ಜ.26 ರ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದ್ದರೆ, ವಿಶ್ವಸಂಸ್ಥೆ ಬಳಿ ಹೋಗುವುದಿಲ್ಲ-ರಾಕೇಶ್ ಟಿಕಾಯತ್
PC: PTI

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ, 200 ಮಂದಿ ರೈತರು ಜುಲೈ 22 ರಿಂದ ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ‌ಶನಿವಾರ ಮಾಹಿತಿ ನೀಡಿದ್ದಾರೆ.

“ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ಕುರಿತು ಚರ್ಚೆ ನಡೆಸಲು ಬಯಸಿದರೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಮಾತುಕತೆ ನಡೆಯದಿದ್ದರೆ, ರೈತರ ಪರವಾಗಿ ನಿರ್ಧಾರ ಬರದಿದ್ದರೆ, ಜುಲೈ 22 ರಿಂದ 200 ಮಂದಿ ರೈತರು ಸಂಸತ್ತಿನ ಬಳಿ ಪ್ರತಿಭಟನೆ ನಡೆಸುತ್ತಾರೆ” ಎಂದು ಟಿಕಾಯತ್ ಮಾಹಿತಿ ನೀಡಿದ್ದಾರೆ.

ಈ ವರ್ಷದ ಕಿಸಾನ್ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಘಟನೆ ಬಗ್ಗೆ “ನಿಷ್ಪಕ್ಷಪಾತ ತನಿಖೆ” ಅಗತ್ಯವಿದೆ ಎಂದು ರಾಕೇಶ್ ಟಿಕಾಯತ್ ‌ಅಭಿಪ್ರಾಯಪಟ್ಟಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಲು ಸಂಸ್ಥೆ ಇದೆಯೇ..? ಇಲ್ಲದಿದ್ದರೆ ನಾವು ವಿಶ್ವಸಂಸ್ಥೆಯ (ಯುಎನ್) ಬಾಗಿಲು ಬಡಿಯಬೇಕಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ಅನ್ನದಾತರ ವಿರುದ್ದ ಕತ್ತಿ ಎತ್ತಿ, ರೈತ ವಿರೋಧಿ ಘೋಷಣೆ ಕೂಗಿದ BJP ಕಾರ್ಯಕರ್ತರು

ವಿವಾದಿತ ಕೃಷಿ ಕಾನೂನುಗಳ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡುವುದಿಲ್ಲ. ಜನವರಿ 26 ರ ಘಟನೆಗೆ ಸಂಬಂಧಿಸಿದ ವಿಷಯವನ್ನು ಮಾತ್ರ ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಬಹುದು ಎಂದು ಬಿಕೆಯು ಮುಖಂಡ ಸ್ಪಷ್ಟಪಡಿಸಿದ್ದಾರೆ.

“ನಿಷ್ಪಕ್ಷಪಾತ ತನಿಖೆ ನಡೆಸುವ ಯಾವುದಾದರೂ ಸಂಸ್ಥೆ ಇಲ್ಲಿ ಇದೆಯೇ..? ಇಲ್ಲದಿದ್ದರೆ, ನಾವು ಈ ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಬೇಕೆ?, ಕೃಷಿ ಕಾನೂನುಗಳ ವಿಚಾರವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವುದಾಗಿ ನಾವು ಹೇಳಿಲ್ಲ. ಜನವರಿ 26 ರ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದೇವೆ” ಎಂದು ಟಿಕಾಯತ್ ಹೇಳಿದ್ದಾರೆ.

“ಕೃಷಿ ಕಾನೂನುಗಳನ್ನು ಹಿಂಪಡೆಯದ ಸರ್ಕಾರ, ರೈತ ಪ್ರತಿಭಟನೆಯನ್ನು ಕೊನೆಗೊಳಿಸಲು ಹೇಳುತ್ತಿದ್ದಾರೆ. ರೈತರು 8 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ಆದೇಶಗಳನ್ನು ಪಾಲಿಸಲು ಅಲ್ಲ. ಸರ್ಕಾರ ಮಾತನಾಡಲು ಬಯಸಿದರೆ, ರೈತರ ಜೊತೆಗೆ ಮಾತನಾಡಬಹುದು, ಆದರೆ ಯಾವುದೇ ಷರತ್ತು ವಿಧಿಸಬಾರದು” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನವೆಂಬರ್‌ನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘಟನೆಗಳ ಮುಖಂಡರು ಮತ್ತು ಸರ್ಕಾರದ ನಡುವೆ ಹತ್ತಕ್ಕೂ ಹೆಚ್ಚು ಸುತ್ತಿನ ಚರ್ಚೆಗಳು ನಡೆದಿವೆ, ಆದರೆ ಇಲ್ಲಿಯವರೆಗೂ ಸರ್ಕಾರದ ಯಾವುದೇ ಷರತ್ತುಗಳಿಗೂ ರೈತರು ಒಪ್ಪಿಲ್ಲ.


ಇದನ್ನೂ ಓದಿ: ಕೇಂದ್ರ ಚರ್ಚೆ ನಡೆಸಲು ಬಯಸಿದರೆ, ರೈತರಿಗೆ ಷರತ್ತು ವಿಧಿಸುವಂತಿಲ್ಲ- ರಾಕೇಶ್ ಟಿಕಾಯತ್

LEAVE A REPLY

Please enter your comment!
Please enter your name here