Homeಅಂಕಣಗಳುಕಳೆದುಹೋದ ದಿನಗಳುಕಾಫಿ ಬೆಳೆಗಾರರರಿಗೆ ಅತ್ಯಂತ ಅವಶ್ಯವಿದ್ದ ಸಹಕಾರಿ ಸಂಸ್ಥೆಯೊಂದರ ಅವಸಾನ

ಕಾಫಿ ಬೆಳೆಗಾರರರಿಗೆ ಅತ್ಯಂತ ಅವಶ್ಯವಿದ್ದ ಸಹಕಾರಿ ಸಂಸ್ಥೆಯೊಂದರ ಅವಸಾನ

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ – 13

90ರ ದಶಕದ ಕೊನೆಯ ಭಾಗದಿಂದಲೇ ಕಾಫಿ ಬೆಳೆಗೆ ಸಂಕಷ್ಟಗಳು ಪ್ರಾರಂಭವಾಗಿದ್ದವು. ಕಾಫಿಯ ಮುಕ್ತ ಮಾರಾಟಕ್ಕೆ ಅನುಮತಿ ದೊರೆತು ಅದರಿಂದಾಗಿ ತಮಗೆ ಉತ್ತಮ ಬೆಳೆ ದೊರೆಯುತ್ತಿದೆ ಎಂದು ಬೆಳೆಗಾರರರು ಸಂಭ್ರಮಿಸುತ್ತಿರುವಾಗಲೇ ಕಾಫಿಯ ಬೆಲೆ ಇಳಿಕೆಯ ಹಾದಿಯಲ್ಲಿತ್ತು. ಇದರೊಂದಿಗೆ ಪ್ರಕೃತಿಯೂ ಮುನಿಸಿಕೊಂಡಂತಿತ್ತು. ಸತತವಾಗಿ ಮೂರು ವರ್ಷಗಳಕಾಲ ಕಾಫಿ ವಲಯದಲ್ಲಿ ಅತಿಕಡಿಮೆ ಮಳೆಯಾಯಿತು. ಅದರ ಪರಿಣಾಮ ಹೇಗಿತ್ತೆಂದರೆ ಕಡಿಮೆ ಮಳೆಯಾಗುವ ಹಲವಾರು ಪ್ರದೇಶಗಳ ಅರೆಬಿಕಾ ತೋಟಗಳು ನೀರಿಲ್ಲದೆ ಒಣಗಿ ಹೋದವು. ಮೂರನೆಯ ವರ್ಷದ ಬೇಸಗೆಯಲ್ಲಿ ನೀರಿಲ್ಲದೆ ಹೇಮಾವತಿ ನದಿ ತನ್ನ ಹರಿವನ್ನೇ ನಿಲ್ಲಿಸಿತ್ತು! ಅಲ್ಲಲ್ಲಿ ಕಾಡಾನೆಗಳ ಹಾವಳಿಗಳು ಪ್ರಾರಂಭವಾಗಿದ್ದವು.

ಇವೆಲ್ಲ ಸಮಸ್ಯೆಗಳ ನಡುವೆಯೇ ಕಾಫಿ ಬೆಳೆಗಾರರ ಸಂಸ್ಥೆಯಾದ ಕೊಮಾರ್ಕ್ ತನ್ನ ಆಂತರಿಕ ಸಮಸ್ಯೆಗಳಿಂದ ತತ್ತರಿಸುತ್ತಿತ್ತು.

ಆಧುನಿಕ ತಂತ್ರಜ್ಞಾನವೂ ಕೂಡಾ ಸರಿಯಾದ ಬಳಕೆಯ ವಿಧಾನ ಮತ್ತು ಅದರ ಬಗೆಗಿನ ಸ್ಪಷ್ಟ ತಿಳುವಳಿಕೆಗಳು ಇಲ್ಲದೆ ಹೋದ ಸಂದರ್ಭದಲ್ಲಿ ಹೇಗೆ ವ್ಯಾವಹಾರಿಕವಾಗಿ ದುಬಾರಿಯಾಗಿಯೂ ಅನಾಹುತಕ್ಕೆ ಕಾರಣವೂ ಆಗಬಲ್ಲದೆಂಬುದಕ್ಕೆ ಕೊಮಾರ್ಕ್‌ನ ವ್ಯವಹಾರಗಳು ಉದಾಹರಣೆಯಾದವು.

