(ಇದು ಹೊಸಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಿ ಬರೆಯಲಾಗಿದೆ)

ಪೀಠಿಕೆ

ಇತ್ತೀಚಿನ ಮೂರು ಘಟನೆಗಳು

1. 4, ಜುಲೈ 2020ರಂದು ಆರ್‌ಎಸ್‌ಎಸ್‌ನ ’ರಾಶ್ಟ್ರೀಯ ಮುಸ್ಲಿಂ ಮಂಚ್’ (ಇದು ಏನು, ಎಂತ, ಎತ್ತ, ಹೇಗೆ ಸಾದ್ಯ ಅಂತೆಲ್ಲ ಕೇಳಬೇಡಿ) ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಸರಸಂಚಾಲಕ ಮೋಹನ ಭಾಗವತ್ ’ಎಲ್ಲಾ ಭಾರತೀಯರ ಡಿಎನ್‌ಎ ಒಂದೇ… ಅಲ್ಪಸಂಖ್ಯಾತರ ಗುಂಪು ಹತ್ಯೆ ಹಿಂದುತ್ವಕ್ಕೆ ವಿರೋದವಾಗಿದೆ… ಮುಸ್ಲಿಂರು ಇಲ್ಲಿರಬಾರದು ಎನ್ನುವವನು ಹಿಂದೂವಲ್ಲ..’ ಎಂದೆಲ್ಲ ಹೇಳಿದ್ದಾರೆ

2. PEW ಎನ್ನುವ ಸಂಸ್ಥೆಯು ದಕ್ಷಿಣ, ಉತ್ತರ, ಮದ್ಯ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಭಾರತದ ಅಂದಾಜು 30,000 ಸ್ಯಾಂಪಲ್ ಪ್ರಜೆಗಳನ್ನು ಮಾತನಾಡಿಸಿ ದರ್ಮ, ಜಾತಿ, ಆಹಾರ ಇತ್ಯಾದಿಗಳ ಕುರಿತು ಸಮೀಕ್ಷೆ ನಡೆಸಿದೆ. ಮತ್ತು ಅದರ ವರದಿಯೂ ಪ್ರಕಟಗೊಂಡು ಚರ್ಚೆಗೆ ಗ್ರಾಸವಾಗಿದೆ. ನಿರೀಕ್ಷೆಯಂತೆ ಸಂದರ್ಶನಕ್ಕೆ ಪ್ರತಿಕ್ರಿಯಿಸಿದ ಬಹುತೇಕ ಭಾರತೀಯರು ಆಳದಲ್ಲಿ ತಾವು ದಾರ್ಮಿಕರು, ವೈಯುಕ್ತಿಕವಾಗಿ ತಮಗೆ ದರ್ಮ ಮುಖ್ಯ ಎಂದು ಹೇಳಿದ್ದಾರೆ. ದಕ್ಷಿಣ ಭಾರತವನ್ನು ಹೊರತುಪಡಿಸಿ ಮಿಕ್ಕ ಭಾಗದ ಭಾರತೀಯರು ನನ್ನ ದರ್ಮವೇ ನಿಜವಾದ ದರ್ಮ, ತಮ್ಮ ದರ್ಮದ ಮಹಿಳೆಯರು ಅನ್ಯ ದರ್ಮದ ಪುರುಶರನ್ನು ಮದುವೆಯಾಗದಂತೆ ತಡೆಯುವುದು ತಮಗೆ ಮುಖ್ಯವಾಗುತ್ತದೆ, ಭೀಫ್ ತಿನ್ನುವ ಹಿಂದೂ ಎಂದಿಗೂ ಹಿಂದೂವಲ್ಲ, ಭಾರತೀಯನಾಗಿರಬೇಕೆಂದರೆ ಹಿಂದೂವಾಗಿರುವುದು ಮುಖ್ಯ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ಕಳೆದ ನಲವತ್ತು ವರ್ಶಗಳ ಭಾರತದಲ್ಲಿನ ವಿದ್ಯಾಮಾನ ಅವಲೋಕಿಸಿದಾಗ ದರ್ಮ, ಆಹಾರವು ಮತೀಯವಾದಿಗಳ ಕೈಲಿ ಆಟಿಕೆಯಾಗಿರುವುದು ಮತ್ತು ಶೋಷಿತ ಸಮುದಾಯಗಳು, ಮುಸ್ಲಿಂರಿಗೆ
ಪ್ರಾಣಸಂಕಟವಾಗಿರುವುದು ದಿನನಿತ್ಯದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಬಹುಸಂಖ್ಯಾತ ಹಿಂದೂಗಳ ’ಆಳದಲ್ಲಿ ದಾರ್ಮಿಕನಾಗಿರುವುದು ಮತಾಂದತೆಯಲ್ಲ’ ಎನ್ನುವ ಮಾತು ಎಶ್ಟೊಂದು ಟೊಳ್ಳೆಂಬುದು ಸ್ಪಶ್ಟವಾಗಿ ಗೊತ್ತಾಗುತ್ತದೆ. ಸ್ವದರ್ಮ, ಸ್ವಜಾತಿ ಕುರಿತಾದ ಅಬಿಮಾನವು ಇಂದು ದುರಬಿಮಾನವಾಗಿರುವುದನ್ನು ಈ ಸಮೀಕ್ಷೆಯ ಫಲಿತಾಂಶವು ಪ್ರಚುರಪಡಿಸುತ್ತಿದೆ. (ಆದರೆ ಪರಿಣಿತರು ಇದರ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. 30,000 ಸ್ಯಾಂಪಲ್ ಗಾತ್ರವು ಸಮಗ್ರವಾದ ಅಬಿಮತವನ್ನು ಬಿಂಬಿಸುವುದಿಲ್ಲ ಮತ್ತು ಕನಿಶ್ಟ 1 ಲಕ್ಷಕ್ಕೂ ಅದಿಕ ಜನಸಂಖ್ಯೆಯ ಜೊತೆ ಸಂದರ್ಶನ ನಡೆಸಬೇಕು ಎಂದಿದ್ದಾರೆ. ಇದನ್ನು ಒಪ್ಪಿಕೊಂಡರೂ ಸಹ, 1 ಲಕ್ಷ ಜನರ ಸಮೀಕ್ಷೆ ನಡೆಸಿದರೂ ಈಗಿನ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂಬುದು ವಾಸ್ತವ)

