ಕೊರೊನಾ ನಿಯಂತ್ರಣಕ್ಕಾಗಿ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ವಿಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖಂಡ ಕುಮಾರಸ್ವಾಮಿ, “ಕೊರೊನಾ ಚಿಕಿತ್ಸೆಗೆ ಬೇಕಾಗುವ ಮೂಲಸೌಕರ್ಯ ಹೊಂದಿಸಿಟ್ಟುಕೊಳ್ಳದ, ರೋಗದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳದ, ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ?, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ವಿಷಯದಲ್ಲಿ ಎಡವಿವೆ” ಎಂದು ಬುಧವಾರ ಹೇಳಿದ್ದಾರೆ.
ಈ ಬಗ್ಗೆ ಸರಣೆ ಟ್ವೀಟ್ ಮಾಡಿರುವ ಅವರು, “ಕೇಂದ್ರ, ರಾಜ್ಯ ಸರ್ಕಾರಗಳಿಗೆ 2ನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಗಳಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದೆಲ್ಲದರ ಮಧ್ಯೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್ ಎಂಬ ಚುಚ್ಚು ಮದ್ದಿಗೆ ದೇಶದಲ್ಲಿ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಬ್ಲಿಗಿ ಮರ್ಕಜ್ ಮತ್ತು ಕುಂಭಮೇಳಕ್ಕೂ ಹೋಲಿಕೆ ಸರಿಯಲ್ಲ: ಉತ್ತರಖಂಡ ಸಿಎಂ
“ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಇಷ್ಟ ಬಂದಂತೆ ರಫ್ತು ಮಾಡಿದ್ದ ಕೇಂದ್ರ ಸರ್ಕಾರವು, ಟೀಕೆಗಳು ಬರುತ್ತಲೇ, ಔಷಧಿಗೆ ಅಭಾವ ಎದುರಾಗುತ್ತಲೇ ರಫ್ತು ನಿಷೇಧಿಸಿದೆ. ಆದರೆ, ಈಗ ಕಾಲ ಮಿಂಚಿದೆ. ಒಂದೆಡೆ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗಿದೆ. ಆದರೆ, ದೇಶದ ಆಸ್ಪತ್ರೆಗಳು ರೆಮ್‌ಡಿಸಿವಿರ್‌ಗಾಗಿ ಕಾದು ಕೂರುವ ಪರಿಸ್ಥಿತಿ ಉದ್ಭವಿಸಿದೆ” ಎಂದು ಅವರು ಹೇಳಿದ್ದಾರೆ.
“ಈ ಮಧ್ಯೆ ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ, ನಕಲಿ ಔಷಧ ಪೂರೈಕೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಒಂದೆಡೆ ಔಷಧದ ದಾಸ್ತಾನು ಮಾಡದೇ ವಿಫಲವಾಗಿರುವ ಸರ್ಕಾರ, ಕಾಳ ಸಂತೆ, ನಕಲಿ ಹಾವಳಿ ನಿಯಂತ್ರಿಸದೇ ಅದಕ್ಷತೆ ಮೆರೆದಿದೆ. ಇಲ್ಲಿ ಕೇಂದ್ರ, ರಾಜ್ಯ ಎಂಬ ಮಾತಿಲ್ಲ. ಎರಡೂ ಸರ್ಕಾರಗಳೂ ಕೋವಿಡ್ ವಿಷಯದಲ್ಲಿ ಎಡವಿವೆ” ಎಂದು ಅವರು ಹೇಳಿದ್ದಾರೆ.
“ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಆದರೆ, ಎಚ್ಚರಿಕೆಗಳನ್ನು ಕಡೆಗಣಿಸಿ, ನಾಗರಿಕರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ನಡೆಗಳು ಖಂಡನೀಯ. ಸರ್ಕಾರಗಳು ಕನಿಷ್ಠ, ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನಾದರೂ ದಾಸ್ತಾನು ಮಾಡಿಕೊಳ್ಳಬೇಕು. ಅದಿಲ್ಲದೇ, ಸಭೆಗಳನ್ನು ನಡೆಸಿ ಪ್ರಯೋಜನವಿಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಇಫ್ತಾರ್ ಕೂಟ ನಡೆಸುವಂತಿಲ್ಲ, ರಂಜಾನ್‌ಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ



Both lockdown and Scarcity of vaccine are two failures of government
Vacillation needs now