Homeಮುಖಪುಟ"ಸಂವಿಧಾನವನ್ನು ರಕ್ಷಿಸಿ, ಅದು ನಮ್ಮೆಲ್ಲರನ್ನೂ ರಕ್ಷಿಸುತ್ತದೆ." ಸಂವಿಧಾನದ ಪೀಠಿಕೆಯ ರಾಷ್ಟ್ರಪಠ್ಯವಾದ ಬಗೆ- ಎ.ನಾರಾಯಣ

“ಸಂವಿಧಾನವನ್ನು ರಕ್ಷಿಸಿ, ಅದು ನಮ್ಮೆಲ್ಲರನ್ನೂ ರಕ್ಷಿಸುತ್ತದೆ.” ಸಂವಿಧಾನದ ಪೀಠಿಕೆಯ ರಾಷ್ಟ್ರಪಠ್ಯವಾದ ಬಗೆ- ಎ.ನಾರಾಯಣ

ಎಪ್ಪತ್ತು ವರ್ಷಗಳಲ್ಲಿ ಎಂದೂ ಜನ ಸಂವಿಧಾನವನ್ನು ಎದೆಗವಚಿಕೊಂಡು, ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಎತ್ತಿಹಿಡಿದುಕೊಂಡು ಆಳುವ ಸರ್ಕಾರವೊಂದರ ಅಹಂಗೆ ಇರಿದ ಉದಾಹರಣೆ ಇಲ್ಲ. ಈಗ ಅದು ಆಗುತ್ತಿದೆ.

- Advertisement -
- Advertisement -

ಗಣರಾಜ್ಯೋತ್ಸವವನ್ನು ಆಚರಿಸುವುದು ಸಂವಿಧಾನ ಜಾರಿಗೆ ಬಂದ ದಿನದ ಸ್ಮರಣೆಗಾಗಿ. ಆದರೆ ಸಂವಿಧಾನ ಪ್ರಜ್ಞೆಯೊಂದು ಈ ತನಕ ಗಣರಾಜ್ಯ ಸಂಭ್ರಮದ ಭಾಗವಾಗಿರಲಿಲ್ಲ. ವಾಸ್ತವದಲ್ಲಿ ಅಲ್ಲಿ ಸಂಭ್ರಮವೇ ಇರುತ್ತಿರಲಿಲ್ಲ. ಈ ಬಾರಿ ಜನ ಸಂವಿಧಾನವನ್ನು ಮೊತ್ತ ಮೊದಲಿಗೆ ಸಂಭ್ರಮಿಸಿದ ಕ್ಷಣಕ್ಕೆ ಗಣರಾಜ್ಯ ದಿನ ಸಾಕ್ಷಿಯಾಯ್ತು.

ಎಪ್ಪತ್ತು ವರ್ಷಗಳಲ್ಲಿ ಆಗದೆ ಇದ್ದದ್ದು ಈಗ ಆಗುತ್ತಿದೆ. ನಿಜಕ್ಕೂ. ಇದಕ್ಕೆ ತಾಜಾ ಮತ್ತು ತೀರಾ ಇತ್ತೀಚೆಗಿನ ಉದಾಹರಣೆ ಎಂದರೆ ಈ ವರ್ಷದ ಗಣರಾಜ್ಯ ದಿನಾಚರಣೆ. ಸಂದ ಏಳು ದಶಕಗಳಲ್ಲಿ ಗಣರಾಜ್ಯೋತ್ಸವ ನಡೆದಿದೆ. ದೆಹಲಿಯಲ್ಲಿ ಮಿಲಿಟರಿ ಪಥಸಂಚಲನ ನಡೆದಿದೆ. ಶಾಲೆಗಳಲ್ಲಿ ಧ್ವಜಾರೋಹಣ ನಡೆದಿದೆ. ಸರಕಾರೀ ಕಚೇರಿಗಳಿಗೆ ರಜೆ ನೀಡಲಾಗಿದೆ. ಇನ್ನೂ ಒಂದಷ್ಟು ಯಾಂತ್ರಿಕ, ತಾಂತ್ರಿಕ ಕಟ್ಟುಕಟ್ಟಳೆಗಳೊಂದಿಗೆ ಗಣರಾಜ್ಯೋತ್ಸವ ಮುಗಿದುಹೋಗಿದೆ. ಈ ವರ್ಷ ಹಾಗಲ್ಲ. ಈ ಸಲ ಜನವರಿ ಇಪ್ಪತ್ತಾರರಂದು ದೇಶ ಕಂಡದ್ದು ಅಕ್ಷರಶಃ “ಸಂವಿಧಾನ ಕ್ಷಣ”ವನ್ನು. (India’s Constitutional Moment).

