Homeಮುಖಪುಟಮೀಸಲು ಸೌಲಭ್ಯ - ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

ಮೀಸಲು ಸೌಲಭ್ಯ – ಭಾಗ ಎರಡು; ಮೀಸಲಾತಿ ಬಗ್ಗೆ ಮಾತು-ಕತೆ

- Advertisement -
- Advertisement -

ಇದು ಕೆಲವು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ಭಿಕ್ಷುಕಿ ಹಾಗೂ ಅವಳ ಪುಟ್ಟ ಮಗಳ ಬಗ್ಗೆ ನಾನು ಸುದ್ದಿ ಮಾಡಿದ್ದೆ. ಅದನ್ನು ನೋಡಿ ಪೊಲೀಸರು ಅವಳನ್ನು ಆಸ್ಪತ್ರೆಗೆ ಕಳಿಸಿಕೊಡಲು ನಿರ್ಧಾರ ಮಾಡಿದರು. ಆದರೆ ಆಗ ಆ ಹೆಣ್ಣುಮಗಳಿಗೆ ಏಡ್ಸ್ ಬಂದುಬಿಟ್ಟಿದೆ ಎಂದು ಗಾಳಿ ಸುದ್ದಿ ಆಗಿದ್ದರಿಂದ ಅವಳನ್ನು ಮುಟ್ಟಲು ಯಾರೂ ಮುಂದೆ ಬರುತ್ತಾ ಇರಲಿಲ್ಲ. ಆಗ ನಾನು ಆಂಬುಲೆನ್ಸ್ ಚಾಲಕನ ಜೊತೆ ಸೇರಿ ಅವಳನ್ನು ಎತ್ತಿಕೊಂಡು ಆಂಬುಲೆನ್ಸ್‌ನಲ್ಲಿ ಹಾಕಿ ಕಳಿಸಿದೆವು. ಇದನ್ನು ನೋಡಿದ್ದ ನನ್ನ ಸ್ನೇಹಿತ, ಸಹೋದ್ಯೋಗಿ ಇಮ್ರಾನ್ ಗೌಹಾರ್ ಅವರು ಕೆಲವು ಸ್ನೇಹಿತರ ಮುಂದೆ ಇದನ್ನು ಹೇಳಿದ್ದರು. ಆಗ ಕೆಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸುದ್ದಿಗಾಗಿ ಹಾಗೂ ಆ ಮಹಿಳೆಗೆ ಸಹಾಯ ಮಾಡಿದ್ದಕ್ಕೆ ನನಗೆ ಅಭಿನಂದನೆ ಸಲ್ಲಿಸಿದ್ದರು.

ಈ ರೀತಿ ಅಭಿನಂದನೆ ಸಲ್ಲಿಸಿದ್ದವರೊಳಗೆ ಒಬ್ಬರು ಹಿರಿಯ ಮಹಿಳಾ ಪತ್ರಕರ್ತರೂ ಇದ್ದರು. ಅವರು ಆಗ ಬೆಂಗಳೂರಿನ ಇಂಗ್ಲಿಷು ಪತ್ರಿಕೆಯೊಂದರಲ್ಲಿ ಹಿರಿಯ ವರದಿಗಾರರಾಗಿದ್ದರು. ರಾಜಕೀಯ, ಪರಿಸರ-ಅರಣ್ಯ, ಆರೋಗ್ಯ ಇತ್ಯಾದಿ ವಿಷಯಗಳ ಸುದ್ದಿ ಮಾಡಿ ಅನುಭವ ಇದ್ದ ಅವರು ಆಗ ಹೊಸ ಕ್ಷೇತ್ರವಾದ ಐಟಿ-ಬಿಟಿ
ಸುದ್ದಿ ಕೂಡ ಮಾಡುತ್ತಾ ಇದ್ದರು. ಅವರು “ನೀವು ತುಂಬ ಒಳ್ಳೆ ಕೆಲಸ ಮಾಡಿದೀರಂತೆ. ವರದಿಗಾರರು ಬರೇ ಸುದ್ದಿ ಬರೆದು ಸುದ್ದಿ ಆಗಬಾರದು, ಇಂತಹ ಕೆಲಸಗಳಿಂದಲೂ ಸುದ್ದಿ ಆಗಬೇಕು” ಎಂದರು. ಕ್ಷೇತ್ರಕಾರ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿ ಇದ್ದ ಕಾಲದಲ್ಲಿ ಅವರು ಅನೇಕ ಅಪಾಯಕಾರಿ ಜಾಗಗಳಿಗೆ ಹೋಗಿ ಸುದ್ದಿ ಮಾಡಿದ್ದರು. ತುಂಬ ಧೈರ್ಯವಂತರು, ದುಡಿವಾನರು ಎಂದು ಹೆಸರು ಗಳಿಸಿದ್ದರು. ಮಹಿಳೆಯರ ಹಕ್ಕುಗಳ ಬಗ್ಗೆ, ಕೂಲಿ ಕಾರ್ಮಿಕರ ಬರೆದಿದ್ದರು, ಗಟ್ಟಿಯಾಗಿ ಮಾತಾಡುತ್ತಿದ್ದರು. ನಮ್ಮ ಓರಿಗೆಯ ಹುಡುಗರ ಕಣ್ಣಲ್ಲಿ ಆದರ್ಶ ಪತ್ರಕರ್ತರು ಅನ್ನಿಸಿಕೊಂಡಿದ್ದರವರು.

