Homeಕರ್ನಾಟಕವಿಶೇಷ ವರದಿ; ಬಲಪಂಥೀಯ ರಾಜಕಾರಣದಲ್ಲಿ ಪಠ್ಯ ಪರಿಷ್ಕರಣೆ

ವಿಶೇಷ ವರದಿ; ಬಲಪಂಥೀಯ ರಾಜಕಾರಣದಲ್ಲಿ ಪಠ್ಯ ಪರಿಷ್ಕರಣೆ

- Advertisement -
- Advertisement -

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ರಚಿಸಿದ ಬಳಿಕ ವಿವಾದ ಸೃಷ್ಟಿಯಾಗಿತ್ತು. ಸಂಘಪರಿವಾರದ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಅವರು ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ತಿರುಚಿದ ಆರೋಪ ಹೊತ್ತಿದ್ದಾರೆ. ತೀವ್ರ ಹಿಂದುತ್ವದ ಪರ ಒಲವಿರುವವರು, ಪಠ್ಯಪುಸ್ತಕವನ್ನು ಪರಿಶೀಲಿಸುತ್ತಾರೆಂದಾಗ ಹಲವು ಆತಂಕಗಳು ಎದುರಾಗಿದ್ದವು. ಈಗ ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯಪುಸ್ತಕ ಸಿದ್ಧವಾಗುತ್ತಿದ್ದು, ಅದರಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಲಾಗಿದೆ ಮತ್ತು ಬಿಜೆಪಿ ಪ್ರಣೀತ ಸಿದ್ಧಾಂತವೇ ಇಲ್ಲಿಯೂ ರಾರಾಜಿಸುತ್ತಿರುವ ಗುಮಾನಿಗಳು ವ್ಯಕ್ತವಾಗುತ್ತಿವೆ.

ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ವರದಿ ಸಿದ್ಧಪಡಿಸಿದ್ದು, ಹಲವು ಟಿಪ್ಪಣಿಗಳನ್ನು ಮಾಡಿದೆ. ಈ ಹಿಂದೆ ಇದ್ದ ಕೆಲವು ವಿಷಯಗಳಿಗೆ ಕತ್ತರಿ ಪ್ರಯೋಗ ಮಾಡಿ, ಕೆಲವೊಂದು ವಿಷಯಗಳನ್ನು ಸೇರಿಸುವ ಕೆಲಸವನ್ನು ಸಮಿತಿ ಮಾಡಿದೆ. ಈ ಕುರಿತು ಚರ್ಚೆಗಳಾಗುತ್ತಿವೆ. ಈಗಾಗಲೇ ಸಮಿತಿಯು ಕರ್ನಾಟಕ ಪಠ್ಯಪುಸ್ತಕ ಸಂಘದ ಮೂಲಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

ರೋಹಿತ್ ಚಕ್ರತೀರ್ಥ

ಪ್ರಾಥಮಿಕ, ಹಿರಿಯ ಹಾಗೂ ಪ್ರೌಢಶಾಲಾ ಹಂತದಲ್ಲಿನ ಪಠ್ಯದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗುತ್ತಿದೆ. ಹೊಸ ಧರ್ಮಗಳ ಉದಯ, ಟಿಪ್ಪು ಬಗೆಗಿನ ಪಾಠದಲ್ಲಿ ಕೆಲವು ಅಂಶಗಳ ಕಡಿತ, ಸಿಂಧೂ ನಾಗರಿಕತೆಗೆ, ಸಿಂಧೂ ಸರಸ್ವತಿ ನಾಗರಿಕತೆ ಎಂಬ ಮರು ನಾಮಕರಣ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಏನೇನು ಕೈ ಬಿಡಲಾಗುತ್ತಿದೆ?

ಆರ್‌ಟಿಐ ಮಾಹಿತಿಯನ್ನು ಆಧರಿಸಿ ಪಠ್ಯಪುಸ್ತಕ ಪರಿಶೀಲನೆ ಸಂಬಂಧ ತನಿಖಾ ವರದಿಗಳನ್ನು ಪ್ರಕಟಿಸಿರುವ ’ದಿ ಫೈಲ್’ ಜಾಲತಾಣ ಈ ಸಂಬಂಧವಾಗಿ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. 2021-22ನೇ ಸಾಲಿನ ಪಠ್ಯದಲ್ಲಿದ್ದ ಹಲವು ಅಂಶಗಳನ್ನು ಈಗ ಕೈಬಿಡಲಾಗುತ್ತಿದೆ.

ಬಿಜೆಪಿ ಹಾಗೂ ಸಂಘ ಪರಿವಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಹಿಂದೂ ವಿರೋಧಿ ಎಂಬಂತೆ ಬಿಂಬಿಸುತ್ತಾ, ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆಯನ್ನು ಮರೆಮಾಚುವ ಹುನ್ನಾರವನ್ನು ಮಾಡುತ್ತಲೇ ಬಂದಿದೆ. ಈಗ ಪಠ್ಯದಲ್ಲೂ ಮೇಜರ್ ಸರ್ಜರಿಯನ್ನು ಮಾಡಿದೆ ಚಕ್ರತೀರ್ಥ ಸಮಿತಿ.

