ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿರುವ ತಮಿಳುನಾಡಿನ ಕಂದಾಯ ಸಂಘಗಳ ಒಕ್ಕೂಟದ (ಎಫ್‌ಇಆರ್‌ಎ) ಸದಸ್ಯರು ಮಂಗಳವಾರದಿಂದ (ನವೆಂಬರ್ 18) ಪ್ರತಿಭಟನೆ ಆರಂಭಿಸಿದ್ದಾರೆ.
ಅತಿಯಾದ ಕೆಲಸದ ಒತ್ತಡ, ಸಾಕಷ್ಟು ಸಿಬ್ಬಂದಿ ಇಲ್ಲದಿರುವುದು, ಗಡುವಿನ ಒತ್ತಡ, ಸಾಕಷ್ಟು ತರಬೇತಿ ನೀಡದಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಆಡಳಿತದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಎಸ್‌ಐಆರ್ (ಸಂಬಂಧಿತ ದಾಖಲೆಗಳ ಡಿಜಿಟಲೈಸೇಶನ್ ಮತ್ತು ದೃಢೀಕರಣ ಕಾರ್ಯ) ಪ್ರಕ್ರಿಯೆ ಬಹಿಷ್ಕರಿಸಿದ್ದಾರೆ.
ಒಕ್ಕೂಟದ ಸದಸ್ಯರು ಬಹಿಷ್ಕಾರ ಆರಂಭಕ್ಕೂ ಮುನ್ನ, ಸೋಮವಾರ (ನವೆಂಬರ್ 17) ಸಂಜೆ ನಡೆದ “ಪೆರುಂದಿರಲ್ (ಸಾಮೂಹಿಕ ಅರ್ಜಿ) ಕಾರ್ಯಕ್ರಮ”ದಲ್ಲಿ ರಾಜ್ಯದ 32 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ (ಕಲೆಕ್ಟರ್‌ಗಳಿಗೆ) ತಮ್ಮ ಬೇಡಿಕೆಗಳ ಪತ್ರ ಸಲ್ಲಿಸಿದ್ದಾರೆ.
ಮಂಗಳವಾರದಿಂದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟ ತಿಳಿಸಿದೆ. “ಇಂದಿನಿಂದ (ಮಂಗಳವಾರ) ನಾವು ಎಸ್‌ಐಆರ್‌ಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ಹಾಜರಾಗುತ್ತಿಲ್ಲ” ಎಂದು ಎಫ್‌ಇಆರ್‌ಎ ರಾಜ್ಯ ಸಂಯೋಜಕ ಎಂ.ಪಿ ಮುರುಗಯ್ಯನ್ ಹೇಳಿದ್ದಾರೆ.
ಎಸ್‌ಐಆರ್ ಸಂಬಂಧಿತ ಕೆಲಸಗಳನ್ನು ಮಾತ್ರ ಬಹಿಷ್ಕರಿಸಿದ್ದೇವೆ. ಕಂದಾಯ ಇಲಾಖೆಯ ನಿಯಮಿತ ಕೆಲಸಗಳು ಮುಂದುವರಿಯಲಿದ್ದು, ಪ್ರತಿಭಟನೆಯಿಂದ ಅದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುರುಗಯ್ಯನ್ ತಿಳಿಸಿದ್ದಾರೆ.
ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು, ಹೆಚ್ಚುವರಿ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಬೇಕು ಮತ್ತು ಬಿಎಲ್‌ಒ ಹಂತದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಎಸ್‌ಐಆರ್ ಬಹಿಷ್ಕಾರ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಮಧ್ಯರಾತ್ರಿಯವರೆಗೆ ಪರಿಶೀಲನಾ ಸಭೆಗಳನ್ನು ನಡೆಸುವುದನ್ನು ಮತ್ತು ಪರಿಶೀಲನೆಯ ಹೆಸರಿನಲ್ಲಿ ಪ್ರತಿದಿನ ಮೂರು ವಿಡಿಯೋ ಕಾನ್ಫರೆನ್ಸ್ ನಡೆಸುವುದನ್ನು ಒಕ್ಕೂಟ ವಿರೋಧಿಸಿದೆ.
ಡಿಸೆಂಬರ್ 4 ರಂದು ಮುಕ್ತಾಯಗೊಳ್ಳಲಿರುವ ಎಸ್‌ಐಆರ್ ಪ್ರಕ್ರಿಯೆಯ ಫಾರ್ಮ್‌ಗಳನ್ನು ವಿತರಿಸುವುದು ಮತ್ತು ಸಂಗ್ರಹಿಸುವುದು, ಅವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಮತ್ತು ಪರಿಶೀಲನಾ ಸಭೆಗಳನ್ನು ನಡೆಸುವುದನ್ನು ಕಂದಾಯ ಇಲಾಖೆಯ ಸಿಬ್ಬಂದಿಗೆ ವಹಿಸಲಾಗಿದೆ.


