ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭಕ್ಕೂ ಮುನ್ನ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್‌ರವರ ಪೌರತ್ವದ ಪ್ರಶ್ನೆ ಭುಗಿಲೆದ್ದಿದೆ. ಪಶ್ಚಿಮ ಬಂಗಾಳದ ಬಿಜೆಪಿ ಸಂಸದರಾಗಿರುವ ಅವರು ಭಾರತದ ಪ್ರಜೆಯಲ್ಲ ಬದಲಿಗೆ ಬಾಂಗ್ಲಾದೇಶದವರಿರಬೇಕು ಎಂದು ಟಿಎಂಸಿ, ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಅಸ್ಸಾಂ ಕಾಂಗ್ರೆಸ್ ಸಂಸತ್ ಸದಸ್ಯ ರಿಪುನ್ ಬೋರಾ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ನಿಶಿತ್ ಪ್ರಾಮಾಣಿಕ್‌ರವರ ಜನ್ಮಸ್ಥಳ ಮತ್ತು ಪೌರತ್ವದ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಕೆಲ ಮಾಧ್ಯಮ ವರದಿಗಳನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಬೋರಾ,”ವಿದೇಶಿ ಪ್ರಜೆಯನ್ನು ಕೇಂದ್ರ ಕ್ಯಾಬಿನೆಟ್‌ಗೆ ಸೇರಿಸಿಕೊಂಡಿರುವುದು ಅತ್ಯಂತ ಕಳವಳಕಾರಿ ವಿಷಯ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಂಗಾಳದ ಸಚಿವ ಇಂದ್ರಾನಿಲ್ ಸೇನ್ ಕೇಂದ್ರ ಸಚಿವ ನಿಶಿತ್ ಪ್ರಾಮಾಣಿಕ್ ಬಾಂಗ್ಲಾದೇಶದವರಾಗಿರಬಹುದು ಎಂಬ ವಿಷಯ ಕೇಳಿ ಆಘಾತವಾಗಿದೆ ಎಂದಿದ್ದಾರೆ.
ಆದರೆ ಈ ಆರೋಪಗಳನ್ನು ಬಂಗಾಳ ಬಿಜೆಪಿ ನಿರಾಕರಿಸಿದೆ. “ಇದುವರೆಗೂ ಯಾರೂ ಅವರು ಭಾರತದವರಲ್ಲ ಎಂಬ ಆಧಾರಗಳನ್ನು ಒದಗಿಸಿಲ್ಲ. ಸುಮ್ಮೆನೆ ಆರೋಪ ಮಾಡಬೇಡಿ, ದಾಖಲೆ ತೋರಿಸಿ” ಎಂದು ಪಶ್ಚಿಮ ಬಂಗಾಳದ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಸವಾಲು ಹಾಕಿದ್ದಾರೆ.
ಬಾಂಗ್ಲಾದೇಶದ ಧಾರ್ಮಿಕ ಸಂಘಟನೆಯೆಂದು ಕರೆದುಕೊಳ್ಳುವ ಪೂಜಾರ್ ಮೇಳ ಎಂಬ ಖಾತೆಯು ಹಾಕಿದ ಪೋಸ್ಟ್‌ನಿಂದ ಈ ವಿವಾದ ಭುಗಿಲೆದ್ದಿದೆ. ಪ್ರಾಮಾಣಿಕ್‌ರವರು ಕೇಂದ್ರ ಇಲಾಖೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ “ಗೈಬಂಧ ಜಿಲ್ಲೆಯ ಪಾಲಶ್‌ಬರಿ ಪೊಲೀಸ್ ಠಾಣೆ ವ್ಯಾಪ್ತಿಯ ಹರಿನಾಥಪುರದ ಪುತ್ರರವರ ಸಾಧನೆಯಿದು. ಅವರು ಪಶ್ಚಿಮ ಬಂಗಾಳದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ನಡೆಸಿದ್ದರು” ಎಂದು ಪೋಸ್ಟ್ ಹಾಕಲಾಗಿತ್ತು ಎನ್ನಲಾಗಿದೆ.
ಪ್ರಾಮಾಣಿಕ್‌ರವರ ಲೋಕಸಭಾ ಬಯೋಡೇಟಾದಲ್ಲಿ ಅವರ ಜನ್ಮ ಸ್ಥಳವನ್ನು ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ದಿನ್ಹಟ ಎಂದು ಬರೆಯಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕಿರಿಯ ಶಾಲೆಯಲ್ಲಿ ‘ಬಿಸಿಎ’ ಪದವಿ! – ಅಮಿತ್ ಷಾ ಸಹಾಯಕ ಸಚಿವನ ಶೈಕ್ಷಣಿಕ ಅರ್ಹತೆ ವಿವಾದ



ನಿಮಗೆ ವಿದೇಶಿ ಪ್ರಧಾನಿ ಆಗಬೇಕು, ಬಂಗಾಳ ಮೂಲದ ಹಿಂದೂಗಳು ಅಸ್ಪೃಶ್ಯರು?