ಹಿರಿಯ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಅವರ ಬಂಧನ ಖಂಡಿಸಿ ಮತ್ತು ಬಿಡುಗಡೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
ಇಪ್ಪತ್ತೈದು ವರ್ಷಗಳ ಹಿಂದಿನ ಪ್ರಕರಣವೊಂದರ ಸಂಬಂಧ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಂಧಿಸಿದೆ. ಇಪ್ಪತ್ತೈದು ವರ್ಷಗಳಿಂದ ದೊಡ್ಡಿಪಾಳ್ಯ ಅವರು ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.


ಶ್ರೀಯುತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ, ಬರಹಗಾರರಾಗಿ ಬಹಿರಂಗವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಅವರೆಲ್ಲೂ ಅಡಗಿ ಕುಳಿತಿರಲಿಲ್ಲ. ಶೋಷಿತ ಜನತೆಯ ಪರವಾಗಿ ಧ್ವನಿ ಎತ್ತಿದ್ದರು. ಈಗ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಆಪಾದಿಸುತ್ತಿರುವುದರ ಹಿಂದಿರುವ ದುರುದ್ದೇಶ ಸ್ಪಷ್ಟವಾಗಿದೆ. ಹಲವು ಬುದ್ಧಿಜೀವಿಗಳನ್ನು ಮತ್ತು ಎಡಚಿಂತಕರನ್ನು ಬೇಟೆಯಾಡುತ್ತಿರುವ ಕೇಂದ್ರ ಸರ್ಕಾರದ ಜನ ವಿರೋಧಿ ಹಾಗೂ ಸರ್ವಾಧಿಕಾರಿ ನೀತಿಯನ್ನು ರಾಜ್ಯ ಸರ್ಕಾರವೂ ಜಾರಿ ಮಾಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಹಾಗೂ ಪ್ರತಿಭಟಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಮುಗಲಭೆಗಳನ್ನು ಹುಟ್ಟು ಹಾಕಿ ವಿವಿಧ ಮತ ಧರ್ಮಗಳ ಜನತೆಯ ಸೌಹಾರ್ದಯುತ ಬದುಕಿಗೆ ಬೆಂಕಿ ಹಾಕಿರುವ ಹಲವು ಸಂಘ ಪರಿವಾರದವರ ವಿರುದ್ಧದ ಮೊಕದ್ದಮೆಗಳನ್ನು ಸರ್ಕಾರ ವಾಪಸ್ಸು ಪಡೆದಿದೆ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಸಲು ಇಚ್ಛಿಸುತ್ತೇವೆ ಎಂದು ಸಿಪಿಐ ಹೇಳಿದೆ.


