ಕಣ್ವ ಸಾಮ್ರಾಜ್ಯ ಕುಸಿಯತೊಡಗಿದೆ. ಕೆಲವೇ ವರ್ಷಗಳಲ್ಲಿ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಕಂಪನಿ ಅಷ್ಟೆ ವೇಗದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಅವನತಿಯ ಹಾದಿ ಹಿಡಿಯತೊಡಗಿದೆ.
ಹತ್ತು ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಪ್ರಸಿದ್ದಿಗೆ ಬಂದಿದ್ದ ಈ ಸಂಸ್ಥೆ ಈಗ ಅವ್ಯವಹಾರದ ಹಿನ್ನೆಲೆಯಲ್ಲಿ ಪತನದತ್ತ ಸಾಗಿದೆ. ಕಣ್ವ ಸಾಮ್ರಾಜ್ಯ ಸಂಸ್ಥೆಗಳ ಸಂಸ್ಥಾಪಕರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ಬಂಧಿಸಿ ವಾರ ಕಳೆದಿದ್ದು, ಸಂಸ್ಥೆ ನೌಕರರು ಮತ್ತು ಕಾರ್ಮಿಕರು ವೇತನ ಸಿಗದೆ ತೊಂದರೆ ಅನುಭವಿಸಬೇಕಾಗಿ ಬಂದಿದೆ ಮತ್ತು ಉದ್ಯೋಗದ ಭದ್ರತೆ ಇಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ.
ಕೊರಟಗೆರೆ ತಾಲೂಕಿನ ಬಡ ರೈತ ಕುಟುಂಬದಿಂದ ಬಂದ ನಂಜುಂಡಪ್ಪ ಕಣ್ಣ ಸಂಸ್ಥೆ ಹುಟ್ಟುಹಾಕಿದರು. ಕಣ್ಣ ಸಂಸ್ಥೆಯ ಹೆಸರಿನಲ್ಲಿ ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ಕಣ್ವ ಮಾರ್ಟ್, ಬಟ್ಟೆ ಅಂಗಡಿಗಳು, ಹಣಕಾಸು ಸಂಸ್ಥೆಗಳು, ಗಾರ್ಮೆಂಟ್ಸ್ ಗಳು – ಹೀಗೆ ಎಲ್ಲಾ ಕ್ಷೇತ್ರದಲ್ಲೂ ಹಣ ಹೂಡಿದರು. ಮಳಿಗೆಗಳನ್ನು ತೆರೆದರು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದರು. ತುಮಕೂರು, ನೆಲಮಂಗಲ ಮತ್ತು ಬೆಂಗಳೂರನ್ನು ಕೇಂದ್ರ ಸ್ಥಾನ ಮಾಡಿಕೊಂಡು ಸಂಸ್ಥೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದರು.
ಬೆಂಗಳೂರು, ನೆಲಮಂಗಲ, ತುಮಕೂರು ನಗರದಲ್ಲಿ ಕಣ್ವ ಪಬ್ಲಿಕ್ ಸ್ಕೂಲ್ ಗಳು, ರಾಜಾಜಿನಗರದ 4ನೇ ಹಂತದಲ್ಲಿ ಕಣ್ವ ಡೈಯಾಗ್ನೋಸ್ಟಿಕ್ ಸರ್ವೀಸ್ ಸೆಂಟರ್ ಪ್ರೈ.ಲಿ., ಕಣ್ವ ಶ್ರೀ ಸಾಯಿ ಆಸ್ಪತ್ರೆ ಔಷಧಿ ಮಳಿಗೆ, ಕಣ್ವ ಜವಳಿ ಮಳಿಗೆ, ಕಣ್ವ ಮಾರ್ಟ್ ಚಿಕ್ಕಬಾಣಾವರ, ಕಣ್ವ ಬಜಾರ್ ರೆಡಿಮೇಡ್ ಗಾರ್ಮೆಂಟ್ಸ್ ವ್ಯಾಪಾರಿ ಮಳಿಗೆ, ಕಣ್ವ ಫ್ಯಾಷನ್ ಲಿಮಿಟೆಡ್, ಕೊರಟಗೆರೆಯಲ್ಲಿ ಕಣ್ವ ಗಾರ್ಮೆಂಟ್ಸ್ ಪ್ರೈ.ಲಿ., ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ನೂರಾರು ಸಂಸ್ಥೆಗಳನ್ನು ಆರಂಭಿಸಿ, ಗ್ರಾಮೀಣ ಮತ್ತು ನಗರ ಪ್ರದೇಶದ ಬಡವರಿಗೆ ಕೆಲಸ ನೀಡಿ ಅವರ ಕುಟುಂಬಗಳಿಗೆ ಆಸರೆಯಾದರು.
ಇದನ್ನೂ ಓದಿ: ಗಾಯಗೊಂಡ ಬಾಲಕನನ್ನು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು 1300 ಕಿ.ಮಿ. ಹೊರಟ ವಲಸೆ ಕಾರ್ಮಿಕರು
ನೆಲಮಂಗಲದಲ್ಲಿದ್ದ ಕಣ್ವ ಗಾರ್ಮೆಂಟ್ಸ್ ಪ್ರೈ.ಲಿ., ಅನ್ನು ಕೊರಟಗೆರೆ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸಿದರು. ಈ ಗಾರ್ಮೆಂಟ್ಸ್ ಒಂದರಲ್ಲೇ 1200ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದರು. ಈಗ ಸಂಸ್ಥಾಪಕ ನಂಜುಂಡಪ್ಪ ಅವರನ್ನು ಬಂಧಿಸಿರುವುದು ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಕಳೆದು ಕೊಳ್ಳುವ ಅಭದ್ರತೆ ಕಾಡತೊಡಗಿದೆ. ಗಾರ್ಮೆಂಟ್ಸ್ ಕಾರ್ಮಿಕರು ವೇತನಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದು, ನಂಜುಂಡಪ್ಪ ಅವರು ವೇತನ ನೀಡುವ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಣ್ವ ಮಾರ್ಟ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸಾರ್ವಜನಿಕರು ಹಣ ತೊಡಗಿಸಿದ್ದಾರೆ. ಕೋಟ್ಯಂತರ ರೂಪಾಯಿ ಶೇರುಗಳನ್ನು ಹಾಕಿದ್ದಾರೆ. ಇದೀಗ ಸಂಸ್ಥೆಯಲ್ಲಿ ಅವ್ಯವಹಾರ, ವಂಚನೆ ಆರೋಪಗಳು ಕೇಳಿ ಬಂದಿರುವುದು ಹಣ ತೊಡಗಿಸಿದವರಲ್ಲೂ ಅತಂಕ ಶುರುವಾಗಿದೆ.
ಸಫಾರಿ ಮತ್ತು ಸ್ಕೂಲ್ ಯೂನಿಫಾರಂ ಖರೀದಿಸುವಂತೆ ಸಾವಿರಾರು ಏಜೆಂಟರು ಜನರಿಂದ ಹಣ ಸಂಗ್ರಹ ಮಾಡುತ್ತಿದ್ದರು. 25 ಸಾವಿರ ರೂಗಳಿಂದ 10 ಲಕ್ಷದವರೆಗೆ ಹಣ ತೊಡಗಿಸಿದವರೂ ಇದ್ದಾರೆ. ಈಗ ಕಣ್ವ ಗ್ರೂಪ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಏಜೆಂಟರು ಕೂಡ ತಾವು ತೊಡಗಿಸಿರುವ ಮತ್ತು ಗ್ರಾಹಕರಿಂದ ಕೊಡಿಸಿರುವ ಹಣ ಕೈಗೆ ಬರುವುದೇ ಎಂಬ ಆತಂಕದಲ್ಲಿದ್ದಾರೆ.
ಕಳೆದ ಒಂದು ವಾರದ ಹಿಂದೆಯೇ ಜಾರಿ ನಿರ್ದೇಶನಾಲಯ ಕಣ್ವ ಗ್ರೂಪ್ ಸಂಸ್ಥಾಪಕ ನಂಜುಂಡಪ್ಪ ಅವರನ್ನು ಬಂಧಿಸಿದೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಈ ಸುದ್ದಿಗೆ ಮಹತ್ವ ನೀಡಿಲ್ಲ.
ಲಕ್ಷಾಂತರ ಮಂದಿ ಹಣ ತೊಡಗಿಸಿರುವುದು, ಸಾವಿರಾರು ಮಂದಿ ಕಾರ್ಮಿಕರು ಕೆಲಸವಿಲ್ಲದೆ ವೇತನವಿಲ್ಲದೆ ಕೊರೊನಾ ಕಾಲದಲ್ಲಿ ತೊಂದರೆ ಅನುಭವಿಸುತ್ತಿದ್ದರೂ ಕಾರ್ಮಿಕರ ಗೋಳನ್ನು ಕೇಳುವವರೇ ಇಲ್ಲವಾಗಿದೆ.
ಕಣ್ವ ಗ್ರೂಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರ ಕೆಲಸಗಳಿಗೆ ಕುತ್ತು ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಎಲ್ಲಾ ವಲಸೆ ಕಾರ್ಮಿಕರು ತಮ್ಮೂರು ತಲುಪಿದ್ದಾರೆಯೇ? ಎಷ್ಟು ಜನ ಉಳಿದುಕೊಂಡಿದ್ದಾರೆ? ಇಲ್ಲಿದೆ ಮಾಹಿತಿ


