‘ಡೇಟಾ ಪ್ರೊಟೆಕ್ಷನ್ ಮಸೂದೆ’ ಜಾರಿಗೆ ಬರುವ ತನಕ ತಾತ್ಕಾಲಿಕವಾಗಿ ಗೌಪ್ಯತಾ ನೀತಿಯನ್ನು ತಡೆಹಿಡಿಯಲು ನಿರ್ಧರಿಸಿದೆ ಎಂದು ವಾಟ್ಸಪ್ ಶುಕ್ರವಾರ ತನ್ನ ಗೌಪ್ಯತಾ ನೀತಿಯ ಬಗ್ಗೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ವಾಟ್ಸಪ್‌ನ ಹೊಸ ಗೌಪ್ಯತಾ ನೀತಿಯು, ವಾಟ್ಸಪ್‌ನಲ್ಲಿ ನಾವು ನಡೆಸಿದ ಕೆಲವು ಸಂಭಾಷಣೆಗಳನ್ನು ಫೇಸ್‌ಬುಕ್‌ನಲ್ಲಿ ಜಾಹಿರಾತಿಗೆ ಬಳಸಲು ಅನುಮತಿ ನೀಡುತ್ತದೆ.
ಏಕ ನ್ಯಾಯಾಧೀಶರ ಆದೇಶದ ವಿರುದ್ಧ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠ ಫೇಸ್‌ಬುಕ್ ಮತ್ತು ವಾಟ್ಸಾಪ್ ಮೇಲ್ಮನವಿ ವಿಚಾರಣೆ ನಡೆಸಿತು. ಏಕ ನ್ಯಾಯಾಧೀಶರ ಪೀಠವು, ವಾಟ್ಸಾಪ್‌ನ ಹೊಸ ನೀತಿಯ ಬಗ್ಗೆ ತನಿಖೆ ನಡೆಸಲು ನಿರ್ದೇಶಿಸುವ ಭಾರತದ ‘ನಿಯಂತ್ರಕ ಸ್ಪರ್ಧಾ ಆಯೋಗ’ (ಸಿಸಿಐ)ದ ಆದೇಶವನ್ನು ತಡೆಹಿಡಿಯಲು ನಿರಾಕರಿಸಿತ್ತು.
ವಾಟ್ಸಾಪ್ ಪರವಾಗಿ ಹಾಜರಾದ ವಕೀಲ ಹರೀಶ್ ಸಾಲ್ವೆ ಅವರು “ಹೊಸ ಗೌಪ್ಯತಾ ನೀತಿಯನ್ನು ಸ್ಥಗಿತಗೊಳಿಸಲು ಸರ್ಕಾರ ಕೇಳಿ ಕೊಂಡಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಾಟ್ಸಪ್ ಹೊಸ ಗೌಪ್ಯತಾ ನೀತಿ ವಿವಾದ – ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿದ ಸರ್ಕಾರ
‘ಡೇಟಾ ಸಂರಕ್ಷಣಾ ಮಸೂದೆ’ ಬರುವವರೆಗೆ ನಾವು ಹೊಸ ಗೌಪ್ಯತಾ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದೇವೆ. ಮಸೂದೆಯು ಯಾವಾಗ ಹೊರಬರುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ಇದನ್ನು ಸ್ವಲ್ಪ ಸಮಯದವರೆಗೆ ಮಾಡುವುದಿಲ್ಲ ಎಂದು ಹರೀಶ್ ನ್ಯಾಯಾಲಯಕ್ಕೆ ಹೇಳಿದ್ದಾರೆ.
“ನಾವು ಹೊಸ ಗೌಪ್ಯತಾ ನೀತಿಯನ್ನು ತಡೆಹಿಡಿಯಲು ಸ್ವಯಂಪ್ರೇರಣೆಯಿಂದ ಒಪ್ಪಿದ್ದೇವೆ. ಅದನ್ನು ಒಪ್ಪಿಕೊಳ್ಳಲೆ ಬೇಕು ಎಂದು ಬಳಕೆದಾದರನ್ನು ಒತ್ತಾಯಿಸುವುದಿಲ್ಲ” ಎಂದು ಹರೀಶ್ ಸಾಲ್ವೆ ವಾಟ್ಸಪ್ ಪರವಾಗಿ ಹೇಳಿದ್ದಾರೆ.
ಭಾರತದಲ್ಲಿ 53 ಕೋಟಿ ಬಳಕೆದಾರರನ್ನು ವಾಟ್ಸ್‌ಪ್ ಹೊಂದಿದ್ದು, ಅದು ತನ್ನ ಬಳಕೆದಾರರ ಡೇಟಾವನ್ನು ತನ್ನ ಮಾತೃಸಂಸ್ಥೆ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುತ್ತಿದೆ ಎಂಬ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದರು. ಇದರಿಂದಾಗಿ ಹೊಸ ಗೌಪ್ಯತಾ ನೀತಿಯನ್ನು ಪರಿಚಯಿಸಿದ ನಂತರ ವಾಟ್ಸಪ್ ತೀವ್ರ ಹಿನ್ನಡೆ ಅನುಭವಿಸಿತ್ತು. ಹಲವಾರು ಬಳಕೆದಾರರು ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಅಪ್ಲಿಕೇಶನ್‌ಗಳಿಗೆ ತೆರಳಿದ್ದರು.
ಈ ಹಿಂದೆ ಆಪ್ ಬಳಸಬೇಕೆಂದರೆ ತನ್ನ ಹೊಸ ನೀತಿಯನ್ನು ಕಡ್ಡಾಯವಾಗಿ ಒಪ್ಪಿಕೊಳ್ಳಬೇಕು ಎಂದು ವಾಟ್ಸಪ್ ಹೇಳಿತ್ತು. ಆದರೆ ನಂತರ ಅದರಿಂದ ಹಿಂದೆ ಸರಿದಿತ್ತು. ಆದರೆ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳುವಂತೆ ಅದು ನೋಟಿಫಿಕೇಷನ್ ಕಳುಹಿಸುತ್ತಲೆ ಇದೆ.
ಈ ನೋಟಿಫಿಕೇಷನ್ ವಿರುದ್ದ ಸರ್ಕಾರವು ಹೊಸ ಅಫಿಡವಿಟ್ ಕೂಡಾ ಸಲ್ಲಿಸಿತ್ತು. ವಾಟ್ಸಪ್ ಕುತಂತ್ರದಿಂದ ತನ್ನ ಗೌಪ್ಯತಾ ನೀತಿಗೆ ಒಪ್ಪಿಗೆ ಪಡೆಯುತ್ತಿದೆ ಎಂದು ಸರ್ಕಾರ ಹೇಳಿತ್ತು.
ಇದನ್ನೂ ಓದಿ: ಹೊಸ ಗೌಪ್ಯತಾ ನೀತಿಗೆ ಕುತಂತ್ರದಿಂದ ಒಪ್ಪಿಗೆ ಪಡೆಯುತ್ತಿದೆ: ಕೇಂದ್ರದಿಂದ ವಾಟ್ಸಪ್ ವಿರುದ್ದ ಹೊಸ ಅಫಿಡವಿಟ್


