Homeಅಂಕಣಗಳುಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

- Advertisement -
- Advertisement -

ಕೊರೊನಾ ವೈರಾಣು ವಿರುದ್ಧದ ಸಮರದಲ್ಲಿ ಆಮ್ಲಜನಕವೆಂಬ ಪ್ರಾಣವಾಯು ಬೆಲೆಕಟ್ಟಲಾಗದ ಹತಾರುಗಳಲ್ಲಿ ಒಂದು. ಈ ಅಂಶ ವರ್ಷದ ಹಿಂದೆ ಎರಗಿದ ಮೊದಲ ಕೋವಿಡ್ ದಾಳಿಯಲ್ಲಿ ಬೆಳಕಿನಷ್ಟೇ ನಿಚ್ಚಳವಾಗಿ ಗೊತ್ತಾಗಿತ್ತು. ಕೋವಿಡ್ ಮಹಾಸಾಂಕ್ರಾಮಿಕವನ್ನು ವಿನಾಶಕಾರಿ ವಿಪತ್ತು ಎಂದು ಭಾರತ ಸರ್ಕಾರ 2020ರ ಮಾರ್ಚ್ 14ರಂದೇ ಘೋಷಿಸಿತ್ತು. ಆನಂತರ ಘೋಷಿಸಲಾದ ಲಾಕ್‌ಡೌನ್ ಜಗತ್ತಿನ ಅತಿಕ್ರೂರ ಲಾಕ್‌ಡೌನ್ ಎಂದು ಇತಿಹಾಸಕ್ಕೆ ಸಂದು ಹೋಗಿದೆ.

ಆನಂತರ ನಿದ್ದೆಗೆ ಜಾರುವ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಏಳು ತಿಂಗಳ ನಂತರ. ದೇಶದ 150 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆ ಘಟಕಗಳ ಸ್ಥಾಪನೆಯ ಟೆಂಡರ್ ಹೊರಟದ್ದು 2020ರ ಅಕ್ಟೋಬರ್ ತಿಂಗಳಿನಲ್ಲಿ. ಈ ಸಂಖ್ಯೆಗೆ ಇನ್ನೂ ಹನ್ನೆರಡು ಘಟಕಗಳನ್ನು ಸೇರಿಸಲಾಗಿತ್ತು. ಏಳು ತಿಂಗಳ ಮಹಾವಿಳಂಬದ ಹಿಂದಿನ ಕಾರಣ ಏನಿದ್ದೀತು ಊಹಿಸಬಲ್ಲಿರಾ? ಅದು ಹಣಕಾಸಿನ ಕೊರತೆಯಂತೆ!

150 ಉತ್ಪಾದನಾ ಘಟಕಗಳ ಸ್ಥಾಪನೆಗೆ ಬೇಕಿದ್ದ ಹಣವಾದರೂ ಎಷ್ಟು? ಕೇವಲ 201.58 ಕೋಟಿ ರುಪಾಯಿಗಳು. ಕಡೆಗೂ ಈ ಹಣವನ್ನು ಹಂಚಿಕೆ ಮಾಡಿದ್ದು PM- CARES ನಿಧಿಯಿಂದ. ಭಾರತ ಸರ್ಕಾರದ ಬೊಕ್ಕಸ ಅದೆಷ್ಟು ಬಡವಾಗಿತ್ತು!

ಟೆಂಡರ್ ಕರೆದು ಒಂದು ವರ್ಷವೇ ಉರುಳಿದೆ. 162ರಲ್ಲಿ ಸ್ಥಾಪಿಸಲಾಗಿರುವ ಘಟಕಗಳು ಕೇವಲ 33. ಇದೇ ಏಪ್ರಿಲ್ ಕಡೆಯ ವೇಳೆಗೆ ಇನ್ನೂ 59ನ್ನು ಸ್ಥಾಪಿಸಲಾಗುವುದಂತೆ. ಮೇ ಅಂತ್ಯದ ವೇಳೆಗೆ ಒಟ್ಟು 80 ಘಟಕಗಳು ಆಮ್ಲಜನಕವನ್ನು ಉತ್ಪಾದಿಸಲಿವೆಯಂತೆ. ಅರ್ಥಾತ್ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದ್ದ ಕೇವಲ ಅರ್ಧದಷ್ಟು ಘಟಕಗಳು! ಜಿಲ್ಲಾ ಆಸ್ಪತ್ರೆಗಳದ್ದೇ ಈ ಕತೆಯಾದರೆ ತಾಲ್ಲೂಕುಗಳು, ಸಣ್ಣಪುಟ್ಟ ಊರು ಕೇರಿಗಳ ಜನರ ಪಾಡೇನು?