ಕೊಮಾರ್ಕ ಸಂಸ್ಥೆಯನ್ನು ನಡೆಸಲು ವೃತ್ತಿಪರ ವ್ಯಕ್ತಿಗಳನ್ನು ನೇಮಿಸಿಕೊಂಡಾಗಿತ್ತು. ಮೊದಲಿಗೆ ಸಂಸ್ಥೆಯ ನಿರ್ದೇಶಕ ಮಂಡಳಿಯು ಸರ್ಕಾರದಿಂದ ಎರವಲು ಸೇವೆಗಾಗಿ ಕೇಳಿದ ಹಲವು ಜನ ಸಮರ್ಥ ಐ ಎ ಎಸ್ ಅಧಿಕಾರಿಗಳನ್ನು ಸರ್ಕಾರ ಬಿಟ್ಟುಕೊಡಲು ನಿರಾಕರಿಸಿತು. ನಂತರ ಐ.ಎ.ಎಸ್ ಅಧಿಕಾರಿಗಳ ಹುಡುಕಾಟವನ್ನು ಬಿಟ್ಟು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಹಿರಿಯ ವ್ಯಕ್ತಿಯೊಬ್ಬರನ್ನು ಕೊಮಾರ್ಕ್‌ಗೆ ಕರೆತರಲಾಯಿತು. ಅವರು ಇಡೀ ಕಚೇರಿಯನ್ನು ಆಧುನಿಕ ಮತ್ತು ವೃತ್ತಿಪರವಾಗಿಸುವ ನಿಟ್ಟಿನಲ್ಲಿ ಕೆಲಸಮಾಡಿ ಇನ್ನೂ ಐವರು ತಜ್ಞರನ್ನು ನೇಮಿಸಿಕೊಂಡರು.

ಇಷ್ಟೆಲ್ಲ ಇದ್ದರೂ ಮೊದಲಿನ ವರ್ಷ ನಡೆಸಿದ ವ್ಯಾಪಾರದ ಕ್ರಮ ಮತ್ತು ನಿಯಮಗಳನ್ನು ಎರಡನೆಯ ವರ್ಷ ಬದಲಾವಣೆ ಮಾಡಿಕೊಂಡಾಗ ಅದಕ್ಕೆ ತಕ್ಕಂತೆ ಕಂಪ್ಯೂಟರ್ ಗಳಲ್ಲಿ ಸರಿಯಾಗಿ ಬದಲಾವಣೆ ಮಾಡಿಕೊಳ್ಳಲು ಅವರು ವಿಫಲರಾದದದ್ದು ಮಾತ್ರವಲ್ಲಿ ಅದನ್ನು ಗಮನಿಸಿದೆ ಹೋದದ್ದು ದುರಂತಕ್ಕೆ ಕಾರಣವಾಯಿತು.

ಕೊಮಾರ್ಕ್ ಸಂಸ್ಥೆ ನಿರಂತರವಾಗಿ ಕಾಫಿಯನ್ನು ಕೊಳ್ಳುವುದು ಮತ್ತು ಮಾರಾಟ ಮಾಡುವುದನ್ನು  ಮುಂದುವರೆಸಿತ್ತು. ಬೆಲೆಗಳು ಪ್ರತಿದಿನ ಇಳಿಯುತ್ತಿದ್ದವು.

