ತೆಲಂಗಾಣದ ವಾರಂಗಲ್‌ನಲ್ಲಿ ರ್‍ಯಾಗಿಂಗ್‌ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಸ್ನಾತಕೋತ್ತರ ವೈದ್ಯಕೀಯ ದಲಿತ ವಿದ್ಯಾರ್ಥಿನಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಧಾರಾವತ್ ಪ್ರೀತಿ ಅವರು ಫೆಬ್ರವರಿ 22 ರಂದು ಕರ್ತವ್ಯದಲ್ಲಿದ್ದಾಗ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಪ್ರೀತಿಯವರು ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಡಿ ಅರಿವಳಿಕೆ ವಿದ್ಯಾರ್ಥಿಯಾಗಿದ್ದು, ಆಕೆಯ ಸೀನಿಯರ್ ಮೊಹಮ್ಮದ್ ಸೈಫ್ ಕಿರುಕುಳ ನೀಡುತ್ತಿದ್ದರು ಎಂದು ವರದಿಯಾಗಿದೆ. ಫೆಬ್ರವರಿ 24ರಂದು ಸೈಫ್‌ನನ್ನು ಬಂಧಿಸಲಾಗಿದೆ.
ಬಂಧನದ ನಂತರ ವಾರಂಗಲ್ ಪೊಲೀಸ್ ಕಮಿಷನರ್ ಎ.ವಿ.ರಂಗನಾಥ್ ಪ್ರತಿಕ್ರಿಯಿಸಿ, “ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳು, ಪ್ರೀತಿ ಮತ್ತು ಸೈಫ್ ನಡುವಿನ ವೈಯಕ್ತಿಕ ಚಾಟ್‌ಗಳು ರ್‍ಯಾಗಿಂಗ್ ಪ್ರಕರಣವನ್ನು ಸೂಚಿಸುತ್ತವೆ” ಎಂದಿದ್ದಾರೆ.
26-yr-old medico PG student #DharavathPreethi died last night at #Hyderabad #NIMS where she was brought critical from #MGM Hospital #Warangal; 2nd year PG student Md Ali Saif was arrested for allegedly ragging her, abetting suicide & under SC/ ST atrocities law @ndtv @ndtvindia pic.twitter.com/n6YBwHpwdS
— Uma Sudhir (@umasudhir) February 27, 2023
ಆತ್ಮಹತ್ಯೆಗೆ ಪ್ರಚೋದನೆ, ರ್‍ಯಾಗಿಂಗ್‌ಗೆ ಸಂಬಂಧಿಸಿದ ಸೆಕ್ಷನ್‌ಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೈದ್ರಾಬಾದ್‌ನಲ್ಲಿನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರೀತಿಯವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸಾವಿನ ವಿಷಯ ಹೊರಬಿದ್ದ ಬಳಿಕ ಇಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ಭಾನುವಾರ ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆಗಾಗಿ ಪ್ರೀತಿಯವರ ಮೃತದೇಹವನ್ನು ಅಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದಾಗ ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
“ಕಳೆದ ನಾಲ್ಕು ದಿನಗಳಲ್ಲಿ ನನ್ನ ಮಗಳಿಗೆ ಯಾವ ಚಿಕಿತ್ಸೆ ನೀಡಲಾಗಿದೆ ಎಂಬುದರ ಕುರಿತು ವಿವರವಾದ ವರದಿಯನ್ನು ನೀಡಬೇಕು” ಎಂದು ಪ್ರೀತಿಯವರ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿರಿ: ದಲಿತ ಕುಟುಂಬಕ್ಕೆ ಬೆದರಿಕೆ; ಸ್ವಘೋಷಿತ ದೇವಮಾನವನ ಸಹೋದರನ ವಿರುದ್ಧ ಎಫ್‌ಐಆರ್
5 ಕೋಟಿ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತೆಲಂಗಾಣ ಆರೋಗ್ಯ ಸಚಿವ ಟಿ ಹರೀಶ್ ರಾವ್ ಅವರು ಪ್ರೀತಿಯವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
“ನಿಮ್ಸ್‌ನ ವೈದ್ಯಕೀಯ ತಂಡವು ಪ್ರೀತಿಯವರನ್ನು ಉಳಿಸಲು ದಣಿವರಿಯದೆ ಕೆಲಸ ಮಾಡಿದೆ. ಡಾ.ಪ್ರೀತಿ ಸಂಪೂರ್ಣವಾಗಿ ಗುಣಮುಖರಾಗಿ ಹಿಂತಿರುಗುತ್ತಾರೆಂದು ನಾವು ಭಾವಿಸಿದ್ದೆವು. ಆದರೆ ಅವರು ಹಿಂತಿರುಗದ ಲೋಕಕ್ಕೆ ಹೋದರು” ಎಂದು ಹರೀಶ್ ರಾವ್ ಪ್ರತಿಕ್ರಿಯಿಸಿದ್ದಾರೆ.
10 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಪಂಚಾಯತ್ ರಾಜ್ ಸಚಿವ ಎರ್ರಬೆಳ್ಳಿ ದಯಾಕರ್ ರಾವ್ ಮಾಹಿತಿ ನೀಡಿದ್ದಾರೆ.