ಗಣರಾಜ್ಯೋತ್ಸವವನ್ನು ಆಚರಿಸುವುದು ಸಂವಿಧಾನ ಜಾರಿಗೆ ಬಂದ ದಿನದ ಸ್ಮರಣೆಗಾಗಿ. ಆದರೆ ಸಂವಿಧಾನ ಪ್ರಜ್ಞೆಯೊಂದು ಈ ತನಕ ಗಣರಾಜ್ಯ ಸಂಭ್ರಮದ ಭಾಗವಾಗಿರಲಿಲ್ಲ. ವಾಸ್ತವದಲ್ಲಿ ಅಲ್ಲಿ ಸಂಭ್ರಮವೇ ಇರುತ್ತಿರಲಿಲ್ಲ. ಈ ಬಾರಿ ಜನ ಸಂವಿಧಾನವನ್ನು ಮೊತ್ತ ಮೊದಲಿಗೆ ಸಂಭ್ರಮಿಸಿದ ಕ್ಷಣಕ್ಕೆ ಗಣರಾಜ್ಯ ದಿನ ಸಾಕ್ಷಿಯಾಯ್ತು. ಜನ ಸಂವಿಧಾನವನ್ನು ಪ್ರದರ್ಶಿಸಿದರು, ಸಂವಿಧಾನದ ಮೇಲೆ ಹಾಡು ಕಟ್ಟಿ ಹಾಡಿದರು, ಚಿತ್ರ ಬರೆದು ತೋರಿಸಿದರು – ಜನಗಣಮನ ರಾಷ್ಟ್ರಗೀತೆಯಾದರೆ, ಸಂವಿಧಾನದ ಪೀಠಿಕೆ ಅಘೋಷಿತ ರಾಷ್ಟ್ರ ಪಠ್ಯವಾಗಿಬಿಟ್ಟಿತು. ರಾಷ್ಟ್ರದ ಉದ್ದಗಲಕ್ಕೂ ಜನ ಅತ್ಯುತ್ಸಾಹದಿಂದ ಸಾಮೂಹಿಕವಾಗಿ ಅದನ್ನು ಪಠಿಸಿದರು.

