Homeಕರ್ನಾಟಕಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

- Advertisement -
- Advertisement -

ಕರ್ನಾಟಕ ವಿಧಾನಸಭೆಯ ಮೊದಲ ಮುಸ್ಲಿಂ ಸ್ಪೀಕರ್ ಆಗಿ ಆಯ್ಕೆಯಾಗಿ ಇತಿಹಾಸ ಬರೆಯುತ್ತಿರುವ, ಹಿಂದಿನ ಉಳ್ಳಾಲ ಮತ್ತು ಈಗಿನ ಮಂಗಳೂರು ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಯು.ಟಿ. ಖಾದರ್ ಅವರನ್ನು ಕೇವಲ ಮುಸ್ಲಿಂ ಎಂಬ ಲೇಬಲ್‌ನಿಂದಾಗಲೀ ಅಥವಾ ಅವರು ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಸ್ಪೀಕರ್ ಎಂಬ ಲೇಬಲ್‌ನಲ್ಲಾಗಲೀ ಗುರುತಿಸುವುದು ಸರಿಯಾದ ಕ್ರಮವಲ್ಲ.

ಇದಕ್ಕೆ ಕೆಲವು ಕಾರಣಗಳನ್ನು ಕೊಡಬಹುದು. ಅತ್ಯಂತ ಪ್ರತಿಷ್ಟಿತ ಮತ್ತು ಗೌರವಾರ್ಹ ಹುದ್ದೆಯಾಗಿರುವ ಸ್ಪೀಕರ್ ಸ್ಥಾನಕ್ಕೆ ಬಹಳಷ್ಟು ಮಹತ್ವವಿದೆ. ಅದೊಂದು ಕ್ವಾಸಿ (quasi) ನ್ಯಾಯಾಲಯವೂ ಹೌದು. ಅದು ಕಿತ್ತಾಡುವ ಎಲ್ಲಾ ಪಕ್ಷ, ಬಣಗಳನ್ನು ನಿಷ್ಪಕ್ಷಪಾತವಾಗಿ ಜೊತೆಗೆ ಕರೆದೊಯ್ಯುವ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯ, ಪರಂಪರೆಗಳನ್ನು, ಸಂವಿಧಾನವನ್ನು ಎತ್ತಿ ಹಿಡಿದು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನೂ ಹೊಂದಿದೆ. ಜೊತೆಗೆ ಈಗಿರುವ ಪಕ್ಷಗಳ ನಡುವಿನ ವೈಮನಸ್ಸು, ದಿನದಿಂದದಿನಕ್ಕೆ ಒರಟಾಗುತ್ತಿರುವ ಜನಪ್ರತಿನಿಧಿಗಳ ಭಾಷೆ, ಸ್ವಭಾವ ಮತ್ತು ಸಂಘರ್ಷದ ಮನೋಭಾವ ಇತ್ಯಾದಿ ಸಂಗತಿಗಳ ವಾತಾವರಣದಲ್ಲಿ ಸದನವನ್ನು ಶಾಂತಿಯುತವಾಗಿ ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವೇನಲ್ಲ. ಅಷ್ಟು ಮಾತ್ರವಲ್ಲದೇ, ಭ್ರಷ್ಟಾಚಾರದ ಈ ಯುಗದಲ್ಲಿ ಪ್ರತಿಯೊಂದನ್ನೂ ಹಣಕಾಸಿನ ಮತ್ತು ಅದು ತರುವ ಪ್ರಭಾವದ ಪ್ರಮಾಣದಲ್ಲಿ ಅಳತೆ ಮಾಡಲಾಗುತ್ತಿರುವಾಗ, ಪ್ರತಿಯೊಬ್ಬರೂ “ಆಯಕಟ್ಟಿನ” ಜಾಗವನ್ನು ಬಯಸುತ್ತಿರುವಾಗ- ಸ್ಪೀಕರ್ ಹುದ್ದೆಯನ್ನು ಸ್ವೀಕರಿಸಲು ಬಹಳಷ್ಟು ಮಂದಿ ಹಿರಿಯರು, ತಮಗೂ ಅಂತಹ ಅರ್ಹತೆ ಇದ್ದರೂ ಸುತಾರಾಂ ಒಪ್ಪಿಕೊಳ್ಳುವುದಿಲ್ಲ.