ಪ್ರಮುಖ ಬದಲಾವಣೆಗಳು

1. 6ನೇ ತರಗತಿಯಲ್ಲಿದ್ದ ’ನಮ್ಮ ಕರ್ನಾಟಕ- ಚಾರಿತ್ರಿಕ ಹಿನ್ನೆಲೆ, ಮೈಸೂರು ಒಡೆಯರ್’ ಪಾಠದಲ್ಲಿ ಟಿಪ್ಪು ಸುಲ್ತಾನ ತಲೆಬರಹದಡಿಯಲ್ಲಿದ್ದ ಮೂರು ಸಾಲುಗಳನ್ನು, 7ನೇ ತರಗತಿಯಲ್ಲಿನ ಪಾಠದಲ್ಲಿ ನಾಲ್ಕು ಅಂಶಗಳು ಹಾಗೂ ಪೂರಕವಾದ ಮೂರು ಚಿತ್ರಗಳನ್ನು ತೆಗೆದು ಹಾಕಲಾಗಿದೆ. ನಮ್ಮ ಕರ್ನಾಟಕ ಪಾಠದಲ್ಲಿ ಚಾರಿತ್ರಿಕ ಹಿನ್ನೆಲೆ ಎಂಬ ತಲೆಬರಹದ ಬದಲು ’ಮೈಸೂರು ವಿಭಾಗ’ ಎಂಬ ಶೀರ್ಷಿಕೆ ನೀಡಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2. “ಬ್ರಿಟಿಷರ ವಿರುದ್ಧ ಅನೇಕ ಹೋರಾಟಗಳನ್ನು ಟಿಪ್ಪು ನಡೆಸಿದನು. ಫ್ರೆಂಚ್‌ರ ಜೊತೆಯಲ್ಲಿ ಸಹಾಯ ಸಂಧಾನ ನಡೆಸಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಟಿಪ್ಪು ಸುಲ್ತಾನ್ ಪ್ರಯತ್ನಿಸಿದ. ಟಿಪ್ಪು ಸುಲ್ತಾನನು ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡನು” ಎಂಬ ಅಂಶ ತೆರವಾಗಿದೆ.

3. ಟಿಪ್ಪು ಸುಲ್ತಾನನ ಭಾವಚಿತ್ರವನ್ನು ತೆಗೆದುಹಾಕಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಗಳನ್ನು ಉಳಿಸಿಕೊಳ್ಳಲಾಗಿದೆ.

4. ’ಟಿಪ್ಪುವಿನ ವ್ಯಕ್ತಿತ್ವ ಮತ್ತು ಸಾಧನೆಗಳು’ ಶೀರ್ಷಿಕೆ ಬದಲು ’ಟಿಪ್ಪು ಸುಲ್ತಾನ್’ ಎಂದಷ್ಟೇ ಉಳಿಸಿಕೊಳ್ಳಲಾಗಿದೆ.

5. ಬೆಂಗಳೂರಿನ ಅರಮನೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ರೇಷ್ಮೆ ವ್ಯವಸಾಯ, ರಾಕೆಟ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಹಿಂದೂ ದೇವಾಲಯಗಳಿಗೆ ದಾನ ದತ್ತಿ, ಶೃಂಗೇರಿ ಮಠಕ್ಕೆ ದೇಣಿಗೆ, ಭೂ ಸುಧಾರಣೆ, ರೈತರಿಗೆ ಕಂತಿನ ಮೂಲಕ ಸಾಲ ಒದಗಿಸಿದ್ದು, ಹೈದರಾಲಿ ಸಮಾಧಿ, ಜುಮ್ಮಾ ಮಸೀದಿ, ಶ್ರೀರಂಗಪಟ್ಟಣ ಮತ್ತು ಬೆಂಗಳೂರಿನಲ್ಲಿ ಟಂಕ ಶಾಲೆಗಳನ್ನು ನಿರ್ಮಿಸಿರುವುದನ್ನು ಕೈಬಿಟ್ಟಿರುವುದಾಗಿ ವರದಿ ಹೇಳಿದೆ.

6. 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಸಿಂಧೂ ನಾಗರಿಕತೆ ಶೀರ್ಷಿಕೆಯನ್ನು ’ಸಿಂಧೂ ಸರಸ್ವತಿ’ ನಾಗರಿಕತೆ ಎಂದು ಹೆಸರಿಸಲಾಗಿದೆ.

7. ಹೊಸಧರ್ಮಗಳ ಉದಯದ ಕುರಿತು: ಜೈನ, ಬೌದ್ಧ ದರ್ಶನಗಳು ಹೊಸ ಮತಗಳ ಉದಯಕ್ಕೆ ಕಾರಣಗಳು ಎಂಬುದು ನಿರಾಧಾರ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇವುಗಳ ಜೊತೆಗೆ ಇನ್ನೂ ಹಲವಾರು ಮಾರ್ಪಾಡುಗಳನ್ನು ಪಠ್ಯಪುಸ್ತಕ ಸಮಿತಿ ಮಾಡಿದೆ.

ವೈದಿಕತ್ವಕ್ಕೆ ಒಲವು

ವೈದಿಕ ಧರ್ಮದ ಕುರಿತು ಯಾವುದೇ ವಿಮರ್ಶಾತ್ಮಕ ದೃಷ್ಟಿಕೋನಕ್ಕೆ ಚಕ್ರತೀರ್ಥ ಸಮಿತಿ ಕುರುಡಾಗಿರುವಂತಿದೆ. “ಸಮಾಜ ವಿಜ್ಞಾನ ಪಠ್ಯದಲ್ಲಿ ವೈದಿಕ ಕಾಲದ ಬಗ್ಗೆ ತಪ್ಪು ಮಾಹಿತಿಗಳಿದ್ದವು. ನಿರ್ದಿಷ್ಟ ಸಮುದಾಯಗಳ ಬಗ್ಗೆ ಅವಹೇಳನ ಮಾಡಲಾಗಿತ್ತು. ಭಾರತದ ಬಗ್ಗೆ ಕೀಳು ಅಭಿಪ್ರಾಯಗಳು ಬರುವಂತೆ ಪಠ್ಯಗಳ ರಚನೆಯಾಗಿತ್ತು. ಮಾತೃಭೂಮಿ, ಭಾರತೀಯ ಎಂಬಂಥ ಪದಗಳು ಬದಲಾವಣೆಯಾಗಿತ್ತು. ನೂರಾರು ಕಾಗುಣಿತ ತಪ್ಪುಗಳಿದ್ದವು” ಎಂದು ಚಕ್ರತೀರ್ಥ ಆರೋಪಿಸಿದ್ದಾರೆ.

