Homeಅಂಕಣಗಳುಗೌರಿ ಎಂಬ ದೀಪದ ಗಿಡ

ಗೌರಿ ಎಂಬ ದೀಪದ ಗಿಡ

- Advertisement -
- Advertisement -

ದೂರವೆಂಬುದು ಸಮೀಪವಾಗುತ್ತದೆಯಂತೆ. ಆವತ್ತು ಶಿಕ್ಷಕರ ದಿನಾಚರಣೆ. ಕೋಮುವಾದದ ಗೆದ್ದಲುಹುಳ ಹತ್ತಿದ ಎಳೆಯ ಮನಸ್ಸುಗಳನ್ನು ಆಗಾಗ ಕೊಡವಿ ಹಸನುಗೊಳಿಸುತ್ತಿರುವ ನಿರಂತರ ಕೆಲಸಕ್ಕೆ ಒಡ್ಡಿಕೊಂಡಿದ್ದೇನೆಂಬ ಸ್ವಭ್ರಮೆಯಲ್ಲಿ ಬೀಗುತ್ತಿದ್ದ ದಿನ. ಗೌರಿ ಹತ್ಯೆಯ ಸುದ್ದಿ ಅದ್ಯಾವ ರೀತಿಯಲ್ಲಿ ಎರಗಿತ್ತೆಂದರೆ ಈಗಲೂ ನನ್ನ ಮೆದುಳಿನ ಒಂದು ಭಾಗ ಜಖಂಗೊಂಡಿದೆಯೇನೋ ಅನ್ನಿಸುವಷ್ಟು. ಅಳುವುದೂ ಸಾಧ್ಯವಾಗದ ನಿಶ್ಚೇಷ್ಟಸ್ಥಿತಿ ಅದು. ಆ ರಾತ್ರಿ ಧಾರವಾಡದ ಸರ್ಕಲ್ಲಿನಲ್ಲಿ ಮೇಣಬತ್ತಿ ಹಚ್ಚಿ ಗೌರಿಯ ಭಾವಚಿತ್ರ ಅಪ್ಪಿ ಕುಳಿತಾಗ ಧಿಕ್ಕಾರ ಕೂಗುವುದೂ ಸಾಧ್ಯವಾಗಿರಲಿಲ್ಲ. ಹಿಂಸೆಯ ವಿಕೃತಿಯ ಎದುರು ಅಕ್ಷರಶಃ ಸೋತಿದ್ದೇವೆ ಎಂಬ ಭಾವನೆ. ಈಗಲೂ ಅದೇ ಪ್ರಶ್ನೆ- ಆಯಿಯೆಂದು, ಅಮ್ಮನೆಂದು ಕೋಡ್‍ವರ್ಡ್ ಇಟ್ಟುಕೊಂಡು ಹತ್ಯೆಯ ಸಂಚು ರೂಪಿಸುವವರಿಗೆ , ಏನೂ ಅನ್ನಿಸಲೇ ಇಲ್ಲವೇ?