ದೇಶಪಾಂಡೆ

ಇಲ್ಲಿ ಆಗಿರುವುದೂ ಹಾಗೆಯೇ. ಕಾಂಗ್ರೆಸ್ ಪಕ್ಷವು ಹಿರಿಯರಾದ ಆರ್.ವಿ.ದೇಶಪಾಂಡೆ ಮತ್ತು ಎಚ್.ಕೆ. ಪಾಟೀಲ್ ಅವರನ್ನು ಈ ಹುದ್ದೆಗೆ ಪರಿಗಣಿಸಿದರೂ ಅವರಿಬ್ಬರು ಅದನ್ನು ಬಹಳ ನಾಜೂಕಾಗಿ ನಿರಾಕರಿಸಿದ್ದಾರೆ. ದೇಶಪಾಂಡೆಯವರಂತೂ ತನಗೆ ಅಷ್ಟು ದೊಡ್ಡ ಜವಾಬ್ದಾರಿಯ ಹುದ್ದೆಯನ್ನು ನಿಭಾಯಿಸುವ ಜ್ಞಾನವಿಲ್ಲ ಎಂದು ಹೇಳಿದ್ದಾರೆ. ಹಿಂದೆ ಹಲವಾರು ಸಂಪುಟಗಳಲ್ಲಿ ಬೃಹತ್ ಕೈಗಾರಿಕೆ ಸೇರಿದಂತೆ ಮಂತ್ರಿಯಾಗಿದ್ದ ಅವರೇ ಹೀಗೆ ಹೇಳಿದ ಮೇಲೆ ಯು.ಟಿ. ಖಾದರ್ ಅವರಿಗೆ ಅಂತಾ ದೊಡ್ಡ ಅರ್ಹತೆ ಇರಲೇಬೇಕು. ಇದೆಯೇ, ಇಲ್ಲವೇ ಎಂಬುದನ್ನು ಮುಂದೆ ನೋಡೋಣ.

ಐದನೇ ಬಾರಿಗೆ- ನಿರಂತರವಾಗಿ ಕೋಮುವಾದದ ಪ್ರಯೋಗಶಾಲೆಯಾಗಿರುವ ಕರಾವಳಿಯಲ್ಲಿ, ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಗೆಲ್ಲುತ್ತಾ ಬಂದಿರುವ, ಎರಡು ಬಾರಿ ಸಂಪುಟದ ಸಚಿವರೂ ಆಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿರುವ, ಕಳೆದ ಬಾರಿ ಪ್ರತಿಪಕ್ಷಗಳ ಉಪನಾಯಕನೂ ಆಗಿದ್ದ, ಈ ಬಾರಿಯೂ ಹಲವು ಅಡಚಣೆ ಮತ್ತು ಮುಸ್ಲಿಮರ ಒಂದು ಗುಂಪಿನ ಬಹಿರಂಗ ವಿರೋಧದ ನಡುವೆಯೂ ಗೆಲುವಿನ ಓಟವನ್ನು ಮುಂದುವರಿಸಿರುವ ಯು.ಟಿ. ಖಾದರ್ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಗುವುದು ಕೇವಲ ನಿರೀಕ್ಷಿತ ಮಾತ್ರವಲ್ಲ; ಅವರ ಅಭಿಮಾನಿಗಳ ಆಕಾಂಕ್ಷೆಯೂ ಆಗಿತ್ತು.

ಹೀಗಿರುವಾಗ, ಅವರಿಗೆ ಅದು ಸಿಗದೇ, ಸ್ಪೀಕರ್ ಹುದ್ದೆ ಸಿಕ್ಕಿರುವುದು ಹಲವು ರೀತಿಯ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಇಂತಹ ಪ್ರತಿಕ್ರಿಯೆಗಳು, ಮುಖ್ಯವಾಗಿ ಟೀಕೆಗಳು ಕಾಂಗ್ರೆಸ್ ಅಥವಾ ಅವರ ವೈಯಕ್ತಿಕ ಬೆಂಬಲಿಗರಿಂದ ಬರದೇ, ಅವರ ವಿರೋಧಿಗಳು ಮತ್ತು ಪ್ರತಿಪಕ್ಷಗಳ ಕೆಲವು ವಾಚಾಳಿ ನಾಯಕರಿಂದ ಬರುತ್ತಿರುವುದು ವಿಪರ್ಯಾಸ. ಯಾಕೆಂದರೆ, ಅಧಿಕಾರ ರಾಜಕಾರಣದಲ್ಲಿ ಒಂದು ಸದನದ ಯಜಮಾನನ ಸ್ಥಾನವಾದ ಸ್ಪೀಕರ್ ಹುದ್ದೆಯನ್ನು ಯಕಶ್ಚಿತ್ ಎಂಬಂತೆ ಕಾಣುವುದು ಅಂತವರ ಜಾಯಮಾನ. ಖಾದರ್ ಅವರಿಗೆ ಮಂತ್ರಿಗಿರಿ ನೀಡದೇ ಸ್ಪೀಕರ್ ಹುದ್ದೆ ನೀಡಿರುವುದೂ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಮಾಡಿದ ಅನ್ಯಾಯ ಎಂಬಂತೆ ಬಿಂಬಿಸಲು ಕೆಲವರು ಈಗಾಗಲೇ ಆರಂಭಿಸಿದ್ದಾರೆ.