ಹೀಗೆ ಬಲಪಂಥೀಯ ರಾಜಕೀಯ ಪ್ರೇರಿತ ಆಲೋಚನೆಗಳನ್ನು ಓದುವ ಮಕ್ಕಳ ಮೇಲೆ ಹೇರುವ ನಿಟ್ಟಿನಲ್ಲಿ ಬದಲಾವಣೆಗಳನ್ನು ಪಠ್ಯಪುಸ್ತಕ ಸಮಿತಿ ಮಾಡಿದೆ ಎಂಬ ಆರೋಪಗಳು ಬಂದಿವೆ. ’ನ್ಯಾಯಪಥ’ದ ಜೊತೆ ಮಾತನಾಡಿರುವ ಚಿಂತಕರು, ಇತಿಹಾಸತಜ್ಞರು ಪಠ್ಯಪರಿಶೀಲನೆಯ ಕುರಿತು ಆಕ್ಷೇಪಗಳನ್ನೆತ್ತಿದ್ದಾರೆ.

ಟಿಪ್ಪು ಒಂದು ದೊಡ್ಡ ತಪ್ಪು ಮಾಡಿದ್ದಾನೆ: ಪ್ರೊ.ಪಿ.ವಿ.ನಂಜರಾಜ ಅರಸ್

ಟಿಪ್ಪು ಮತ್ತು ಮೈಸೂರು ಸಂಸ್ಥಾನದ ಕುರಿತು ಆಳವಾಗಿ ಅಧ್ಯಯನ ಮಾಡಿದರು ಪ್ರೊ.ಪಿ.ವಿ.ನಂಜರಾಜ ಅರಸು. ಮೈಸೂರು ಇತಿಹಾಸದ ಕುರಿತು ಹಲವು ಕೃತಿಗಳನ್ನು ಬರೆದಿರುವ ಅವರು, ಇತ್ತೀಚೆಗೆ ’ಟೀಪೂ ಸುಲ್ತಾನ್’ ಕೃತಿಯನ್ನು ಬರೆದು ಪ್ರಕಟಿಸಿದ್ದಾರೆ. ’ನ್ಯಾಯಪಥ’ದೊಂದಿಗೆ ಮಾತನಾಡಿದ ಅವರು, “ಟಿಪ್ಪು ಒಂದು ದೊಡ್ಡ ತಪ್ಪು ಮಾಡಿದ್ದಾನೆ. ಆತ ಮುಸ್ಲಿಂ ಆಗಿ ಹುಟ್ಟಿದ್ದೇ ಆ ತಪ್ಪು. ಒಂದು ವೇಳೆ ಆತ ಹಿಂದೂವಾಗಿ ಹುಟ್ಟಿದ್ದರೆ ಮಲಬಾರ್ ಪ್ರಾಂತ್ಯದಲ್ಲಿ ಅವನು ಮಾಡಿದಂತಹ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಗಳ ಕಾರಣಕ್ಕೆ ಬಿಜೆಪಿ ಸರ್ಕಾರ ಇಂದು ಮರಣೋತ್ತರ ಭಾರತ ರತ್ನವನ್ನೋ, ಪದ್ಮವಿಭೂಷಣವನ್ನೋ ನೀಡುತ್ತಿತ್ತು” ಎಂದು ಅಭಿಪ್ರಾಯಪಟ್ಟರು.

ಪ್ರೊ.ಪಿ.ವಿ.ನಂಜರಾಜ ಅರಸ್

“ಟಿಪ್ಪುವಿಗೆ ’ಮೈಸೂರು ಹುಲಿ’ ಎಂದು ಬಿರುದು ಕೊಟ್ಟವರು ಯಾರು ಎಂದು ಕೇಳುತ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಡ್ರೆಸ್ ಹಾಕಿ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದರು. ಅನೇಕ ಬಿಜೆಪಿ ನಾಯಕರೂ ಟಿಪ್ಪು ಥರ ವೇಶ ಹಾಕಿದ್ದರು. ಜಗದೀಶ್ ಶೆಟ್ಟರ್ ಅವಧಿಯಲ್ಲಿ ಸರ್ಕಾರವೇ ಟಿಪ್ಪು ಸುಲ್ತಾನ್ ಕುರಿತು ಕೃತಿ ಪ್ರಕಟಿಸಲು ಮುಂದಾಗಿತ್ತು. ಅದಕ್ಕೆ ಇತಿಹಾಸತಜ್ಞರಾದ ಶೇಕ್ ಅಲಿ ಮುಖ್ಯ ಸಂಪಾದಕರಾಗಿದ್ದರು. ಆ ಸಂದರ್ಭದಲ್ಲಿ ಟಿಪ್ಪುವನ್ನು ಶೆಟ್ಟರ್ ಹಾಡಿ ಹೊಗಳುತ್ತಾರೆ. ’ಟಿಪ್ಪು ಪ್ರೇಮ ತುಂಬಿದ ವ್ಯಕ್ತಿ’ ಎಂದು ಬಣ್ಣಿಸುತ್ತಾರೆ. ಪುಸ್ತಕ ಬಿಡುಗಡೆಯಾಗುವ ಮುನ್ನವೇ ಶೆಟ್ಟರ್ ಅಧಿಕಾರ ಕಳೆದುಕೊಳ್ಳುತ್ತಾರೆ. ಆದರೆ ಸಿದ್ದರಾಮಯ್ಯನವರ ಅವಧಿಯಲ್ಲಿ ಟಿಪ್ಪು ಜಯಂತಿ ಮಾಡಿದ ತಕ್ಷಣ ಟಿಪ್ಪು ಪ್ರೇಮ ತುಂಬಿದ ವ್ಯಕ್ತಿಯಾಗಿ ಅವರು ಇರುವುದಿಲ್ಲ” ಎಂದು ವ್ಯಂಗ್ಯವಾಡಿದರು.

“ಆರ್‌ಎಸ್‌ಎಸ್ ಇಲ್ಲಿ ಟಾರ್ಗೆಟ್ ಮಾಡುತ್ತಿರುವುದು ಮುಸ್ಲಿಮರನ್ನೇ ಹೊರತು ಟಿಪ್ಪು ಸುಲ್ತಾನನಲ್ಲ. ಮುಸ್ಲಿಮರು, ದಲಿತರು ಮತ್ತು ಸಂವಿಧಾನವನ್ನು ಹೊರಹಾಕಬೇಕೆಂಬುದು ಅವರ ಗುರಿ. ದಲಿತರು ಇವರ ಪ್ರಕಾರ ಹಿಂದೂಗಳಲ್ಲ” ಎಂದು ತಿಳಿಸಿದರು.