‘ಗೌರಿ’ ಈ ಹೆಸರು ಇಷ್ಟೊಂದು ಮುದ್ದಾಗಿದೆಯೆಂದು, ನಮ್ಮೊಡನೆ ನಮ್ಮಂತೆ ಅನ್ನಿಸುತ್ತಿದ್ದ ಗೌರಿ ಅಷ್ಟೊಂದು ಚೆಲುವಿಯಾಗಿದ್ದಳೆಂದು, ಲೋಕ ಸಮಸ್ತಕ್ಕಾಗಿ ಮಿಡಿವ ನ್ಯಾಯನಿಷ್ಠುರದ ಧೀರತೆ ಗೌರಿಯೆಂಬ ಆ ಪುಟ್ಟ ಹೃದಯದಲ್ಲಿ ಅಡಗಿತ್ತೆಂದು ನಾವು ಹೊಸದಾಗಿ; ಗೌರಿಯಿಲ್ಲದ ದಿನಗಳ ಅಸೀಮ ಖಾಲಿತನದಲ್ಲಿ ಕಾಣುತ್ತಿದ್ದೇವೆ. ನಮ್ಮ ಸುತ್ತಲನ್ನು ಕಡು ಎಚ್ಚರದ ಕಕ್ಕುಲಾತಿಯಲ್ಲಿ ನಿರುಕಿಸುವ ಪಾಠವನ್ನು ಗೌರಿ ಕಲಿಸುತ್ತಲೇ ಇದ್ದಾಳೆ. ನನಗೆ ಗೌರಿಯೆಂದರೆ ಮೊದಲು ಫೋನಿನಲ್ಲಿಯ ಧ್ವನಿ. ಈ ಜನ್ಮದಲ್ಲಿ ನಾನಾಗಿಯೇ ಯಾರಿಗೂ ಫೋನ್ ಮಾಡದ ಗೋಸುಂಬೆಯಾಗಿದ್ದ ನನಗೆ ಗೌರಿಯ ಫೋನ್ ಗಾಲುಮೇಲಾಗಿಸುತ್ತಿತ್ತು. ಆಗ ಮೊಬೈಲ್ ಇದ್ದುದು ಒಕ್ಕುಂದನ ಬಳಿ. ಗೌರಿ ಯಾವಾಗಲೂ ಆ ನಂಬರಿಗೇ ಫೋನ್ ಮಾಡುತ್ತಿದ್ದಳು. ಬಡಬಡ ಮಾತಾಡುವ ಗೌರಿ, ಫೋನ್‍ನಲ್ಲಿ ಬರಹದ ಅರ್ಜೆನ್ಸಿ, ನೆನಪು… ಇರುತ್ತಿದ್ದವು. ಗೌರಿಗೆ ನನ್ನ ಕವಿತೆಗಳಿಗಿಂತ ಕಥೆ ಇಷ್ಟ. ‘ಕವಿತೆ ಇದೆ, ಅದನ್ನೇ ಕಳಿಸಲಾ?’ ಎಂದರೆ ‘ಇಲ್ಲ ಇಲ್ಲ, ಇನ್ನೆರಡು ದಿನ ಟೈಂ ತಗೋ. ಕಥೆಯನ್ನೇ ಕಳಿಸು’ ಗೌರಿಯದು ಇದೇ ಉತ್ತರ. ಪತ್ರಿಕೆಗೆ ಪುಸ್ತಕ ವಿಮರ್ಶೆಯನ್ನು ಕಾಲಂ ಆಗಿ ಬರೆದುಕೊಡಲು ಒತ್ತಾಯಿಸಿದ್ದಳು. ಒಪ್ಪಿದ್ದೆ. ಆದರೆ ಬರೆಯಲಾಗಿರಲಿಲ್ಲ. ಗೌರಿ ಕೆಲ ಪುಸ್ತಕಗಳನ್ನೂ ಕಳಿಸಿದ್ದಳು. ನಾನೋ ಈ ಸಲ, ಮುಂದಿನ ಸಲ ಎಂದು ಸತಾಯಿಸಿ ಕಡೆಗೂ ಬರೆಯಲಿಲ್ಲ. ಗೌರಿ ಏಳೆಂಟು ಸಲ ನೆನಪಿಸಿದರೂ ಕಳಿಸಲಾಗಲೇ ಇಲ್ಲ. ಆದರೆ, ಹೆಣ್ಣಿನ ಇತಿಸ್ಥಿತಿ ಗೊತ್ತಿರುವುದರಿಂದಲೇ ಏನೋ ಗೌರಿ ಕೋಪಿಸಿಕೊಳ್ಳಲಿಲ್ಲ. ಹಗೂರ ಮಾಡಿ ಹಂಗಿಸಲಿಲ್ಲ.