ಅವರು ಆಮೇಲೆ ತುಂಬ ಪರಿಚಯವಾದರು. ಕೆಲಸದ ಮೇಲೆ ಹೊರಗಡೆ ಹೋದಾಗಲೆಲ್ಲಾ ಮಾತಾಡುತ್ತಿದ್ದರು. “ನಿಮ್ಮಂತಹ ಕಿರಿಯರು ತುಂಬ ಪ್ರಗತಿಪರ ನಿಲುವುಗಳನ್ನು ಇಟ್ಟುಕೊಂಡಿರುವುದು ತುಂಬ ಖುಷಿಯ ವಿಷಯ. ನೀವು ಹೀಗೆ ಬರೆಯುತ್ತಾ ಇರಿ” ಎಂದೆಲ್ಲಾ ಹುರಿದುಂಬಿಸುತ್ತಾ ಇರುತ್ತಿದ್ದರು.

ಒಂದು ದಿನ ದೂರದ ಕಾರ್ಯಕ್ರಮಕ್ಕೆ ಹೋದಾಗ ಸರಕಾರಿ ಬಸ್ಸಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದರು. ಅದೂ ಇದೂ ಮಾತಾಡುತ್ತಾ ನಾವು ಮೀಸಲಾತಿಯ ಬಗ್ಗೆ ಮಾತಾಡಲು ಶುರು ಮಾಡಿದೆವು.

ಅವರ ಮಾತುಗಳನ್ನು ಕೇಳಿದ ಕೆಲವೇ ಕ್ಷಣಗಳಲ್ಲಿ ಅವರ ಪ್ರಗತಿಪರ ನಿಲುವುಗಳು ಕೇವಲ ಕೆಲವೇ ವಿಷಯಗಳಿಗೆ ಸೀಮಿತವಾಗಿವೆ ಅಂತ ನನಗೆ ಖಚಿತವಾಗಿಹೋಯಿತು. ಅವರು “ಈ ದೇಶ ಮೀಸಲಾತಿಯಿಂದಾಗಿಯೇ ಹಾಳಾಗಿ ಹೋಗಿದೆ, ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ, ನಾನು ಮೊನ್ನೆ ಒಂದು ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಹೋಗಿದ್ದೆ, ಅಲ್ಲಿ ಎಲ್ಲವೂ ತುಂಬ ನಿಧಾನ, ಯಾಕೆ ಅಂತ ನೋಡಿದರೆ ಅಲ್ಲಿ ಎಲ್ಲಾ ಕಡೆ ಈ ಎಸ್‌ಸಿ ಎಸ್‌ಟಿಗಳು ತುಂಬಿಕೊಂಡಿದ್ದಾರೆ, ಈ ಪಿಡುಗಿನಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತದೋ ಗೊತ್ತಿಲ್ಲ ಎನ್ನುವಂತಹ ನುಡಿಮುತ್ತುಗಳನ್ನು ಉದುರಿಸಿದರು.

