Homeಕರ್ನಾಟಕಹಿಂದುತ್ವ ರಾಜಕಾರಣ; ಹಿಜಾಬಿನ ಅಪರಾಧೀಕರಣ

ಹಿಂದುತ್ವ ರಾಜಕಾರಣ; ಹಿಜಾಬಿನ ಅಪರಾಧೀಕರಣ

- Advertisement -
- Advertisement -

ವಿದ್ಯಮಾನಗಳು

ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ, ಹಿಜಾಬ್ ಧರಿಸಿ ಬರುತ್ತಿರುವ ಮುಸ್ಲಿಂ ಬಾಲಕಿಯರಿಗೆ 31, ಡಿಸೆಂಬರ್ 2021ರಿಂದ ತರಗತಿ ಪ್ರವೇಶವನ್ನು ನಿರಾಕರಿಸಲಾಗಿದೆ. ಕಾಲೇಜಿನ ಆಡಳಿತ ಮಂಡಳಿಯು, ಸಮವಸ್ತ್ರ ನಿಯಮಾನುಸಾರ ಹಿಜಾಬ್ ಧರಿಸುವುದು ನಿಯಮಬಾಹಿರವೆಂಬ ನಿಲುವು ತಳೆದಿರುವುದೇ ಈ ಕ್ರಮಕ್ಕೆ ಕಾರಣವಾಗಿದೆ. ಫೆಬ್ರವರಿ 3, 2022ರವರೆಗೂ, ವಿದ್ಯಾರ್ಥಿಗಳ ಪಾಲಕರು ಮತ್ತೂ ನಾಗರಿಕ ಸಂಘಟನೆಗಳೂ, ಕಾಲೇಜಿನ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲು ಸಕಲ ಪ್ರಯತ್ನಗಳನ್ನು ಮಾಡಿದಾಗ್ಯು, ಆಡಳಿತ ಮಂಡಳಿಯು ತನ್ನ ನಿಯಮವನ್ನು ಸಡಿಲಗೊಳಿಸಲಿಲ್ಲ. ಕಾಲೇಜಿನ ಕೆಲವು ಮುಸ್ಲಿಂ ಬಾಲಕಿಯರು, ಹಿಜಾಬ್ ಧರಿಸುವುದು ತಮ್ಮ ಧಾರ್ಮಿಕ ಹಕ್ಕಾಗಿದ್ದು, ತರಗತಿ ಪ್ರವೇಶ ನಿರಾಕರಣೆಯು ಸಂವಿಧಾನಬದ್ಧ ಹಕ್ಕಿನ ಉಲ್ಲಂಘನೆಯಾಗಿರುವುದರಿಂದ, ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಅಹವಾಲು ಮಂಡಿಸಿದರು.

ಆ ನಂತರದಲ್ಲಿ, ಉಡುಪಿ ಜಿಲ್ಲೆಯ ಕುಂದಾಪುರ ಪದವಿಪೂರ್ವ ಕಾಲೇಜು, ಭಂಡಾರ್ಕರ್ ಕಾಲೇಜು, ಗಂಗೊಳ್ಳಿ ಮತ್ತು ಬೈಂದೂರಿನ ಪದವಿಪೂರ್ವ ಕಾಲೇಜುಗಳಲ್ಲಿ, ಕೆಲವು ಹಿಂದು ವಿದ್ಯಾರ್ಥಿಗಳು, ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಬಂದರೆ, ತಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ತಾಕೀತು ಮಾಡತೊಡಗಿದ್ದರಿಂದ, ಈ ಕಾಲೇಜುಗಳಲ್ಲಿ ಉದ್ರೇಕದ ವಾತಾವರಣ ನಿರ್ಮಾಣವಾಯಿತು. ಫೆಬ್ರವರಿ 4ರಂದು ಕೂಡ ಉಡುಪಿ ಹಾಗು ಕುಂದಾಪುರಗಳಲ್ಲಿ ಇದೇ ವಾತಾವರಣ ಮುಂದುವರೆಯಿತು; ಆದರೆ, ಗಂಗೊಳ್ಳಿ ಮತ್ತು ಬೈಂದೂರಿನ ಕಾಲೇಜುಗಳ ಆಡಳಿತ ಮಂಡಳಿಯು ಏನಾದರೂ ಹಾಕಿ ಬನ್ನಿ, ತರಗತಿಗಳು ನಡೆಯುವುದು ಮುಖ್ಯ ಎಂಬ ನಿರ್ಧಾರ ಪ್ರಕಟಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದವು. ಫೆಬ್ರವರಿ 5ನೇ ತಾರೀಖಿನಂದು ಕರ್ನಾಟಕ ಸರಕಾರವು ಹಿಜಾಬ್ ಧರಿಸುವುದು ಸಂವಿಧಾನದ 25ನೇ ಕಲಮ್ಮಿನಡಿ ಧಾರ್ಮಿಕ ಹಕ್ಕು ಅಲ್ಲವೆಂದೂ, ಸಮವಸ್ತ್ರ ನಿಯಮಗಳಿರುವ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಗಳು ವಿಧಿಸುವ ಸಮವಸ್ತ್ರ ನಿಯಮ ಪಾಲನೆಯಾಗಬೇಕೆಂದೂ ಆದೇಶ ಹೊರಡಿಸಿತು. ಈ ಆದೇಶವನ್ನೇ ಇಟ್ಟುಕೊಂಡು ಉಡುಪಿಯೂ ಸೇರಿದಂತೆ ಕರ್ನಾಟಕದ ಅನೇಕ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ ಎಂಬ ನಿಯಮ ಪ್ರಕಟಿಸಿ, ಮುಸ್ಲಿಂ ವಿದ್ಯಾರ್ಥಿನಿಯರಿಗೆ ನಿರ್ಬಂಧ ಹೇರುವಲ್ಲಿಗೆ ಪ್ರಕರಣವು, ರಾಜ್ಯದಾದ್ಯಂತ ಹಬ್ಬಿಬಿಟ್ಟಿತು.

