ಕೊರೊನಾ ಲಾಕ್ ಡೌನ್ ಸಮಯದಲ್ಲಿ ತೈಲ ಬೆಲೆ ಹೆಚ್ಚಳ ಮಾಡಿರುವುದು ಕೇಂದ್ರ ಸರ್ಕಾರದ ಸಂಪೂರ್ಣ ಅಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸೋನಿಯಾ ಜನರು ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ನಿರಂತರ 10 ನೇ ದಿನವೂ ಪೆಟ್ರೋಲ್ ಮತ್ತು ಡಿಸೆಲ್ ದರ ಏರಿಕೆಯಾಗಿರುವುದು ಜನರಿಗೆ ಹೆಚ್ಚುವರಿ ಹೊರೆ ಹಾಕಿದಂತಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿನ ಸಮಸ್ಯೆಯಿಂದ ಭಾರತದ ಸಾರ್ವಜನಿಕ ಆರೋಗ್ಯ, ಆರ್ಥಿಕತೆ ಮತ್ತು ಸಾಮಾಜಿಕ ಸವಾಲುಗಳು ಜನರನ್ನು ಕಾಡುತ್ತಿವೆ. ಮಾರ್ಚ್ ತಿಂಗಳಿಂದ ಕೊರೊನ ಸೋಂಕು ಆರಂಭವಾದ ಬಿಕ್ಕಟ್ಟಿನಿಂದ ಜನರು ಸಂಕಟಷ್ಟಕ್ಕೆ ಸಿಲುಕಿರುವುದು ನನಗೆ ಯಾತನೆಯನ್ನುಂಟು ಮಾಡಿದೆ. ಸರ್ಕಾರದ ಅಸೂಕ್ಷ್ಮತೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ ಎಂದು ದೂರಿದ್ದಾರೆ.
ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆಂದು ನಾನು ಎದುರು ನೋಡುತ್ತಿದ್ದೇನೆ. ಕೊರೊನಾ ಆರ್ಥಿಕ ಬಿಕ್ಕಟ್ಟಿನಿಂದ ಲಕ್ಷಾಂತರ ಮಂದಿ ಉದ್ಯೋಗವಿಲ್ಲದೆ ಸಂಕಷ್ಟದಲ್ಲೇ ಜೀವನ ದೂಡುವಂತಹ ಪರಿಸ್ಥಿತಿ ಬಂದಿದೆ.
ಸಣ್ಣ, ದೊಡ್ಡ ವ್ಯಾಪಾರಸ್ಥರು ಮತ್ತು ಮಧ್ಯಮ ವರ್ಗದವರು ಆದಾಯವಿಲ್ಲದೆ ತೊಂದರೆಯಲ್ಲಿದ್ದಾರೆ. ರೈತರು ಸಹ ಬದುಕು ನಡೆಸಲು ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ತೈಲದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಬರೆಹಾಕಿದೆ ಎಂದು ಆಪಾದಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಳೆದ ವಾರ ಭಾರೀ ಇಳಿಕೆಯಾಗಿತ್ತು. ಆದರೆ ಅದರ ಲಾಭವನ್ನು ಜನರಿಗೆ ತಲುಪಿಸಲೇ ಇಲ್ಲ. ಬದಲಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೇರಿ 2 ಲಕ್ಷ 60 ಸಾವಿರ ಕೋಟಿ ಆದಾಯದ ನಿರೀಕ್ಷೆಯಲ್ಲಿದೆ ಎಂದು ಹೇಳಿದ್ದಾರೆ.
ಜನರ ನರಳಾಟ ಹೆಚ್ಚಾಗಿದೆ. ಆದರೂ ಸರ್ಕಾರ ಕ್ರಮ ವಹಿಸಿಲಿಲ್ಲ. ಹಾಗಾಗಿ ಜನರನ್ನು ಭಯ ಮತ್ತು ಅಭದ್ರತೆ ಬಿಡದೆ ಕಾಡುತ್ತಿದೆ. ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಹೆಚ್ಚುವರಿ ಹೊರೆ ಹೊರಿಸಿದಂತಾಗಿದೆ.
ಕಳೆದ 6 ವರ್ಷಗಳಿಂದ ಅಬಕಾರಿ ಸುಂಕ ಹೆಚ್ಚಳ ಮಾಡುತ್ತಲೇ ಬಂದಿದೆ. ಪೆಟ್ರೋಲ್ ಮೇಲೆ 23.78ರೂ, ಡೀಸೆಲ್ ಮೇಲೆ 28.37 ರೂ ಹೇರಲಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 258% ರಷ್ಟು ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ 820% ರಷ್ಟು ಹೆಚ್ಚಿಸಿದೆ. ಇದರಿಂದ 18 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಕಚ್ಚಾರೈಲ ಬೆಲೆ ಕಡಿಮೆಯಾಗಿದ್ದರೂ ಅದರ ಲಾಭವನ್ನು ದೇಶದ ಜನರಿಗೆ ವರ್ಗಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.