ಇದನ್ನೂ ಓದಿ: ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಹೇಳಿಕೆಗೆ ಎಂಬಿ ಪಾಟೀಲ್ ಸ್ಪಷ್ಟನೆ

ಅದೇನೇ ಇದ್ದರೂ, ಪಕ್ಷದ ಹಿರಿಯರೇ ನಿರಾಕರಿಸಿರುವ ಈ ಹುದ್ದೆಯನ್ನು ತುಲನಾತ್ಮಕವಾಗಿ ಕಿರಿಯರಾದ ಅವರು, ಪಕ್ಷದ ಆಣತಿಯಂತೆ ಸ್ವೀಕರಿಸಿರುವುದು ಅವರ ಪಕ್ಷನಿಷ್ಠೆ ಮತ್ತು ಪ್ರಾಮಾಣಿಕತೆಗಳನ್ನು ಪ್ರತಿಫಲಿಸುತ್ತದೆ. ಜನನಿಷ್ಠೆ ಮತ್ತು ಪಕ್ಷನಿಷ್ಠೆ ಅವರ ಸ್ವಭಾವದ ಭಾಗವೂ ಹೌದು. ಒಬ್ಬ ವ್ಯಕ್ತಿಯ ಬೆಂಬಲದಲ್ಲಿ ಸ್ವಂತ ವರ್ಚಸ್ಸು ಮತ್ತು ಕೆಲಸಗಳ ಜೊತೆ ಪಕ್ಷದ, ಸಿದ್ಧಾಂತದ ಪ್ರಭಾವ ಮತ್ತು ಜನರು ಇಟ್ಟಿರುವ ನಂಬಿಕೆಗಳಿಗೆ ಬಹುದೊಡ್ಡ ಪಾತ್ರವಿರುತ್ತದೆ. ಇದನ್ನು ಮರೆತವರು, ಬಾಯಿ ಹರಿಯಬಿಟ್ಟ ಘಟಾನುಘಟಿಗಳು ಟೊಳ್ಳು ಮಡಕೆಗಳಂತೆ ಉರುಳಿ ಪುಡಿಪುಡಿ ಆಗಿರುವುದನ್ನು ಈ ಚುನಾವಣೆಯಲ್ಲಿಯೇ ನಾವು ನೋಡಿದ್ದೇವೆ. ಅದು ಖಾದರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ದೃಷ್ಟಿಯಿಂದ ಶಿಸ್ತಿನ ಸಿಪಾಯಿ ಅವರು.

ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಗೆ ಅರ್ಹರೆ? ಅದಕ್ಕೆ ಬೇಕಾದ ಸ್ವಭಾವ, ಪ್ರಾಮಾಣಿಕತೆ ಮತ್ತು ಗುಣಮಾನಗಳು ಅವರಿಗೆ ಇವೆಯೇ? ಇದನ್ನು ನೋಡಬೇಕೆಂದರೆ ಅವರ ಹಿನ್ನೆಲೆಯನ್ನು ನೋಡಬೇಕು. ಅವರ ರಾಜಕೀಯ ಜೀವನವನ್ನು ಹೆಚ್ಚು ವಿಸ್ತರಿಸಬೇಕಾದ ಅಗತ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವಂಥದ್ದೇ! ಚುಟುಕಾಗಿ ಹೇಳಬೇಕೆಂದರೆ, 2007ರಲ್ಲಿ ತನ್ನ ತಂದೆ- ಅಂದಿನ ಹಾಲಿ ಶಾಸಕ ಯು.ಟಿ. ಫರೀದ್ ಅವರು ನಿಧನರಾದಾಗ ಅವರ ಸ್ಥಾನದಲ್ಲಿ ಮೊದಲ ಬಾರಿಗೆ ಗೆದ್ದವರು ಯು.ಟಿ.ಖಾದರ್. ಆ ಬಳಿಕದಿಂದ ಸೋಲು ಕಾಣದ ಸರದಾರ.