ಈ ಹೊಸ ವಿದ್ಯಮಾನಕ್ಕೆ ಪೀಠಿಕೆಯಾದದ್ದು ದೇಶಾದ್ಯಂತ ನಡೆದ ಮತ್ತು ನಡೆಯುತ್ತಿರುವ ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿ ಚಳವಳಿ. ಸಂವಿಧಾನ ಮತ್ತು ರಾಷ್ಟ್ರ ಧ್ವಜ ಈ ಚಳವಳಿಯ ಮೂಲಕ ಜನಮನವನ್ನು ಮರುಪ್ರವೇಶಿಸಿದ ರೀತಿ ಅನನ್ಯವಾದದ್ದು. ಈ ಚಳವಳಿಯ ಭಾಗವಾಗಿ ಚರಿತ್ರೆಯಲ್ಲೇ ಮೊದಲು ಎಂಬಂತೆ ಈ ದೇಶದ ಕ್ರಿಶ್ಚಿಯನ್ನರು ಚರ್ಚ್ ಒಂದರಲ್ಲಿ ಸಂವಿಧಾನದ ಪೀಠಿಕೆ ಓದಿದರು. ಅದಕ್ಕೆ ಮೊದಲು ಮುಸ್ಲಿಮರು ಮಸೀದಿಯೊಂದರ ಅಂಗಣದಲ್ಲಿ ಸಂವಿಧಾನದ ಪ್ರತಿಗಳನ್ನು ಪ್ರದರ್ಶಿಸಿದರು, ಪೀಠಿಕೆ ಓದಿದರು. ಸಾವಿರ ಸಾವಿರ ಸಂಖ್ಯೆಯ ಹಿಂದೂಗಳು ತಾವು ಕಂಡಕಂಡಲ್ಲಿ ಸಂವಿಧಾನದ ಪೀಠಿಕೆಯನ್ನು ಪಠಿಸಿ ಈ ಪವಿತ್ರ ಕೆಲಸ ನಡೆಸಿದ ಸ್ಥಳವೇ ದೇವಾಲಯ ಅಂತ ಮೌನವಾಗಿ ಸಾರಿದರು. ಎಲ್ಲೆಲ್ಲೂ ಸಂವಿಧಾನ. ಎಲ್ಲರ ಕೈಯ್ಯಲ್ಲೂ ಸಂವಿಧಾನದ ಪ್ರತಿಗಳು. ಎಲ್ಲರ ಬಾಯಲ್ಲೂ ಸಂವಿಧಾನದ ಪೀಠಿಕೆ. ಸಂವಿಧಾನವು ಹಿಂದೆಂದೂ ಈ ಪರಿಯಲ್ಲಿ ಜನಮಾನಸದ ಭಾಗವಾಗಿಹೋದದನ್ನು, ಸಂವಿಧಾನದ ಸುತ್ತ ಒಂದು ಹೊಸ ಜಾನಪದ ಸಂಸ್ಕೃತಿಯೇ ಹುಟ್ಟಿಕೊಂಡದ್ದನ್ನು ಈ ಹಿಂದೆ ದೇಶ ಕಂಡಿರಲಿಲ್ಲ. ಇದು ಸಂವಿಧಾನ ಕ್ಷಣ. ಈ ಜನ ಸಂವಿಧಾನಕ್ಕೆ ರಕ್ಷಣೆ ಕೇಳುತ್ತಿದ್ದಾರೆ. ಈ ಜನ ತಮ್ಮ ರಕ್ಷಣೆಗಾಗಿ ಸಂವಿಧಾನವನ್ನು ಅಪ್ಪಿಕೊಳ್ಳುತಿದ್ದಾರೆ; ‘ಸಂವಿಧಾನಕ್ಕಾಗಿ ನಾವು’, ‘ನಮಗಾಗಿ ಸಂವಿಧಾನ’ ಎನ್ನುತ್ತಿದ್ದಾರೆ. ಈತನಕ ರಾಜಕೀಯಾತ್ಮಕವಾಗಿದ್ದದ್ದು ಈಗ ಭಾವನಾತ್ಮಕವಾಗುತ್ತಿದೆ.