3. ಮಾನವ ಹಕ್ಕುಗಳ ಹೋರಾಟಗಾರ 84 ವರ್ಶದ ಸ್ಟಾನ್ ಸ್ವಾಮಿಯವರನ್ನು 20, ಅಕ್ಟೋಬರ್ 2020ರಂದು
ಯುಎಪಿಎ ಎಂಬ ಕರಾಳ ಶಾಸನದ ಅಡಿಯಲ್ಲಿ ಬಂದಿಸಲಾಯಿತು. ಒಂಬತ್ತು ತಿಂಗಳ ನಂತರವೂ ಪ್ರಬುತ್ವಕ್ಕೆ ಅವರ ವಿರುದ್ದದ ಆರೋಪಗಳಿಗೆ ಯಾವುದೇ ಸಾಕ್ಷಿಗಳನ್ನು ಸಾಬೀತುಪಡಿಸಲಾಗಲಿಲ್ಲ, ಆದರೆ ಅವರ ಆರೋಗ್ಯ ಹದಗೆಡುತ್ತಿತ್ತು, ನ್ಯಾಯಾಂಗವು ನಿರೀಕ್ಷಣಾ ಜಾಮೀನು ಕೊಡಲು ನಿರಾಕರಿಸುತ್ತಿತ್ತು. ಮತ್ತು ಕಡೆಗೆ 5, ಜುಲೈ 2021ರಂದು ನ್ಯಾಯಾಂಗ ಬಂದನದಲ್ಲಿದ್ದಾಗಲೇ ನಿದನರಾದರು. ಕಳೆದ ಎರಡು ವರ್ಶಗಳಿಂದ ಇನ್ನೂ 15 ಜನ ಮಾನವ ಹಕ್ಕುಗಳ ಹೋರಾಟಗಾರರು, ಚಿಂತಕರು, ನ್ಯಾಯವಾದಿಗಳು ಬಯೋತ್ಪಾದನೆಯ ಆರೋಪದಡಿ ಬಂದನದಲ್ಲಿದ್ದಾರೆ.

PC : Outlook India

ಮೊದಲನೇ ಘಟನೆಯಲ್ಲಿನ ಮೋಹನ್ ಭಾಗವತ್‌ರ ನಿಲುವನ್ನು ಆದರಿಸಿ ಎರಡನೇ ಘಟನೆಗೆ ಆರ್‌ಎಸ್‌ಎಸ್ ಕಾರಣವಲ್ಲವೆಂದು ಯಾರು ಹೇಳಬಹುದು? ಊಹೆ ಕಶ್ಟವೇ? ಇದನ್ನೂ ಸಹ ಸಮೀಕ್ಷೆ ಮಾಡಬೇಕೇನೋ? ಆದರೆ ಮೂರನೇ ಘಟನೆ ಮುಂದಿನ ದಿನಗಳಲ್ಲಿ ಸಾಮಾನ್ಯವಾಗುತ್ತಾ ಹೋಗುತ್ತದೆ ಎಂದರೆ ಅದನ್ನು ಖಚಿತಪಡಿಸಲು ಯಾವುದೇ ಸಮೀಕ್ಷೆಯ ಅಗತ್ಯವಿಲ್ಲ.

ವರ್ತಮಾನ ಮತ್ತು ಭೂತಕಾಲಗಳ ಟಕ್ಕಾಟಿಕ್ಕಿ

(ಘಟನೆ ಎರಡರಲ್ಲಿ ದಕ್ಷಿಣ ಭಾರತೀಯರು ಕೊಂಚ ಲಿಬರಲ್‌ಗಳಂತೆ ಕಂಡುಬರುತ್ತಾರೆ ಆದರೆ ಇದು ನಿಜಕ್ಕೂ ಕಣ್ಣೋಟವೇ ಅಥವಾ ಕಣ್ಕಟ್ಟೇ ಎನ್ನುವ ಅನುಮಾನವಂತೂ ಕಾಡುತ್ತಿದೆ. ಅತ್ಯದಿಕ ಪ್ರಮಾಣದಲ್ಲಿರುವ ಇಲ್ಲಿನ ಮರ್ಯಾದೆಗೇಡು ಜಾತಿ ಹತ್ಯೆಗಳು ನಾವು ಲಿಬರಲ್ ಎನ್ನುವುದನ್ನೇ ಅಣಕಿಸುವಂತಿದೆ) ಇತ್ತೀಚಿನ ವರ್ಶಗಳಲ್ಲಿ ದಾರ್ಮಿಕತೆ ಆದರಿಸಿದ ರಾಶ್ಟ್ರೀಯವಾದ ಮತ್ತು ಅದರ ಭಾಗವಾಗಿರುವ ಬಹುಸಂಖ್ಯಾತವಾದವು ಪ್ರಜಾಪ್ರಬುತ್ವದ ಎಲ್ಲಾ ಆಶಯಗಳೊಂದಿಗೆ ಸಂಘರ್ಶ ನಡೆಸುತ್ತಿದೆ. ಇದು ಕೇವಲ ದಾರ್ಮಿಕ ಅಲ್ಪಸಂಖ್ಯಾತರ ವಿರುದ್ದ ಮಾತ್ರವಲ್ಲ ತನ್ನ ಸಿದ್ದಾಂತ ವಿರೋದಿಗಳೆಲ್ಲರನ್ನೂ ಸದೆಬಡಿಯಲು ಮುನ್ನುಗ್ಗುತ್ತಿರುತ್ತದೆ. ಮುಸ್ಲಿಂರ ವಿರುದ್ದ ಶುರುವಾಗುವ ಈ ಅಸಹಿಶ್ಣತೆ ಶೋಷಿತ ಸಮುದಾಯಗಳ ಮೇಲೆ ಹಲ್ಲೆ, ದೌರ್ಜನ್ಯಗಳನ್ನು ಶಾಶ್ವತಗೊಳಿಸುತ್ತಾ ಇದನ್ನು ವಿರೋದಿಸುವ ಪ್ರಜ್ಞಾವಂತರನ್ನು ಒಳಗಿನ ಶತ್ರುಗಳನ್ನಾಗಿ ಸೃಶ್ಟಿಸುತ್ತದೆ. ಇವರಿಗೆ ನಗರ ನಕ್ಸಲರು, ದೇಶವಿರೋದಿಗಳು, ಟುಕ್ಡೆ ಟುಕ್ಡೆ ಗ್ಯಾಂಗ್ ಅಂತೆಲ್ಲಾ ಹಣೆಪಟ್ಟಿ ಹಚ್ಚಲಾಗುತ್ತದೆ. ಘಟನೆ ಎರಡು ಅದರ ತೀವ್ರತೆ ಪಡೆದುಕೊಂಡಾಗ ಘಟನೆ ಮೂರು ಸಂಬವಿಸುತ್ತದೆ. ಇದು ’ದೇಶವೆಂದರೆ ಹಿಂದೂ ಸಮಾಜ’ವೆಂಬ ಸಿದ್ದಾಂತವನ್ನು ಬಿತ್ತಿ ಬೆಳೆಸಲು ಆರ್‌ಎಸ್‌ಎಸ್‌ನ ಎಂಬತ್ತು ವರ್ಶಗಳ ಪರಿಶ್ರಮದ ಪರಿಣಾಮ ಎಂದರೆ ಅದು ದೇಶದ್ರೋಹವಂತೂ ಅಲ್ಲ. ಮತ್ತು ಮೊದಲನೆ ಘಟನೆಗೂ ಎರಡನೇ ಘಟನೆಗೂ ನಡುವಿನ ಸಂಬಂದಗಳನ್ನು ಅರ್ಥೈಸಲು ಇದು ನೆರವಿಗೆ ಬರುತ್ತದೆ.