ನಾನು ಮೊದಲು ಗೌರಿಯನ್ನು ನೋಡಿದ್ದು ಚಿಕ್ಕಮಗಳೂರಿನ ಕೋಮು ಸೌಹಾರ್ದ ಸಮಾವೇಶದಲ್ಲಿ, ದೂರದಿಂದ. ನಾವು ಸಭೆಯಲ್ಲಿ, ಗೌರಿ ವೇದಿಕೆಯಲ್ಲಿ. ಗೌರಿ ಅವತ್ತು ಭಾಷಣ ಮಾಡಲಿಲ್ಲ. ತನ್ನ ಮಾತನ್ನು ಒಂದೆರಡು ನಿಮಿಷಕ್ಕೆ ಇಳಿಸಿ, ಸಾಂಕೇತಿಕವಾಗಿ ಸ್ಟೇಜ್‍ನ ಮೂಲೆಯಲ್ಲಿ ಪುಟ್ಟ, ಚೆಲುವಾದ ದೀಪ ಹಚ್ಚಿದಳು. ಅಂದು ನನ್ನ ಪಕ್ಕದಲ್ಲಿದ್ದ ಗಜೇಂದ್ರಗಡದ ಕೆಂಚರೆಡ್ಡಿ ಸರ್ ಗೌರಿಯನ್ನು ನೋಡುತ್ತ ಅದ್ಯಾವ ಪರಿ ಥ್ರಿಲ್ ಆಗಿದ್ದರೆಂದರೆ… ಲಂಕೇಶರ ಮಗಳು ಎಂಬ ಅಭಿಮಾನ ಉಕ್ಕುತ್ತಿತ್ತು ಅವರಿಗೆ. ನಾನು ಗೌರಿಕಡೆ ಒಂದುಕಣ್ಣು, ಸರ್‍ಕಡೆ ಒಂದು ಕಣ್ಣು ಕೊಟ್ಟು ಕೂತಿದ್ದೆ. ಗೌರಿ ಅದೇಆಗ ಕರ್ನಾಟಕದ ಜನಪರ ವೇದಿಕೆಗಳಿಗೆ ತನ್ನನ್ನು ಲಗತ್ತಿಸಿಕೊಳ್ಳುತ್ತಿದ್ದ ದಿನಗಳವು. ಲಂಕೇಶರಿಲ್ಲದ ನಿರ್ವಾತವನ್ನು ಗೌರಿ ತುಂಬ ಘನತೆಯಿಂದ ತುಂಬಿದ್ದಳು.

ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ ಮಾಡಿದ ಒಂದು ರೀತಿ ತಲ್ಲಣದ ಭಾಷಣವನ್ನು ಗೌರಿ, ‘ಥಟ್ ಅಂತ ಬರೆದು ಕಳಿಸು. ಇಲ್ಲಾಂದ್ರೆ ಇಲ್ಲಿ ಸಿ.ಡಿ. ಸಿಕ್ಕಿದೆ. ಅದ್ನೇ ಹಾಕ್ತೇನೆ’ ಎಂದು ಭಯ ಒಡ್ಡುವ ಮೂಲಕ ಬರೆಸಿದ್ದಳು. ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದ ಭಾಷಣವನ್ನು ಲೇಖನ ಮಾಡಿಸಿದ್ದೂ ಹಾಗೇ. ಗೌರಿ, ಕೆ. ಷರೀಫಾ ಎಲ್ಲ ತಮ್ಮ ಗೋಷ್ಠಿ ಮುಗಿಸಿ ಮುಂದಿನ ಸಾಲಿನಲ್ಲಿದ್ದರು. ನಾವು ನಮ್ಮ ಗೋಷ್ಠಿ ಮುಗಿಸಿ ಕೆಳಗೆ ಬರುವ ಪುರುಸೊತ್ತಿಲ್ಲ. ಬಿಗಿಯಾಗಿ ಕೈ ಅಮುಕಿ ಹಿಡಿದು ಹೇಳಿದ್ದು- ‘ವೆರಿ ಅರ್ಜಂಟ್, ನಾಳೆ ಸಂಜೆಗೆ ನಂಗೆ ಲೇಖನ ಬೇಕು ಅಷ್ಟೇ’. ಗೌರಿ ಅರ್ಜೆಂಟಾಗಿ ಹೊರಟುನಿಂತಿದ್ದಳು. ಅವಳೇ ಕಾರ್ ಡ್ರೈವ್ ಮಾಡ್ಕಂಡು ಹೋಗ್ತಿರೋದ್ರಿಂದ, ಗೌರಿ ಫಾಸ್ಟ್‍ಡ್ರೈವರ್ ಆದ್ದರಿಂದ ಆಶಾದೇವಿ ಮೇಡಂ, ‘ಗೌರೀ ನಿಧಾನ ಕಣೇ’.. ಅಂತೆಲ್ಲ ಹೇಳ್ತಿದ್ದರು. ನಾವು ಮತ್ತು ಆಶಾ ಮೇಡಂ ಆ ಸಂಜೆ ಗೊಮ್ಮಟಗಿರಿ ಹತ್ತಿಕೂತು ಮಾತಾಡಿದ್ದು ಗೌರಿ ಎಂಬ ಆ ಜೀವದ ಬಗ್ಗೆಯೇ ಆಗಿತ್ತು.