ಹಿಂದೊಮ್ಮೆ ಸಂವಿಧಾನದ ರಕ್ಷಣೆಗಾಗಿ ಈ ದೇಶದಲ್ಲಿ ಸುಮಾರು ಮೂವತ್ತು ವರ್ಷಗಳ ಸುದೀರ್ಘ ಸಂಘರ್ಷವೊಂದು ನಡೆದದ್ದು ಬಹುಮಂದಿಗೆ ಗೊತ್ತಿರದ ಆಧುನಿಕ ಭಾರತದ ಚರಿತ್ರೆಯ ಭಾಗ. ಸಂವಿಧಾನ ಜಾರಿಗೆ ಬಂದನಂತರ ಆಳುವ ಸರಕಾರಗಳು ಮನಬಂದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟ ವೇಳೆಯಲ್ಲಿ ಸಂವಿಧಾನ ಮತ್ತು ಸಂಸತ್ತಿನ ನಡುವೆ ಹುಟ್ಟಿಕೊಂಡ ಸಂಘರ್ಷ ಇದು. ಇಲ್ಲಿ ಸಂವಿಧಾನದ ವಕಾಲತ್ತು ವಹಿಸಿದ್ದು ಸ್ವತಃ ಸುಪ್ರೀಂಕೋರ್ಟ್. ಸಂಘರ್ಷದ ಮೂಲದಲ್ಲಿ ಇದ್ದದ್ದು ಸಂವಿಧಾನ ಮೇಲೋ, ಸಂಸತ್ತು ಮೇಲೋ ಎನ್ನುವ ಪ್ರಶ್ನೆ. ಆಳುವ ಸರಕಾರ ತನ್ನ ವಾದದಲ್ಲಿ ಸಂವಿಧಾನಕ್ಕಿಂತ ಸಂಸತ್ತು ಮೇಲೆ ಎಂದಿತು. ಹೇಳಿಕೇಳಿ ಇದು ಪ್ರಜಾತಂತ್ರ. ಪರಮಾಧಿಕಾರ ಜನರಿಗೆ ಸೇರಿದ್ದು. ಆದುದರಿಂದ ಜನರ ಪ್ರಾತಿನಿಧಿಕ ಸಂಸ್ಥೆಯಾದ ಸಂಸತ್ತು ಸಂವಿಧಾನವನ್ನು ಬೇಕಾದಂತೆ ಬದಲಾಯಿಸುವ ಸಂಪೂರ್ಣ ಹಕ್ಕನ್ನು ಮತ್ತು ಅಧಿಕಾರವನ್ನು ಹೊಂದಿದೆ ಎನ್ನುವುದಾಗಿತ್ತು ವಾದ. ಇದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದಿತು ಸುಪ್ರೀಂಕೋರ್ಟ್.

ಸಂಸತ್ತು ಅಸ್ತಿತ್ವಕ್ಕೆ ಬಂದಿರುವುದೇ ಸಂವಿಧಾನದ ಪ್ರಕಾರ. ಹಾಗಿರುವಾಗ ಸಂಸತ್ತು ಸಂವಿಧಾನದ ಸೃಷ್ಟಿ. ಒಂದು ಸೃಷ್ಟಿ ತನ್ನ ಸೃಷ್ಟಿಕರ್ತನನ್ನೇ ಬದಲಿಸಲಾದೀತೇ? ಎಂಬ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಮುಂದಿರಿಸಿತು. ಸಂಸತ್ತು ತಾನು ಸಂವಿಧಾನದ ಸೃಷ್ಟಿ ಎನ್ನುವ ವಾದ ಸರಿ ಇಲ್ಲ ಎಂದಿತು. ಅದರ ಪ್ರಕಾರ ಸಂವಿಧಾನವೂ ಪರೋಕ್ಷವಾಗಿ ಸಂಸತ್ತಿನೆ ಸೃಷ್ಟಿ. ಯಾಕೆಂದರೆ ಸಂವಿಧಾನವನ್ನು ರಚಿಸಿದ ಸಂವಿಧಾನ ಸಭೆಯೂ ಸಂಸತ್ತಿನ ಪೂರ್ವರೂಪ ಮತ್ತು ಪ್ರತಿರೂಪ. ಸುಪ್ರೀಂಕೋರ್ಟ್ ಒಪ್ಪಲಿಲ್ಲ. ಅದು ಬೇರೆ ಇದು ಬೇರೆ ಅಂತ ಸುಪ್ರೀಂಕೋರ್ಟ್ ಹೇಳಿತು. ಇದನ್ನು ಒಪ್ಪಿಕೊಳ್ಳಲು ಸರಕಾರ ಸಿದ್ಧವಿರಲಿಲ್ಲ. ಹಗ್ಗಜಗ್ಗಾಟ ಮೂವತ್ತು ವರ್ಷಗಳಿಗೂ ಹೆಚ್ಚುಕಾಲ ನಡೆದು ಹಲವಾರು ಪ್ರಕರಣಗಳ ತೀರ್ಪುಗಳು ಈ ಸಂಘರ್ಷವನ್ನು ಒಮ್ಮೆ ಅತ್ತ, ಒಮ್ಮೆ ಇತ್ತ ವಾಲಿಸಿದವು.

