ಮಹಾರಾಷ್ಟ್ರದಲ್ಲಿ ಈಗ 29 ವರ್ಷದ ಆದಿತ್ಯ ಠಾಕ್ರೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಮೊಮ್ಮಗ. ಇದೇ ಮೊದಲ ಬಾರಿಗೆ ಬಾಳಾ ಠಾಕ್ರೆ ಮನೆತನದ ಕುಡಿ ಆದಿತ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಡಂಗುರ ಬಾರಿಸಿದ್ದಾರೆ. ಮುಂಬೈನ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಆದಿತ್ಯ ಠಾಕ್ರೆಯ ಗೆಲುವು ಶಿವಸೇನೆಯನ್ನು ಉತ್ತುಂಗಕ್ಕೇರಿಸಿದೆ. ಮಹಾರಾಷ್ಟ್ರದಲ್ಲಿ ಈಗ ಕೇಳಿ ಬರುತ್ತಿರುವ ಮಾತೆಂದರೆ ಆದಿತ್ಯ ಠಾಕ್ರೆ ಸಿಎಂ ಆಗ್ತಾರಾ..? ಶಿವಸೇನೆಗೆ ಸಿಎಂ ಸ್ಥಾನ ದಕ್ಕುತ್ತಾ ಎಂಬುದೇ ಬಿಗ್ ಪ್ರಶ್ನೆ.
ವರ್ಲಿ ಕ್ಷೇತ್ರದಲ್ಲಿ ಎನ್‍ಸಿಪಿ ಅಭ್ಯರ್ಥಿ ಸುರೇಶ್ ಮಾನೆ ಅವರನ್ನು 67,427 ಮತಗಳ ಅಂತರದಲ್ಲಿ ಸೋಲಿಸಿ, ಆದಿತ್ಯ ಠಾಕ್ರೆ ವಿಜಯಿಯಾದರು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಶಿವಸೇನೆ, ಸಮಾನ ಅಧಿಕಾರ ಮತ್ತು ಸಮಪಾಲು ಎಂಬ ಷರತ್ತು ವಿಧಿಸಿ, ಘಟಬಂಧನ್ ಮಾಡಿಕೊಂಡು, ಕ್ಷೇತ್ರಗಳನ್ನು ಹಂಚಿಕೊಂಡಿದ್ದವು. ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡಿವೆ. ಈಗ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿ ಸಿಎಂ ಆಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಠಾಕ್ರೆ ವಂಶದ ಕುಡಿ ಸಿಎಂ ಆಗ್ತಾರಾ, ಇಲ್ಲವೇ ಈ ಬಾರಿಯೂ ಬಿಜೆಪಿಗೆ ಸಿಎಂ ಸ್ಥಾನವನ್ನು ಶಿವಸೇನೆ ಬಿಟ್ಟುಕೊಟ್ಟು ಉದಾರತ್ವ ಮೆರೆಯುತ್ತಾ ಎಂಬುದು ಕುತೂಹಲ ಕೆರಳಿಸಿದೆ.
ಈ ಮಧ್ಯೆ ಏನೇ ಆಗಲಿ 50:50 ಒಪ್ಪಂದ ಮಾಡಿಕೊಂಡಿದ್ದೇವೆ. ಸಮಾನ ಅಧಿಕಾರ ಮತ್ತು ಸಮಪಾಲು ನಿಯಮದ ಪ್ರಕಾರ ಬಿಜೆಪಿ ನಡೆದುಕೊಳ್ಳಲಿ ಎಂದು ಶಿವಸೇನೆ ಬಿಜೆಪಿಯನ್ನು ಎಚ್ಚರಿಸಿದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಅದಕ್ಕಾಗೇ ಆದಿತ್ಯ ಠಾಕ್ರೆಯನ್ನು ಸ್ಪರ್ಧೆಗಿಳಿಸಿದೆ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ನಡೆಯುತ್ತಿದೆ. ಈ ಬಗ್ಗೆ ಠಾಕ್ರೆ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಮತ್ತು ಪಕ್ಷದ ಕೆಲ ವಿಷಯಗಳ ಬಗ್ಗೆ ಪಕ್ಷದ ಮುಖ್ಯಸ್ಥರ ತೀರ್ಮಾನವೇ ಅಂತಿಮ. ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.
ಆದಿತ್ಯ ಠಾಕ್ರೆ 20 ವರ್ಷದವರಿದ್ದಾಗಲೇ ಯುವ ಸೇನಾ ಘಟಕದ ನಾಯಕರಾಗಿದ್ದರು. ವಿದ್ಯಾರ್ಥಿ ವಿಂಗ್‍ನ ನಾಯಕನಾದ ಮೇಲೆ ಬುಕರ್ ಪ್ರಶಸ್ತಿ ವಿಜೇತ ರೋಹಿಂಟನ್ ಮಿಸ್ಟ್ರೀ ಅವರ ಪುಸ್ತಕವನ್ನು ಹರಿದು ಹಾಕಿದ್ದರು. ಆದಿತ್ಯ ಠಾಕ್ರೆ ಹಿಂದೂತ್ವದ ಗುರುತಾಗಿದ್ದಾರೆ. ಹಿಂದೂತ್ವದ ಅಜೆಂಡಾ ಮತ್ತು ಹಿಂದೂಗಳ ಪ್ರತಿನಿಧಿಯಂತೆ ಆದಿತ್ಯ ಕೆಲಸ ಮಾಡಲಿದ್ದಾರೆ ಎಂಬುದು ಪಕ್ಷದಲ್ಲಿ ಕೇಳಿ ಬರುತ್ತಿರುವ ಮಾತು.
ವರ್ಲಿ ಕ್ಷೇತ್ರದ ಅಭಿವೃದ್ಧಿ, ಎಲ್ಲಾ ಪಕ್ಷಗಳ ಜತೆ ಸಾಮರಸ್ಯದಿಂದ ಕೆಲಸ ಮಾಡುತ್ತೇನೆ. ಎಲ್ಲಾ ಸಂಸ್ಥೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದು ಮತ್ತು ಮಹಾರಾಷ್ಟ್ರದ ಬೆಳವಣಿಗೆಗಾಗಿ ದುಡಿಯುವುದಾಗಿ ಹೇಳಿದರು. ಅದೇನೇ ಇದ್ದರೂ, ಬಿಜೆಪಿ ಜತೆಗೆ ಮೈತ್ರಿ ಸೂತ್ರ ಅನುಸರಿಸಿರುವ ಶಿವಸೇನೆ ಸಿಎಂ ಹುದ್ದೆ ಪಡೆದು, ಶತಾಯಗತಾಯ ಅಧಿಕಾರಕ್ಕೇರುವ ತವಕದಲ್ಲಿದೆ. ಇತ್ತ ಬಿಜೆಪಿಯ ದೇವೇಂದ್ರ ಫಡ್ನವೀಸ್ ಕೂಡ ಸಿಎಂ ರೇಸ್ ಲ್ಲಿದ್ದು, ನಾನೇ ಸಿಎಂ ಎನ್ನು ವಿಶ್ವಾಸದಲ್ಲಿದ್ದಾರೆ. ಒಟ್ನಲ್ಲಿ ಸಿಎಂ ಗಾದಿಯ ಕಚ್ಚಾಟದ ಕೆಸರೆರಚಾಟ ಮೈತ್ರಿ ಪಕ್ಷಗಳ ಮೇಲೆ ಯಾವ ಪರಿಣಾಮ ಬೀರಲಿದೆಯೋ..?