ಯು.ಟಿ. ಫರೀದ್

ಮೇ 2013ರಿಂದ 2016ರ ಜೂನ್ ತನಕ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿಯಾಗಿ- ಪಾಳು ಬಿದ್ದಂತಿದ್ದ ಮಂಗಳೂರಿನ ಪ್ರಖ್ಯಾತ, ಐತಿಹಾಸಿಕ- ಬಡವರಿಗೆ ಬೇಕಾದ ಸರಕಾರಿ ಆಸ್ಪತ್ರೆಗಳಾದ ವೆನ್ಲಾಕ್ ಮತ್ತು ಮಹಿಳೆಯರ ಲೇಡಿ ಗೋಷನ್ ಆಸ್ಪತ್ರೆಗಳೂ ಸೇರಿದಂತೆ ಸರಕಾರಿ ಆರೋಗ್ಯ ಸೇವಾ ವ್ಯವಸ್ಥೆಗೆ ಕಾಯಕಲ್ಪ ನೀಡಿದವರು. ನಂತರ 2016ರಿಂದ 2018ರ ತನಕ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವಿಷಯಗಳ ಮಂತ್ರಿಯೂ ಆಗಿದ್ದರು. ಕಳೆದ ಸಲ ಪ್ರತಿಪಕ್ಷಗಳ ಉಪನಾಯಕನೂ ಆಗಿದ್ದರು.

ಉಳ್ಳಾಲ ಕ್ಷೇತ್ರದ ಜನಪ್ರಿಯ ಶಾಸಕನಾಗಿದ್ದ ಯು.ಟಿ.ಫರೀದ್ ಮತ್ತು ನಸೀಮಾ ದಂಪತಿಗಳ ಮಗನಾಗಿ ಅಕ್ಟೋಬರ್ 12, 1969ರಲ್ಲಿ ಜನಿಸಿದ ಯು.ಟಿ. ಅಬ್ದುಲ್ ಖಾದರ್ ಕಾನೂನು ಪದವೀಧರ. ವಿದ್ಯಾರ್ಥಿ ದೆಸೆಯಲ್ಲಿ ಎನ್‌ಎಸ್‌ಯುಐ ನಾಯಕ. ಸಾರ್ವಜನಿಕ ಜೀವನವನ್ನು ಕೌಟುಂಬಿಕ ಜೀವನದಿಂದ ಹೊರಗಿಡುತ್ತಲೇ ಬಂದಿರುವ, ಯಾವುದೇ ಹಗರಣಗಳಿಂದ ದೂರ ಇರುವ ಅವರ ವೈಯಕ್ತಿಕ ಜೀವನದ ವಿವರಗಳು ನಮಗೆ ಅಗತ್ಯವಿಲ್ಲ. ಆದರೆ, ಅವರ ಸ್ವಭಾವದ ಬಗ್ಗೆ ಸ್ವಲ್ಪ ಹೇಳಬೇಕು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯವರು ತೋರಿಸುತ್ತಿದ್ದ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಬೆಳಕಿಗೆ ಬಂದ ಯುವ ಉತ್ಸಾಹ, ಭೇದಭಾವ ಇಲ್ಲದೇ ಜನರೊಂದಿಗೆ ಬೆರೆಯುವ ಗುಣ ಖಾದರ್ ಅವರಲ್ಲಿ ನೆಲೆಗೊಂಡಿದೆ. ಮಂಗಳೂರಿನ ಬಹಳಷ್ಟು ಜನರಿಗೆ ಜಾತಿ ಮತ ಭೇದವಿಲ್ಲದೆ- ಆಸ್ಪತ್ರೆಯಲ್ಲಿ ಸಮಸ್ಯೆಯೇ? ಖಾದರ್ ಬೇಕು. ಅಪರೂಪದ ರಕ್ತದ ಸಮಸ್ಯೆಯೇ? ಖಾದರ್ ಬೇಕು. ಏನಿದ್ದರೂ ಖಾದರ್ ಬೇಕು.