ಆದರೆ ಸಂಸ್ಥೆಯ ಲೆಕ್ಕ ಪತ್ರಗಳ ವಿಭಾಗದ ಕಂಪ್ಯೂಟರ್‌ನಲ್ಲಿ ಆದ ಸಣ್ಣದೆಂದು ತೋರುವ ತಪ್ಪಿನಿಂದಾಗಿ ನಷ್ಟವೆಲ್ಲವೂ ಲಾಭವೆಂಬಂತೆ ತೋರುತ್ತಿತ್ತು. ಇದನ್ನು ನಂಬಿ ಮತ್ತಷ್ಟು ವ್ಯಾಪಾರ ಮುಂದುವರೆಸಿದರು. ಇದೆಲ್ಲವೂ ಗಮನಕ್ಕೆ ಬರುವಾಗ ಕೆಲವು ತಿಂಗಳು ಕಳೆದಿತ್ತು. ಆ ವೇಳೆಗೆ  ಕೊಮಾರ್ಕ್ ಕೋಟಿಗಟ್ಟಲೆ  ನಷ್ಟ ಅನುಭವಿಸಿತ್ತು. ಬೆಳೆಗಾರರರಿಗೆ ಹಣ ಪಾವತಿ ಮಾಡುವುದೇ ಕಷ್ಟವಾಯಿತು.

ಸಂಸ್ಥೆಯ ಉಳಿವಿಗಾಗಿ ಪ್ರಯತ್ನಗಳು ಪ್ರಾರಂಭವಾಗಿದ್ದವು. ದೊಡ್ಡ ಪ್ರಮಾಣದಲ್ಲಿ ಠೇವಣಿ ಹಣ ಸಂಗ್ರಹ ಮಾಡಿ ಸಂಸ್ಥೆಯನ್ನು ಉಳಿಸುವ ಪ್ರಯತ್ನ ನಡೆಯಿತು. ರವೀಂದ್ರನಾಥರು ಆ ವರ್ಷದ ತಮ್ಮ ಹೆಚ್ಚಿನ ಕಾಫಿಯ ಹಣವನ್ನೆಲ್ಲ ಸಂಸ್ಥೆಯಲ್ಲಿ ಠೇವಣಿಯನ್ನಾಗಿಟ್ಟರು. ಅದು ಅಂದಿನ ದಿನಗಳಲ್ಲಿಯೇ ಸುಮಾರು ಎಪ್ಪತ್ತು ಲಕ್ಷ ರೂಪಾಯಿಗಳಷ್ಟಿತ್ತು. ಇನ್ನೂ ಹಲವರು ಬೆಳೆಗಾರರು ಠೇವಣಿ ಹಣ ನೀಡಿದರು. ವಿಚಾರ ತಿಳಿದ ಕೂಡಲೇ ಇಡೀ ವ್ಯವಹಾರಗಳ ತಪಾಸಣೆಗೆ ಮತ್ತು ವರದಿ ನೀಡಲು ಸರ್ಕಾರಕ್ಕೆ ಕೊಮಾರ್ಕ್ ಸಂಸ್ಥೆಯಿಂದಲೇ ಮನವಿ ಸಲ್ಲಿಸಲಾಯಿತು. ಸಹಕಾರೀ ಸಂಸ್ಥೆಗಳ ಲೆಕ್ಕ ತಪಾಸಿಗರು ಬಂದು ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಿದರು.

ಈ ಸಂದರ್ಭದಲ್ಲಿ ಕೆಲವರು ಕೊಮಾರ್ಕ್‌ನ ಆಂತರಿಕ ಹಿತಶತ್ರುಗಳೂ ಇದ್ದರು. ಅಂತವರಿಂದ ಕೆಲವು ಸುಳ್ಳು ಸುದ್ದಿಗಳು ಹರಡಿದವು. ಕೊಮಾರ್ಕ್ ಮುಳುಗುತ್ತಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಯಿತು.

ಕೆಲವು ಪತ್ರಿಕೆಗಳು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೆ ಏನೋ ಭಾರೀ ಪ್ರಮಾಣದ ವಂಚನೆ ನಡೆದಿದೆ ಎಂಬಂತೆ ಚಿತ್ರಿಸಿ ಬರೆದವು. ಇದನ್ನೇ ನಂಬಿ ಕೊಮಾರ್ಕ್‌ನ ಹಣಕಾಸು ವ್ಯವಹಾರಗಳು ನಡೆಯುತ್ತಿದ್ದ ಬ್ಯಾಂಕು ಕೊಮಾರ್ಕ್ ಸಂಸ್ಥೆಯ ಮೇಲೆ ಕೇಸು ದಾಲಿಸಿತು.

