ಇಂದು ನಡೆಯಬೇಕಿದ್ದ ರೈತ ಪ್ರತಿನಿಧಿಗಳ ಜೊತೆಗಿನ 10ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ಒಂದು ದಿನ ಮುಂದೂಡಿದೆ. ಅಂದರೆ ಸಭೆಯು ಜನವರಿ 20 ರಂದು ನಡೆಯಲಿದೆ ಎಂದು ತಿಳಿಸಿದೆ. ಇದಕ್ಕೆ ತಳ್ಳಿಹಾಕಲಾಗದ ಕಾರಣಗಳಿವೆ ಎಂದು ಕೇಂದ್ರ ಹೇಳಿದೆ.
ಇದಕ್ಕೆ ಕೇಂದ್ರ ಸರ್ಕಾರ ಕೊಟ್ಟ ಕಾರಣ “ಎರಡೂ ಕಡೆಯವರು (ಕೇಂದ್ರ ಸರ್ಕಾರ ಮತ್ತು ರೈತರು) ಒಂದು ಅಂತಿಮ ತೀರ್ಮಾನಕ್ಕೆ ಬರಲು ಸಿದ್ಧರಿದ್ದೇವೆ, ಆದರೆ ಕೆಲವು ವಿಭಿನ್ನ ಸಿದ್ಧಾಂತಗಳ ಜನ ಇದಕ್ಕೆ ಅಡ್ಡಿಯಾಗಿದ್ದಾರೆ” ಎಂಬುದಾಗಿದೆ. ಯಾರು ಈ ವಿಭಿನ್ನ ಸಿದ್ಧಾಂತದವರು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿಲ್ಲ.

ರೈತರ ಪ್ರತಿಭಟನೆಯ ಜೊತೆ ಹಲವಾರು ಸಂಘಟನೆಗಳು ಕೈ ಜೋಡಿಸಿವೆ. ಅದರಲ್ಲಿ ಕಮ್ಯುನಿಸ್ಟ್, ಸೊಷಿಯಾಲಿಸ್ಟ್ ಚಳವಳಿಯ ಬಾಗವಾಗಿರುವ ಸಂಘಟನೆಗಳೂ ಇವೆ. ‘ವಿಭಿನ್ನ ಸಿದ್ದಾಂತಗಳ ಜನ ಅಡ್ಡಿಯಾಗಿದ್ದಾರೆ’ ಎನ್ನುವ ಕೇಂದ್ರದ ಬೇಜವಾಬ್ದಾರಿ ಹೇಳಿಕೆಯ ಉದ್ದೇಶ ಇಡೀ ಹೋರಾಟವನ್ನು ಒಡೆಯುವ ಉದ್ದೇಶ ಹೊಂದಿದೆ ಎಂದು ರೈತರು ಆರೋಪಿಸಿದ್ದಾರೆ.
ಕಮ್ಯುನಿಸ್ಟ್ ಅಥವಾ ಸೋಷಿಯಾಲಿಸ್ಟ್ ಸಿದ್ದಾಂತ ಯಾವತ್ತೂ ರೈತರು ಮತ್ತು ಕೃಷಿ ಕಾರ್ಮಿಕರ ಪರವೇ ಇವೆ ಮತ್ತು ಅವು ಜಾಗತೀಕರಣ-ಖಾಸಗೀಕರಣದ ವಿರೋಧಿಗಳೇ ಆಗಿವೆ. ಹೀಗಾಗಿ ಈ ರೈತ ಪ್ರತಿಭಟನೆಯ ಹಿಂದೆ ಅವುಗಳ ಸೈದ್ದಾಂತಿಕತೆ ಇದ್ದೇ ಇದೆ. ಇದೇನೂ ಅಪರಾಧವಲ್ಲವಲ್ಲವೇ ಎಂದು ರೈತರು ಪ್ರಶ್ನಿಸಿದ್ದಾರೆ.