ಒಂದು ಸಲ ಪಾಶ್ಚಾತ್ಯ ದೇಶಗಳಲ್ಲಿ ಇರುವಂತೆ ತುರ್ತು ಪ್ಯಾರಾಮೆಡಿಕ್ ಬೈಕ್ ಸೇವೆಗಾಗಿ ಒಂದು ವ್ಯವಸ್ಥೆಯನ್ನು ಆಗಿನ ಆರೋಗ್ಯ ಸಚಿವರಾಗಿ ಇವರು ರೂಪಿಸಿದ್ದರು. ಅದರ ಉದ್ಘಾಟನೆ ನಡೆದಾಗ ಇವರು ಎಲ್ಲರೂ ನೋಡುತ್ತಿರುವಂತೆಯೇ ಆ ಹೆವಿ ಬೈಕೊಂದನ್ನು ಓಡಿಸಿದ ಘಟನೆಯನ್ನು ಯಾರೂ ಮರೆತಿಲ್ಲ. ಸಾಮಾನ್ಯ ಜನರಂತೆ ತಾನೂ ಇದನ್ನು ಮಾಡಬಲ್ಲೆ ಎಂದು ತೋರಿಸುವುದು ಇದರ ಉದ್ದೇಶವಾಗಿರಬಹುದು. ಹಲವಾರು ಸಲ ಇವರು ರಸ್ತೆ ಬದಿಯ ಗೂಡಂಗಡಿಗಳಲ್ಲಿ ಕಾರು ನಿಲ್ಲಿಸಿ ಚಹಾ ಕುಡಿಯುವ, ತಿಂಡಿ ತಿನ್ನುವ ಚಿತ್ರಗಳು, ವಿರೋಧಿ ನಾಯಕರ ಜೊತೆಗೂ ಸಮಾರಂಭಗಳಲ್ಲಿ ಜೊತೆಯಲ್ಲಿ ಊಟ ಮಾಡುವ ಚಿತ್ರಗಳು ವೈರಲ್ ಆಗಿರುವಂತೆ ಟ್ರೋಲ್ ಕೂಡಾ ಆಗಿವೆ. ಇದು ಪ್ರಚಾರ ತಂತ್ರ ಎಂದು ಬಾಡಿಗೆ ಅಪಪ್ರಚಾರಕರು ಟೀಕಿಸಿದ್ದೂ ಇದೆ. ಆದರೆ ಈ ಸರಳತೆ, ಸೌಹಾರ್ದತೆ, ಶಾಂತಿಪ್ರಿಯತೆ, ಸಾಮರಸ್ಯ ಉಳ್ಳಾಲದ ನೆಲದ ಗುಣ. ಖಾದರ್ ಅವರಿಗೆ ಮುಸ್ಲಿಂ ಸಮುದಾಯದಂತೆಯೇ ಎಲ್ಲಾ ಸಮುದಾಯಗಳಲ್ಲಿ ಪ್ರೀತಿಸುವವರು ಇದ್ದಾರೆ. ಹಾಗೆಂದೇ ಮುಸ್ಲಿಂ ಸಮುದಾಯದ ಒಂದು ಗುಂಪಿನ ವಿರೋಧ ಮತ್ತು ಎಸ್‌ಡಿಪಿಐ ಸ್ಪರ್ಧೆಯ ನಡುವೆಯೂ ಈ ಬಾರಿಯೂ ಅವರೇ ಗೆಲ್ಲುವಂತಾಯಿತು. ಜಿಲ್ಲೆಯಲ್ಲಿ ರಮಾನಾಥ ರೈ ಅವರಂತೆ ಕ್ಷೇತ್ರ ಮೀರಿ ಎಲ್ಲಾ ಜಾತಿ, ಧರ್ಮಗಳ ನಡುವೆಯೂ ಪ್ರಭಾವ ಹೊಂದಿರುವ ಒಂದು ಕೈ ಬೆರಳೆಣಿಕೆಯ ಕೈ ನಾಯಕರಲ್ಲಿ ಇವರಿದ್ದಾರೆ.