ನಾನು ಮೊದಲಿಗೆ ಸುಮ್ಮನೆ ಕುಳಿತಿದ್ದೆ. ಅವರು “ಇದರ ಬಗ್ಗೆ ನೀವು ಏನು ಹೇಳುತ್ತೀರಿ? ಇದೆಲ್ಲಾ ಸರಿ ಅಲ್ಲ, ಅಲ್ಲವೇ” ಎಂದು ನನ್ನ ಅಭಿಪ್ರಾಯ ಕೇಳಿದರು. ನಾನು ಏನೂ ಹೇಳದೇ ಇದ್ದಾಗ “ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ನಿಮಗೆ ನಿಮ್ಮದೇ ಆದ ಅಭಿಪ್ರಾಯ ಇದೆ. ಇದರ ಬಗ್ಗೆ ಇಲ್ಲವೇ?” ಎಂದರು. ಆಗ ನಾನು ಮಾತಾಡಲು ಶುರು ಮಾಡಿದೆ. ನಮ್ಮ ಸಮಾಜದ ಕ್ರೂರ ಜಾತಿಪಥ, ಅದರ ವಿವಿಧ ಆಯಾಮಗಳು, ಅದರ ದೆಸೆಯಿಂದಾಗಿ ಸತತ ಹಿಂಸೆ ಅನುಭವಿಸುತ್ತಿರುವ ಸಮುದಾಯಗಳು, ಅವರು ಎದುರಿಸುವ ಸವಾಲುಗಳು, ಹಾಗೂ ಈ ಸಮಸ್ಯೆಗೆ ಸುಲಭ ಪರಿಹಾರಗಳು ಇಲ್ಲ ಎನ್ನುವ ವಿಷಯಗಳನ್ನು ನನಗೆ ತಿಳಿದಂತೆ ಹೇಳಿದೆ. ಅವರಿಗೆ ಮನವರಿಕೆ ಆಗಲಿಲ್ಲ. ಅಯ್ಯೋ ಅದೆಲ್ಲಾ ಎಲ್ಲೋ ಹಳ್ಳಿಯಲ್ಲಿ ಇರಬೇಕು. ಬೆಂಗಳೂರು-ಮೈಸೂರುಗಳಲ್ಲಿ ಈ ಸಮಸ್ಯೆ ಇಲ್ಲ. ಅಷ್ಟಾಗಿಯೂ ಮೀಸಲಾತಿ ಇರಬೇಕಾದರೆ ಬಡವರ ಮಕ್ಕಳಿಗೆ ಇರಲಿ. ಸಾಹುಕಾರರ ಮಕ್ಕಳಿಗೆ ಏಕೆ? ಕೊನೆಗೆ ಲುಕ್ಸಾನ ಆಗೋದು ದೇಶಕ್ಕೆ ಅಲ್ಲವೇ, ಇತ್ಯಾದಿ ಮಾತಾಡಿದರು. ಇದು ವಿವಿಧ ಸಮುದಾಯದ ಮಕ್ಕಳಿಗೆ ಸಮಾನ ಅವಕಾಶ ಸೃಷ್ಟಿಸುವ ಪ್ರಯತ್ನ ಅನ್ನುವುದು ಅವರಿಗೆ ಹೊಳೆಯಲಿಲ್ಲ.

