ಕೊರೊನಾ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವ ತನ್ನ ಕಾರ್ಯತಂತ್ರವನ್ನು ತಮಿಳುನಾಡು ಸರ್ಕಾರ ಮುಂದುವರಿಸಿದೆ. ಶನಿವಾರ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆಗಳನ್ನು ಘೋಷಿಸಿದ್ದು, ಸಿನಿಮಾ ಥಿಯೇಟರ್‌ಗಳಿಗೆ 50% ಸಾಮರ್ಥ್ಯದಲ್ಲಿ ತೆರೆಯಲು ಅನುಮತಿ ನೀಡಲಾಗಿದೆ. ಸಿನಿಮಾ ಥಿಯೇಟರ್ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಥಿಯೇಟರ್‌ಗಳಿಗೆ ನಿರ್ದೇಶನ ನೀಡಲಾಗಿದೆ.
ಕೊರೊನಾ ಪ್ರೋಟೋಕಾಲ್‌ಗೆ ಅನುಸಾರವಾಗಿ ಸೆಪ್ಟೆಂಬರ್ ತಿಂಗಳಿನಿಂದ 9 ರಿಂದ 12 ನೇ ತರಗತಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಲು ಶಾಲೆಗಳು ಅನುಮೋದನೆ ಪಡೆದಿವೆ. ಶಾಲೆಗಳು ವಿದ್ಯಾರ್ಥಿಗಳಿಗೆ ಊಟದ ಯೋಜನೆಯಡಿಯಲ್ಲಿ ಆಹಾರವನ್ನು ನೀಡಬಹುದು ಎಂದು ಸರ್ಕಾರ ಹೇಳಿದೆ. 1 ನೇ ತರಗತಿಯಿಂದ 8 ನೇ ತರಗತಿಗಳಿಗೆ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಸೆಪ್ಟೆಂಬರ್ 15 ರ ನಂತರ ಸರ್ಕಾರ ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: ಕೊರೊನಾ ಮೂರನೇ ಅಲೆಯ ಭೀತಿ; ಸನ್ನದ್ಧವಾಗಿದೆಯೇ ಸರ್ಕಾರ?
ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳು ಸರ್ಕಾರವು ಅವರಿಗೆ ನೀಡುವ ಮಾರ್ಗಸೂಚಿಗಳ ಪ್ರಕಾರ ಸೆಪ್ಟೆಂಬರ್ 1 ರಿಂದ ಸರದಿ ಆಧಾರದ ಮೇಲೆ ತೆರೆಯಬಹುದು ಎಂದು ಸರ್ಕಾರ ಹೇಳಿದೆ. ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಥೆಗಳನ್ನು ಕೇಳಲಾಗಿದೆ.
ಪ್ರತಿ ಸಿಬ್ಬಂದಿಗಳೂ ಕೊರೊನಾ ಲಸಿಕೆ ಪಡೆದಿದ್ದರೆ ಬಾರ್, ಹೋಟೆಲ್ ಮತ್ತು ಕ್ಲಬ್‌ಗಳನ್ನು ತೆರೆಯಲು ಅನುಮೋದನೆ ನೀಡಲಾಗಿದೆ. ಬೀಚ್ ಸಾರ್ವಜನಿಕರಿಗೆ ತೆರೆಯಲಾಗಿದ್ದು, ಅಲ್ಲಿನ ಅಧಿಕಾರಿಗಳು, ವ್ಯಾಪಾರಸ್ಥರಿಗೆ ಲಸಿಕೆ ಪಡೆಯಲು ನಿರ್ದೇಶಿಸಲಾಗಿದೆ.
ಐಟಿ ಕಂಪನಿಗಳ ಕಚೇರಿಗಳು 100% ಸಿಬ್ಬಂದಿ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ.
ಸದ್ಯಕ್ಕೆ, ಈಜುಕೊಳಗಳು ಕ್ರೀಡಾ ತರಬೇತಿಗಾಗಿ ಮಾತ್ರ ತೆರೆಯಬಹುದು ಎಂದು ಸರ್ಕಾರ ಹೇಳಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ತರಬೇತಿ ಪಡೆಯುವವರು ಮತ್ತು ತರಬೇತುದಾರರು ಕೊರೊನಾ ಲಸಿಕೆಯನ್ನು ಪಡೆದಿರಬೇಕು ಎಂದು ತಿಳಿಸಿದೆ.
ಈ ಮೊದಲು ರಾತ್ರಿ 9 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿತ್ತು, ಈಗ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಬಹುದಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯಾಚರಣೆ ಪುನರಾರಂಭಿಸಲು ಆಂಧ್ರ ಪ್ರದೇಶ ಮತ್ತು ಕರ್ನಾಟಕಕ್ಕೆ ಬಸ್ ಸೇವೆಗಳಿಗೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: 3ನೇ ಅಲೆ ಆತಂಕ: ಸೆಪ್ಟೆಂಬರ್ ವೇಳೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣ 30 ಲಕ್ಷಕ್ಕೆ ಏರಿಕೆ