ರಮಾನಾಥ್ ರೈ

ಕೋಮುವಾದಿಗಳು ಗಲಭೆ ಎಬ್ಬಿಸಲು ಸದಾ ಯತ್ನಿಸುವ, ಎರಡೂ ಕಡೆಗಳಲ್ಲಿ ಕ್ರಿಮಿನಲ್‌ಗಳೂ, ಕಿಡಿಗೇಡಿಗಳೂ ತುಂಬಿರುವ ಉಳ್ಳಾಲದಲ್ಲಿ ಶಾಂತಿ ಕಾಪಾಡುವ ಕೆಲಸ ಸುಲಭವಲ್ಲ. ಆದರೂ, ಉಳ್ಳಾಲ ಉಳಿದುಕೊಂಡಿರುವುದು ಅದರ ರಾಜಕೀಯ ಮತ್ತು ಧಾರ್ಮಿಕ-ಸಾಮಾಜಿಕ ಇತಿಹಾಸದಿಂದ. ಸಿಪಿಎಂನ ರಾಮಚಂದ್ರ ರಾವ್ (ಮಾಸ್ಟ್ರು), ವಿಧಾನಸಭೆಯಲ್ಲಿ ಕವಿ ಮತ್ತು ಕೋಮುಸೌಹಾರ್ದದ ವಕ್ತಾರರೇ ಆಗಿದ್ದ ಬಿ.ಎಂ. ಇದ್ದಿನಬ್ಬ, ಯು.ಟಿ. ಫರೀದ್ ಅವರಂತಹ ಸಾಮರಸ್ಯದ ವ್ಯಕ್ತಿಗಳು ಶಾಸಕರಾಗಿದ್ದ, ಬೂತ ನೇಮಗಳ ವೇಳೆ ಸ್ವತಃ ಬೂತಗಳೇ ಪ್ರಸಿದ್ಧ ಸೈಯದ್ ಮದನಿ ದರ್ಗಾಕ್ಕೆ ಭೇಟಿ ನೀಡುವ, ಅದರ ಪ್ರತಿನಿಧಿಗಳು ಈ ನೇಮಗಳಲ್ಲಿ ಭಾಗವಹಿಸುವ ಇತಿಹಾಸ ಮಾತ್ರವಲ್ಲ; ವರ್ತಮಾನವೂ ಇರುವ ಉಳ್ಳಾಲ ನೆಲದ ಈ ಮಂಗಳೂರು ಕ್ಷೇತ್ರದ ಶಾಸಕ ಖಾದರ್ ಅವರಿಗೆ ಸ್ಪೀಕರ್ ಗೌರವ ಸಿಕ್ಕಿರುವುದು ಉಳ್ಳಾಲದ ಸರ್ವಧರ್ಮ ಸಮನ್ವಯಕ್ಕೆ ಸಿಕ್ಕಿದ ಗೌರವವೂ ಹೌದು. ಮೇಲೆ ವಿವರಿಸಿದ ಖಾದರ್ ಅವರ ಮತ್ತು ಈ ನೆಲದ ಗುಣವನ್ನು ಗಮನಿಸಿದರೆ, ಅವರಿಗೆ ಆ ಹುದ್ದೆಯನ್ನು ನಿಭಾಯಿಸುವ ಎಲ್ಲಾ ಗುಣಗಳು, ಅರ್ಹತೆಗಳೂ ಇವೆ. ಅವುಗಳೆಂದರೆ ಜಾತ್ಯತೀತತೆ, ಶಾಂತಿಪ್ರಿಯತೆ, ತಾಳ್ಮೆ, ಸಮಾಧಾನ, ಸಮಧಾರಿಕೆ (ಇದು ಬೂತದ ನುಡಿಗಟ್ಟು) ಹಾಗೂ ಜನಪ್ರೀತಿ ಮತ್ತು ಮುಖ್ಯವಾಗಿ ದೇಶ ಮತ್ತು ಸಂವಿಧಾನ ನಿಷ್ಠೆ.

ಇಂದು ದೇಶದ ಸಂಸತ್ತು ಮಾತ್ರವಲ್ಲ; ಬಹುತೇಕ ವಿಧಾನಸಭೆಗಳಲ್ಲಿ ಸಂವಿಧಾನವನ್ನು ಅಧಿಕೃತವಾಗಿಯೇ ಬದಿಗೊತ್ತುವ, ಪಕ್ಷ, ಧರ್ಮ, ಸಿದ್ಧಾಂತ, ಪಕ್ಷಗಳ ನೆಲೆಯಲ್ಲಿ ವಿಕೃತ ತರ್ಕದಿಂದ ವಿಭಜಿಸುವ ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿರುವಾಗ, ಇನ್ನೂ ಹಲವು ವರ್ಷಗಳ ರಾಜಕೀಯ ಭವಿಷ್ಯ ಮತ್ತು ಜನಸೇವೆಯ ಅವಕಾಶ ಇರುವ ಯು.ಟಿ. ಅಬ್ದುಲ್ ಖಾದರ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಸಂವಿಧಾನ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಕೇವಲ ರಾಜಕಾರಣಿಯಲ್ಲ; ಧೀಮಂತ ಮುತ್ಸದ್ಧಿ ಎನಿಸಿಕೊಳ್ಳಲಿ ಎಂದು ಹಾರೈಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...