ಆಗ ಕೊಮಾರ್ಕ್‌ನ ನಿರ್ದೇಶಕ ಮಂಡಳಿ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿತು. ನಂತರ ತನಿಖೆ ನಡೆದು ವರದಿ ಬಂತು. ಅದನ್ನು ಗಮನಿಸದೆ ಅಥವಾ ಅದನ್ನು ನಿರ್ಲಕ್ಷಿಸಿ ಕೆಲವು ಪತ್ರಿಕೆಗಳು ಮತ್ತೆ ಗುಲ್ಲೆಬ್ಬಿಸಿದವು.

ಮಡಿಕೇರಿಯ ಸಹಕಾರಿ ತರಬೇತಿ ಡಿಪ್ಲೊಮಾ ಕೇಂದ್ರ ಮತ್ತು ಸಹಕಾರಿ ಬ್ಯಾಂಕ್

ತನಿಖಾ ಸಂಸ್ಥೆಯ ವರದಿಯಲ್ಲಿ ಎಲ್ಲಿಯೂ ಹಣದ ದುರುಪಯೋಗದ ಅಥವಾ ಇನ್ನಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ಆಡಳಿತದ ವೈಫಲ್ಯ ಮತ್ತು ಲೆಕ್ಕ ಪತ್ರಗಳನ್ನು ಸರಿಯಾಗಿ ಗಮನಿಸದೆ ಹೋದುದು ಭಾರೀ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಲಾಗಿತ್ತು.

ಇದರೊಂದಿಗೆ ಇನ್ನೊಂದು ವಾಕ್ಯವೂ ಇತ್ತು. ಅದೆಂದರೆ “ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡ ವ್ಯಕ್ತಿಯೊಬ್ಬರು, ಒಂದು ಸಂಸ್ಥೆಯ ಉಳಿವಿಗಾಗಿ ವೈಯಕ್ತಿಕವಾಗಿ ತನ್ನನ್ನು ತಾನು ಬಹಳ ದೊಡ್ಡ ಆರ್ಥಿಕ ನಷ್ಟವಾಗಬಹುದಾದಂತಹ ಗಂಡಾಂತರಕ್ಕೆ ಒಡ್ಡಿಕೊಳ್ಳುವುದು ಸಮಾಜದ ಹಿತದೃಷ್ಟಿಯಿಂದ ಸರಿಯಾದುದಲ್ಲವೆನಿಸುತ್ತದೆ.” ಈ ವಾಕ್ಯವನ್ನವರು ರವೀಂದ್ರನಾಥರನ್ನು ಉದ್ದೇಶಿಸಿ ಬರೆದಿದ್ದರು. ಮತ್ತು ಮುಂದಿನ ದಿನಗಳಲ್ಲಿ ಅದು ನಿಜವೂ ಆಯಿತು. ಕೊಮಾರ್ಕ್ ಸಂಸ್ಥೆಯಲ್ಲಿ ಹಲವರು ಹೂಡಿದ್ದ ಠೇವಣಿ ಹಣವನ್ನು ನಿಧಾನವಾಗಿಯಾದರೂ ಹಿಂದಿರುಗಿಸಲಾಯಿತು. ಆದರೆ ರವೀಂದ್ರನಾಥರು ವೈಯಕ್ತಿಕವಾಗಿ ಸಂಸ್ಥೆಯಲ್ಲಿ ಹೂಡಿದ್ದ ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡರು.

ಕೋಮಾರ್ಕ ಸಂಸ್ಥೆಯ ಬಗೆಗಿನ ಲೆಕ್ಕ ಪತ್ರ ತಪಾಸಣಾ ವರದಿ ಮತ್ತು ತನಿಖಾ ವರದಿ ಇಂಗ್ಲಿಷಿನಲ್ಲಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಡುವ ಕೆಲಸವೂ ನನ್ನ ಪಾಲಿಗೆ ಬಂದಿತ್ತು.