ಡಿಎನ್‌ಎಯ ಸತ್ಯ ಮತ್ತು ಸಂಘ ಪರಿವಾರದ ಭಯ

ಸಿಂಧೂ ಬಯಲಿನ ನಾಗರಿಕತೆಯನ್ನು ಸಿಂಧೂ ಸರಸ್ವತಿ ನಾಗರಿಕತೆ ಎಂದು ಕರೆಯುತ್ತಿರುವ ಉದ್ದೇಶದ ಕುರಿತು ಸಾಮಾಜಿಕ ಹೋರಾಟಗಾರ, ಚಿಂತಕ ಹರ್ಷಕುಮಾರ್ ಕುಗ್ವೆ ವಿವರವಾಗಿ ಮಾತನಾಡಿದರು.

“ಸಂಘಪರಿವಾರದವರು ಸಿಂಧೂ ನಾಗರಿಕತೆಯನ್ನು ಸರಸ್ವತಿ ನದಿ ನಾಗರಿಕತೆ ಎಂದು ಬಿಂಬಿಸುವ ಪ್ರಯತ್ನವನ್ನು ಮೊದಲಿನಿಂದಲೂ ಮಾಡುತ್ತಿದ್ದಾರೆ. ಅಲ್ಲೊಂದು ಸರಸ್ವತಿ ನದಿ ಇತ್ತು, ಈಗ ಮುಚ್ಚಿ ಹೋಗಿದೆ. ಸ್ಯಾಟಲೈಟ್ ಸಾಕ್ಷ್ಯಾಧಾರಗಳು ಇತಿಹಾಸವನ್ನು ಹೇಳುತ್ತಿವೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ” ಎಂದು ಹೇಳಿದರು.

“ಋಗ್ವೇದದಲ್ಲಿ ಸರಸ್ವತಿ, ಸರಯೂ ಎಂಬ ಎರಡೂ ರೀತಿಯ ಉಲ್ಲೇಖಗಳಿವೆ. ಅದರ ಕುರಿತು ಇತಿಹಾಸರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಋಗ್ವೇದದಲ್ಲಿ ಬರುವ ಜಾಗದ ವಿವರಣೆ ಹರಪ್ಪ ನಾಗರಿಕತೆಯ ಯಾವುದೇ ಸ್ಥಳಕ್ಕೆ ಹೋಲಿಕೆಯಾಗುವುದಿಲ್ಲ. ಸಿಂಧೂ ನದಿಯಂತೆಯೇ ಉಗ್ರ ಸ್ವರೂಪಿಯಾದ ನದಿಯ ವಿವರಣೆ ಋಗ್ವೇದದಲ್ಲಿ ಇದ್ದು, ಆದರೆ ಅಂಥದ್ದೊಂದು ನದಿ ಮೂರ್ನಾಲ್ಕು ಸಾವಿರ ವರ್ಷಗಳಲ್ಲಿ ಮುಚ್ಚಿಹೋಗಿರುವ ಯಾವುದೇ ಪುರಾವೆ ಇಲ್ಲ. ಆದರೆ ಹರಪ್ಪ ನಾಗರಿಕತೆಯಲ್ಲಿ ಗಗ್ಗರ್ ಹಾರ್ಕ್ ಎಂಬ ನದಿ ಉಲ್ಲೇಖವಿದೆ. ಅದು ಸಿಂಧೂ ನದಿಯ ಉಪನದಿಯಾಗಿದೆ. ಗಗ್ಗರ್ ಹಾರ್ಕ್‌ಗೆ ಈ ಹಿಂದೆ ಸರಯೂ ಎಂದು ಕರೆಯುತ್ತಿದ್ದರೆಂಬ ಚರ್ಚೆಗಳಿವೆ. ಆದರೆ ಅದು ಅತ್ಯಂತ ಚಿಕ್ಕ ನದಿ. ಕಾಲುವೆಯೆಂದರೂ ತಪ್ಪಾಗದು” ಎಂದು ತಿಳಿಸಿದರು.

“ನದಿಯ ವಿಚಾರವಾಗಿ ಸಂಶೋಧನೆ ಮಾಡಿರುವ ಇತಿಹಾಸ ತಜ್ಞರ ಪ್ರಕಾರ ಅಫ್ಘಾನಿಸ್ತಾನದಲ್ಲಿನ ಅರ್ಗಂಡಾಬ್ ಅಥವಾ ಹೆಲ್ಮಂಡ್ ನದಿಗೆ ಇದ್ದ ಪುರಾತನ ಹೆಸರಾದ ಹರಕ್ಸೈತಿ ನದಿಯೇ ಋಗ್ವೇದದಲ್ಲಿ ಚರ್ಚೆಯಾಗಿರುವಂಥದ್ದು. ಋಗ್ವೇದದಲ್ಲಿನ ವಿವರಣೆಗಳೆಲ್ಲ ಆ ನದಿಗೆ ಹೋಲಿಕೆಯಾಗುತ್ತವೆ. ಆರ್ಯನ್ ಸಮುದಾಯಗಳು ಬಂದಿದ್ದು ಅದೇ ಮಾರ್ಗವಾಗಿ. ಹೀಗಾಗಿ ಸಿಂಧೂ ನದಿ ನಾಗರಿಕತೆಯನ್ನು ಸರಸ್ವತಿ ನಾಗರಿಕತೆ ಎನ್ನುವುದು ಹಾಸ್ಯಾಸ್ಪದ. ಆರ್ಯ ವೈದಿಕ ಜನ ವಲಸೆ ಬಂದು ಇಲ್ಲಿ ನೆಲೆಸಿದಾಗ ತಮ್ಮ ಮೂಲ ಹೆಸರುಗಳನ್ನೇ ಇಲ್ಲಿನ ಬೇರೆಯ ನದಿಗಳಿಗೆ ಇಡುತ್ತಾರೆ. ಉದಾಹರಣೆ ಹರಕ್ಸೈತಿ (ಅಪಭ್ರಂಶವಾಗಿ ಸರಸ್ವತಿಯಾಗಿದೆ). ವೇದಗಳಲ್ಲಿ ಹೇಳುವ ಸರಸ್ವತಿ, ಸರಯೂ ಭಾರತದಲ್ಲಿ ಹೇಳುವ ಯಾವುದೇ ನದಿಗೆ ಹೋಲಿಕೆಯಾಗುವುದಿಲ್ಲ. ಅದು ಹೋಲಿಕೆಯಾಗುವುದು ಅಫ್ಘಾನಿಸ್ತಾನದ ನದಿಗಳಿಗೆ. ಇವರು ಹೇಳುವಂತೆ ಸದರಿ ಸ್ಥಳದಲ್ಲಿ ಯಾವುದೇ ನದಿಗಳು ಅವಸಾನವಾಗಿರುವ ಕುರುಹುಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಹರ್ಷಕುಮಾರ್ ಕುಗ್ವೆ

