ಎರಡು ದಿನಗಳ ಹಿಂದೆ ಕುಂಭಮೇಳಕ್ಕೆ ಭೇಟಿ ನೀಡಿದ್ದ ಅಖಿಲೇಶ್ ಯಾದವ್‌ಗೆ ಕೊರೊನಾ ಸೋಂಕು
PC:[email protected]

ಏಪ್ರಿಲ್ 11 ರಂದು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶದ ಸಚಿವ ಅಶುತೋಷ್ ಟಂಡನ್ ಅವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, “ನನ್ನ ಕೊರೊನಾ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ. ನಾನು ಮನೆಯಲ್ಲಿಯೇ ಐಸೋಲೇಟ್ ಆಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ. ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಅಖಿಲೇಶ್ ಯಾದವ್ ಅವರು ಇತ್ತೀಚೆಗೆ ಏಪ್ರಿಲ್ 11 ರಂದು ಹರಿದ್ವಾರಕ್ಕೆ ಭೇಟಿ ನೀಡಿದ್ದರು, ಅಲ್ಲಿನ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಯಾದವ್ ಅವರೊಂದಿಗೆ ಅಖರಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದರು.

ಅಲ್ಲಿಂದ ಬಂದು ಲಕ್ನೋ ತಲುಪಿದ ಅಖಿಲೇಶ್ ಯಾದವ್, ಮಂಗಳವಾರ ತಾವೇ ಸ್ವತಃ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು.

ಇನ್ನು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಶುತೋಷ್ ಟಂಡನ್ ಅವರು “ಕೊರೊನಾ ಆರಂಭಿಕ ರೋಗಲಕ್ಷಣಗಳನ್ನು ಗಮನಿಸಿದ ನಂತರ, ನಾನು ಕೊರೊನಾ ಪರೀಕ್ಷೆ ಮಾಡಿಸಿದ್ದು, ಸೋಂಕು ಧೃಢಪಟ್ಟಿದೆ.  ವೈದ್ಯರ ಸಲಹೆಯ ಮೇರೆಗೆ ನಾನು ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿದ್ದವರು ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಹೇಳಿದ್ದಾರೆ.

ಬುಧವಾರ ಕುಂಭಮೇಳದ ಮೂರನೇ ಮತ್ತು ಅತಿದೊಡ್ಡ ‘ಶಾಹಿ ಸ್ನಾನ’ದ ಸಂದರ್ಭದಲ್ಲಿ ಭಕ್ತರು ಹರಿದ್ವಾರದ ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಮುಖ ಘಟನೆಗಳ ವೇಳಾಪಟ್ಟಿ ಪ್ರಕಾರ, ನಾಲ್ಕು ‘ಶಾಹಿ ಸ್ನಾನ’ ಮತ್ತು ಒಂಬತ್ತು ‘ಗಂಗಾ ಸ್ನಾನ’ಗಳು ಈ ವರ್ಷ ಹರಿದ್ವಾರದಲ್ಲಿ ನಡೆಯಲಿದೆ. ಇದರಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದು, ಕೊರೊಣಾ ಹಾಟ್‌ಸ್ಪಾಟ್ ಆಗುವ ಸಂಭವವಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯುಪಿಎಗಿಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದು!

LEAVE A REPLY

Please enter your comment!
Please enter your name here