‘ಕೋಟ್ಟಕ್ಕಲ್ ಆಯುರ್ವೇದ’ ಎಂದು ಪ್ರಸಿದ್ದವಾಗಿರುವ ಆರ್ಯ ವೈದ್ಯ ಶಾಲಾದ ವ್ಯವಸ್ಥಾಪಕ ಟ್ರಸ್ಟಿ ಡಾ. ಪಿ.ಕೆ. ವಾರಿಯರ್ ನಿಧನರಾಗಿದ್ದಾರೆ. ಆಯುರ್ವೇದ ಔಷಧಗಳಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಕೇರಳದ ಕೋಟ್ಟಕ್ಕಲ್‌ನ ವೈದ್ಯರತ್ನಂ ಪಿಎಸ್ ವಾರಿಯರ್ ಅವರ ‘ಆರ್ಯ ವೈದ್ಯ ಶಾಲಾ’ದ ಮುಖ್ಯ ಕಚೇರಿಯಾದ ಕೈಲಾಸ ಮಂದಿರಂನಲ್ಲಿ ಶನಿವಾರದಂದು ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರು ತಿಂಗಳ ಹಿಂದೆಯಷ್ಟೆ ತನ್ನ ನೂರನೇ ಜನ್ಮ ದಿನವನ್ನು ಆಚರಿಸಿದ್ದರು.
ವೈದ್ಯರತ್ನಂ ಪಿಎಸ್ ವಾರಿಯರ್ ಅವರು ಪ್ರಾರಂಭಿಸಿದ್ದ ಆರ್ಯ ವೈದ್ಯ ಶಾಲಾದ ವ್ಯವಸ್ಥಾಪಕ ಟ್ರಸ್ಟಿಯಾಗಿ 1954 ರಲ್ಲಿ ಡಾ. ವಾರಿಯರ್ ನೇಮಕವಾಗಿದ್ದು. ಡಾ. ವಾರಿಯರ್ ಶತಮಾನದಷ್ಟು ಹಳೆಯದಾದ ಸಂಸ್ಥೆಯನ್ನು ವೈಭವ ಮತ್ತು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರರಾದ ಡಾ. ವಾರಿಯರ್, ಆಯುರ್ವೇದಕ್ಕೆ ದೇಹ ಮತ್ತು ಮನಸ್ಸನ್ನು ಸಮಗ್ರವಾಗಿ ಪರಿಗಣಿಸುವ ಮೂಲಕ ಮನುಷ್ಯರನ್ನು ಸಮಗ್ರವಾಗಿ ನೋಡುವ ಹೊಸ ದೃಷ್ಟಿಕೋನವನ್ನು ನೀಡಿದ್ದರು ಎಂದು ದಿ ಹಿಂದೂ ಪತ್ರಿಕೆ ಉಲ್ಲೇಖಿಸಿದೆ.
ಇದನ್ನೂ ಓದಿ: ಕೊರೊನಾ: ರೋಗ ನಿರೋಧಕತೆ ಕುರಿತು ಆಯುರ್ವೇದದ ದೃಷ್ಟಿಕೋನ
‘ಸ್ಮೃತಿಪರ್ವಂ’ ಎಂಬ ಅವರ ಪುಸ್ತಕವು 2009 ರಲ್ಲಿ ಅತ್ಯುತ್ತಮ ಆತ್ಮಚರಿತ್ರೆಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದರ ಇಂಗ್ಲಿಷ್ ಅನುವಾದ ‘ದಿ ಕ್ಯಾಂಟೊ ಆಫ್ ಮೆಮೊರೀಸ್’ ಕೂಡ ಹೆಚ್ಚು ಜನಪ್ರಿಯವಾಗಿತ್ತು. ಅವರು ಅಖಿಲ ಭಾರತ ಆಯುರ್ವೇದ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿದ್ದರು.
ಡಾ. ವಾರಿಯರ್ ಅವರ ನಿಧನಕ್ಕೆ ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅವರಿಗೆ 1999 ರಲ್ಲಿ ಪದ್ಮಶ್ರೀ, 2010 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು. ಕ್ಯಾಲಿಕಟ್ ವಿಶ್ವವಿದ್ಯಾಲಯವು ಅವರಿಗೆ 1999 ರಲ್ಲಿ ಡಿಲಿಟ್ ಪದವಿಯನ್ನು ನೀಡಿ ಗೌರವಿಸಿತು. ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಡಾಕ್ಟರ್ ಆಫ್ ಮೆಡಿಸಿನ್ ಪ್ರಶಸ್ತಿ ಸೇರಿದಂತೆ ಅವರು ಅನೇಕ ಗೌರವ ಪದವಿಗಳನ್ನು ಪಡೆದಿದ್ದಾರೆ.
ಅವರ ಪತ್ನಿ ಮಾಧವಿಕುಟ್ಟಿ ಮತ್ತು ಮಗ ವಿಜಯನ್ ವಾರಿಯರ್ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರಿಗೆ ಮಗ ಬಾಲಚಂದ್ರ ವಾರಿಯರ್ ಮತ್ತು ಮಗಳು ಸುಭದ್ರಾ ರಾಮಚಂದ್ರನ್ ಇದ್ದಾರೆ.
ಇದನ್ನೂ ಓದಿ: ಪತಂಜಲಿ ಕೊರೊನಾ ಔಷಧಿ: ಆಯುರ್ವೇದ ವೈದ್ಯಶಾಸ್ತ್ರಕ್ಕೆ ಮಸಿ ಬಳಿಯುವ ಪ್ರಯತ್ನ


