ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೊರೊನಾ ಲಸಿಕೆ ನೀಡುವ ಅಭಿಯಾನವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಬುಧವಾರ ಉದ್ಘಾಟಿಸಿದರು. ಭಾರತೀಯ ಉದ್ಯಮದ ಒಕ್ಕೂಟ (ಸಿಐಐ) ಮತ್ತು ಖಾಸಗಿ ಆಸ್ಪತ್ರೆಗಳು ಜಂಟಿಯಾಗಿ ಈ ಉಪಕ್ರಮವನ್ನು ನಡೆಸುತ್ತಿವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಸಿಎಸ್ಆರ್ ನಿಧಿಗಳ ಮೂಲಕ ಅಭಿಯಾನ ನಡೆಸಲಾಗುವುದು ಎನ್ನಲಾಗಿದ್ದು, ಲಸಿಕೆಗಳನ್ನು ಉಚಿತವಾಗಿ ಫಲಾನುಭವಿಗಳಿಗೆ ನೀಡಲಾಗುತ್ತದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಕೊರತೆ; ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಲ್ಲಿಸುವತ್ತ ಕೇರಳ
ಸಿಎಸ್‌ಆರ್ ಹಣವನ್ನು ಬುಧವಾರ ಮುಖ್ಯಮಂತ್ರಿಗೆ ದೇಣಿಗೆ ರೂಪದಲ್ಲಿ ನೀಡಿದೆ. ಇದುವರೆಗೂ ಒಟ್ಟು 2.27 ಕೋಟಿ ದೇಣಿಗೆಯು ಸಂಗ್ರಹವಾಗಿದೆ. ಡೈಮ್ಲರ್ ಇಂಡಿಯಾ (1 ಕೋಟಿ ರೂ.), ಸೇಂಟ್ ಗೋಬೈನ್ ಇಂಡಿಯಾ (50 ಲಕ್ಷ ರೂ.), ಝೆಡ್‌ಎಫ್ ವಾಬ್ಕೊ (50 ಲಕ್ಷ ರೂ.), ಡ್ಯಾನ್‌ಫಸ್ ಇಂಡಿಯಾ (10 ಲಕ್ಷ ರೂ.), ಕಾವ್ನ್ ಕೇರ್ (ರೂ. 10 ಲಕ್ಷ), ಎ2ಬಿ (7 ಲಕ್ಷ ರೂ.) ಕಂಪೆನಿಗಳು ಈಗಾಗಲೆ ಮುಖ್ಯಮಂತ್ರಿಗೆ ದೇಣಿಗೆ ನೀಡಿದೆ.
ಈ ನಿಧಿಯ ಜೊತೆಗೆ, ಕಾವೇರಿ ಆಸ್ಪತ್ರೆಯ ಮೂಲಕ 36,000 ಡೋಸ್ ಲಸಿಕೆಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಆಸ್ಪತ್ರೆಯ ಎಲ್ಲಾ ಶಾಖೆಗಳಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಪತ್ರಿಕೆಗಳು ವರದಿ ಮಾಡಿದೆ.
ಆರೋಗ್ಯ ಸಚಿವ ಮಾ ಸುಬ್ರಮಣಿಯನ್, ಸಿಐಐ ತಮಿಳುನಾಡು ರಾಜ್ಯ ಪರಿಷತ್ತಿನ ಅಧ್ಯಕ್ಷ, ಕಾವೇರಿ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಎಸ್.ಚಂದ್ರಕುಮಾರ್, ಕಾವೇರಿ ಆಸ್ಪತ್ರೆಯ ಸಹ-ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಅರವಿಂದನ್ ಸೆಲ್ವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಾಮಾನ್ಯ ಲಸಿಕೆ ಪಡೆಯದ 30 ಲಕ್ಷ ಮಕ್ಕಳು ಭಾರತದಲ್ಲಿದ್ದಾರೆಂದ ವಿಶ್ವಸಂಸ್ಥೆ