ಕೊನೆಗೂ 1974ರ ಕೇಶವಾನಂದ ಭಾರತೀ ಪ್ರಕರಣದಲ್ಲಿ ಯಾರೂ ಸೋಲದ, ಆದರೆ ಯಾರೂ ಗೆಲ್ಲದ ರೀತಿಯ ತೀರ್ಪೋಂದನ್ನು ನೀಡಿ ಪ್ರಕರಣವನ್ನು ಸುಪ್ರೀಂಕೋರ್ಟ್ ಒಂದು ಹಂತಕ್ಕೆ ಇತ್ಯರ್ಥ ಪಡಿಸಿತು. ಕೇಶವಾನಂದ ಭಾರತೀ ಪ್ರಕರಣದ ತೀರ್ಪಿನ ಪ್ರಕಾರ ಸಂಸತ್ತು ಪರಮೋಚ್ಚವಾದದ್ದು ಮತ್ತು ಆ ಕಾರಣಕ್ಕೆ ಅದಕ್ಕೆ ಸಂವಿಧಾನದ ಯಾವುದೇ ಭಾಗವನ್ನು (ಮೂಲಭೂತ ಹಕ್ಕುಗಳೂ ಸೇರಿದಂತೆ) ತಿದ್ದುಪಡಿ ಮಾಡುವ ಅಧಿಕಾರ ಇದೆ. ಆದರೆ ಅಂತಹ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಯನ್ನು(Basic Structure) ಯಾವುದೇ ಕಾರಣಕ್ಕೂ ಶಿಥಿಲಗೊಳಿಸಬಾರದು. ಸಂಸತ್ತು ಮಾಡಿದ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಗೆ ಭಂಗ ತರುವಂತವುಗಳೇ ಎನ್ನುವುದನ್ನು ನಿರ್ಣಯಿಸುವ ಅಧಿಕಾರ ನ್ಯಾಯಾಂಗಕ್ಕೆ ಸೇರಿದ್ದು. ಅಲ್ಲಿಗೆ ಸಂಸತ್ತಿನ ಪರಮೋಚ್ಚ ಅಧಿಕಾರವೂ ಸ್ಥಾಪನೆಯಾಯಿತು. ಸಂವಿಧಾನ ಸಂಸತ್ತಿಗಿಂತ ಮೇಲೆ ಎನ್ನುವುದು ಒಂದು ಹಂತಕ್ಕೆ ಸ್ಥಾಪಿತವಾಯಿತು.