“ಸರಸ್ವತಿ ನಾಗರಿಕತೆ ಎಂಬ ಚರ್ಚೆ ಬರಲು ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ರಾಖಿಗಡಿಯಲ್ಲಿ ಡಿಎನ್‌ಎ ಅಧ್ಯಯನವಾಯಿತು. ಹರಪ್ಪ ನಾಗರಿಕತೆಯ ಪ್ರಾಚೀನ ಪಳೆಯುಳಿಕೆಯ ಡಿಎನ್‌ಎ ಪ್ರಕಾರ- ಈ ಸಿಂಧೂ ನಾಗರಿಕತೆಯ ಜನರ ವಂಶಾವಳಿಗಳ ಒಳಗೆ ಆರ್ಯ, ವೈದಿಕ ವಂಶಾವಳಿ ಇಲ್ಲ. ಇದು ಬಲಪಂಥೀಯ ಸಿದ್ಧಾಂತಕ್ಕೆ ಶಾಕ್ ನೀಡಿದೆ. ಈ ಟೈಮ್‌ನಲ್ಲಿ ಸರಸ್ವತಿ ನಾಗರಿಕತೆಯ ಕಥೆ ಕಟ್ಟಿದ್ದಾರೆ. ಯಾವುದೇ ಇತಿಹಾಸ ತಜ್ಞರಲ್ಲದ, ಮಾಜಿ ಮಿಲಿಟರಿ ಅಧಿಕಾರಿಯಾದ ಜಿ.ಡಿ.ಭಕ್ಷಿ ಎಂಬವರಿಂದ ’ಸರಸ್ವತಿ ನಾಗರಿಕತೆ’ ಎಂಬ ಕೃತಿಯನ್ನು ಸಂಘಪರಿವಾರ ಬರೆಸಿತು. ಈ ಕೃತಿಯ ಬಗ್ಗೆ ಇದೇ ರೋಹಿತ್ ಚಕ್ರತೀರ್ಥ ಕ್ಲಬ್‌ಹೌಸ್‌ನಲ್ಲಿ ಒಂದು ಚರ್ಚೆಯನ್ನು ನಡೆಸಿದ್ದರು. ಇಲ್ಲದಿರುವ ಕಟ್ಟು ಕಥೆಗಳನ್ನು ಈಗ ಹೇಳುತ್ತಿದ್ದಾರೆ. ಪಠ್ಯಪುಸ್ತಕ ಪರಿಶೀಲನೆ ನಡೆಸುವಂತಹ ಯಾವುದೇ ಶೈಕ್ಷಣಿಕ ಅರ್ಹತೆ ರೋಹಿತ್ ಚಕ್ರತೀರ್ಥರಿಗೆ ಇಲ್ಲ. ಆದರೆ ಆರ್‌ಎಸ್‌ಎಸ್ ಕಾರ್ಯಕರ್ತ ಎಂಬ ಕಾರಣಕ್ಕೆ ಈ ಅಧಿಕಾರವನ್ನು ನೀಡಿದ್ದಾರೆ” ಎಂದು ಕುಗ್ವೆ ವಿಷಾದಿಸಿದರು.

“ಭಾರತದಲ್ಲಿ ಬೌದ್ಧಧರ್ಮ ಹೇಗೆ ಉದಯವಾಯಿತು ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ವಿವರಿಸಿದ್ದಾರೆ. ಬಾಬಾ ಸಾಹೇಬರು ತಮ್ಮ ’ಪ್ರಾಚೀನ ಭಾರತದಲ್ಲಿ ಪ್ರತಿಕ್ರಾಂತಿ’ ಎಂಬ ಕೃತಿಯಲ್ಲಿ ’ಭಾರತದಲ್ಲಿ ಧಾರ್ಮಿಕ ಸುಧಾರಣೆ’ ಎಂಬ ಅಧ್ಯಾಯ ಬರೆದಿದ್ದಾರೆ. ಅದರಲ್ಲಿ ಆಧಾರ ಸಮೇತವಾಗಿ ಹೇಗೆ ಆರ್ಯನ್ ಸಮಾಜ ಭ್ರಷ್ಟಗೊಂಡಿತ್ತು, ಪರ್ಯಾಯವಾಗಿ ಹೇಗೆ ಬೌದ್ಧಧರ್ಮ ಹುಟ್ಟಿತು ಎಂದು ವಿವರಿಸಿದ್ದಾರೆ. ಈ ಹಿಂದೆ ಆರನೇ ತರಗತಿಯ ಪಠ್ಯದಲ್ಲಿ ಇದ್ದ ವಿಚಾರಗಳು ಬಾಬಾ ಸಾಹೇಬರು ಬರೆದ ಕೃತಿಯನ್ನೇ ಆಧರಿಸಿದ್ದವು” ಎಂದು ತಿಳಿಸಿದರು.