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಗಳ ಹೊರಗಷ್ಟೇ ಅಲ್ಲ, ಒಳಗೂ ರೋಗಿಗಳು ಸಾಯುತ್ತಿರುವುದು ಹೃದಯವಿದ್ರಾವಕ. ಈ ಸಾವುಗಳು ಅಪ್ಪಟ ಮಾನವನಿರ್ಮಿತ. ಆಳುವವರ ಅದಕ್ಷತೆ, ಬೇಜವಾಬ್ದಾರಿ, ನಿರ್ಲಕ್ಷ್ಯವೇ ಈ ಮರಣಗಳ ಹಿಂದಿನ ಕಾರಣ.

ಕೋವಿಡ್ ಮಹಾಸಾಂಕ್ರಾಮಿಕ ಇಲ್ಲದೆ ಹೋಗಿದ್ದರೂ ಜಿಲ್ಲಾ ಆಸ್ಪತ್ರೆಗಳು ತಮ್ಮವೇ ಆದ ಆಮ್ಲಜನಕ ಘಟಕಗಳನ್ನು ಹೊಂದಿರುವುದು ಅತ್ಯಗತ್ಯ. ಹಾವು ಕಡಿತ, ಮೆದುಳುಜ್ವರ, ರಸ್ತೆ ಅಪಘಾತ ಮುಂತಾದ ಕಾರಣಗಳಿಂದಾಗಿ ಆಸ್ಪತ್ರೆ ಸೇರುವ ಸಾವಿರಾರು ರೋಗಿಗಳ ಪ್ರಾಣ ಉಳಿಸಲು ಆಮ್ಲಜನಕ ಬೇಕೇ ಬೇಕು. ಮಹಾಸಾಂಕ್ರಾಮಿಕದ ನೆಪದಲ್ಲಿ ನಮ್ಮ ಆರೋಗ್ಯವ್ಯವಸ್ಥೆಯಲ್ಲಿ ಉಳಿದುಹೋಗಿರುವ ಭಾರೀ ಕಂದಕಗಳನ್ನು ಮುಚ್ಚಬೇಕಿದೆ. ಅವುಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆಯೂ ಸೇರಿದೆ ಎನ್ನುತ್ತಾರೆ ಆರೋಗ್ಯ ವ್ಯವಸ್ಥೆಗಳ ತಜ್ಞ ಟಿ.ಸುಂದರರಾಮನ್.

ಜಾಗಟೆ, ತಟ್ಟೆ ಬಾರಿಸಿ ಮೇಣದಬತ್ತಿಗಳನ್ನು ಹೊತ್ತಿಸುವ, ಶಂಖ ಊದಿಸುವ ನಾಟಕಗಳನ್ನು ಮಾಡಿಸದೆ ದೇಶದ ಸಾಂಕ್ರಾಮಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳ ಪ್ರಕಾರ ನಡೆದುಕೊಂಡಿದ್ದರೆ ಇಂದಿನ ವಿಪತ್ತನ್ನು ಸಮರ್ಥವಾಗಿ ಎದುರಿಸಬಹುದಿತ್ತು.