ಗೌರಿಯೊಂದಿಗೆ ಲೋಕಾಭಿರಾಮವಾಗಿ ಹರಟಿದ್ದು, ಅವಳು ನಮ್ಮನೆಗೆ ಬಂದಿದ್ದ ಒಂದು ದಿನ. ಕಳೆದ ಕೆಲವು ಗಂಟೆಗಳು. ಗೌರಿ ಹುಬ್ಬಳ್ಳಿಯ ಕೋರ್ಟಿಗೆ ಬರ್ತಿದ್ದ ದಿನಗಳವು. ಅವಳಿಗೆ ಚೆನ್ನವೀರಕಣವಿಯವರನ್ನು ಭೇಟಿಯಾಗಲಿಕ್ಕಿತ್ತು. ಒಕ್ಕುಂದಗೆ ಫೋನ್- ‘ಏನಪಾ ಎಲ್ಲಿದ್ದಿ?’ ಎಂದೇ ಆರಂಭ. ‘ಮನೆಗೆ ಕರ್ಕೊಂಡೋಗು- ಅಲ್ಲಿಂದ ಹೋಗಿ ಕಣವಿಯವರನ್ನು ಭೇಟಿಯಾಗಿ ಬರುವಾ’ ಅಂತೇನೋ.. ನನ್ನ ಟೆನ್‍ಶನ್ ಶುರು. ಕಾಲೇಜಿನಿಂದ ಊರು ಸೇರಿ ಮನೆ ಹೊಂದಿಸಿ, ಅಡಿಗೆ ಮಾಡಿ… ಆದರೆ, ಗೌರಿ ಎಂಬ ಆ ಚೆಲುವೆ ಮನೆಯೊಳಗೆ ಬರ್ತಿದ್ದ ಹಾಗೆ ತಂಗಾಳಿಯೇ ಸುಳಿದಂತೆ. ಮಕ್ಕಳೂ ಗೌರಿಯನ್ನು ಮುತ್ತಿಕೊಂಡಿದ್ದರು. ಆದರೆ ಅವಳಿಗೆ ಒಂಚೂರು ಏಕಾಂತ ಬೇಕಿತ್ತು. ನಾವು ಹೋದಲ್ಲೆಲ್ಲ ಲುಟುಪುಟು ಹಿಂದೆ ಹಾಜರಾಗುತ್ತಿದ್ದ ನನ್ನ ಮಗಳನ್ನು ಮುದ್ದು ಮಾಡುತ್ತ, ಅವಳ ಕಣ್ತಪ್ಪಿಸಿ ಒಂದು ಜುರುಕಿ ಸಿಗರೇಟು ಎಳೆಯುವುದರಲ್ಲಿ ಗೌರಿಗೆ ಸುಸ್ತಾಗಿತ್ತು. ಮನೆಯ ಟೆರೆಸಿನ ಮೂಲೆಯಿಂದ ಕೆಳಗಿಳಿಯುತ್ತ, ನನ್ನ

ಮಗಳು ಕೊಡುತ್ತಿರುವ ಕಾಟಕ್ಕೆ ಹೊಟ್ಟೆತುಂಬಾ ನಕ್ಕಿದ್ದಳು ಗೌರಿ. ಮಗಳಿಗೋ, ಉದ್ದಜಡೆಯ ಅಮ್ಮನಿಗಿಂತ ಗೌರಿ ಆಂಟಿ ಬೇರೆಯಾಗಿ ತುಂಬ ಆಕರ್ಷಕವಾಗಿ ಕಂಡಿದ್ದಳೇನೋ. ಅವಳು ಗೌರಿಯ ಸುತ್ತನೇ ಇದ್ದಳು. ರೊಟ್ಟಿಯೂಟ-ಮಾತು. ಗೌರಿ ಹೇಳಿಕೊಂಡ ಪರ್ಸನಲ್ ಆದ ಸಂಗತಿಗಳಿವು- ಇಂದಿರಮ್ಮ ಅವರಅಡಿಗೆ, ಅದರಲ್ಲೂ ಹೋಳಿಗೆಯ ಘಮಲು. ಕಣ್ಣು ಆಪರೇಷನ್ ಆಗಿ ಬಂದಮೇಲೂ ಅಪ್ಪ ಇನ್ನೊಂದು ಹೋಳಿಗೆ ಕೊಡು ಎಂದು ಒತ್ತಾಯ ಮಾಡುತ್ತಿದ್ದರೆಂಬ ವಿಷಾದದ ನಗು. ಅಪ್ಪ ಹೇಗೆ ತಮ್ಮನ್ನು ತಮ್ಮಿಚ್ಛೆಯಂತೆ ಬದುಕಬಿಟ್ಟರು ಎಂಬ ಗೌರವ. ಸೋದರ ಇಂದ್ರಜಿತ್ ಜೊತೆಗಿನ ಮನಸ್ತಾಪ, ಪತ್ರಿಕೆ ಮತ್ತು ತಾತ್ವಿಕತೆಗೆ ಸಂಬಂಧಿಸಿದ್ದಾಗಿಯೂ, ಅದೇತಾನೇ ತಮ್ಮೆಲ್ಲರ ಕೌಟುಂಬಿಕ ಸಂಬಂಧದ ಭಾವಲೋಕ ತಿಳಿಯಾಗುತ್ತಿರುವ ತೃಪ್ತಿ. ಇಂದ್ರಜಿತ್ ಮತ್ತು ಕವಿತಾ ಮಕ್ಕಳ ಬಗ್ಗೆ ಗೌರಿಗಿದ್ದ ಅಮಿತ ಪ್ರೀತಿ ಮಾತುಮಾತಲ್ಲಿ ತೊಟ್ಟಿಕ್ಕುತ್ತಿತ್ತು. ಆ ಮಕ್ಕಳ ಬಗೆಗಿನ ಎಷ್ಟೋ ಮಮತೆಯ ಮಾತುಗಳನ್ನು ನನ್ನ ಮಕ್ಕಳು ಕೇಳಿಸಿಕೊಂಡವು. ಒಕ್ಕುಂದ ಏನೋ ಕೇಳಿದ್ದಕ್ಕೆ ಪ್ರಸ್ತಾಪವಾದ ಶಿವಸುಂದರ್ ಹೆಸರು. ಒಮ್ಮೆಲೇ ಗೌರಿ ‘ಶಿವಸುಂದರ್‍ಗೆ ವಯಸ್ಸೆಷ್ಟಿರಬಹುದು ಹೇಳಿ?’ ಎಂದು ಸವಾಲು ಹಾಕಿದಳು. ನಾವಿಬ್ಬರೂ ನಮಗಿಂತ ಎರಡು ವರ್ಷ ಹೆಚ್ಚಿಗೆ ಅಂದಾಜಿನ ಮೇಲೆ ಹೇಳಿದ್ದೆವು. ನಮಗಿಂತ ಚಿಕ್ಕವರು ಅಂತ ತಿಳಿದಾಗ ಗಾಬರಿಯಾಗಿತ್ತು. ಗೌರಿ, ಶಿವಸುಂದರ್ ಅವರ ಸಡಿಲವಾದ ಹಲ್ಲಿನ ಬಗ್ಗೆ, ಅವರಿಗೆ ಡೈ ಮಾಡಿಕೊಳ್ಳುವ ಆಸಕ್ತಿ ಇಲ್ಲದಿರುವುದರ ಬಗ್ಗೆ ನಗೆ ಮಾಡಿ ಹೇಳುತ್ತ, ಆ ವ್ಯಕ್ತಿಯ ತಿಳಿವು ಮತ್ತು ಶ್ರಮ ಶಕ್ತಿಯ ಬಗ್ಗೆ ಅಪಾರ ಮೆಚ್ಚುಗೆಯನ್ನಾಡಿದ್ದಳು. ಅಂದಿನ ಗೌರಿಯ ಮಾತುಕತೆಯಲ್ಲಿ ಜಗತ್ತು ತನ್ನ ಮೊಹರು ಊರಲು ಸಾಧ್ಯವಿಲ್ಲದ ಸಂಬಂಧದೊಳಗಿನ ಜೀವಂತಿಕೆ ಮಮತೆಗಳು ಕಣ್ಣಿಗೆ ರಾಚುತ್ತಿತ್ತು. ಅಭಿಮಾನವೆನ್ನಿಸಿತ್ತು ಗೌರಿಯ ಬಗ್ಗೆ. ಈಗನ್ನಿಸುತ್ತಿದೆ-ಗೌರಿ ತನ್ನ ಬಾಳಿನ ಸೋಲು-ಸಂಕಟಗಳ ಬಗ್ಗೆ ಗೊಣಗಿಕೊಳ್ಳುವ ಹೆಣ್ಣಾಗಿರಲಿಲ್ಲ. ಬಿಡಿಸುತ್ತಿದ್ದ ಚಿತ್ರದ ಮೇಲೆ ಬಣ್ಣ ಚೆಲ್ಲಿ ರಾಡಿಯಾದರೂ, ಆ ರಾಡಿಯನ್ನೇ ಕ್ಯಾನ್ವಾಸ್ ಮಾಡಿಕೊಂಡು ಚಿಗುರೆಲೆಯನ್ನು ಬರೆಯುವ ಗಟ್ಟಿಗಿತ್ತಿಯವಳು. ಗೌರಿ ಅಂದು ಬದುಕು ನೋಡುವ ಈ ಕಣ್ಣೋಟ ಕೊಡಲೆಂದೇ ಬಂದಿದ್ದಳೇ?

ಆವತ್ತು, ಮತ್ತೆ ಆ ನಂತರವೂ ಒಂದೆರಡು ಸಂದರ್ಭದಲ್ಲಿ ಗೌರಿ ಒಕ್ಕುಂದನ ಬೈಕ್ ಹತ್ತಿ ಓಡಾಡಿದ್ದಳು. ನನ್ನ ಗಂಡನ ಬೆನ್ನ ಹಿಂದೆ ಇನ್ನೊಂದು ಹೆಣ್ಣು ಕಂಡರೇ, ತಲೆಕೆಡುತ್ತಿದ್ದ ನನಗೆ ಗೌರಿ ಎಂಬ ಜಲಧಾರೆಯ ಬಗ್ಗೆ ಅಪ್ಪಿತಪ್ಪಿಯೂ ಕಿರಿಕಿರಿ ಅನ್ನಿಸಲಿಲ್ಲ. ಗೌರಿ ಒಂದು ಮಮತೆಯ ಮಡಿಲು. ಆ ನಂತರ ಹುಬ್ಬಳ್ಳಿಗೆ ಬಂದಾಗ, ಒಂದೆರಡು ಸಲ ಒಕ್ಕುಂದನೇ ಭೇಟಿಯಾಗಿದ್ದ. ಮನೆಗೆ ಬರುವಂತೆ ಒತ್ತಾಯಿಸುವ ಸ್ಥಿತಿಯಲ್ಲಿ ನಾವಿರಲಿಲ್ಲ. ಬರುವ ವಿರಾಮ ಗೌರಿಗೂ ಇರಲಿಲ್ಲ. ಅಂದು ಗೌರಿ ಮನೆಯಿಂದ ಹೊರಡುವಾಗ ಒಂದು ಪುಟ್ಟ ಪೇಂಟಿಂಗ್ ಕೊಟ್ಟಿದ್ದೆವು. ಪೇಪರ್‍ನಿಂದ ಹಾಗೆ ಸುತ್ತು ಹೀಗೆ ಸುತ್ತು ಎಂದು ಸುತ್ತಿಸಿಕೊಂಡು ಮಮತೆಯಿಂದ ಒಯ್ದಿದ್ದಳು ಗೌರಿ ‘ಮುಂದಿನ ಸಲ ಬಂದಾಗ ಏನು ಕೊಡ್ತೀ?’ ಎಂದು ಕಿಚಾಯಿಸುತ್ತ. ನನ್ನ ಮಗಳ ಕಣ್ತಪ್ಪಿಸಲು ಸೇದಿ ಉಳಿದಿದ್ದ ಸಿಗರೇಟನ್ನು ಟೆರೆಸಿನಲ್ಲೇ ಬಿಸಾಕಿದ್ದಳು. ಹೊರಡುವಾಗ, ಅದನ್ನು ನೆನಪಿಸಿದ್ದಳು. ಸನ್ನೆಯಿಂದ, ತೆಗೆಯಲು ಮರೀಬೇಡ ಎಂಬ ಕಾಳಜಿಯಲ್ಲಿ. ಗೌರಿಯೊಳಗೆ ಸದಾ ಎಚ್ಚರದ ಬಿಡುಗಣ್ಣಿನ, ಮಮತೆಯ ಅಮ್ಮನಿದ್ದಳು. ಪುಟಿವ ಜೀವನ್ಮುಖಿಯಾದ ಗೆಳತಿಯಿದ್ದಳು. ಗೌರಿ ಈಗಿಲ್ಲ. ಬಾಗಿಲಲ್ಲಿ ಗೌರಿಗಿಡ ತಂದು ಹಚ್ಚಿಕೊಂಡಿದ್ದೇನೆ. ಅದರ ತಿಳಿಗುಲಾಬಿ ಹೂಗಳನ್ನು ದಿನವೂ ಮುದ್ದಿನಿಂದ ನೋಡುತ್ತೇನೆ. ನನ್ನೊಳಗಿನ ಗೌರಿ ನಸುನಕ್ಕಂತೆನಿಸುತ್ತದೆ. ಮತಾಂಧತೆಯನ್ನು ಗೊಬ್ಬರವಾಗಿಸಿ, ಮಾನವೀಯತೆಯ ಗೌರಿಗಿಡ ಸದಾ ಹೂ ಅರಳಿಸುತ್ತಿರಲಿ ಎಂದುಕೊಳ್ಳುತ್ತೇನೆ. ಕಣ್ಣು ಮಂಜಾಗುತ್ತದೆ.

-ಡಾ. ವಿನಯಾ ಒಕ್ಕುಂದ, (2018ರ ಸೆಪ್ಟಂಬರ್ 11ರಂದು ಬರೆದ ಲೇಖನ)

ನಾಳೆ (ಸೆ.6) ಗೌರಿ ಲಂಕೇಶ್ ಸ್ಮರಣಾರ್ಥ ಚಿಂತನ ಗೋಷ್ಠಿ, ಚಾಮರಾಜಪೇಟೆಯಲ್ಲಿ ಗೌರಿ ನಮನ: ಕೆ.ಎಲ್.ಅಶೋಕ್, ಕವಿತಾ ಲಂಕೇಶ್ ಮಾಹಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...