“ಇನ್ನೂ ಟಿಪ್ಪುವನ್ನು ಅರ್ಥ ಮಾಡಿಕೊಳ್ಳಲು ಸಮಗ್ರ ದೃಷ್ಟಿಕೋನ ಬೇಕಿದೆ. ಇವತ್ತಿನ ಧಾರ್ಮಿಕ ದೃಷ್ಟಿಕೋನ ಟಿಪ್ಪು ಕಾಲದಲ್ಲಿ ಇರಲಿಲ್ಲ. ಹಿಂದೂಸ್ಥಾನ ಅಂತ ಇತ್ತು. ಹಿಂದೂ ಎಂಬ ಧಾರ್ಮಿಕ ಆಯಾಮ ಅದರಲಿಲ್ಲ. ಆತನ ಸುಧಾರಣೆಗಳನ್ನು ಮರೆಮಾಚಲು ಸಾಧ್ಯವಿಲ್ಲ” ಎಂದು ಹೇಳಿದರು.

ಟಿಪ್ಪು ಪಠ್ಯದಲ್ಲಿ ಯುದ್ಧದ ವಿವರ ಉಳಿಸಿಕೊಂಡಿದ್ದೇವಷ್ಟೇ: ಚಕ್ರತೀರ್ಥ

ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪ್ರತಿಕ್ರಿಯೆ ನೀಡಿದ್ದು, “ಟಿಪ್ಪುವಿಗೆ ಸಂಬಂಧಿಸಿದ ಪಠ್ಯದಲ್ಲಿ ಆತ ಮಾಡಿದ ಯುದ್ಧಗಳ ವಿವರಣೆ ಉಳಿಸಿಕೊಳ್ಳಲಾಗಿದೆ. ಆತನ ಸಮಾಜ ಸೇವೆಯನ್ನು ಇಲ್ಲಿ ಸೇರಿಸಲು ಸಾಧ್ಯವಿಲ್ಲ. ಈ ಹಿಂದೆ ಪಠ್ಯ ಪುಸ್ತಕ ರೂಪಿಸಿದವರು ಎಲ್ಲೆಂದರಲ್ಲಿ ಯಾವ್ಯಾವುದೋ ವಿಷಯವನ್ನು ಸೇರಿದ್ದರು” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಆಧಾರರಹಿತ ಎನ್ನಲು ಆಧಾರ ಕೊಡಬೇಕು: ಬರಗೂರು

ಈ ಹಿಂದೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ತಮ್ಮ ಅಭಿಪ್ರಾಯವನ್ನು ’ನ್ಯಾಯಪಥ’ದ ಜೊತೆ ಹಂಚಿಕೊಂಡರು.

ಬರಗೂರು ರಾಮಚಂದ್ರಪ್ಪ

“ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಗೆ ನಾನು ಸರ್ವಾಧ್ಯಕ್ಷನಾಗಿದ್ದರೂ ವಿವಿಧ ವಿಷಯಗಳಿಗೆ ಸಂಬಂಧಿಸಿದ 27 ಸಮಿತಿಗಳಿದ್ದವು. ಈ ಸಮಿತಿಗಳಿಗೆ ಪ್ರತ್ಯೇಕವಾಗಿ ಅಧ್ಯಕ್ಷರಿದ್ದರು. ಇವರೆಲ್ಲ ವಿಷಯ ತಜ್ಞರು. ಸಮಾಜ ವಿಜ್ಞಾನ ಪಠ್ಯ ವಿಷಯಗಳನ್ನು, ಇತಿಹಾಸ ವಿಷಯ ತಜ್ಞರೆಲ್ಲಾ ಸೇರಿ ಬರೆದಿದ್ದರು. ಯಾವುದೇ ಪಠ್ಯದಲ್ಲಿ ಅಕಸ್ಮಾತ್ ತಪ್ಪು ಮಾಹಿತಿಗಳು ಅರಿವಿಲ್ಲದೇ ಬಂದಿದ್ದರೆ ಅಂಥವನ್ನು ತಿದ್ದುವುದು ತಪ್ಪಲ್ಲ. ಮಾಹಿತಿ ಕೊಡುವುದಕ್ಕೆ ಮತ್ತು ಬಿಡುವುದಕ್ಕೆ ಅಧಾರಗಳಿರಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ನಾವು ತಿಳಿಸಿದಂತೆ ಟಿಪ್ಪುವಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕೈ ಬಿಡಲಾಗಿದೆ. ಹಿಂದೆ ಇದ್ದ ಮಾಹಿತಿಗಳು ಆಧಾರರಹಿತವಾಗಿರಲಿಲ್ಲ. ಟಿಪ್ಪು ಶೃಂಗೇರಿಯನ್ನೂ ಒಳಗೊಂಡಂತೆ ಕೆಲವು ದೇವಾಲಯಗಳಿಗೆ ಸಹಾಯ ಮಾಡಿದ ವಿಷಯವನ್ನು ಚರಿತ್ರೆಕಾರರು ಹಿಂದಿನಿಂದ ಹೇಳಿದ್ದಾರೆ. ಆತನ ಯೋಜನೆಗಳ ಕುರಿತೂ ಹಿಂದಿನಿಂದ ಹೇಳಲಾಗಿದೆ. ಇವು ಆಧಾರರಹಿತ ಎನ್ನಲು ಆಧಾರ ಕೊಡಬೇಕಾಗುತ್ತದೆ. ಟಿಪ್ಪುವನ್ನು ಮೈಸೂರು ಹುಲಿ ಎಂದು ಕರೆಯುವ ರೂಢಿಯಿದೆ. ನಾವು ಓದುವಾಗಲೂ ಇದು ರೂಢಿಯಲ್ಲಿತ್ತು. ಇದು ಹೋಗಲಿ ಎಂದರೆ ಉಳಿದವನ್ನು ತೆಗೆಯಲು ಕಾರಣಗಳಿಲ್ಲ. ಅಲ್ಲೆಲ್ಲಾ ಮಾಹಿತಿಯಿದೆ; ಅನಗತ್ಯ ವೈಭವೀಕರಣವಿಲ್ಲ. ಹುಸಿ ವೈಭವೀಕರಣವಾಗಿದ್ದರೆ ತಿದ್ದುಪಡಿ ಮಾಡಲಿ ತಪ್ಪೇನಿಲ್ಲ. ಆದರೆ ಯಾವುದೇ ಪಠ್ಯಪುಸ್ತಕಗಳು ಯಾವುದೇ ಪಕ್ಷದ ಪುಸ್ತಕಗಳಲ್ಲ. ಹಾಗೆ ಆಗಬಾರದು” ಎಂದು ತಿಳಿಸಿದರು.