ಅದಿಕಾರವನ್ನು ಚಲಾಯಿಸುವ ಕ್ಷತ್ರಿಯ ರಾಜ ಬ್ರಾಹ್ಮಣರ ಪುರೋಹಿತಶಾಹಿಯ ಮೇಲೆ ಅವಲಂಬಿತನಾಗುವ ಭಾರತದ ಇತಿಹಾಸವು 21ನೇ ಶತಮಾನದ ಆರೆಸ್ಸಸ್-ಮೋದಿ ಜುಗಲ್‌ಬಂದಿಯಲ್ಲಿ ಮತ್ತೆ ಪುನರಾವರ್ತನೆಯಾಗಿದೆ. ಪ್ರೊ.ಮಿಲನ್ ಅವರು ’ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇಲ್ಲಿನ ಸಂವಿದಾನವು ಪಶ್ಚಿಮ ದೇಶಗಳಂತೆ ಚರ್ಚು-ಪ್ರಬುತ್ವ ನಡುವಿನ ಕಡ್ಡಾಯ ಬೇರ್ಪಡೆಯನ್ನು ಅನುಸರಿಸಲಿಲ್ಲ. ಬದಲಿಗೆ ದರ್ಮ-ಪ್ರಬುತ್ವದ ನಡುವೆ ತತ್ವಾದಾರಿತ ಅಂತರವನ್ನು ಕಾಯ್ದುಕೊಳ್ಳಬೇಕೆಂದು ನಿರ್ದರಿಸಲಾಯಿತು’ ಎಂದು ಹೇಳುತ್ತಾರೆ. ಇದರ ಕಾರಣಕ್ಕೆ ದರ್ಮ ನಿರಪೇಕ್ಷತೆ ಎನ್ನುವದು ವಿಬಿನ್ನ ದರ್ಮದವರ ದಾರ್ಮಿಕ ಬಾವನೆಗಳನ್ನು ನೋಯಿಸಬಾರದು ಎಂದು ರೂಪಾಂತರಗೊಂಡು ಇಂದು ಮೋದಿ ಆಡಳಿತದಲ್ಲಿ ಹಿಂದೂ ದರ್ಮದವರ ಬಾವನೆಯನ್ನು ಕೆಣಕಬೇಡಿ ಎನ್ನುವಲ್ಲಿಗೆ ಬಂದು ತಲುಪಿದೆ. ಸ್ವಾತಂತ್ರ್ಯ ನಂತರದ 50-60ರ ದಶಕದ ಚಿಂತಕ-ರಾಜಕಾರಣಿಗಳ ’ಭಾರತದ ವಿವೇಕ’ ಎನ್ನುವ ಪರಿಕಲ್ಪನೆ ಆ ಕಾಲದ ಸೆಕ್ಯುಲರ್ ಸಮಾಜವನ್ನು ರೂಪಿಸಲು ಕಾರಣವಾಗಿದ್ದು ನಿಜ. ಇಲ್ಲಿ ಮಿತಿಗಳಿದ್ದವು ಆದರೆ ಅದನ್ನು ಮೀರಿಕೊಳ್ಳುವ ಕನಸುಗಳಿದ್ದವು. ಆದರೆ ಆರ್‌ಎಸ್‌ಎಸ್ ಸಂಘಟನೆ-ಭಾರತದ ಜಾತಿ ಸಮಾಜದ ಜೋಡಿ ರಾಜಕಾರಣವು ಎಲ್ಲವನ್ನೂ ಬದಲಿಸಿಬಿಟ್ಟಿತು. ಈ ಎಲ್ಲಾ ಹಿನ್ನಲೆಯಲ್ಲಿ ಭಾರತದ ಸೌಹಾರ್ದತೆ, ಸಹಿಶ್ಣತೆಯನ್ನು ವಿವರಿಸಿದ ನೆಹರೂ ಅವರ ’ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವು ಈ ಶತಮಾನದ ಚಾರಿತ್ರಿಕ ವ್ಯಂಗ್ಯದಂತೆ ಕಂಡರೆ ಅತ್ತ ಆರ್‌ಎಸ್‌ಎಸ್ ಗಹಗಹಿಸಿ ನಗುತ್ತಿದೆ. ಮತ್ತು ಮೋಹನ್ ಭಾಗವತ್ ಮೊದಲನೇ ಘಟನೆಯಲ್ಲಿ ಆತ್ಮವಂಚನೆಯಿಂದ ಮಾತನಾಡಿಯೂ ಎರಡನೇ ಘಟನೆಯನ್ನು ಎದೆ ತಟ್ಟಿಕೊಂಡು ಸಮರ್ಥಿಸಿಕೊಳ್ಳಬಲ್ಲರು.

