ಮಂಗಳವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ತಿಂಗಳ ಚೀತಾ ಮರಿ ಸಾವನ್ನಪ್ಪಿದೆ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜ್ವಾಲಾ ಎಂಬ ಹೆಣ್ಣು ಚೀತಾಗೆ ಜನಿಸಿದ ನಾಲ್ಕು ಮರಿಗಳಲ್ಲಿ ಒಂದು ಮರಿ ಸಾವನ್ನಪ್ಪಿದೆ.ಇದು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಗೊಂಡ 20 ಚೀತಾಗಳಲ್ಲಿ ಒಂದಾಗಿದೆ.
ಮರಿಯ ಸಾವಿನೊಂದಿಗೆ ಉದ್ಯಾನವನದಲ್ಲಿ ಎರಡು ತಿಂಗಳೊಳಗೆ ನಾಲ್ಕು ಚೀತಾಗಳು ಸಾವನ್ನಪ್ಪಿವೆ. ಮೊದಲ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು. ಎರಡನೇ ಚೀತಾ ಉದಯ್ ಏಪ್ರಿಲ್ 24 ರಂದು ಕಾರ್ಡಿಯೋ-ಪಲ್ಮನರಿ ವೈಫಲ್ಯದಿಂದ ಸಾವನ್ನಪ್ಪಿತು. ಮೂರನೇ ಚೀತಾ ದಕ್ಷ ಮೇ 9 ರಂದು ಸಂಯೋಗದ ಪ್ರಯತ್ನದಲ್ಲಿ ಸಾವನ್ನಪ್ಪಿತು.
ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ವನ್ಯಜೀವಿ ಅಧಿಕಾರಿಗಳು, ”ಜ್ವಾಲಾ ತನ್ನ ಎಲ್ಲಾ ಮರಿಗಳೊಂದಿಗೆ ಒಂದು ಸ್ಥಾಳದಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೆ, ಆನಂತರ ಜ್ವಾಲಾ ನಡೆಯಲು ಪ್ರಾರಂಭಿಸಿದಾಗ, ನಾಲ್ಕನೇ ಮರಿ ಅದರ ಸ್ಥಳದಲ್ಲಿಯೇ ಮಲಗಿತ್ತು” ಎಂದು ಅವರು ಹೇಳಿದರು.
”ಸ್ವಲ್ಪ ಸಮಯದ ನಂತರ, ನಾಲ್ಕನೇ ಮರಿಯನ್ನು ಗಮಣಿಸಲಾಯಿತು. ಈ ಮರಿಯು ಎದ್ದೇಳಲು ಸಾಧ್ಯವಾಗದೆ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿತು ಮತ್ತು ಮೇಲ್ವಿಚಾರಣಾ ತಂಡವನ್ನು ನೋಡಿದ ನಂತರ ತಲೆ ಎತ್ತಲು ಪ್ರಯತ್ನಿಸಿತು” ಎಂದು ಅರಣ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?
”ಈ ಚೀತಾ ಮರಿ ಸಾವಿಗೆ ಅಶಕ್ತತೆ ಕಾರಣವಾಗಿರಬಹುದು. ಎರಡು ತಿಂಗಳ ಮರಿಯು ತುಂಬಾ ದುರ್ಬಲವಾಗಿತ್ತು. ಸಾಮಾನ್ಯವಾಗಿ ದುರ್ಬಲ ಚೀತಾ ಮರಿಯು ಇತರ ಮರಿಗಳಿಗಿಂತ ಕಡಿಮೆ ಹಾಲು ಕುಡಿಯುತ್ತದೆ. ಇದರಿಂದಾಗಿ ಅದರ ಬದುಕುಳಿಯುವ ನಿರೀಕ್ಷೆ ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ಅಂತಹ ಮರಿಗಳು ದೀರ್ಘಕಾಲ ಬದುಕುವುದಿಲ್ಲ” ಎಂದು ಇಲಾಖೆ ಹೇಳಿರುವುದಾಗಿ ಹಿಂದೂ ವರದಿ ಮಾಡಿದೆ.
ಆಫ್ರಿಕಾದ ಚೀತಾಗಳು ಕಾಡಿನಲ್ಲಿ ವಾಸಿಸುವಾಗ ಚಿರತೆ ಮರಿಗಳು 10% ರಷ್ಟು ಬದುಕುಳಿಯುವ ಪ್ರಮಾಣವನ್ನು ಹೊಂದಿವೆ. 10 ಚೀತಾ ಮರಿಗಳಲ್ಲಿ 1 ಮಾತ್ರ ಕಾಡಿನಲ್ಲಿ ಪ್ರೌಢಾವಸ್ಥೆಗೆ ಬರುತ್ತವೆ” ಎಂದು ಅರಣ್ಯ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಕಳೆದ ವಾರ, ಸುಪ್ರೀಂ ಕೋರ್ಟ್ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಮತ್ತು ಚೀತಾಗಳು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಹೇಳಿತು. ಸಾವಿನ ಬಗ್ಗೆ ತಜ್ಞರ ಅಭಿಪ್ರಾಯಗಳು ಮತ್ತು ಸುದ್ದಿ ಲೇಖನಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಕುನೋ ರಾಷ್ಟ್ರೀಯ ಉದ್ಯಾನವನವು ಹಲವಾರು ಚೀತಾಗಳಿಗೆ ಸ್ಥಳಾವಕಾಶ ಕಲ್ಪಿಸಲು ಸಾಕಾಗುವುದಿಲ್ಲ ಎಂದು ಹೇಳಿದೆ.