“ನಾವು ಎಲ್ಲೂ ಟಿಪ್ಪುವನ್ನು ವೈಭವೀಕರಿಸಿರಲಿಲ್ಲ. ಇನ್ನು ನಾಗರಿಕತೆಗಳ ಕುರಿತು ಇತಿಹಾಸ ತಜ್ಞರು ಪ್ರತಿಕ್ರಿಯಿಸಬೇಕು. ಸರಿತಪ್ಪುಗಳನ್ನು ಹೇಳಬೇಕು. ನನ್ನ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆಯನ್ನು ಆಯಾ ವಿಷಯಗಳ ತಜ್ಞರೇ ಮಾಡಿದ್ದರು. ವಿಷಯ ತಜ್ಞರನ್ನು ನಿರ್ಲಕ್ಷಿಸಿ ಪಠ್ಯ ರಚನೆ, ಪರಿಷ್ಕರಣೆ ಆಗಬಾರದು. ಇದು ಶೈಕ್ಷಣಿಕ ವಿಷಯ. ಅಕೆಡೆಮಿಕ್ ವಿಷಯ. ವಾದವಿವಾದದ ಬೀದಿ ಜಗಳ ಅಲ್ಲ. ಈ ವಿವೇಕ ಅಗತ್ಯ ಎಂದು ಅಭಿಪ್ರಾಯಪಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬೆಕ್ಕಿಗೆ ಗಂಟೆ ಕಟ್ಟಲಾಗದವರಿಗೇಕೆ ಹುಲಿಯ ಗೊಡವೆ?

    ಒಂದು ದಿನ ಮುಂಜಾನೆ ಎದ್ದು ನೋಡಿದರೆ ಧಿಡೀರನೇ ಘೋಷಣೆ
    ಇನ್ನು ಮೇಲೆ ನೀನು ಹುಲಿಯಲ್ಲ, ನಿನ್ನನ್ನು ನೀನು ಹುಲಿಯೆಂದು ಕರೆದುಕೊಳ್ಳಲಾಗದು.
    ಯಾರಾದರೂ ಹಾಗೆಂದು ಕರೆದರೂ ತಿರುಗಿ ನೋಡಬಾರದು
    ನಿನ್ನ ಹುಲಿಸ್ಥಾನಕ್ಕೆ ಬಿತ್ತು ಮರ್ಮದೇಟು, ನಡೆ, ಇನ್ನು ನಿನ್ನ ಪಟ್ಟೆಗಳನ್ನು ಕಳಚಿಟ್ಟು.

    ತಲೆಕೆರೆದುಕೊಂಡಿತು ಹುಲಿ, ಏಕಾಏಕಿ ಇದೇನಾಯಿತು ಇವರಿಗೆ, ಹಿಂದಿನ ರಾತ್ರಿ
    ಏನು ಕುಡಿದಿದ್ದರು, ಇಳಿದಿಲ್ಲ ಅಮಲು ಇನ್ನೂ ಅಥವಾ ಹುಚ್ಚು ಹಿಡಿದಿದೆ ಖಾತ್ರಿ
    ಅಥವಾ ತನಗೇ ತಿಳಿದಿಲ್ಲದ ಸತ್ಯವೊಂದನ್ನು ಕಂಡುಕೊಂಡರೇ ಇವರು ಎಂದುಕೊಂಡು
    ನೋಡಿದರೆ ಛಾನಲ್ಲಿನಲ್ಲಿ ಪುಂಖಾನುಪುಖ ಪುಂಗುತ್ತಿದೆ ಒಂದು ಬಾಲ ಸುಟ್ಟ ನರಿ!

    ಏನು ಪದಪುಂಜಗಳೂ, ವಾಕ್ಯಾವಳಿಗಳೂ, ಗತ್ತು ದೌಲತ್ತುಗಳೂ, ಏನು ಧೈರ್ಯಸ್ಥೈರ್ಯಗಳೂ!
    ದಂಗಾಯಿತು ಹುಲಿ ಅದರ ವಾಕ್ಝರಿಗೆ. ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನೂ ಸತ್ಯವಾಗಿಸುವ ಪರಿಪಾಠಕ್ಕೆ.
    ಕೇಳಿ ಸಾಕಾಯಿತು ಅದಕ್ಕೆ, ಉಗುರು ಹೊರಚಾಚಿ ತಲೆಕೆರೆದುಕೊಂಡು ಕ್ಷಣ ಯೋಚಿಸಿತು
    ಮಾರ್ ದಿಯಾ ಜಾಯೆ ಯಾ ಛೋಡ್ ದಿಯಾ ಜಾಯೆ ಅಂತ ಪರಿಶೀಲಿಸಿ, ನಂತರ ತಡಿ ಸ್ವಲ್ಪ

    ನೋಡೋಣಾ ಎದುರಾಳಿ ಸಮಬಲನೋ ಅಥವಾ ಗಠಾರದ ಇಲಿಯೋ, ಮಾತು ತಲೆಯಿಂದ
    ಬರುತ್ತಿದೆಯೋ ಅಥವಾ ಬೇರೆ ಕಡೆಯಿಂದಲೋ ಎಂದು ಪರೀಕ್ಷಿಸಿತು. ಫಕ್ಕನೆ ನಕ್ಕುಬಿಟ್ಟಿತು
    ಇವನು ಮೀರಸಾಧಕನ ವಂಶಸ್ಥ, ಸಮಯ ಸಾಧಕ, ಉಂಡ ಮನೆಯ ಗಳ ಹಿರಿವ ಭಂಡ
    ನನ್ನ ಬಾಲದ ಪಟ್ಟೆ ಕೂದಲಿಗೂ ಸಮನಲ್ಲ, ತಿರಿದು ತಿನ್ನುವ ಇವನ ನಾಲಿಗೆಗೆ ಎಲುಬಿಲ್ಲ