ಫ್ರೊ. ಸ್ಟೆನ್ ವಿಡ್ಮಾಲಂ ಅವರು ಹೇಳಿದಂತೆ 2009-2014 ಕಾಲಘಟ್ಟದಲ್ಲಿಯೆ ಪ್ರಜಾಪ್ರಬುತ್ವದ ಕುಸಿತದ ಆರಂಬದ ಲಕ್ಷಣಗಳು ಶುರುವಾದವು. ಮೋದಿಯಂತಹ ನಿರಂಕುಶ ಮನಸ್ಥಿತಿಯ ರಾಜಕಾರಣಿಗೆ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗೆ ದೇಶವನ್ನ ದ್ವಂಸಗೊಳಿಸಲು ಆ 2009-14 ಕಾಲದ ಯುಪಿಎ2 ಆಡಳಿತ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತು. ಪ್ರಜಾಪ್ರಬುತ್ವದ ವೈವಿದ್ಯತೆ (ವಿ-ಡೆಮ್)ನ ಯೋಜನೆಯ ಸಮೀಕ್ಷೆಯು 0-1 ಸೂಚ್ಯಂಕ ಕ್ರಮದಲ್ಲಿ 1947-2017ರವರೆಗಿನ ಎಪ್ಪತ್ತು ವರ್ಶಗಳ ಬಾರತದ ಲಿಬರಲ್ ಪ್ರಜಾಪ್ರಬುತ್ವದ ಕಥನವನ್ನ ವಿವರಿಸುತ್ತದೆ. (ಇದರ ವಿವರಗಳಿಗೆ 6/4/2019ರ ವೈರ್.ಇನ್ ಲೇಖನ) ಮಾನವ ಹಕ್ಕುಗಳು, ಅಬಿವ್ಯಕ್ತಿ ಸ್ವಾತಂತ್ರ್ಯ, ಕಾನೂನು ಪಾಲನೆ, ನ್ಯಾಯಾಂಗದ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಸ್ವಾತಂತ್ರ್ಯ ಮತ್ತು ಚುನಾವಣ ಪ್ರಜಾಪ್ರಬುತ್ವಗಳ ವಲಯಗಳಲ್ಲಿ ಲಿಬರಲ್ ಪ್ರಜಾಪ್ರಬುತ್ವದ ಸೂಚ್ಯಂಕವು 1950-60ರ ದಶಕಗಳಲ್ಲಿ 0.55 ಮಟ್ಟದಲ್ಲಿತ್ತು. ಆದರೆ 1977ರ ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ 0.28 ಮಟ್ಟಕ್ಕೆ ಕುಸಿಯಿತು. ಮರಳಿ 1990-2001ರ ಅವದಿಯಲ್ಲಿ 0.60 ಸೂಚ್ಯಂಕಕ್ಕೆ ಏರಿಕೆ ಕಂಡಿತು. ಆದರೆ 2017ರ ಹೊತ್ತಿಗೆ ಮರಳಿ 0.40 ಸೂಚ್ಯಂಕಕ್ಕೆ ಕುಸಿದಿದೆ. (2021ರಲ್ಲಿ ಈ ಸಮೀಕ್ಷೆ ಮಾಡಿದರೆ ಈ ಸೂಚ್ಯಂಕವು 0.20 ಮಟ್ಟಕ್ಕೆ ಕುಸಿಯುತ್ತದೆ) ಅಬಿವ್ಯಕ್ತಿ ಸ್ವಾತಂತ್ರ್ಯದ ಸೂಚ್ಯಂಕವು 2004ರಲ್ಲಿ 0.85 ಮಟ್ಟದಲ್ಲಿದ್ದರೆ 2017ರಲ್ಲಿ ಅದು 0.40 ಮಟ್ಟಕ್ಕೆ ಕುಸಿದಿದೆ. (2021ರಲ್ಲಿ ಈ ಸಮೀಕ್ಷೆ ಮಾಡಿದರೆ ಈ ಸೂಚ್ಯಂಕವು 0.2 ಮಟ್ಟಕ್ಕೆ ಕುಸಿಯುತ್ತದೆ). 2004ರಲ್ಲಿ ದಾರ್ಮಿಕ ಸ್ವಾತಂತ್ರ್ಯದ ಸೂಚ್ಯಂಕವು 0.8 ಮಟ್ಟದಲ್ಲಿದ್ದರೆ 2017ಕ್ಕೆ 0.55 ಕ್ರಮಾಂಕಕ್ಕೆ ಕುಸಿದಿದೆ. ದಾರ್ಮಿಕ ಸಂಘಟನೆಗಳ ಪ್ರಾತಿನಿದ್ಯವನ್ನ ಕಾಪಾಡುವ ನಿಟ್ಟಿನಲ್ಲಿ 2004ರಲ್ಲಿ ಸೂಚ್ಯಂಕವು 0.9 ಮಟ್ಟದಲ್ಲಿದ್ದರೆ 2017ರ ಮೋದಿ ಆಡಳಿತದಲ್ಲಿ 0.65 ಸೂಚ್ಯಂಕಕ್ಕೆ ಕುಸಿದಿದೆ. ಈ ಎಲ್ಲ ಸಮೀಕ್ಷೆಗಳು ಕಳೆದ ಹತ್ತು ವರ್ಶಗಳಲ್ಲಿ ಪ್ರಜಾಪ್ರಬುತ್ವವು ಹಂತ ಹಂತವಾಗಿ ತನ್ನ ಆಸ್ತಿತ್ವವನ್ನ ಕಳೆದುಕೊಳ್ಳುತ್ತ ಬಂದಿರುವುದನ್ನ ಸೂಚಿಸುತ್ತವೆ.

