತ್ತಾರೆ. ತೊಟ್ಟೆನೆಂದು ತಿಳಿದ ಚಕ್ರವರ್ತಿ ’ಹೊಸ ಪೋಷಾಕನ್ನು’ ಪ್ರದರ್ಶಿಸಲು ತನ್ನ ಪ್ರಜೆಗಳ ಮುಂದೆ ಮೆರವಣಿಗೆಯಲ್ಲಿ ತೆರಳುತ್ತಾನೆ. ಬೆತ್ತಲೆ ಚಕ್ರವರ್ತಿಯನ್ನು ಕಂಡು ಪ್ರಜೆಗಳಿಗೆ ಕಸಿವಿಸಿ ಎನಿಸುತ್ತದೆ. ಆದರೆ ಪೋಷಾಕು ಕಾಣುತ್ತಿಲ್ಲವೆಂದು ಹೇಳಿದರೆ ತಮ್ಮ ಸ್ಥಾನಮಾನಗಳಿಗೆ ಚ್ಯುತಿ ಬಂದೀತೆಂದು ಹೆದರಿ ’ಹೊಸ ಪೋಷಾಕನ್ನು’ ಮೆಚ್ಚಿ ಹೊಗಳುತ್ತಾರೆ. ಆದರೆ ಚಕ್ರವರ್ತಿ ಬೆತ್ತಲಾಗಿದ್ದಾನೆ ಎಂದು ಜನರ ನಡುವಿನಿಂದ ಮಗುವೊಂದು ಕೂಗಿ ಹೇಳುತ್ತದೆ. ಆನಂತರ ಎಲ್ಲರೂ ಮಗುವಿನ ದನಿಗೆ ತಮ್ಮ ದನಿಯನ್ನೂ ಸೇರಿಸುತ್ತಾರೆ. ಚಕ್ರವರ್ತಿಗೆ ನಿಜ ತಿಳಿಯುತ್ತದೆ. ಆದರೂ ಮೆರವಣಿಗೆಯಲ್ಲಿ ಮುಂದುವರೆಯುತ್ತಾನೆ.

ಚಕ್ರವರ್ತಿಯ ಬೆತ್ತಲನ್ನು ಬಯಲು ಮಾಡುವ ಕಪಟವಿಲ್ಲದ ದಿಟ್ಟ ಮಗುವಿಗಾಗಿ ಹುಡುಕುವುದು ನಿರೇಂದ್ರನಾಥರ ಕವಿತೆಯಲ್ಲಿನ ಹೊಸ ರಾಜಕೀಯ ಆಯಾಮ. ಜನ ಮರುಳು ಜಾತ್ರೆ ಮರುಳು ಎಂಬಂತೆ ಜನಸಮುದಾಯಗಳು ಸುಳ್ಳು ಮತ್ತು ಭ್ರಮೆಗೆ ಮರುಳಾಗಿ ಚಪ್ಪಾಳೆ ತಟ್ಟುತ್ತ ಅವುಗಳನ್ನು ಹಿಂಬಾಲಿಸಿವೆ. ಕವಿತೆಯಲ್ಲಿನ ಮಗುವಿನ ಹುಡುಕಾಟವು ಅನುಕೂಲಸಿಂಧು ರಾಜಕಾರಣದ ಗೊಂಡಾರಣ್ಯದಲ್ಲಿ ಕಳೆದುಹೋಗಿರುವ ಆತ್ಮಸಾಕ್ಷಿಯ ಹುಡುಕಾಟ.

ಇಂದಿನ ಧ್ರುವೀಕೃತ ಭಾರತ ತನ್ನೊಳಗಿನ ಅಮಾಯಕ ಮಗುವನ್ನು ಕಳೆದುಕೊಂಡಿದೆ. ಗುಪ್ತಪರ್ವತದ ಗುಹೆಯಲ್ಲಿ ಒತ್ತೆಯಾಳಾಗಿ ಅದನ್ನು ಇಡಲಾಗಿದೆ. ಅದನ್ನು ಬಿಡಿಸಿ ತರಬೇಕಿದೆ. ಸ್ವಮೋಹಿ ಚಕ್ರವರ್ತಿಯ ಕಂಡು ’ಅಯ್ಯೋ ನೀನು ಬಟ್ಟೆಯನ್ನೇ ತೊಟ್ಟಿಲ್ಲವಲ್ಲ’ ಎಂದು ಅದು ಅಮಾಯಕತೆಯಿಂದ ಕೇಕೆ ಹಾಕಬೇಕಿದೆ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಟ್ಟಾರೆ ಲೇಖನದ ಉದ್ದೇಶ ಶೂನ್ಯ. ಬರೀ ಅರ್ಧಸತ್ಯವನ್ನು ತಿರುಚಿ ಹೇಳುವುದು ಮಾಧ್ಯಮದ ಬೇಜಾವ್ದಾರಿತನ ಎತ್ತಿ ತೋರಿಸಿದೆ. ಪ್ರಜೆಗಳ ದಾರಿ ತಪ್ಪಿಸಲು ಲೇಖಕರ ವ್ಯರ್ಥ ಪ್ರಯತ್ನದಂತಿದೆ. ವಾಸ್ತವ ಸ್ಥಿತಿಗತಿಗಳ ಅರಿವಿಲ್ಲದೆ ಕಾವ್ಯ ಪ್ರಪಂಚದಲ್ಲಿ ಜೀವಿಸಿ ಬರೆದ ಲೇಖನದಂತಿದೆ. ಕಾವ್ಯ ಪ್ರಪಂಚದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂಬುದು ಲೇಖಕರು ಮನವರಿಕೆ ಮಾಡಿಕೊಳ್ಳಬೇಕು. ಲೇಖಕರಿಗಿಂತ ಪ್ರಜೆಗಳಿಗೆ ಎಷ್ಟೋ ವಿಷಯಗಳ ಅರಿವಿರುವುದರಿಂದ ಇಂತಹ ಲೇಖನಗಳು ವ್ಯರ್ಥ.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....