ರವೀಂದ್ರನಾಥ್ ಮತ್ತು ಕೆಲವರು ಕೊಮಾರ್ಕ್ ಸಂಸ್ಥೆಯ ನಿರ್ದೇಶಕರು ಸೇರಿ ಕೆಲವು ಪತ್ರಿಕೆಗಳ ಸಂಪಾದಕರನ್ನು ಭೇಟಿಯಾಗಿ ಈ ವಿಚಾರಗಳನ್ನು ತಿಳಿಸಿದರು. ಅಂತಹ ಒಂದೆರಡು ಭೇಟಿಗಳನ್ನು ನಾನು ವ್ಯವಸ್ಥೆ ಮಾಡಿದ್ದೆ. ನಂತರ ಪತ್ರಿಕೆಗಳಲ್ಲಿ ಸಾಕಷ್ಟು ವಿವರವಾಗಿ ನಿಜ ಸಂಗತಿಗಳು ಬಂದವು. ಆದರೆ ಕೋಮಾರ್ಕ್ ಸಂಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಲ್ಲಿ ಆ ಕೆಲವರು ಯಶಸ್ವಿಯಾಗಿದ್ದರು.

ಕೊಮಾರ್ಕ್‌ನ ವ್ಯವಹಾರಗಳು ಹೆಚ್ಚೂ ಕಡಿಮೆ ನಿಂತಂತಾಗಿದ್ದವು. ಸರ್ಕಾರದ ಸಹಾಯಕ್ಕಾಗಿ ಸಾಕಷ್ಟು ಪ್ರಯತ್ನಗಳಾದವು. ಆದರೆ ಯಾವುದೂ ನಿಶ್ಚಿತ ಫಲಿತಾಂಶ ನೀಡಲಿಲ್ಲ. ಕಾಫಿಬೆಳೆಗಾರರರಿಗೆ ಅತ್ಯಂತ ಅವಶ್ಯವಿದ್ದ ಸಹಕಾರಿ ಸಂಸ್ಥೆಯೊಂದು ಪ್ರಥಮ ಪ್ರಯತ್ನದಲ್ಲಿಯೇ ಸೋತು ಹೋಗಿತ್ತು.

ಈ ವಿಚಾರದಲ್ಲಿ ಇನ್ನೂ ಕೆಲವು ಸಂಗತಿಗಳಿವೆ. ಮುಖ್ಯವಾಗಿ ಕಾಫಿವಲಯದ ಜನರ ಮನೋಭಾವನೆ ಮತ್ತು ವ್ಯವಹಾರಿಕವಾಗಿ ಅತಿ ಎನ್ನಿಸುವ ವೈಯಕ್ತಿಕ ಪ್ರತಿಷ್ಟೆ. ಇದು ಸಹಕಾರಿ ವಲಯದ ಬೆಳವಣಿಗೆಗೆ ಬಹಳ ತೊಡಕಾಗುವ ಸಂಗತಿಗಳು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಕರಾವಳಿ ಮತ್ತು ಉತ್ತರದ ಜಿಲ್ಲೆಗಳಲ್ಲಿ ಸಹಕಾರಿ ವಲಯದಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿವೆ. ಕಾಫಿವಲಯವನ್ನು ಹೊರತು ಪಡಿಸಿದ ಮಲೆನಾಡಿನ ಜಿಲ್ಲೆಗಳಲ್ಲಿಯೂ ದಶಕಗಳ ಕಾಲದಿಂದ ಯಶಸ್ವಿಯಾಗಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿವೆ.  ಆದರೆ ಕಾಫಿವಲಯದಲ್ಲಿ ಸಹಕಾರಿ ಸಂಸ್ಥೆಗಳೇ ಅತ್ಯಂತ ಕಡಿಮೆ ಮತ್ತು ಯಶಸ್ವಿಯಾದವು ಮತ್ತೂ ಕಡಿಮೆಯೇ.

ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಕರ ಸಹಕಾರ ಸಂಘಗಳು ನಾಮಕಾವಸ್ಥೆಯಲ್ಲಿ ಇವೆ. ಕಾಫಿವಲಯದಲ್ಲಿ ಕೆಲವು ಜೇನು ವ್ಯವಸಾಯ ಸಹಕಾರಿ ಸಂಘಗಳಿವೆ. ಅವುಗಳಲ್ಲಿ ಕೆಲವು ಇಂದಿಗೂ ಯಶಸ್ವಿಯಾಗಿ ಕೆಲಸಮಾಡುತ್ತಿವೆ. ಆದರೆ ಇವೆಲ್ಲ ಹೆಚ್ಚಾಗಿ ನಗರ ಕೇಂದ್ರಿತವಾಗಿದ್ದು ಕೆಲವರು ವ್ಯಕ್ತಿಗಳ ವೈಯಕ್ತಿಕ ಶ್ರದ್ಧೆ ಮತ್ತು ಆಸಕ್ತಿಗಳಿಂದ ಉಳಿದುಕೊಂಡಿವೆ.

