ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ಶುಕ್ರವಾರ ತಡರಾತ್ರಿ ರಾಷ್ಟ್ರವ್ಯಾಪಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಪ್ರತಿಭಟನಾಕಾರರನ್ನು, ಶಂಕಿತರನ್ನು ವಿಚಾರಣೆಯಿಲ್ಲದೆ ದೀರ್ಘಾವಧಿಯವರೆಗೆ ಬಂಧಿಸಲು ಮಿಲಿಟರಿಗೆ ಅವಕಾಶ ನೀಡುವ ಕಠಿಣ ಕಾನೂನುಗಳನ್ನು ಅಧ್ಯಕ್ಷರು ಜಾರಿಗೊಳಿಸಿದ್ದಾರೆ.
22 ಮಿಲಿಯನ್ ಜನರಿರುವ ದ್ವೀಪ ರಾಷ್ಟ್ರದಲ್ಲಿ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ರಾಜಪಕ್ಸ ಸೋತಿದ್ದು, ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತಡರಾತ್ರಿ ಹಿಂಸಾಚಾರಕ್ಕೆ ತಿರುಗಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ನೂರಾರು ಪ್ರತಿಭಟನಾಕಾರರು ಹಲವಾರು ಗಂಟೆಗಳ ಕಾಲ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ವಿದೇಶಿ ಕರೆನ್ಸಿಯ ತೀವ್ರ ಕೊರತೆಯಿಂದಾಗಿ ಇಂಧನ ಸೇರಿದಂತೆ ಅಗತ್ಯ ಆಮದುಗಳಿಗೆ ರಾಜಪಕ್ಸ ಸರ್ಕಾರ ಹಣ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ 13 ಗಂಟೆಗಳವರೆಗೆ ವಿದ್ಯುತ್ ಕಡಿತಕ್ಕೂ ಇದು ಕಾರಣವಾಗಿದೆ.
ಶ್ರೀಲಂಕಾದ ಕೊಲಂಬೊದಲ್ಲಿ ಶುಕ್ರವಾರ ರಾತ್ರಿ ನಡೆದ ಘರ್ಷಣೆಯ ನಂತರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಖಾಸಗಿ ನಿವಾಸಕ್ಕೆ ಆಗಮಿಸಿದರು. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಕಾರಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಅಧ್ಯಕ್ಷರ ಮನೆಯ ಬಳಿ ಪ್ರತಿಭಟನೆ ನಡೆಸಿದಾಗ ಹತ್ತಾರು ಜನರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಲಂಕಾ ಷೇರುಗಳು ಶುಕ್ರವಾರ ಅತ್ಯಂತ ಕೆಟ್ಟ ಕುಸಿತ ಕಂಡಿದ್ದು, ಕೊಲಂಬೊ ಸ್ಟಾಕ್ ಎಕ್ಸ್‌ಚೇಂಜ್ ಸತತ ಮೂರನೇ ದಿನ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಆಹಾರ ಮತ್ತು ಇಂಧನ ಸೇರಿದಂತೆ ಅಗತ್ಯ ಆಮದುಗಳಿಗೆ ಪಾವತಿಸಲು ಶ್ರೀಲಂಕಾ ಹೆಣಗಾಡುತ್ತಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹವು ಕಳೆದ ಎರಡು ವರ್ಷಗಳಲ್ಲಿ ಸುಮಾರು 2.31 ಡಾಲರ್ ಬಿಲಿಯನ್‌ಗೆ ಅಂದರೆ ಶೇ. 70 ಕುಸಿತ ಕಂಡಿದೆ.
ಮತ್ತೊಂದೆಡೆ ಮೂರು ದಿನಗಳ ದೆಹಲಿ ಪ್ರವಾಸದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶ್ರೀಲಂಕಾ ತಮಿಳರಿಗೆ ಮಾನವೀಯ ನೆರವು ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ದ್ವೀಪ-ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ ಹಿನ್ನೆಲೆಯಲ್ಲಿ ಹಲವಾರು ಜನರು ಲಂಕಾದಿಂದ ಪಲಾಯನಗೈದು ಸಮುದ್ರ ಮಾರ್ಗದ ಮೂಲಕ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಮಾಜಿ ರಾಯಭಾರಿ ತಪ್ಪೊಪ್ಪಿಗೆ: ಶ್ರೀಲಂಕಾದ ಮಾಜಿ ರಾಯಭಾರಿಯೊಬ್ಬರು 2013ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಹೊಸ ರಾಯಭಾರ ಕಚೇರಿಯ ಕಟ್ಟಡವನ್ನು ಖರೀದಿಸುವಾಗ ಶ್ರೀಲಂಕಾ ಸರ್ಕಾರದಿಂದ 332,027 ಅಮೆರಿಕನ್ ಡಾಲರ್ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದನ್ನು ಮಾಜಿ ರಾಯಭಾರಿಯವರೇ ತಪ್ಪೊಪ್ಪಿಕೊಂಡಿರುವುದಾಗಿ ನ್ಯಾಯಾಂಗ ಇಲಾಖೆ ತಿಳಿಸಿದೆ.
ಈಗ ವರ್ಜೀನಿಯಾದ ಆರ್ಲಿಂಗ್ಟನ್‌ನಲ್ಲಿ ವಾಸಿಸುತ್ತಿರುವ 61 ವರ್ಷದ ಜಾಲಿಯಾ ಚಿತ್ರನ್ ವಿಕ್ರಮಸೂರ್ಯ ಅವರು 2008 ರಿಂದ 2014 ರವರೆಗೆ ಯುಎಸ್‌ನಲ್ಲಿ ಶ್ರೀಲಂಕಾದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಆರೋಪವು ಶಾಸನಬದ್ಧ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಸಂಭಾವ್ಯ ಆರ್ಥಿಕ ದಂಡವನ್ನು ಹೊಂದಿರುತ್ತದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, 2012ರ ಅಂತ್ಯದಿಂದ ಅಥವಾ ನವೆಂಬರ್ 2013ರವರೆಗೆ, ರಿಯಲ್ ಎಸ್ಟೇಟ್ ವಹಿವಾಟಿನ ಬೆಲೆಯನ್ನು 332,027 ಡಾಲರ್‌ಗೆ ಹೆಚ್ಚಿಸುವ ಮೂಲಕ ವಾಷಿಂಗ್ಟನ್ ಡಿಸಿ ಯಲ್ಲಿ 2013ರ ಹೊಸ ರಾಯಭಾರ ಕಚೇರಿಯ ಕಟ್ಟಡವನ್ನು ಖರೀದಿಸುವಾಗ ವಿಕ್ರಮಸೂರ್ಯ ಶ್ರೀಲಂಕಾ ಸರ್ಕಾರವನ್ನು ವಂಚಿಸುವ ಯೋಜನೆಯನ್ನು ಅವರು ರೂಪಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿರಿ: ಆಹಾರ ಮತ್ತು ಉದ್ಯೋಗದ ಕೊರತೆ: ತಮಿಳುನಾಡು ಕರಾವಳಿಯನ್ನು ತಲುಪಿದ ಶ್ರೀಲಂಕಾ ನಿರಾಶ್ರಿತರು!