ಇದು ಅಂದಿನ ಕತೆ. ಅಂದು ಸಂಸತ್ತು ಮತ್ತು ಸಂವಿಧಾನದ ನಡುವಣ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿ ಸಂವಿಧಾನವನ್ನು ರಕ್ಷಿಸಿದ್ದು ನ್ಯಾಯಾಂಗ. ಇಂದು ಸಂವಿಧಾನದ ರಕ್ಷಣೆಗೆ ಕಂಕಣಬದ್ಧರಾಗಿರುವುದು ಸಾಮಾನ್ಯ ಜನ. ಈ ಹೊಣೆಗಾರಿಕೆಯ ಹೆಗಲು ಬದಲಾವಣೆಯ ಹಿಂದೆ ಎರಡು ಕಾರಣಗಳಿವೆ. ಮೊದಲನೆಯ ಕಾರಣ ಹೀಗಿದೆ. ನ್ಯಾಯಾಂಗ ಮಧ್ಯೆ ಪ್ರವೇಶಿಸಿ ಸಂವಿಧಾನವನ್ನು ರಕ್ಷಿಸಬೇಕಾದರೆ ಅಲ್ಲಿ ಎಲ್ಲವೂ ಸ್ಪಷ್ಟವಾಗಿರಬೇಕು. ಅಂದರೆ ಸಂವಿಧಾನದ ಮೇಲೆ ನಡೆಯುತ್ತಿರುವ ಪ್ರಹಾರ ಸ್ಪಷ್ಟವಾಗಿ ಕಾನೂನಿನ ದರ್ಶಕದ ಮೂಲಕ ಗುರುತಿಸಬಲ್ಲದಾಗಿರಬೇಕು. ಈಗ ಸಂವಿಧಾನದ ಮೇಲೆ ನಡೆಯುವ ದಾಳಿ ಭಿನ್ನವಾಗಿರುವಂತದ್ದು. ಅದನ್ನು ಕಾನೂನಿನ ಅಡಿ ಇದಮಿತ್ತಂ ಅಂತ ಗುರುತಿಸುವ ಹಾಗಿಲ್ಲ. ಕಾನೂನಿನಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎನ್ನುವಂತೆ ಅಟ್ಟಣಿಕೆ ಸಿದ್ಧಪಡಿಸಿ ಆ ನಂತರ ಒಳಗೊಳಗಿಂದಲೇ ಸಂವಿಧಾನವನ್ನು ಶಿಥಿಲಗೊಳಿಸುವ ರೀತಿಯ ರಾಜಕೀಯ ಈಗ ನಡೆಯುತ್ತಿರುವುದು.

ಆದಕಾರಣ ಈಗ ಸಂವಿಧಾನಕ್ಕೆ ಎದುರಾಗಿರುವ ಆತಂಕವನ್ನು ನಿವಾರಿಸಲು ಸುಪ್ರೀಂಕೋರ್ಟ್‍ನ ಮುಂದಿರುವ ತಾರ್ಕಿಕ, ತಾಂತ್ರಿಕ ಸಾಧ್ಯತೆಗಳೇ ಸಾಲುವುದಿಲ್ಲ. ಎರಡನೆಯ ಕಾರಣ ಇದಕ್ಕಿಂತ ಹೆಚ್ಚು ಗಂಭೀರವಾಗಿದೆ. ದೇಶದಲ್ಲಿ ಎಲ್ಲವೂ ಬದಲಾಗಿರುವಂತೆ ನ್ಯಾಯಾಂಗವೂ ಬದಲಾಗಿದೆ. ಕೇಶವಾನಂದ ಭಾರತೀ ಪ್ರಕರಣದ ಕಾಲದ ನ್ಯಾಯಾಂಗವಲ್ಲ ಇಂದಿನ ನ್ಯಾಯಾಂಗ. ಆಗಲೂ ಅಲ್ಲೋರ್ವ ಇಲ್ಲೋರ್ವ ನ್ಯಾಯಾಧೀಶರುಗಳ ಸಾಂವಿಧಾನ ಬದ್ಧತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಆದರೆ ಸಾಂಸ್ಥಿಕವಾಗಿ ನ್ಯಾಯಾಂಗ ಗಟ್ಟಿಯಾಗಿಯೇ ಇತ್ತು. ಈಗ ನ್ಯಾಯಾಂಗದ ಸಾಂಸ್ಥಿಕ ಗಟ್ಟಿತನದ ಬಗ್ಗೆಗೆನೇ ಸಂಶಯ ಹುಟ್ಟಿಕೊಂಡಿದೆ. ಒಂದರ್ಥದಲ್ಲಿ ನ್ಯಾಯಾಧೀಶರುಗಳ ಕಟಕಟೆಯಲ್ಲಿ ನಿಂತಿದೆ. ಜನಾಭಿಪ್ರಾಯದ ಮೇಲೆ ನ್ಯಾಯನಿರ್ಣಯ ಮಾಡುವ ನ್ಯಾಯಾಂಗದ ಪರಿಪಾಠ, ತನ್ನೊಳಗಿನ ಹುಳುಕನ್ನು ಪತ್ರಿಕಾಗೋಷ್ಟಿ ನಡೆಸಿ ವಿವರಿಸುವ ಮಟ್ಟಿಗಿನ ನ್ಯಾಯಾಧೀಶರುಗಳ ನೈತಿಕ ಪತನ, ಕಾನೂನಾತ್ಮಕ ಸಮರ್ಥನೆಯೇ ಇಲ್ಲದೆ ನ್ಯಾಯಾಲಯಗಳು ನೀಡುವ ತೀರ್ಪುಗಳು ಇತ್ಯಾದಿಗಳನ್ನೆಲ್ಲಾ ನೋಡುತ್ತಿದ್ದರೆ ಸಂವಿಧಾನದ ರಕ್ಷಣೆಗೆ ನ್ಯಾಯಾಂಗವನ್ನೇ ನಂಬಿ ಕುಳಿತುಕೊಳ್ಳುವ ಹಾಗಿಲ್ಲ. ಇದು ದೇಶದ ಜನರಿಗೆ ಹೇಗೋ ಮನವರಿಕೆಯಾಗಿ ಬಿಟ್ಟಿದೆ. ಈ ದೇಶದ ಪ್ರಜಾತಂತ್ರ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಅದ್ಯಾವುದೋ ಅಗೋಚರ ಶಕ್ತಿ ಸಂವಿಧಾನಕ್ಕೆ ಒದಗಿರುವ ಅಪಾಯವನ್ನು ಜನರಿಗೆ ತಿಳಿಸಿವೆ. ಅವರು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಅವರಿಗೆ ನಾಯಕತ್ವ, ಮಾರ್ಗದರ್ಶನ, ಆಧಾರ, ಆಶ್ವಾಸನೆ ಎಲ್ಲವೂ ಸಂವಿಧಾನವೇ ಆಗಿಬಿಟ್ಟಿದೆ.

ಒಂದೆಡೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಬ್ಬರಿಸುತ್ತಿರುವ ರಾಜಕೀಯ ಶಕ್ತಿ, ಇನ್ನೊಂದೆಡೆ ಹಲವು ವಿರೋಧಾಭಾಸಗಳನ್ನೂ ಮೈಗೂಡಿಸಿಕೊಂಡಿದ್ದರೂ ಸಮಷ್ಟಿ ನೆಲೆಯಲ್ಲಿ ಸಂವಿಧಾನವನ್ನು ರಕ್ಷಿಸಿಯೇ ತೀರುತ್ತೇವೆ ಎಂದು ಮುನ್ನುಗ್ಗುತ್ತಿರುವ ಜನಶಕ್ತಿ. ಇವೆರಡನ್ನೂ ನೋಡುತ್ತಿದ್ದರೆ ಭಾರತದ ಪ್ರಜಾತಂತ್ರವನ್ನು ಶಿಥಿಲಗೊಳಿಸುವ ಮತ್ತು ಸಶಕ್ತಗೊಳಿಸುವ ವೈರುಧ್ಯಮಯ ಶಕ್ತಿಗಳೆರಡು ಮುಖಾಮುಖಿಯಾದಂತೆ ಕಾಣಿಸುತ್ತದೆ. ಈ ಮುಖಾಮುಖಿಯ ವ್ಯಕ್ತರೂಪವನ್ನೇ ಈ ಬಾರಿ ಗಣರಾಜ್ಯೋತ್ಸವದಲ್ಲಿ ನಾವು ಕಂಡದ್ದು.