ಇಂತಹ ಒಂದು ಜೇನು ವ್ಯವಸಾಯ ಸಂಘ ಸಕಲೇಶಪುರದ “ಜೇನು ಸೊಸೈಟಿ”. ಇದು ರಾಷ್ಟ್ರ ಮಟ್ಟದಲ್ಲಿಯೇ ಗುರುತಿಸಲ್ಪಟ್ಟ ಸಹಕಾರಿ ಸಂಘ. ಇದು 1947ರಲ್ಲಿ ಸ್ಥಾಪಿತವಾದುದು. ಇದರ ಚಾಲಕ ಶಕ್ತಿಯಾಗಿ ತಮ್ಮ ಜೀವಮಾನದ ಕೊನೆಯವರೆಗೂ ದುಡಿದವರು ಎಸ್.ಬಿ.ಅಣ್ಣೇಗೌಡರು. 1917ರಲ್ಲಿ ಜನಿಸಿದ ಅಣ್ಣೇಗೌಡರು ಆ ಕಾಲದಲ್ಲಿಯೇ ಬಿ.ಎ.ತನಕ ವಿದ್ಯಾಭ್ಯಾಸ ಪಡೆದವರು. 1925ರಲ್ಲಿ ಇವರ ತಂದೆ ಬಸವೇಗೌಡರು ಸಕಲೇಶಪುರ ಉಪಾಧ್ಯಕ್ಷರಾಗಿದ್ದರು. ಆದರೆ ಗಾಂಧಿ ಅನುಯಾಯಿಯಾಗಿದ್ದ ಅಣ್ಣೇಗೌಡರನ್ನು ಆಕರ್ಷಿಸಿದ್ದು ಸಹಕಾರಿ ತತ್ವ. ಸಕಲೇಶಪುರ ಜೇನು ಸಹಕಾರ ಸಂಘವನ್ನು ಸ್ಥಾಪಿಸಿದ ನಂತರ ಅದರೊಂದಿಗೆ ನಿರಂತರ ಅವಿನಾಭಾವ ಸಂಬಂಧ.

ಇವರ ಮಕ್ಕಳು ಮುಂದೆ ಸಕಲೇಶಪುರದ ಪುರಸಭಾಧ್ಯಕ್ಷರಾದರು.

ಹಿರಿಯ ಮಗ ಮದುವೆಯಾಗಿ ತಿಂಗಳಾಗುವಷ್ಟರಲ್ಲಿಯೇ ಅನಾರೋಗ್ಯದಿಂದ ಮೃತರಾದಾಗ ಎಳೆಯ ವಯಸ್ಸಿನ ಸೊಸೆಯ ಬಗ್ಗೆ ಚಿಂತಿಸಿ. ಕೆಲವು ತಿಂಗಳಲ್ಲೇ ತಮ್ಮ ಎರಡನೆಯ ಮಗನೊಂದಿಗೆ ಆಕೆಯ ಮದುವೆಯನ್ನು ನೆರವೇರಿಸಿದ ವಿಶಾಲ ಹೃದಯಿ ಅಣ್ಣೇಗೌಡರು.