ಖಲಿಸ್ತಾನಿ ಇತ್ಯಾದಿ ಆಧಾರರಹಿತ ಆರೋಪ ಮಾಡುತ್ತಿರುವ ‘ಪ್ರಭುತ್ವ ಸ್ನೇಹಿ’ ಶಕ್ತಿಗಳು, ಹೋರಾಟದಲ್ಲಿ ಅಂಥವರಿದ್ದರೆ, ಅವರು ಪ್ರತಿಭಟಿಸುವುದೆ ತಪ್ಪು ಎಂದು ಇಂದೆಲ್ಲಾ ಆರೋಪ ಮಾಡಿದ್ದವು. ಆದರೆ ಆನಂತರ ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
ಜನವರಿ 26ರ ರೈತರ ಟ್ಯ್ರಾಕ್ಟರ್ ರ‍್ಯಾಲಿಗೆ ಬೆದರಿ ಕೇಂದ್ರ ಸರ್ಕಾರ ಹೋರಾಟವಮ್ಮು ತುಳಿಯುವ ಹಾದಿ ಹಿಡಿದಂತಿದೆ. ಅದಕ್ಕೆ ಅದು ಪ್ರತಿಭಟನಾನಿರತ ಕೆಲವು ರೈತ ನಾಯಕರ ಮೇಲೆ ಎನ್‌ಎಸ್‌ಎ ಕಾಯ್ದೆ ಅಡಿ ಕೇಸು ದಾಖಲಿಸುತ್ತಿದೆ. ಕೆಲವರನ್ನು ಖಲಿಸ್ತಾನಿ ಎಂದು ಕರೆಯುತ್ತಿದೆ. ದೆಹಲಿಯಲ್ಲಿ ಉಗ್ರರಿದ್ದಾರೆ ಎಂದು ಅಂಟಿಸಲಾಗಿರುವ ಪೋಸ್ಟರ್‌ಗಳು ಕೇಂದ್ರದ ಕುತಂತ್ರದ ಭಾಗವೇ ಆಗಿವೆ ಎಂದು ರೈತರು ಆರೋಪಿಸಿದ್ದಾರೆ.
ಮಾತುಕತೆಯನ್ನು ಒಂದು ದಿನ ಮುಂದೂಡಿದ್ದೇನೂ ಚರ್ಚೆಯ ವಿಷಯವಲ್ಲ, ಆದರೆ ಅದಕ್ಕೆ ಕೇಂದ್ರ ಕೊಟ್ಟ ಕಾರಣ ನೋಡಿದರೆ, ಈ ವಾರದಲ್ಲಿ ಅಹಿತಕರ ಘಟನೆಗಳು ಸಂಭವಿಸಬಹುದು ಮತ್ತು ಅದು ಪ್ರಭುತ್ವದ ಕಡೆಯಿಂದಲೇ ನಡೆಯಲಿದೆ ಎಂಬ ಸಂಶಯ ಕಾಡತೊಡಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಅಲ್ಲದೇ ರೈತರ ಟ್ಯ್ರಾಕ್ಟರ್ ರ‍್ಯಾಲಿ ತಡೆಯಬೇಕೆಂದು ದೆಹಲಿ ಪೊಲೀಸರು ಸಲ್ಲಿಸಿರುವ ಪಿಐಎಲ್ ಕುರಿತ ತೀರ್ಪನ್ನು ಸುಪ್ರೀಂ ಜನವರಿ 20 ರಂದು ಅಂದರೆ ನಾಳೆಯೇ ನೀಡಲಿದೆ. ಹಾಗಾಗಿ ಆ ತೀರ್ಪು ನೋಡಿಕೊಂಡು ರೈತರ ಜೊತೆ ಮಾತುಕತೆಯನ್ನು ಯಾವ ರೀತಿ ಮುಂದುವರೆಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದಂತಿದೆ.
ಸರ್ಕಾರದೊಂದಿಗಿನ ಇಂದಿನ ಸಭೆ ಈಗ ನಾಳೆಗೆ ಮುಂದೂಡಲ್ಪಟ್ಟಿದೆ. 9 ಸಭೆಗಳು ಈಗಾಗಲೇ ಮುಗಿದಿವೆ ಆದರೆ ಯಾವುದೇ ಫಲಿತಾಂಶವಿಲ್ಲ. ನ್ಯಾಯ ಕೊಡಿ, ದಿನಾಂಕಗಳನ್ನಲ್ಲ #GiveJusticeNotDates ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಟ್ರಾಕ್ಟರ್ ರ್‍ಯಾಲಿಯನ್ನು ಶಾಂತಿಯುತವಾಗಿ ನಡೆಸಿಯೆ ತೀರುತ್ತೇವೆ: ಹೋರಾಟ ನಿರತ ರೈತರು