ಈ ಅಂಕಿಅಂಶಗಳಿಗೂ ಎರಡನೇ ಘಟನೆಗೂ ನೇರಾನೇರ ಸಂಬಂದವಿದೆ. ಮತ್ತು ಇದು ಹೀಗೆಯೇ ಮುಂದುವರೆದರೆ ಮೂರನೆ ಘಟನೆ ಪುನರಾವರ್ತನೆಯಾಗುತ್ತದೆ ಮತ್ತು ಮೊದಲನೆ ಘಟನೆಯನ್ನು (ವಂಚನೆಯನ್ನು) ನಿರ್ಲಜ್ಜದಿಂದ ವರದಿ ಮಾಡಲಾಗುತ್ತಿರುತ್ತದೆ.

ಮುಂದಣ ದಾರಿ

ಗ್ರಾಮ್ಷಿಯು “ಆರ್ಥಿಕ, ರಾಜಕೀಯ ದಬ್ಬಾಳಿಕೆಯ ಮೂಲಕ ಹಾಗೂ ಹಿಂಸೆಯ ಮೂಲಕ ನಿಯಂತ್ರಣವನ್ನು ಸಾದಿಸಲಾಗುತ್ತದೆ… ಹಾಗೂ ಬೂರ್ಜ್ವ (ಮದ್ಯಮವರ್ಗ) ಬದುಕಿನ ಮೌಲ್ಯಗಳನ್ನು ಕ್ರಮೇಣ ವ್ಯವಹಾರಜ್ಞಾನದ (common sense) ಮೌಲ್ಯಗಳನ್ನಾಗಿಸುವ ಯಜಮಾನ್ಯ ಸಂಸ್ಕೃತಿಯ ಮೂಲಕವೂ ಸೈದ್ದಾಂತಿಕ ನಿಯಂತ್ರಣವನ್ನು ಸಾದಿಸಲಾಗುತ್ತದೆ” ಎಂದು ಹೇಳುತ್ತಾನೆ. ಅಂದರೆ ಗ್ರಾಮ್ಷಿಯ ಮಾತುಗಳಲ್ಲೇ ಹೇಳುವುದಾದರೆ ’ಬ್ರಾಹ್ಮಣ್ಯ-ಫ್ಯೂಡಲಿಸಂ’ನ ಹೆಜಮನಿಯು ’ಸಬಲ್ಟ್ರಾನ್ ವರ್ಗ’ಗಳನ್ನು ’ಗೆಲ್ಲುವುದರ’ ಮೂಲಕ ಅವರ ಮೇಲೆ ಸಮಾಜೋ-ಸಾಂಸ್ಕೃತಿಕ- ರಾಜಕೀಯ ಅದಿಕಾರ ಸ್ಥಾಪಿಸುವುದು ಕಳೆದ ಶತಮಾನಗಳಿಂದ
ಇಂಡಿಯಾದಲ್ಲಿ ಪಾರುಪತ್ಯ ನಡೆಸುತ್ತಿರುವ ಸಾಂಸ್ಕೃತಿಕ ರಾಜಕಾರಣ ಎಂದು ಕರೆಯಬಹುದು. ಆರ್‌ಎಸ್‌ಎಸ್‌ನಂತಹ ಪುರೋಹಿಶಾಹಿ ಸಂಘಟನೆಯು ಹಿಂದುತ್ವ-ದಲಿತರನ್ನು ಮುಂದಿಟ್ಟುಕೊಂಡು ಅಂಬೇಡ್ಕರವಾದಿ ದಲಿತ ಸಂಘಟನೆಗಳನ್ನು ಬಗ್ಗು ಬಡಿಯಲು ಪ್ರಯತ್ನಿಸುತ್ತದೆ. ಸಸ್ಯಾಹಾರದ ಪಾವಿತ್ರ್ಯತೆ, ಉಪವಾಸ ಎನ್ನುವ ವ್ರತ, ದಾರ್ಮಿಕರಣಗೊಂಡಿರುವ ಯೋಗ, ಬ್ರಹ್ಮಚರ್ಯ, ಶೋಬಾಯಾತ್ರೆ, ಖಾಕಿ ಚೆಡ್ಡಿ- ಕೇಸರಿ ಬಾವುಟ ಹೀಗೆ ಈ ಹಿಂದುತ್ವದ ಈ ವೈದಿಕ ಚಹರೆಗಳು, ಆಚರಣೆಗಳು ಇಂದಿನ ಸಾಂಸ್ಕೃತಿಕ ರಾಜಕಾರಣವಾಗಿ ತಳವೂರಲು ಯತ್ನಿಸುತ್ತಿದೆ

ಭಾರತದ ಬೌದ್ಧಿಕತೆ, ಇಲ್ಲಿನ ಚಿಂತನೆಗಳು ಜನಸಾಮಾನ್ಯರೊಂದಿಗೆ ಸಾವಯವ ಸಂಬಂದವನ್ನು, ಕಳ್ಳುಬಳ್ಳಿ ಹೆಣಿಗೆಯನ್ನು ಸಾದಿಸಲು ಸೋತಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಕ್ಷೇತ್ರಗಳ ಜ್ಞಾನಶಿಸ್ತುಗಳನ್ನು ನಿಜಜೀವನದ ಬದುಕಿಗೆ ಅನ್ವಯಿಸಲು ವಿಫಲವಾಗಿದೆ. ಹೀಗೆ ಕಂಡದ್ದು ನಿಜವಾವುದು ಎನ್ನುವುದನ್ನು ಗ್ರಹಿಸಲು, ವಿಶ್ಲೇಷಿಸಲು ಸೋತಿರುವ ಕಾರಣಕ್ಕಾಗಿ ನಿಜಗಳೂ ಹುಸಿಯಾಗುತ್ತಿವೆ. ಅಕಡೆಮಿಕ್ ಚಿಂತನೆಗಳು, ನುಡಿಕಟ್ಟುಗಳು ಅಪಮೌಲ್ಯಗೊಂಡು ಒಂದೆಡೆ ದಂತಗೋಪುರದ ಬೋನುಗಳಲ್ಲಿ ಬಂದಿಯಾಗುತ್ತ ಮತ್ತೊಂದೆಡೆ ಗೋಳೀಕರಣಗೊಳ್ಳುತ್ತ ಹೋದಂತೆ ನಿಜದ ಸಂವಹನ ನೆಲೆಗಳು ಕ್ಷೀಣಿಸುತ್ತಾ ಹೋಗುತ್ತಿದೆ. ಸಂವಹನದ ಅದ್ಯತೆಯು ತನ್ನ ಜನಪರ ಉದ್ದೇಶವನ್ನು ಕಳೆದುಕೊಂಡು ಹೃದಯಹೀನವಾಗುತ್ತಿದೆ. ಇದರಿಂದಾಗಿ ನಮ್ಮಲ್ಲಿ ತೀವ್ರವಾದ ಅರಿವಿನ ಕೊರತೆ ಉಂಟಾಗುತ್ತಿದೆ. ನಮ್ಮಲ್ಲಿರಬಹುದಾದ ಅರಿವೂ ಸಹ ಪ್ರಾಮಾಣಿಕ ಸಂವೇದನೆಯಾಗಿ ರೂಪುಗೊಳ್ಳುವಲ್ಲಿ ಸೋಲುತ್ತಿದೆ. ಗ್ರಾಮ್ಷಿಯು ಸಮಾಜದ ಬುದ್ದಿಜೀವಿಗಳನ್ನು ’ವಿಶೇಷ ಸವಲತ್ತುಗಳನ್ನು ಪಡೆದ ಪ್ರತಿಶ್ಟಿತ ಗುಂಪು, ಇವರು ಪ್ರಬುತ್ವದ ಸಹಾಯಕ ನಿರ್ವಾಹಕರಾಗಿ ಕೆಲಸ ಮಾಡುತ್ತಾರೆ’ ಎಂದು ಟೀಕಿಸುತ್ತಾನೆ. ಜನ ಸಾಮಾನ್ಯರು ಇಂದಿನ ಫ್ಯಾಸಿಸ್ಟ್ ಆಡಳಿತದ ಕಾರಣಕ್ಕಾಗಿ, ಬಕಾಸುರ ಬಂಡವಾಳಶಾಹಿ ಅದಿಪತ್ಯದ ಕಾರಣಕ್ಕಾಗಿ, ಬ್ರಾಹ್ಮಣ್ಯದ ಸಾಂಸ್ಕೃತಿಕ ಯಜಮಾನ್ಯದ ಕಾರಣಕ್ಕಾಗಿ ನೋವು ಅನುಬವಿಸುತ್ತಿದ್ದಾರೆ. ಆದರೆ ಅವರಲ್ಲಿ ಈ ನೋವು ಪ್ರಜ್ಞೆಯಾಗಿ ಪರಿವರ್ತನೆಗೊಳ್ಳುತ್ತಿಲ್ಲ. ನೋವು ಪ್ರಜ್ಞೆಯಾಗಿ, ಅರಿವು ಸಂವೇದನೆಯಾಗಿ ರೂಪುಗೊಳ್ಳದ ಹೊರತು ಇಲ್ಲಿ ಈ ಆಬಿವ್ಯಕ್ತಿ ಸ್ವಾತಂತ್ರ್ಯದ ದಮನಕ್ಕೆ, ಮತಾಂದರ ದೌರ್ಜನ್ಯಕ್ಕೆ, ಪ್ರತಿಗಾಮಿ ಪಾಶವೀಕರಣಕ್ಕೆ ಕಡಿವಾಣ ಹಾಕುವುದು ಕಷ್ಟ.