ಮಹಾಸಾಂಕ್ರಾಮಿಕದ ನಟ್ಟ ನಡುವೆಯೂ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಾರ್ಯ ಬಿಡುವಿಲ್ಲದೆ ನಡೆಯಿತು. ರಾಜಸ್ತಾನವೂ ಈ ಮಾತಿಗೆ ಹೊರತಾಗಲಿಲ್ಲ. ಮಹಾರಾಷ್ಟ್ರದಲ್ಲಿ ಈ ಪ್ರಯತ್ನ ನಿಲ್ಲದೆ ನಡೆದಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿನಲ್ಲಿ ಅಧಿಕಾರ ಹಿಡಿಯುವುದೇ ಪರಮಗುರಿ. ಹರಿದ್ವಾರದ ಕುಂಭಮೇಳದಲ್ಲಿ ಯಾವುದೇ ಕೋವಿಡ್ ನಿಯಮ ಪಾಲಿಸದೆ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ದಿನಗಟ್ಟಲೆ ನೆರೆದು ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಇವರು ದೇಶದ ನಾನಾ ಭಾಗಗಳಿಂದ ಬಂದವರು. ಹಿಂತಿರುಗುವಾಗ ಬಹುತೇಕರು ಕೋವಿಡ್ ಪ್ರಸಾದ ಹೊತ್ತು ತೆರಳುವವರೇ. ಕಳೆದ ವರ್ಷ ಹಠಾತ್ತನೆ ಹೇರಿದ ಅಮಾನುಷ ಲಾಕ್‌ಡೌನ್ ಮಾನವ ಇತಿಹಾಸದ ಮಹಾವಲಸೆಯ ದುರಂತವನ್ನು ಸೃಷ್ಟಿಸಿತ್ತು. ಲಕ್ಷಾಂತರ ಶ್ರಮಜೀವಿಗಳು ನೂರಾರು ಕಿ.ಮೀ. ದೂರವನ್ನು ಬಿರುಬಿಸಿಲಿನ ದಳ್ಳುರಿಯಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಎಷ್ಟೋ ಮಂದಿ ರಸ್ತೆಯಲ್ಲೇ ಪ್ರಾಣಬಿಟ್ಟ ದುರಂತಗಳು ಜರುಗಿದವು. ಅಂತಹ ಜನರ ಮೇಲೆ ಸರ್ಕಾರಗಳು-ಪೊಲೀಸರು ಅಮಾನುಷವಾಗಿ ನಡೆದುಕೊಂಡರು. ಲವಲೇಶ ಕರುಣೆಯೂ ಅಲ್ಲಿ ಕಾಣದೆಹೋಯಿತು. ಕಾರ್ಮಿಕ ವಲಸೆಗಾರರು ತಮ್ಮ ಗೂಡು ಸೇರಿಕೊಳ್ಳಲು ರೈಲುಗಾಡಿಗಳನ್ನು ಓಡಿಸದ ಕೇಂದ್ರ ಸರ್ಕಾರ, ಮೊನ್ನೆ ಸಾಂಕ್ರಾಮಿಕದ ನಟ್ಟನಡುವೆಯೂ ಕುಂಭಮೇಳಕ್ಕೆ ವಿಶೇಷ ರೈಲುಗಾಡಿಗಳನ್ನು ಏರ್ಪಾಡು ಮಾಡಿ ಧನ್ಯವಾಯಿತು. ಖುದ್ದು ಪ್ರಧಾನಮಂತ್ರಿಯವರೇ ಮುಂದಾಗಿ ಕುಂಭಮೇಳಕ್ಕೆ ಬರುವಂತೆ ಜನರನ್ನು ಆಹ್ವಾನಿಸಿದರು. ಪತ್ರಿಕೆಗಳಲ್ಲಿ ಅಚ್ಚಾದ ಪುಟಗಟ್ಟಲೆ ಜಾಹೀರಾತುಗಳೇ ಈ ಮಾತಿಗೆ ಪುರಾವೆ. ದೇಶವನ್ನು ಕೋವಿಡ್ ವಿಪತ್ತಿನಿಂದ ಪಾರು ಮಾಡುವುದು ನಿನ್ನೆ ಮೊನ್ನೆ ಕೂಡ ಸರ್ಕಾರದ ಆದ್ಯತೆ ಆಗಿರಲಿಲ್ಲ.

ವಲಸಿಗ

ಆಸ್ಪತ್ರೆಗಳ ಹಾಸಿಗೆಗಳನ್ನು ಹಂಗಾಮಿಯಾಗಿ ಹೆಚ್ಚಿಸಲು ಬಂದೀತು. ಆದರೆ ವೈದ್ಯರು-ಶುಶ್ರೂಷಕರು ಮುಂತಾದ ಆರೋಗ್ಯ ಸಿಬ್ಬಂದಿಯನ್ನು ದಿನ ಬೆಳಗಾಗುವುದರಲ್ಲಿ ಸೃಷ್ಟಿಸಲು ಆದೀತೇ? ಈ ಸಿಬ್ಬಂದಿ ಈಗಾಗಲೆ ತನ್ನ ಸಾಮರ್ಥ್ಯ ಮೀರಿ ಶ್ರಮಿಸತೊಡಗಿದೆ. ಒಂದು ಮಿತಿಯ ಆಚೆಗೆ ತಳ್ಳಿದರೆ ಅದು ಕೂಡ ಕುಸಿದುಹೋದೀತು.

ದೇಶದ ಆರೋಗ್ಯವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಬಂಡವಾಳಿಗರ ಕೈಗಿಟ್ಟರೆ ಎದುರಿಸಬೇಕಿರುವ ಅಪಾಯಗಳ ಮಾದರಿಯೊಂದು ನಮ್ಮ ಕಣ್ಣಮುಂದೆ ಅನಾವರಣಗೊಳ್ಳುತ್ತಿದೆ. ಖಾಸಗೀಕರಣದ ಮಹಾಪೂಜಾರಿಗಳು ಈ ಸುನಾಮಿ ಸಾಂಕ್ರಾಮಿಕದಿಂದ ಪಾಠ ಕಲಿಯಬೇಕಿದೆ.

ಬಹುತ್ವದ ಭಿನ್ನಮತದ ಸಹನೆ ಸಹಬಾಳುವೆಯ ಆಮ್ಲಜನಕ ಕೂಡ ಭಾರತ ದೇಶದಲ್ಲಿ ಭಾರೀ ವೇಗದಲ್ಲಿ ಬರಿದಾಗುತ್ತಿದೆ. ದೇಶ ಉಸಿರುಗಟ್ಟುವ ಈ ಅಪಾಯವನ್ನೂ ಮುಂದಾಗಿಯೇ ಮನಗಾಣುವುದು ಒಳಿತು.

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿಹೋಗಿದ್ದಾರೆ ನಮ್ಮ ದೇಶದ ಹಾಲಿ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತದಲ್ಲಿ ಕಾಣತೊಡಗಿದ್ದಾನೆ.


ಇದನ್ನೂ ಓದಿ: ಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...