    ಎಂದು ಥುಕರಿಸಿ ಎದ್ದು ನಡೆಯಿತು ಹುಲಿ ಬೀದಿಯಲ್ಲಿ ಎಂದಿನ ರಾಜ ಗಾಂಭೀರ್ಯದಲ್ಲಿ.
    ಎದುರಾಯಿತು ನರಿ ಅದೇ ತಾನೇ ಮಾನ ಸನ್ಮಾನಗಳ ಪೇಟ ಶಾಲು ಧರಿಸಿ, ಕಾಸು ಎಣಿಸಿ
    ಮುಂದಿನ ತುಂಡಿಗಾಗಿ ಮೂಸುತ್ತ ನೆಲ ಕೆರೆಯುತ್ತ ಒಳಗೊಳಗೇ ಸಂಭ್ರಮಿಸುತ್ತ
    ಕಾಣದೆ ಬಂದು ಡಿಕ್ಕಿ ಹೊಡಿಯಿತು ಹುಲಿಗೆ, ನೋಡಿ ಉಡುಗಿ ಜಂಘಾಬಲ ನಡುಗುತ್ತ

    ಕ್ಷಮಿಸಿ ಖಾವಂದರೇ, ಮೈಸೂರು ಹುಲಿಗಳೇ, ಪರಕೀಯರ ಎದುರಿಸಿ ಹಿಮ್ಮೆಟ್ಟಿದ ವೀರಪ್ರತಾಪರೆ
    ರಣದಲ್ಲಿ ಮರಣ ಹೊಂದಿದ ಅಲ್ಲ ಹೊಂದುವ ಸಮರವಿಕ್ರಮರೇ .. ತತತತ ತೊದಲಿತು ನರಿ
    ಕೇಳುವಷ್ಟು ಕೇಳಿ ಕೊನೆಗೆ ಘರ್ಜಿಸಿತು ಹುಲಿ ಮುಚ್ಚು ಬಾಯಿ, ಹುಚ್ಚು ನರಿ, ನಡಿ ನನ್ನ ಜೊತೆಗೆ
    ಒಂದು ಕದನಕ್ಕೆ, ಅಲ್ಲಿ ಮೈಕಿಲ್ಲ ಚಪ್ಪಾಳೆಯಿಲ್ಲ, ಬಡಿಯುತ್ತವೆ ಫಿರಂಗಿ ಗುಂಡು, ನಿಲ್ಲು ಎದೆ ಕೊಟ್ಟು.

    ಗೋಗರೆಯಿತು ನರಿ ಅಯ್ಯೋ ಬಿಟ್ಟುಬಿಡಿ ನನ್ನ ಬಡವ ಬದುಕಿಕೊಳ್ಳುತ್ತೇನೆ ನಿಮ್ಮ ದಮ್ಮಯ್ಯ
    ಅವರು ಕೊಟ್ಟ ಕಾಸಿಗೆ ಪುಂಗಿದ್ದೇನೆ ಇನ್ನು ಎಲ್ಲಾದರೂ ತಲೆಮರೆಸಿಕೊಳ್ಳುತ್ತೇನೆ ನಿಮಗೆ ಸಾಟಿಯೇ
    ನಿಮ್ಮ ಪಟ್ಟೆಯ ಧೂಳಿಗೂ ಸಮರಿಲ್ಲ ನಾನೂ ನನ್ನ ನಾಯಕರೂ ಎಂದು ಅಂಜಿ ಅಂಗಲಾಚಿ
    ಗೋಮೂತ್ರ ಸ್ವಮೂತ್ರ ಎಲ್ಲ ಪ್ರೋಕ್ಷಿಸಿಕೊಂಡು ಧರೆಗೊರಗಿತು, ಪಾಪ ಬದುಕಿದರೆ ಬೇಡಿ ತಿನ್ನುವ

    ಒದರಿತು ಮೈ ಒಮ್ಮೆ ಹುಲಿ ಅದರ ಝಕ್ಕಿಗೆ ಉದುರಿದ ಪಟ್ಟೆಯ ರೋಮಗಳು ಹಾರಿ ಗಾಳಿಯಲ್ಲಿ
    ಪರಪರನೆ ಸರಿದವು ಚರಿತ್ರೆಯ ಪುಟಗಳು, ಹುಲಿಗೆ ಸಾಟಿಯಿಲ್ಲ ಸತ್ಯ, ಅಷ್ಟೇ ಸತ್ಯ ಇಂದು ಮೆರೆಯುತ್ತಿದ್ದಾರೆ

    ಸತ್ಯಕ್ಕೂ ಗುಂಡಿಟ್ಟ ವೀರೋಚಿತರು ಹುಳಿ ಮುಖದ ಪುಂಗಿದಾಸರು ಅಂದಿನಂತೆ ಇಂದೂ ಮೀರಸಾಧಕರು ಪಾತಕರು.
    ಬೆಕ್ಕಿಗೆ ಗಂಟೆ ಕಟ್ಟಲಾಗದವರಿಗೇಕೆ ಹುಲಿಯ ಗೊಡವೆ, ಸುಮ್ಮನಿರಿ ನಿಮ್ಮ ಬಾಲ ಕಾಲನಡುವೆ ತೂರಿ.
    ಕಲಿತಿಲ್ಲವೇ ಚರಿತ್ರೆಯ ಪಾಠ? ಕಾಲದ ಸೆಳವಿನಲ್ಲಿ
    ಎಷ್ಟೇ ತಿದ್ದಿ ಬರೆದರೂ ಉಳಿಯುವುದು ವೀರರ ಹೆಸರು
    ಎಷ್ಟೇ ತಿಣುಕಾಡಿದರೂ ಅಳಿಸಿಹೋಗುವುದು ನಿಮ್ಮ ಸುಳ್ಳುಗಳು.
    **
    ಪ್ರತಿಭಾ ನಂದಕುಮಾರ್

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...