“ಭಾನುವಾರ (ಡಿಸೆಂಬರ್ 18) ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ 2022ರ ಕೊನೆಯ ಪಂದ್ಯವು ನನ್ನ ದೇಶಕ್ಕಾಗಿ ಆಡುತ್ತಿರುವ ನನ್ನ ಅಂತಿಮ ಪಂದ್ಯವಾಗಿದೆ” ಎಂದು ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಘೋಷಿಸಿದ್ದಾರೆ.
ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ಫೈನಲ್ ಪ್ರವೇಶಿಸಿದೆ. ಮೆಸ್ಸಿ ಈ ಭಾರಿಯ ವಿಶ್ವಕಪ್‌ನ ಅತ್ಯುತ್ತಮ ಗೋಲ್ ಸ್ಕೋರರ್ ಮತ್ತು ಅಸಿಸ್ಟ್ ಪ್ರೊವೈಡರ್ ಆಗಿ ಹೊಮ್ಮಿದ್ದಾರೆ. ಈ ಪಂದ್ಯದಲ್ಲಿ ಮೆಸ್ಸಿ ಕ್ರೊಯೇಷಿಯಾ ವಿರುದ್ಧ ತಮ್ಮ ತಂಡದ ಆರಂಭಿಕ ಗೋಲನ್ನು ಗಳಿಸಿದರು. ನಂತರ ಜೂಲಿಯನ್ ಅಲ್ವಾರೆಜ್ ಅವರ ಮೂರನೇ ಗೋಲಿಗೆ ಸಹಾಯ ಮಾಡಿದ್ದರು.
ಅರ್ಜೆಂಟೀನಾದ ಗೆಲುವಿನ ನಂತರ ಮೆಸ್ಸಿಯವರು ತಮ್ಮ ನಿವೃತ್ತಿಯ ಕುರಿತು ಮಾತನಾಡಿದ್ದಾರೆ. ಅರ್ಜೆಂಟೀನಾದ ಮಾಧ್ಯಮ ‘ಔಟ್ಲೆಟ್ ಡಿಯಾರಿಯೊ ಡಿಪೋರ್ಟಿವೊ ಓಲೆ’ಗೆ ನಿವೃತ್ತಿಯ ಬಗ್ಗೆ ದೃಢಪಡಿಸಿದ್ದಾರೆ. ಭಾನುವಾರ ನಡೆಯುವ ಪಂದ್ಯವು ಅರ್ಜೆಂಟೀನಾದ ಪರ ಆಡುತ್ತಿರುವ ಕೊನೆಯ ಪಂದ್ಯವಾಗಲಿದೆ.
“ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸುತ್ತಿದ್ದೇನೆ. ಇದನ್ನು ಸಾಧಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದಿದ್ದಾರೆ.
ಮೆಸ್ಸಿ ಕಾಲ್ಚಳಕಕ್ಕೆ ಮನಸೋತ ಫುಟ್‌ಬಾಲ್ ಪ್ರೇಮಿಗಳು
ಕ್ರೊಯೇಷಿಯ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ತೋರಿದ ಕಾಲ್ಚಳಕಕ್ಕೆ ಫುಟ್‌ಬಾಲ್ ಪ್ರೇಮಿಗಳು ಮನಸೋತಿದ್ದಾರೆ. ಸೆಮಿಫೈನಲ್‌ನ ಪ್ಯಾನಲ್ಟಿ ಕಿಕ್‌ನಲ್ಲಿ ಮೊದಲ ಗೋಲ್ ಭಾರಿಸಿದ ಮೆಸ್ಸಿ, ಸೆಕೆಂಡ್ ಹಾಫ್ ಪಂದ್ಯದಲ್ಲಿ ಮತ್ತೊಂದು ಗೋಲಿಗೆ ಸಹಕರಿಸುವ ಮೂಲಕ ಗಮನ ಸೆಳೆದರು. ಎದುರಾಳಿ ಆಟಗಾರರನ್ನು ಕ್ಷಣಾರ್ಧದಲ್ಲಿ ಕಣ್ತಪ್ಪಿಸಿ ಮೆಸ್ಸಿ ನೀಡಿದ ಪಾಸ್‌ಅನ್ನು ಅಲ್ವಾರೆಜ್ ಗೋಲ್ ಆಗಿ ಪರಿವರ್ತಿಸಿದ್ದರು. ಹೀಗಾಗಿ ಅರ್ಜೆಂಟೀನಾ 3-0 ಅಂತರದಲ್ಲಿ ಗೆದ್ದು ಫೈನಲ್ ಪ್ರೇವೇಶಿಸಿದೆ.


