ಬೀದಿಬದಿ ವ್ಯಾಪಾರಿಗಳ ಸತತ ಹೋರಾಟಕ್ಕೆ ಮಂಡಿಯೂರಿರುವ BJP ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆ, ವ್ಯಾಪಾರಿಗಳ ವಿರುದ್ಧ ನಡೆಸುತ್ತಿದ್ದ ‘ತೆರವು ಕಾರ್ಯಾಚರಣೆ’ ಕೈಬಿಡುವುದಾಗಿ ಬುಧವಾರ ಘೋಷಿಸಿದೆ. ತಮ್ಮ ಮೇಲೆ ನಡೆಸುತ್ತಿರುವ ಕಾನೂನು ಬಾಹಿರ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಬುಧವಾರದಿಂದ ಅನಿರ್ಧಿಷ್ಠಾವಧಿ ಧರಣಿ ಕೂತಿದ್ದರು.
ಈ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು ‘ತೆರವು ಕಾರ್ಯಾಚರಣೆಯನ್ನು ಕೈಬಿಡುತ್ತೇವೆ’ ಎಂದು ವ್ಯಾಪಾರಿಗಳಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:‘ಮರ್ಯಾದೆಯಿಂದ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ವಾಪಾಸು ಕೊಡಿ’
ಅನಧಿಕೃತ ಗೂಡಂಗಡಿ ಮತ್ತು ಪುಟ್‌ಪಾತ್ ವ್ಯಾಪಾರವನ್ನು ತೆರವು ಮಾಡಲು ಕಳೆದ ಬುಧವಾರದಂದು ಪಾಲಿಕೆಯ ಮೇಯರ್ ಮತ್ತು ಕಮೀಷನರ್ ಆದೇಶ ಹೊರಡಿಸಿದ್ದರು. ಅದರಂತೆ ಗುರುವಾರದಿಂದ ತೆರವು ಕಾರ್ಯಾಚರಣೆ ಪ್ರಾರಂಭವಾಗಿತ್ತು.
ಈ ವೇಳೆ ಬೀದಿಬದಿ ವ್ಯಾಪಾರಿಗಳಿಗೆ ಸರಕಾರವೇ ನೀಡಿದ್ದ ಗುರುತಿನ ಚೀಟಿಯಿದ್ದರೂ, ಅಂತಹ ವ್ಯಾಪಾರಿಗಳನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದು, ಅಲ್ಲದೆ ಹಲವು ವ್ಯಾಪಾರಿಗಳ ಗಾಡಿ ಮತ್ತಿತರ ವಸ್ತುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಿಯಮ ಬಾಹಿರವಾಗಿ ಜಜ್ಜಿ ನಾಶಪಡಿಸಲಾಗಿತ್ತು. ಇದನ್ನು ವಿರೋಧಿಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರೂ ಪಾಲಿಕೆ ಜಗ್ಗಿರಲಿಲ್ಲ. ಹೀಗಾಗಿ ಬುಧವಾರದಿಂದ ಪಾಲಿಕೆ ವಿರುದ್ದ ಅನಿರ್ಧಿಷ್ಠಾವಧಿ ಧರಣಿಗೆ ಕರೆ ನೀಡಿದ್ದರು.
ಕಳೆದ ಗುರುವಾರದಿಂದ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಎರಗಿದ್ದ ಪಾಲಿಕೆ, ಅವರ ವಸ್ತುಗಳನ್ನು ನಾಶ ಪಡಿಸುತ್ತಾ ಕಾನೂನು ಮೀರಿ ವರ್ತಿಸಿದ್ದರು. ಈ ವೇಳೆ ನಗರದ ಹಲವು ಕಡೆ ವ್ಯಾಪಾರಿಗಳು ಅಧಿಕಾರಿಗಳಿಗೆ ಘೆರಾವ್ ಹಾಕಿ, ಕಾನೂನಿನ ಪಾಠವನ್ನೂ ಮಾಡಿದ್ದರು. ಜೊತೆಗೆ ತೆರವು ಕಾರ್ಯಾಚರಣೆಗೆ ಬಂದಿದ್ದ ವಾಹನದ ಅಡಿಯಲ್ಲಿ ಮಲಗಿ ಪ್ರತಿಭಟಿಸಿದ್ದರು.
“ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಾದರೆ, ಪಟ್ಟಣ ವ್ಯಾಪಾರಿ ಸಮಿತಿಯ ಸಭೆ ನಡೆದು ಅಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ, ಇದು ಕಾನೂನು’’ ಎಂದು ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಹೇಳುತ್ತಾರೆ. ಆದರೆ ಪಾಲಿಕೆಯು ಇದು ಯಾವುದನ್ನೂ ಪಾಲಿಸದೆ, ಸರ್ಕಾರವೇ ಗುರುತಿನ ಚೀಟಿ ನೀಡಿದ ಮತ್ತು ಗುರುತಿನ ಚೀಟಿ ನೀಡಲು ಸರ್ವೆ ಆಗಿರುವ ವ್ಯಾಪಾರಿಗಳನ್ನು ತೆರವುಗೊಳಿಸಿ, ಈ ವೇಳೆ ಮುಟ್ಟುಗೋಳು ಹಾಕಿದ್ದ ವಸ್ತುಗಳನ್ನು ನಾಶಪಡಿಸಿತ್ತು.
“ಮುಟ್ಟುಗೋಳು ಹಾಕಿರುವ ವಸ್ತುಗಳನ್ನು ಯಾವುದೆ ಕಾರಣಕ್ಕೂ ನಾಶ ಪಡಿಸಬಾರದು. ದಂಡ ಪಡೆದು ವ್ಯಾಪಾರಿಗಳಿಗೆ ಅವುಗಳನ್ನು ವಾಪಾಸು ಕೊಡಬೇಕು. ಆದರೆ ಪಾಲಿಕೆ ಇದನ್ನು ಮಾಡುತ್ತಿರಲಿಲ್ಲ” ಎಂದು ಮುಸ್ತಫಾ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಬೀದಿಬದಿ ವ್ಯಾಪಾರಿಗಳು!


