ಕಾಲೇಜಿನಲ್ಲಿ ಹಿಜಾಬ್ ನಿಷೇಧ ಪ್ರಕರಣದ ತೀರ್ಪು ಮಂಗಳವಾರ ರಾಜ್ಯ ಹೈಕೋರ್ಟ್ ನೀಡಿದ್ದು, ಹಿಜಾಬ್ ಪರವಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರಿಗೆ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿರುವ ಹೈಕೋರ್ಟ್, ಸಮವಸ್ತ್ರವನ್ನು ಸೂಚಿಸುವುದು ಮೂಲಭೂತ ಹಕ್ಕುಗಳ ಮೇಲೆ ಸಮಂಜಸವಾದ ನಿರ್ಬಂಧವಾಗಿದೆ ಎಂದು ಹೇಳಿ, ರಾಜ್ಯ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರ ರಿಟ್ ಅರ್ಜಿ ವಜಾ; ಹಿಜಾಬ್ ನಿರ್ಬಂಧ ಎತ್ತಿ ಹಿಡಿದ ಹೈಕೋರ್ಟ್
ಫೆಬ್ರವರಿ 25 ರಂದು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ತೀರ್ಪಿನ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿಯರ ಪರವಾಗಿ ವಾದ ಮಂಡಿಸಿದ ವಕೀಲರಾದ ಕೆ.ವಿ.ಧನಂಜಯ್, “ಹೈಕೋರ್ಟ್‌ನ ಸಂಪೂರ್ಣ ಆದೇಶ ಹೊರಬಿದ್ದ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ” ಎಂದು ತಿಳಿಸಿದ್ದಾರೆ.
ಮತ್ತೊಬ್ಬ ವಕೀಲರಾದ ಶಾಹುಲ್ ಅವರು ಕೂಡಾ, “ವಿವರವಾದ ಆದೇಶ ಬಂದ ನಂತರ ಅದನ್ನು ವಿಶ್ಲೇಷಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುತ್ತೇವೆ” ಎಂದು ಹೇಳಿದ್ದಾರೆ.
ಇಂದು ನ್ಯಾಯಾಲಯದಲ್ಲಿ ತೀರ್ಪನ್ನು ಓದಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, “ಇಡೀ ಪ್ರಕರಣದ ಸಮಗ್ರ ದೃಷ್ಟಿಕೋನವನ್ನು ತೆಗೆದುಕೊಂಡು, ನಾವು ಕೆಲವು ಪ್ರಶ್ನೆಗಳನ್ನು ರೂಪಿಸಿದ್ದೇವೆ. ಮತ್ತು ಅದಕ್ಕೆ ಅನುಗುಣವಾಗಿ ಉತ್ತರಿಸಿದ್ದೇವೆ” ಎಂದು ಹೇಳಿದರು.
“ಪ್ರಶ್ನೆಗಳನ್ನು ಹೀಗೆ ರೂಪಿಸಲಾಗಿದೆ: 1. ಆರ್ಟಿಕಲ್ 25 ರ ಅಡಿಯಲ್ಲಿ ಇಸ್ಲಾಮಿಕ್ ನಂಬಿಕೆಯಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮೀಕ ಆಚರಣೆ ಆಗಿದೆಯೇ? 2. ಶಾಲಾ ಸಮವಸ್ತ್ರದ ಸೂಚನೆಯು ಹಕ್ಕುಗಳ ಉಲ್ಲಂಘನೆಯಾಗಿದೆಯೇ? ಫೆಬ್ರುವರಿ 5 ರ ಸರ್ಕಾರಿ ಆದೇಶವು ಅಸಮರ್ಥ ಮತ್ತು ಸ್ಪಷ್ಟವಾಗಿ ಆರ್ಟಿಕಲ್ 14 ಮತ್ತು 15 ಅನ್ನು ಉಲ್ಲಂಘಿಸುತ್ತದೆಯೇ ಎಂಬುದು ಮೂರನೇ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ.
ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ, “ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಸಮವಸ್ತ್ರವನ್ನು ಸೂಚಿಸುವುದು ಮೂಲಭೂತ ಹಕ್ಕುಗಳ ಮೇಲೆ ಸಮಂಜಸವಾದ ನಿರ್ಬಂಧವಾಗಿದೆ” ಎಂದು ಹೇಳಿದ್ದಾರೆ.
ಜೊತೆಗೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಮತ್ತು ಫೆಬ್ರವರಿ 5 ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಎಲ್ಲಾ ರಿಟ್ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.