ಇಂತಹ ಹಲವರು ಮಲೆನಾಡಿನಲ್ಲಿ ಅಲ್ಲಲ್ಲಿ ಇದ್ದರು. ಸ್ಥಳೀಯವಾಗಿ ಕೆಲವು ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಇಷ್ಟೇ ಅಲ್ಲದೆ ಜೊತೆಗೆ ಕಾಫಿವಲಯದ ಮಡಿಕೇರಿಯಲ್ಲಿಯೇ ಒಂದು ಸಹಕಾರಿ ಡಿಪ್ಲೊಮಾ ಕಾಲೇಜು ದಶಕಗಳ ಹಿಂದೆಯೇ ಸ್ಥಾಪಿತವಾಗಿ ನೂರಾರು ಜನರು ಸಹಕಾರಿ ತರಬೇತಿ ಪಡೆದವರಿದ್ದರು. ಆದರೂ ಸಹ ಇಂದಿಗೂ ಕಾಫಿ ವಲಯದಲ್ಲಿ ಸಹಕಾರಿ ವ್ಯವಸ್ಥೆ ಒಂದು ಸಾಮಾಜಿಕವಾಗಿ ಸ್ವೀಕೃತವಾದ ವ್ಯವಸ್ಥೆ ಆಗಲೇ ಇಲ್ಲ.

ಇಲ್ಲಿನ ಬೆಟ್ಟ ಸೀಮೆ, ಪ್ರಾಕೃತಿಕ ಹಿನ್ನೆಲೆ, ವ್ಯವಸಾಯ ಮತ್ತು ಬೆಳೆ ಪದ್ಧತಿಗಳು ಜೊತೆಗೆ ಎರಡು ಶತಮಾನಗಳ ಬ್ರಿಟಿಷ್ ಪ್ರಭಾವ ಎಲ್ಲವೂ ಸೇರಿ ಇಲ್ಲಿನ ಜನರನ್ನು ಹೆಚ್ಚು ವೈಯಕ್ತಿಕ ಸಾಹಸಿಗಳನ್ನಾಗಿ ಮಾಡಿರಬೇಕು. ಇಲ್ಲವೇ ತನ್ನ ಪಾಡು ತನಗೆ ಎಂಬ ನಿರ್ಲಿಪ್ತ ಮನೋಭಾವಕ್ಕೆ ದೂಡಿರಬೇಕು. ಇದಕ್ಕೆ ಕಳೆದ ಶತಮಾನದಲ್ಲಿ ಇನ್ನಷ್ಟು ಉತ್ತೇಜನ ನೀಡಿದ್ದು ಬೆಳೆಗಾರನ ಹಲವು ಜವಾಬ್ದಾರಿಗಳನ್ನು ತಾನೇ ವಹಿಸಿಕೊಂಡ ಕಾಫಿ ಬೋರ್ಡ್ ಎಂಬ ಸಂಸ್ಥೆ.

ಇವಿಷ್ಟೇ ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಇಲ್ಲಿ ಹೇಳಲೇಬೇಕಾಗಿದೆ. ಈ ಮೇಲಿನ ಎಲ್ಲ ಕಾರಣಗಳಿಂದಲೋ ಅಥವಾ ಮನುಷ್ಯನ ದುರಾಸೆಯಿಂದಲೋ. ಕೊಮಾರ್ಕ್ ಎಂಬ ಬೆಳೆಗಾರರ ಸಂಸ್ಥೆ ಇದ್ದಾಗಲೂ ಮೊದಲಿನ ವರ್ಷಗಳಲ್ಲಿ ಕೆಲವರು ಕಾಫಿ ಕೊಳ್ಳುವ ಏಜಂಟರುಗಳು ಕೊಮಾರ್ಕ್ ಹೆಸರಲ್ಲಿ ಕಾಫಿಯನ್ನು ಪಡೆದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರೂ ತಮಗೆ ಲಾಭವಾಗುವ ಹತ್ತು ರೂಪಾಯಿಯನ್ನು ನೋಡಿ ಸುಮ್ಮನಿದ್ದರೇ ವಿನಃ ಆ ರೀತಿಯ ಅನೈತಿಕ ವ್ಯವಹಾರಗಳನ್ನು ಪ್ರಶ್ನೆ ಮಾಡಲೇ ಇಲ್ಲ. ಇದು ಅನೇಕ ಬೆಳೆಗಾರರ ಬೇಜವಾಬ್ದಾರಿ ಮತ್ತು ದುರಾಸೆಯ ನಡೆಯಾಗಿತ್ತು. ಇದೂ ಕೂಡಾ ಸಂಸ್ಥೆಗೆ ಹಾನಿಯುಂಟು ಮಾಡಿತ್ತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...