ಅವರ ಪಟ್ಟಿಯ ಪಾಯಿಂಟುಗಳೆಲ್ಲ ಖಾಲಿ ಆಗಿ ಕೊನೆಗೆ ಅವರು ಏನೋ ಒಂದು ಅಪಶಬ್ದ ಬಳಸಿದರು. ನೀವು ಏನೇ ಹೇಳಿ, ಮೀಸಲಾತಿ ಇರಲೇಬಾರದು. ಅದೇ ಎಲ್ಲ ಸಮಸ್ಯೆಗಳಿಗೆ ಮೂಲ ಅಂತಂದರು. ಆಗ ನಾನು ಮೀಸಲಾತಿ ಇರಬಾರದು ಎನ್ನುವುದಾದರೆ ಬಸ್ಸಿನಲ್ಲಿ ಮುಂದಿನ ಸೀಟು ಇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಶೌಚಾಲಯ ಇರಬಾರದು ಅಂತ ಹೇಳಿದೆ. ಆಗ ಅವರು ಸುಮ್ಮನೆ ಆದರು. ಆ ಕಾರ್ಯಕ್ರಮ ಮುಗಿಯುವವರೆಗೂ ನನ್ನನ್ನು ಮಾತಾಡಿಸಲಿಲ್ಲ. ಆ ನಂತರ ಅನೇಕ ಸಾರಿ ನಾನಾಗಿಯೇ ಮಾತಾಡಿಸಿದರೂ ಅವರು ಮಾತಾಡಲಿಲ್ಲ. ನಾನು ಏನೋ ಅತಿ ಅಸಹ್ಯವಾದ, ಅಮಾನವೀಯವಾದ ಮಾತು ಅಡಿಬಿಟ್ಟೆ ಎನ್ನುವಂತೆ ನನ್ನನ್ನು ನೋಡಿ ಸುಮ್ಮನೆ ಆಗಿಬಿಟ್ಟರು. ನನ್ನ ಉದ್ದೇಶ ಕೆಟ್ಟದ್ದು ಆಗಿರಲಿಲ್ಲ ಎಂದು, ನಾನು ಹೇಳಿದ್ದು ಕೇವಲ ಸಮ ಅವಕಾಶದ ಉದಾಹರಣೆ ಅಂತೆಲ್ಲಾ ಒಂದೆರಡು ಬಾರಿ ಹೇಳಲು ಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಆನಂತರ ಸುಮ್ಮನಾಗಿ ಹೋದೆ.

ಈ ರೀತಿಯ ಜನ ನಮಗೆ ಎಲ್ಲ ಕಡೆ ಸಿಗುತ್ತಾರೆ. ಅವರು ಮಾತಾಡುವ ಜೋರು ಮತ್ತು ಓಘಗಳನ್ನು ನೋಡಿದರೆ ಅವರದೇ ಸರಿ, ನಮ್ಮದೇ ತಪ್ಪು ಎನ್ನುವ ಭಾವನೆ ಬರುತ್ತದೆ. ಅಂತಹ ಜನರ ಹತ್ತಿರ ಈ ವಿಷಯಗಳ ಬಗ್ಗೆ ಮಾತಾಡಬೇಕೋ, ಅಥವಾ ಮೌನವಾಗಿ ಇರಬೇಕೋ ತಿಳಿಯದೆ ಹೋಗಿಬಿಡುತ್ತದೆ. ಅದು “ನಮ್ಮ ವಿಚಾರಗಳನ್ನು ನಾವು ಬೇರೆಯವರಿಗೆ ತಿಳಿಸಬೇಕೋ ಅಥವಾ ನಮ್ಮಲ್ಲಿಯೇ ಇಟ್ಟುಕೊಳ್ಳಬೇಕೋ” ಎನ್ನುವ ವಾದದ ಭಾಗ. ಅದು ಅವರವರಿಗೆ ಬಿಟ್ಟ ವಿಚಾರ.

ಇಂತಹುದೆ ಒಂದು ಮಾತುಕತೆ ಒಮ್ಮೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಜೊತೆ ನಡೆದಿತ್ತು.