ನಾವು ಸೆಕ್ಯಲರಿಸಂ ಕುರಿತು ಮಾತನಾಡುವಾಗ ಅದು ವಸಾಹತೋತ್ತರ ಕಾಲಘಟ್ಟ ನಂತರದ ಹೊಸ ಅವಿಶ್ಕಾರ ಎನ್ನುವ ಮನಸ್ಥಿತಿಯಲ್ಲಿ ಮಾತನಾಡುತ್ತೇವೆ. ಇಲ್ಲಿಂದಲೇ ತೊಂದರೆ ಶುರುವಾಗುತ್ತದೆ. ಚಿಂತಕಿ ಶಬನಮ್ ತೇಜನಿ ಅವರು ’ಇಂಡಿಯಾ ಸ್ವಾತಂತ್ರ್ಯ ಗಳಿಸಿದ ನಂತರ ಲಿಬರಲ್ ಪ್ರಜಾಪ್ರಬುತ್ವದಲ್ಲಿ ಸೆಕ್ಯುಲರಿಸಂ ಮುಖ್ಯ ಪಾತ್ರ ವಹಿಸಿದೆ. ಇದು ಹಿಂದೂ ಅಸ್ಮಿತೆಯೊಳಗೆ ದಲಿತರನ್ನು ಜೀರ್ಣಿಸಿಕೊಂಡು ಬಹುಸಂಖ್ಯೆ ಪ್ರಜಾಪ್ರಬುತ್ವವನ್ನು ಸೃಶ್ಟಿಸಿದೆ. ಮೇಲ್ಜಾತಿ ಹಿಂದೂಗಳು ಈ ಸೆಕ್ಯುಲರಿಸಂಅನ್ನು ಇಂಡಿಯಾದ ರಾಶ್ಟ್ರೀಯತೆ ಚಿಂತನೆಯ ಒಂದು ಸ್ತಂಬ ಎಂದೇ ಬಿಂಬಿಸಿದ್ದಾರೆ. ಹೀಗಾಗಿ ಇಂಡಿಯಾದ ಸೆಕ್ಯುಲರಿಸಂ ಅಂದರೆ ಅದು ರಾಜಕಾರಣ ಮತ್ತು ದರ್ಮ ಎರಡನ್ನು ಬೇರ್ಪಡಿಸಿ ನೋಡುವುದನ್ನು, ಸಹಿಶ್ಣತೆಯ ನಿರ್ದಿಶ್ಟ ಭಾರತೀಯತೆಯನ್ನು ಸೃಶ್ಟಿಸುವುದನ್ನು ನಿರಾಕರಿಸುತ್ತದೆ. ಬದಲಾಗಿ ಜಾತಿ, ಸಮುದಾಯ, ರಾಶ್ಟ್ರೀಯತೆ, ಮತೀಯವಾದ, ಲಿಬರಲ್ ಮತ್ತು ಪ್ರಜಾಪ್ರಬುತ್ವದ ಮದ್ಯೆ ಹೊಂದಾಣಿಕೆ ಇಂಡಿಯಾದ ಸೆಕ್ಯುಲರಿಸಂ ಅಂತ ಹೇಳಬಹುದು’ ಎಂದು ಬರೆಯುತ್ತಾರೆ (ಇಪಿಡಬ್ಲಿಯು 21, ಜುಲೈ 2018). ಮುಸ್ಲಿಂರ ತುಶ್ಟೀಕರಣ, ಓಲೈಕೆಯನ್ನು ಸೆಕ್ಯಲರಿಸಂ ಎಂದು ತಪ್ಪಾಗಿ ಬಿಂಬಿಸುವಲ್ಲಿ ಸಂಘ ಪರಿವಾರದ ಪಾತ್ರವಿದೆ ಎನ್ನುವುದು ಎಶ್ಟು ನಿಜವೋ ಆ ಅಪಪ್ರಚಾರಕ್ಕೆ ಸ್ವತಃ ಸೆಕ್ಯುಲರಿಸ್ಟ್‌ಗಳ ಕೊಡುಗೆಯೂ ಇದೆ. ಬಹುಸಂಖ್ಯಾತರ ಮತಾಂದತೆಯ ಮೇಲೆ ಕೇಂದ್ರೀಕರಿಸಿ ಅದನ್ನು ವಿರೋದಿಸುವುದರ ಮೂಲಕ ಟಿಸಿಲೊಡೆದಿರುವ ಇಲ್ಲಿನ ಸೆಕ್ಯುಲರಿಸಂನ ಚಿಂತನೆಗಳು ಅದಕ್ಕೂ ಹೊರತಾದ ಮತ್ತೊಂದು ಆಯಾಮವಿದೆ ಎನ್ನುವುದನ್ನು ಅರಿಯಲಿಲ್ಲ. ದರ್ಮ ಮತ್ತು ರಾಜಕೀಯ ಪ್ರತ್ಯೇಕವಾಗಿರಬೇಕು ಎಂದು ಹಠ ತೊಟ್ಟು ವಾದಿಸಿದ ಸೆಕ್ಯುಲರ್‌ವಾದಿಗಳು ಭಕ್ತಿ ಪಂಥ, ಆದ್ಯಾತ್ಮ, ಶ್ರಮಣ ಸಂಸ್ಕೃತಿ, ನೆಲಗುರುತುಗಳನ್ನು ನಿರ್ವಚಿಸುವಲ್ಲಿ, ಹೊಸ ತಲೆಮಾರಿಗೆ ಅದನ್ನು ಕಟ್ಟಿಕೊಡುವಲ್ಲಿ ಸೋತಿದ್ದಾರೆ

