ತೆರಿಗೆರಹಿತ ಹಾಲು ಮತ್ತು ಹಾಲು ಉತ್ಪನಗಳ ಆಮದಿಗೆ ಅವಕಾಶ ನೀಡುವ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಸಾವಿರಾರು ಮಂದಿ ಹಾಲು ಉತ್ಪಾದಕರು ಕೊರಟಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಒಪ್ಪಂದ ಜಾರಿ ಮಾಡಿದರೆ ದೇಶದ 10 ಕೋಟಿಗಿಂತ ಹೆಚ್ಚಿನ ಹಾಲು ಉತ್ಪಾದಕ ರೈತರು ಮತ್ತು ಕೃಷಿ ಕೂಲಿಕಾರ ಕುಟುಂಬಗಳು ಬೀದಿ ಪಾಲಾಗಲಿವೆ. ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಹಾಲು ಉತ್ಪಾದಕರಿದ್ದು ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಸಹಿ ಹಾಕಿದರೆ ಸಾವಿರಾರು ರೈತ ಕುಟುಂಬಗಳು ಸರ್ವನಾಶ ಆಗಲಿವೆ ಎಂದು ಪ್ರತಿಭಟನಾಕಾರರು ದೂರಿದರು.
ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳನ್ನು ತೃಪ್ತಿಪಡಿಸಲು ಈಗ ಇರುವ ಶೇಕಡ 64 ಆಮದು ಸುಂಕವನ್ನು ತೆಗೆಯುವ ಮೂಲಕ ಅಗ್ಗದ ವಿದೇಶಿ ಹಾಲು ಮತ್ತು ಹಾಲು ಉತ್ಪನ್ನಗಳು ಯಥೇಚ್ಛವಾಗಿ ದೇಶದ ಒಳಗೆ ಬರಲು ಅವಕಾಶ ಮಾಡಿಕೊಡುವುದು ರೈತ ವಿರೋಧಿಯಾಗಿದೆ. ಕೂಡಲೇ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತನ್ನ ಉತ್ಪಾದನೆಯ ಶೇಕಡ 93ರಷ್ಟು ಹಾಲನ್ನು ರಫ್ತು ಮಾಡುವ ನ್ಯೂಜಿಲ್ಯಾಂಡ್ ದೇಶದಲ್ಲಿ ಮಾರಾಟ ಮಾಡುವ ನಮ್ಮ ಹಾಲಿನ ಶೇಕಡ 50ಕ್ಕಿಂತ ಕಡಿಮೆ ದರದಲ್ಲಿ ನಮ್ಮಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಗಳನ್ನು ಮಾರಾಟ ಮಾಡಲು ಸಿದ್ದವಾಗಿ ನಿಂತಿದೆ. ಇಂತಹದ್ದರಲ್ಲಿ ಇನ್ನೂ ಹಲವು ದೇಶಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಹಾಕಿ ದೇಶಿಯ ಉತ್ಪಾದನೆಯನ್ನು ನಾಶ ಮಾಡಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆಯಲು ಹವಣಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.