ಅವರ ವಿವಿಯಲ್ಲಿ ಒಂದು ವಿಚಾರ ಸಂಕಿರಣಕ್ಕಾಗಿ ನಾವು ಇಬ್ಬರು ಪತ್ರಕರ್ತರು ಹೋಗಿದ್ದೆವು. ನಮ್ಮ ಜೊತೆಗೆ ಒಬ್ಬ ಹಿರಿಯ ಸಮಾಜ ಕಾರ್ಯಕರ್ತರು ಇದ್ದರು. ಬೆಳಗ್ಗಿನ ತಿಂಡಿ ಮಾಡುವಾಗ ಆ ಪ್ರಾಧ್ಯಾಪಕರು ನಮ್ಮನ್ನು ಭೇಟಿ ಮಾಡಿದರು. “ನಾವು ಒಂದು ಸೇವಾ ಸಂಸ್ಥೆ ಮಾಡೀವಿ, ಅದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡ್ತೇವಿ. ಈ ವರ್ಷ ಒಬ್ಬ ಸಮಗಾರ ಹುಡುಗಿಗೆ ಕೊಟ್ಟುಬಿಟ್ಟಿವಿ” ಎಂದು ಆ ಹೋರಾಟಗಾರರು ಹೇಳಿದರು. ಆಗ ಆ ಪ್ರಾಧ್ಯಾಪಕರು “ನಾವು ಸಮಗಾರರು ಸರ್, ಅಗದೀ ಖರೆ ಸಮಗಾರರು ಅಂದ್ರ ನಾವ” ಅಂತ ಹೇಳಿದರು. ಹೌದೇ, ನನಗೆ ಗೊತ್ತಿಲ್ಲ. ಬಹಳ ಸಂತೋಷ ಎಂದು ಆ ಹಿರಿಯ ಹೋರಾಟಗಾರರು ಹೇಳಿದರು. ಆ ಪ್ರಾಧ್ಯಾಪಕರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಮೇಲುಜಾತಿಗೆ ಸೇರಿದವರು ಅಂತ ನನಗೆ ಗೊತ್ತಿತ್ತು. “ಅಯ್ಯೋ ಅವರು ಜೋಕು ಮಾಡುತ್ತಾರೆ ಸರ್ ಅಂತ ಹೇಳಿ ನಾನು ನಕ್ಕೆ. ಆ ಹಿರಿಯರು ಒಂಥರಾ ಕಸಿವಿಸಿಯಾಗಿ ಸುಮ್ಮನೆ ಕೂತರು.

ಆ ಪ್ರಾಧ್ಯಾಪಕರು ಸುಮ್ಮನೆ ಕೂಡಲಿಲ್ಲ. ಅವರಿಗೆ ಚುಚ್ಚಿದಂತಾಗಿ ಜೋರಾಗಿ ಮಾತನಾಡಲು ಶುರು ಮಾಡಿದರು. ಮೀಸಲು ವ್ಯವಸ್ಥೆ ವಿರುದ್ಧ ಕೂಗಾಡಿದರು. “ನಮ್ಮ ವಿವಿಯಲ್ಲಿ ನೋಡಿ. ನಾಲಾಯಕರು ಎಲ್ಲ ಸೀನಿಯಾರ್ಟಿ ತೊಗೊಂಡುಬಿಡ್ತಾರೆ. ನಮ್ಮ ನೋಟಸು ಓದಿ ಪಾಸು ಆದವರು ನಮಗಿಂತ ಮುಂದೆ ಹೋಗುತ್ತಾ ಇದ್ದಾರೆ. ನಾವು ಕೆಲಸಕ್ಕೆ ಸೇರಿದ ಮೇಲೆ ಹುಟ್ಟಿದವರು ನಮಗಿಂತ ಸೀನಿಯರ್ ಹೇಗೆ ಆಗುತ್ತಾರೆ? ನಾವೆಲ್ಲ ಸೇರಿ ಇದರ ವಿರುದ್ಧ ಹೋರಾಟ ಮಾಡಬೇಕು. ಈ ಅನಿಷ್ಟ ವ್ಯವಸ್ಥೆಯನ್ನು ನಾವು ಬೆಂಬಲಿಸಬಾರದು” ಅಂತ ಫರಮಾನು ಹೊರಡಿಸಿದರು.

ಆಗ ನಾನು “ಇರಲಿ ಬಿಡ್ರಿ ಸರ್. ಅದನ್ನು ಆಮ್ಯಾಲೆ ನೋಡೋಣ. ಈಗ ಪ್ರತಿಭೆ ಅಂದ್ರ ಏನು, ಅದರ ವಿರೋಧಿ ಅಂದ್ರ ಏನು ಅನ್ನೋದು ಗ್ಯಾರಂಟಿ ಮಾಡಿಕೊಳ್ಳೋಣ” ಅಂತ ಹೇಳಿ ಮಾತಾಡಲು ಶುರು ಮಾಡಿದೆ. ಅವರು ಮನೋವಿಜ್ಞಾನದ ಶಿಕ್ಷಕರು ಅಂತ ನನಗೆ ಗೊತ್ತಿತ್ತು. ಅಮೆರಿಕದ ವರ್ಣಭೇದ ನೀತಿ, ಯುರೋಪಿನ ಅಲ್ಪಸಂಖ್ಯಾತರು ಹಾಗೂ ಅವರ ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಆಗಿರುವ ಸಂಶೋಧನೆಗಳ ಉದಾಹರಣೆ ನೀಡಿದೆ. ತಮ್ಮ ವಿಷಯದ ಬಗ್ಗೆ ಇನ್ನೊಬ್ಬರು ಯಾರೋ ಅಧಿಕಾರಯುತವಾಗಿ ಮಾತಾಡುವುದು ಅವರಿಗೆ ಅಪಚನವಾಯಿತು. ಅವರು ಇಲ್ಲ. ಅವು ನಮಗೆ ಸಂಬಂಧ ಇಲ್ಲ. ಅವೆಲ್ಲಾ ‘ಪ್ರಾಬ್ಲಮ್ಸ್ ಆಫ್ ಎ ಡಿಫರೆಂಟ್ ಸೊಸೈಟಿ’ ಅಂತಂದರು.

ಕೊನೆಗೆ ನಾನು “ನೋಡಿ ಸಾರ್, ನೀವು ಹೇಳೋದನ್ನ, ಬರೆ ವಾದಕ್ಕಾಗಿ ಅಂತ ಆದರೂ ಒಪ್ಪೋಣ. ಆದರೆ ನೀವು ಒಂದು ಮಾತು ನನಗೆ ಹೇಳಬೇಕು. ನೀವು ನಿಮ್ಮ ಜೀವನದಾಗ ಎಷ್ಟು ಸರಿ ಡೊನೇಶನ್‌ಗೆ ಬೈದಿರಿ? ನೀವು ಎಷ್ಟು ಸಲ ಮೀಸಲಾತಿಗೆ ಬೈದಿರಿ, ಅಷ್ಟೇ ಸರಿ ಡೊನೇಶನ್‌ಗೆ ಬೈದಿರಿ ಅಂತ ಆದರೆ ಮುಂದೆ ಮಾತು ಆಡಬಹುದು” ಅಂತಂದೆ.

ಮೀಸಲಾತಿ ಎನ್ನುವುದು ಪ್ರತಿಭೆಯ ಪರವಾಗಿ ಇರುವ ಕಾನೂನು. ವಿವಿಧ ಸಮಾಜಗಳು ಮೀಸಲು ಸೌಲಭ್ಯ ಪಡೆಯುವುದರಿಂದ ತಮ್ಮ ತಮ್ಮ ಸಮಾಜದ ಹುಡುಗರು- ಹುಡುಗಿಯರು ತಮ್ಮ ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಆಗುವ ಅನುಕೂಲ ಏನೆಂದರೆ, ವಿವಿಧ ಸಮುದಾಯದಲ್ಲಿರುವ ಅತಿ ಹೆಚ್ಚು ಬುದ್ಧಿವಂತ ಹುಡುಗ- ಹುಡುಗಿಯರು ತಮ್ಮ ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗುತ್ತದೆ. ಪ್ರತಿ ಸಮುದಾಯದ ಒಳಗೆ ಸ್ಪರ್ಧೆ ನಡೆದು ತಮ್ಮ ತಮ್ಮ ಜಾತಿ-ಉಪಜಾತಿಗಳ ಒಳಗಿನ ಅರ್ಹ ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜು ಸೀಟು ಅಥವಾ ನೌಕರಿ ದೊರಕುವಂತೆ ಆಗುತ್ತದೆ. ಇನ್ನು ಯಾವ ಮೀಸಲು ಸೌಲಭ್ಯ ಪಡೆದ ವಿದ್ಯಾರ್ಥಿಯೂ ಕೂಡ ಸಾಮಾನ್ಯ ವರ್ಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡೋದಿಲ್ಲ. ಅವರು ಇಬ್ಬರೂ ತಮ್ಮ ತಮ್ಮ ವೃಂದಗಳಲ್ಲಿ ಸೀಮಿತ ಸ್ಪರ್ಧೆ ಮಾಡುತ್ತಾರೆ. ಆದ್ದರಿಂದ, ಅವರ ಸೀಟನ್ನು ಇವರು ಕಸಿದುಕೊಳ್ಳುವ ಪ್ರಸಂಗ ಬರೋದಿಲ್ಲ, ಅಂತ ತಿಳಿಹೇಳಿದೆ.