ಇಂಡಿಯಾದಲ್ಲಿ ಈ ಆರ್‌ಎಸ್‌ಎಸ್ ಮಾದರಿಯ ದರ್ಮವನ್ನು ನಿರ್ವಚಿಸುವಾಗ, ಅದರ ದರ್ಮಾಂದತೆಗೆ ಪ್ರತಿರೋದದ ನೆಲೆಗಳ ಹುಡುಕಾಟ ನಡೆಸುವ ಸಂದರ್ಭದಲ್ಲಿ ನಾವು ಸಹಜವಾಗಿಯೇ ಸೆಕ್ಯುಲರಿಸಂ ವಿಶ್ಲೇಷಣೆಗೆ ಮೊರೆಹೋಗುತ್ತೇವೆ. ಸೆಕ್ಯುಲರಿಸಂ ಮಾತ್ರ ಭಾರತದ ದರ್ಮಾಂದತೆಯನ್ನು ನಾಶ ಮಾಡಬಲ್ಲದು ಎಂದು ಕುರುಡಾಗಿ ನಂಬಿಸಲಾಗಿದೆ. ಆದರೆ ಇಂದು ರಾಜಕೀಯ ವಿಶ್ಲೇಷಕರು, ಚಿಂತಕರು ಮಾತನಾಡುತ್ತಿರುವ ಸೆಕ್ಯುಲರಿಸಂ ನುಡಿಕಟ್ಟು ರಾಜಕೀಯವಾದದ್ದು. ಪ್ರಬುತ್ವ ಮತ್ತು ದರ್ಮದ ನಡುವಿನ ಸಂಬಂದವನ್ನು ನಿರ್ಧರಿಸಲು ಪ್ರಜಾಪ್ರಭುತ್ವ ಮತ್ತು ಸೆಕ್ಯುಲರಿಸಂ ಅನ್ನು ಬಳಸಿಕೊಳ್ಳಲಾಗುತ್ತಿದೆ. ಡಾ.ವಸುಂದರ ಮೋಹನ್ ಅವರು ಹೇಳಿದಂತೆ ’ಸೆಕ್ಯುಲರ್ ರಾಜ್ಯ’ ಎಂದರೆ ಅಲ್ಲಿ ಧರ್ಮವನ್ನು ರದ್ದುಪಡಿಸಿರುವುದಿಲ್ಲ ಬದಲಾಗಿ ಪ್ರಬುತ್ವವು ದರ್ಮದಿಂದ ದೂರವುಳಿದು ದರ್ಮ ಮತ್ತು ಜಾತಿ ಆದಾರಿತ ಪ್ರತ್ಯೇಕತೆ ಮತ್ತು ತಾರತಮ್ಯವನ್ನು, ಯಜಮಾನ್ಯ ಶ್ರೇಷ್ಟತೆಯನ್ನು ಕೊನೆಗೊಳಿಸುವುದು ಎಂದೇ ಅರ್ಥೈಸಬೇಕಾಗುತ್ತದೆ. ಪ್ರಬುತ್ವ ಮತ್ತು ಸಂವಿದಾನ ಸೆಕ್ಯುಲರಿಸಂಅನ್ನು ಒಳಗೊಂಡಿರುತ್ತದೆ ಆದರೆ ಆಳವಾಗಿ ದಾರ್ಮಿಕತೆಯನ್ನು ಪಾಲಿಸುವ ಸಮಾಜವು ಸೆಕ್ಯುಲರ್ ಆಗಿರುವುದಿಲ್ಲ ಎನ್ನುವ ವೈರುದ್ಯಗಳನ್ನು ಮೀರಬೇಕಾದಂತಹ ಅನಿವಾರ್ಯತೆ ಇದೆ. ಸಮಾಜವೂ ಸೆಕ್ಯುಲರ್ ಆಗಬೇಕು ಎನ್ನುವ ಆದರ್ಶವನ್ನು ಕಾರ್ಯಗತಗೊಳಿಸುವ ಮಾರ್ಗಗಳ ಹುಡುಕಾಟ ನಡೆಸಬೇಕಾಗಿದೆ. ಇಲ್ಲಿನ ದಿನನಿತ್ಯದ ಬದುಕಿನಿಂದ ದರ್ಮವನ್ನು, ಜಾತಿಯನ್ನು ಬೇರ್ಪಡಿಸಿ ನೋಡುವುದು ಕಷ್ಟ. ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಸೆಕ್ಯುಲರಿಸಂ ಅಂದರೆ ದರ್ಮಕ್ಕೆ ವಿರುದ್ದವಾದದ್ದು ಎನ್ನುವ ಸಾರ್ವತ್ರಿಕ ಅಬಿಪ್ರಾಯವನ್ನು ತಿದ್ದಬೇಕಾಗಿದೆ.

ಆದರೆ ರಾಜಕೀಯ ಮೇಲಾಟಗಳಲ್ಲಿ ಬಳಕೆಗೊಳ್ಳುವ ಸೆಕ್ಯುಲರಿಸಂ ಬ್ರಾಂಡ್‌ನ್ನು ತಲೆಮಾರುಗಳನ್ನು ರೂಪಿಸುವ ಸಂದರ್ಬದಕ್ಕೂ ಅನ್ವಯಿಸಿದಾಗ ಇಡೀ ಸಂವಾದವೇ ಪೇಲವವಾಗುತ್ತದೆ. ಗಾಂಧಿ ದರ್ಮದ ಚಿಂತನೆಗಳ ಮೂಲಕ ಸೆಕ್ಯುಲರಿಸಂ ಮತ್ತು ಸೌಹಾರ್ದತೆಯನ್ನು ಬೆಳಸಬೇಕು ಎಂದು ನಂಬಿದ್ದರೆ, ಸೆಕ್ಯುಲರಿಸಂಅನ್ನು ಪಶ್ಚಿಮದ ದೃಷ್ಟಿಕೋನದಿಂದ ಅರ್ಥೈಸಿದ ನೆಹರೂ ಅವರು ದರ್ಮಕ್ಕೂ ಸೆಕ್ಯುಲರಿಸಂಗೂ ಸಂಬಂದವಿಲ್ಲ ಬದಲಾಗಿ ಅದು ವೈಜ್ಞಾನಿಕವಾದದ್ದು ಮತ್ತು ಅದರ ಮಾನವೀಯ ಗುಣಗಳು ಇಲ್ಲಿನ ವೈವಿದ್ಯತೆ ಮತ್ತು ಬಹುಸಂಸ್ಕೃತಿಯನ್ನು ಬೆಸೆಯುತ್ತವೆ ಎಂದು ನಂಬಿದ್ದರು. ಆದರೆ ಹೇಗೆ ಬೆಸೆಯುತ್ತದೆ ಎನ್ನುವ ಯಕ್ಷಪ್ರಶ್ನೆಗೆ ನೆಹರೂ ಬಳಿ ಉತ್ತರವಿರಲಿಲ್ಲ. ಇದನ್ನು ಚೆನ್ನಾಗಿ ಅರಿತಿದ್ದ ಅಂಬೇಡ್ಕರ್ ಅವರು ಸೆಕ್ಯುಲರಿಸಂ ಎನ್ನುವುದು ಕೇವಲ ರಾಜಕೀಯವಲ್ಲ ಅದು ನೈತಿಕತೆಯ ಪ್ರಶ್ನೆಯೂ ಹೌದು ಎಂದು ಹೇಳುತ್ತಾರೆ.

ಕಡೆಗೂ ಎರಡನೇ ಘಟನೆ ಮತ್ತು ಅದರ ಮುಂದುವರೆದ ಭಾಗವಾದ ಮೂರನೆ ಘಟನೆಯನ್ನು ನಿಯಂತ್ರಿಸುವುದು ಹೇಗೆ? ಮೊದಲನೆ ಘಟನೆಯ ವಂಚನೆಯ ಗುಣವನ್ನು, ಮರೆಮೋಸವನ್ನು ಬಯಲುಗೊಳಿಸುವುದು ಹೇಗೆ?

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸದಂತೆ ಸುವೇಂದುಗೆ ಬಿಜೆಪಿ ನಾಯಕರ ಮನವಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬಿ. ಶ್ರೀಪಾದ ಭಟ್
+ posts

LEAVE A REPLY

Please enter your comment!
Please enter your name here