ಮಾಸ್ಕೋ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಚ್ಚಿಟ್ಟಿದ್ದ ಬಾಂಬ್ ಸ್ಫೋಟದಿಂದ ಮಾಸ್ಕೋದಲ್ಲಿ ಪರಮಾಣು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ರಷ್ಯಾದ ಹಿರಿಯ ಜನರಲ್ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಇಂದು (ಮಂಗಳವಾರ) ಮೃತಪಟ್ಟಿದ್ದಾರೆ.
ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ಸಂರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲ್ಲೋವ್ ಅವರು ಕ್ರೆಮ್ಲಿನ್‌ನಿಂದ ಆಗ್ನೇಯಕ್ಕೆ 7 ಕಿ.ಮೀ ದೂರದಲ್ಲಿರುವ ರಿಯಾಜಾನ್ಸ್ಕಿ ಪ್ರಾಸ್ಪೆಕ್ಟ್‌ನಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡದ ಬಳಿ ಬಾಂಬ್ ದಾಳಿಯಿಂದ ಮೃತರಾಗಿದ್ದಾರೆ.
ಜನರಲ್ ಕಿರಿಲ್ಲೋವ್ ಅವರ ಸಹಾಯಕ ಸಹ ಈ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರ ಸಾವಿನ ಕುರಿತು ತನಿಖೆ ಆರಂಭವಾಗಿದೆ. ತನಿಖಾಧಿಕಾರಿಗಳು, ವಿಧಿ ವಿಜ್ಞಾನ ತಂಡದ ತಜ್ಞರು ಸ್ಥಳದಲ್ಲಿ ಶೋಧ ನಡೆಸಿದ್ದಾರೆ. ಸ್ಫೋಟಕ ಇರಿಸಿದವರ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಿರಿಲ್ಲೋವ್ ಅವರು ಉಕ್ರೇನ್ ವಿರುದ್ಧದ ಯುದ್ಧ ಆರಂಭವಾದ ಬಳಿಕ ಹತ್ಯೆಯಾದ ರಷ್ಯಾದ ಅತ್ಯಂತ ಹಿರಿಯ ಸೇನಾಧಿಕಾರಿ ಆಗಿದ್ದಾರೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಸಾಧಿಸಿರುವ ಯಶಸ್ಸಿನ ಬಗ್ಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹೆಮ್ಮೆಯ ಮಾತಗಳನ್ನಾಡಿದ ಮರುದಿನ ಈ ಬೆಳವಣಿಗೆ ನಡೆದಿದೆ. 54 ವರ್ಷದ ಕಿರಿಲ್ಲೋವ್ ಅವರು ವಸತಿ ಸಮುಚ್ಚಯದಲ್ಲಿರುವ ತಮ್ಮ ಮನೆಯಿಂದ ಕಚೇರಿಗೆ ಹೊರಟಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.
ರಿಮೋಟ್‌ನಿಂದ ಸ್ಫೋಟಿಸಲಾದ ಸ್ಫೋಟಕ ಸಾಧನದ ಶಕ್ತಿಯು ಸುಮಾರು 300 ಗ್ರಾಂ ಟಿಎನ್‌ಟಿಯಷ್ಟಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ವರದಿ ಮಾಡಿದೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಕ್ಕಾಗಿ ಉಕ್ರೇನಿಯನ್ ಕೋರ್ಟ್ ಜನರಲ್ ಕಿರಿಲ್ಲೋವ್ ಅವರಿಗೆ ಗೈರುಹಾಜರಾಗಿದ್ದಕ್ಕೆ ಶಿಕ್ಷೆ ವಿಧಿಸಿತ್ತು. ಅದಾದ ಒಂದು ದಿನದ ನಂತರ ಕಿರಿಲ್ಲೋವ್ ಅವರ ಸಾವು ಸಂಭವಿಸಿದೆ. ಉಕ್ರೇನ್‌ನ ಭದ್ರತಾ ಸೇವೆಯ ಪ್ರಕಾರ, ಯುದ್ಧದ ಆರಂಭದಿಂದಲೂ ಕಿರಿಲ್ಲೋವ್ ಅವರ ಆದೇಶದ ಮೇರೆಗೆ ರಷ್ಯಾದ ರಾಸಾಯನಿಕ ಯುದ್ಧಸಾಮಗ್ರಿಗಳ ಬಳಕೆಯ 4,800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕಿರಿಲ್ಲೋವ್ ಅವರ ಹತ್ಯೆಯ ಹಿಂದೆ ಉಕ್ರೇನ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇದು ತನ್ನ ವಿಶೇಷ ಕಾರ್ಯಾಚರಣೆ ಎಂದು ಉಕ್ರೇನ್‌ನ ಭದ್ರತೆ ಮತ್ತು ಗುಪ್ತಚರ ಸಂಸ್ಥೆ ಎಸ್‌ಬಿಯು ಹೇಳಿರುವುದಾಗಿ ಉಕ್ರೇನ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಿರಿಲ್ಲೋವ್ ಯುದ್ಧಾಪರಾಧಿಯಾಗಿದ್ದು, ಕಾನೂನಿನ ಪ್ರಕಾರವೆ ಅವರನ್ನು ಗುರಿಯಾಗಿಸಲಾಗಿದೆ. ಏಕೆಂದರೆ, ಉಕ್ರೇನ್ ಸೇನೆಯ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಬಳಸುವಂತೆ ಅವರು ರಷ್ಯಾ ಸೇನೆಗೆ ಆದೇಶಿಸಿದ್ದು, ಉಕ್ರೇನ್‌ನ ಜನರನ್ನು ಕೊಲ್ಲುವ ಎಲ್ಲರಿಗೂ ಇಂತಹ ಅಪಮಾನಕರ ಅಂತ್ಯ ಕಾದು ಕುಳಿತಿದೆ. ಯುದ್ಧಾಪರಾಧಿಗಳ ವಿರುದ್ಧ ಪ್ರತೀಕಾರ ತೀರಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
2022ರ ಫೆಬ್ರವರಿಯಲ್ಲಿ ಆರಂಭಗೊಂಡ ಉಕ್ರೇನ್ ಯುದ್ಧದಲ್ಲಿ ರಷ್ಯಾ ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಕಿರಿಲ್ಲೋವ್ ಅವರು ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆಂದು ಉಕ್ರೇನ್‌ನ ಭದ್ರತಾ ಸೇವಾ ಏಜೆನ್ಸಿ ಸೋಮವಾರ ಅಪಾದಿಸಿತ್ತು. 2022ರ ಫೆಬ್ರವರಿ ತಿಂಗಳಿನಿಂದೀಚೆಗೆ ರಷ್ಯಾವು ಉಕ್ರೇನ್ ಯುದ್ದರಂಗದಲ್ಲಿ 4,800ಕ್ಕೂ ಅಧಿಕ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅದರಲ್ಲೂ ವಿಶೇಷವಾಗಿ ಕೆ-1 ಮಾದರಿಯ ಯುದ್ಧ ಗ್ರೇನೆಡ್‌ಗಳನ್ನು ಬಳಸಿರುವುದನ್ನು ಉಕ್ರೇನ್ ಭದ್ರತಾ ಸೇವೆಯು ದಾಖಲಿಸಿಕೊಂಡಿದೆ.
ಮೊದಲನೇ ಮಹಾಯುದ್ಧದಲ್ಲಿ ಬಳಕೆ ಮಾಡಲಾಗಿದ್ದ ರಾಸಾಯನಿಕ ಅಸ್ತ್ರವಾದ ಕ್ಲೊರೊಪಿಕ್ರಿನ್ ನನ್ನು ರಷ್ಯಾವು ಉಕ್ರೇನ್ ವಿರುದ್ಧ ಪ್ರಯೋಗಿಸಿರುವುದನ್ನು ತಾನು ದಾಖಲಿಸಿಕೊಂಡಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆಯು ಈ ವರ್ಷದ ಮೇ ತಿಂಗಳಿನಲ್ಲಿ ತಿಳಿಸಿತ್ತು.
ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಸೇನಾ ಕಾರ್ಯಾಚಣೆಯಲ್ಲಿ ನಿಷೇಧಿತ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಕೆಗಾಗಿ ಕಿರಿಲ್ಲೋವ್ ಅವರು ಅಪರಾಧಿಯೆಂದು ಉಕ್ರೇನ್‌ನ ನ್ಯಾಯಾಲಯ ಡಿ.16ರಂದು ಅವರ ಅನುಪಸ್ಥಿತಿಯಲ್ಲಿ ತೀರ್ಪು ನೀಡಿತ್ತು.
ಕಿರಿಲ್ಲೋವ್ ಉಕ್ರೇನ್ ಯುದ್ಧದಲ್ಲಿ ಅವರು ವಹಿಸಿದ್ದ ಪಾತ್ರಕ್ಕಾಗಿ ಅವರ ವಿರುದ್ಧ ಬ್ರಿಟನ್, ಕೆನಡಾ ಸೇರಿದಂತೆ ವಿವಿಧ ದೇಶಗಳು ನಿರ್ಬಂಧ ಹೇರಿದ್ದವು. ಈಗಾಗಲೇ ಉಕ್ರೇನ್‌ನ ಐದನೇ ಒಂದು ಭಾಗದಷ್ಟು ಭೂಪ್ರದೇಶವನ್ನು ರಶ್ಯವು ಸ್ವಾಧೀನಪಡಿಸಿಕೊಂಡಿದೆ.
ಇದನ್ನೂ ಓದಿ…‘ಮನರೇಗಾ ಪಾವತಿಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಬಾರದು..’; ಸಂಸದೀಯ ಸಮಿತಿಯು ಶಿಫಾರಸು