ಕೊನೆಯದಾಗಿ, ನೋಡಿ ಮೀಸಲಾತಿ ವ್ಯವಸ್ಥೆ ಅಡಿಯಲ್ಲಿ ಅಭ್ಯರ್ಥಿಗಳ ನಡುವೆ, ಅವರ ಸಾಮರ್ಥ್ಯದ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತದೆ. ಆದರೆ, ಡೊನೇಶನ್ ವ್ಯವಸ್ಥೆ ಅಡಿಯಲ್ಲಿ ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಇಲ್ಲ. ಅವರ ಅಪ್ಪಂದಿರ ನಡುವೆ, ಅವರ ಪಾಕೆಟ್ಟಿನಲ್ಲಿ ಎಷ್ಟು ಹಣ ಇದೆ ಇನ್ನುವ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತದೆ. ಇದು ನಿಜವಾದ ಪ್ರತಿಭೆಯ ವಿರೋಧಿ ಅಂತ ಹೇಳಿದೆ. ಆದರೆ ಅವರು ತಮ್ಮ ಮನಸ್ಸಿನ ಬಾಗಿಲನ್ನು ಕೋಟೆಯ ಬಾಗಿಲಿನಂತೆ ಮುಚ್ಚಿಬಿಟ್ಟಿದ್ದರು. ತನ್ನ ಪೂರ್ವಗ್ರಹಗಳ ವಿರುದ್ಧ ಇರುವ ನಿಲುವನ್ನು ಸ್ವೀಕರಿಸುವ ಔದಾರ್ಯ ಅವರಿಗೆ ಇರಲಿಲ್ಲ.

“ಇಲ್ಲ. ಇಲ್ಲ. ಹಂಗ ಹೆಂಗ ಆಗತದ? ಅದು ಬ್ಯಾರೆ, ಇದು ಬ್ಯಾರೆನ. ಡೊನೇಶನ್ ಪ್ರತಿಭೆ ವಿರೋಧಿ ಇರಬಹುದು. ಆದರ ಮೀಸಲಾತಿ ಮಾತ್ರ ಖಾತ್ರಿಯಾಗಿ ಪ್ರತಿಭೆ ವಿರೋಧಿ. ಅವು ಎರಡೂ ಇರಲಾರದ ಸಮಾಜದಲ್ಲಿ ನಾವು ಇರಬೇಕು. ನನಗಂತೂ ಇದು ಸಾಕಾಗಿ ಹೊಗೇತೀ” ಎಂದು ಅವರು ಅವಲತ್ತುಕೊಂಡರು.

ಅಷ್ಟೊತ್ತಿಗೆ ಕಾರ್ಯಕ್ರಮ ಶುರು ಆಯಿತು. ಅದರಲ್ಲಿ ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ಸಬ್ ಅಲಟರ್ನ್ ಸಮುದಾಯಗಳ ಸಮಜೋ-ಆರ್ಥಿಕೋ-ರಾಜಕೀಯೋ-ಸಾಂಸ್ಕೃತಿಕೋ ಸವಾಲುಗಳು ಮತ್ತು ಪರಿಹಾರಗಳು ಅನ್ನುವ ಬಗ್ಗೆ ಘನಘೋರ ಭಾಷಣ ಮಾಡಿದರು.

ಇಂತಹ ಅನುಭವ ನಿಮ್ಮದೂ ಆಗಿರಬಹುದು. ನಮಗೆ ಸಿಕ್ಕವರು ನಿಮಗೂ ಸಿಕ್ಕಿರಬಹುದು. ಒಬ್ಬರ ಸುದ್ದಿ ಒಬ್ಬರು ಹಂಚಿಕೊಳ್ಳಬೇಕು ಎನ್ನುವುದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು ಅಷ್ಟೇ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.


ಇದನ್ನೂ ಓದಿ: ಒಬಿಸಿ ಕಾಯ್ದೆ ತಿದ್ದುಪಡಿ 2021 ಹಿನ್ನೆಲೆ; ಮೀಸಲು ಸೌಲಭ್ಯ – ಭಾಗ ಒಂದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...