ಕೊನೆಯದಾಗಿ ಇನ್ನೊಮ್ಮೆ ಹೇಳಬೇಕು. ಕೆಂಪುಕೋಟೆಯ ಕೊತ್ತಲದ ಮೇಲೇರಿ ಕೂಗಿಕೂಗಿ ಹೇಳಬೇಕು. ಎಪ್ಪತ್ತು ವರ್ಷಗಳಲ್ಲಿ ಆಗದ್ದು ಈಗ ಆಗುತ್ತಿದೆ. ನಿಜಕ್ಕೂ ಆಗುತ್ತಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಗುತ್ತಿದೆ. ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಆಗುತ್ತಿದೆ. ಎಪ್ಪತ್ತು ವರ್ಷಗಳಲ್ಲಿ ಎಂದೂ ಜನ ಸಂವಿಧಾನವನ್ನು ಎದೆಗವಚಿಕೊಂಡು, ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಎತ್ತಿಹಿಡಿದುಕೊಂಡು ಆಳುವ ಸರ್ಕಾರವೊಂದರ ಅಹಂಗೆ ಇರಿದ ಉದಾಹರಣೆ ಇಲ್ಲ. ಈಗ ಅದು ಆಗುತ್ತಿದೆ. ಅಂದರೆ ಆಳುವ ಸರಕಾರವೊಂದರ ಮೇಲೆ ಎಂದೂ ಕುಸಿಯದ ಮಟ್ಟಕ್ಕೆ ಒಂದು ದೊಡ್ಡ ಸಂಖ್ಯೆಯ ಜನರ ಭರವಸೆ ಕುಸಿದಿದೆ. ಆಳುವ ಸರಕಾರವನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿದ್ದ ಎಲ್ಲಾ ಸಂಸ್ಥೆಗಳ ಮೇಲಿನ ಭರವಸೆಯೂ ಕುಸಿದಿದೆ. ಅದೇವೇಳೆ ಅವರಿಗೆ ಎಲ್ಲಾ ನಿರಾಶೆಗಳಾಚೆಗಿನ ಭರವಸೆಯಾಗಿ, ಎಲ್ಲಾ ಕತ್ತಲೆಯ ಆಚೆಗಿನ ಬೆಳಕಾಗಿ, ಎಲ್ಲಾ ದ್ವಂದ್ವಗಳಾಚೆಗಿನ ಸ್ಪಷ್ಟತೆಯಾಗಿ, ಎಲ್ಲಾ ತತ್ವಹೀನತೆಯಾಚೆಗಿನ ಪರತತ್ವವಾಗಿ ಸಂವಿಧಾನ ಕಾಣಿಸುತ್ತಿದೆ. “ಧರ್ಮವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ” ಅಂತ ಹೇಳುತ್ತಾ, ಹೇಳುತ್ತಾ ಯಾವ ಧರ್ಮವೂ ಮೆಚ್ಚದ ರೀತಿಯ ರಾಜಕೀಯ ನಡೆಸುತ್ತಿರುವ ಮಂದಿಗೆ ಈ ಜನ ಹೇಳುತ್ತಿದ್ದಾರೆ: “ಸಂವಿಧಾನವನ್ನು ರಕ್ಷಿಸಿ, ಅದು ನಮ್ಮೆಲ್ಲರನ್ನೂ ರಕ್ಷಿಸುತ್ತದೆ.” ಭಾರತೀಯ ಧರ್ಮಕ್ಕೆ ಸಂವಿಧಾನವೇ ಧರ್ಮಗ್ರಂಥ ಎನ್ನುವ ಸಂದೇಶ ಎತ್ತೆತ್ತಲೂ ಹರಿದಾಡುತ್ತಿದೆ. ಇದನ್ನು ಸಂವಿಧಾನ ಕ್ಷಣ ಅಂತಲೇ ಕರೆಯಬೇಕಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...