ಇದೇ ವೇಳೆ, ಕರ್ನಾಟಕದ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು ದಾವೆದಾರರಾದ ಮುಸ್ಲಿಂ ವಿದ್ಯಾರ್ಥಿನಿಯರ ಪರ-ವಿರೋಧ ವಾದಗಳನ್ನು ಆಲಿಸುತ್ತಿತ್ತು; ಫೆಬ್ರವರಿ 8ರಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು, ಸದರಿ ಕೇಸು ಗಹನವಾದ ಸಂವಿಧಾನಿಕ ಹಕ್ಕುಗಳ ಕುರಿತದ್ದಾಗಿದ್ದು, ವ್ಯಾಜ್ಯವನ್ನು, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು ಪ್ರಕಟಿಸಿದರು. ದಾವೆದಾರರ ಪರ ವಕೀಲರು, ಪೂರ್ಣಪೀಠದ ಎದುರು ವಿಚಾರಣೆ ನಡೆದು ತೀರ್ಪು ಹೊರಬರಲು ಸಮಯ ಹಿಡಿಯುವುದರಿಂದ ತಮ್ಮ ದಾವೆದಾರರ ಶೈಕ್ಷಣಿಕ ಹಕ್ಕಿಗೆ ಧಕ್ಕೆಯಾಗುತ್ತದೆ; ಆ ಕಾರಣವಾಗಿ, ತೀರ್ಪು ಬರುವವರೆಗೆ, ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದಕ್ಕೆ ಅನುಮತಿ ನೀಡುವ ಮಧ್ಯಂತರ ಪರಿಹಾರವನ್ನು ಘೋಷಿಸಬೇಕು ಎಂದು ಬೇಡಿಕೊಂಡರು; ಆದರೆ, ನ್ಯಾಯಾಧೀಶರು, ತೀರ್ಪು ಬರುವವರೆಗೆ, ಸಮವಸ್ತ್ರ ನೀತಿಯನ್ನು ಈಗಾಗಲೇ ಘೋಷಿಸಿರುವ ಕಾಲೇಜುಗಳಲ್ಲಿ ಹಿಜಾಬ್ ನಿರಾಕರಣೆಯ ನಿಯಮವೇ ಮುಂದುವರೆಯುತ್ತದೆ ಎಂಬ ವ್ಯತಿರಿಕ್ತವಾದ ಮಧ್ಯಂತರ ತೀರ್ಪು ಪ್ರಕಟಿಸಿದ್ದರಿಂದ, ಬಿಕ್ಕಟ್ಟಿನ ಸ್ಥಿತಿಯು ಮುಂದುವರೆಯುವಂತಾಯಿತು.

ಈ ಮಧ್ಯಂತರ ತೀರ್ಪನ್ನೇ ಮುಂದಿಟ್ಟುಕೊಂಡು, ಅದುವರೆವಿಗೂ ಹಿಜಾಬ್ ಧರಿಸಿ ಬರುವುದಕ್ಕೆ ವಿದ್ಯಾರ್ಥಿನಿಯರಿಗೆ ಅವಕಾಶ ನೀಡುತ್ತಿದ್ದ ಕೆಲವು ಸರಕಾರಿ, ಸರಕಾರಿ ಅನುದಾನಿತ ಹಾಗು ಖಾಸಗಿ ಕಾಲೇಜುಗಳು ತಮ್ಮ ಸಂಸ್ಥೆಗಳಲ್ಲೂ ಹಿಜಾಬ್ ನಿರಾಕರಣೆಯ ಮಾರ್ಗ ಅನುಸರಿಸತೊಡಗಿರುವುದರಿಂದ ಮತ್ತಷ್ಟೂ ಹೆಚ್ಚಿನ ಸಂಖ್ಯೆಯ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ವಂಚಿತರಾಗಿರುವ ಸ್ಥಿತಿ ನಿರ್ಮಾಣವಾಗಿದೆ; ಕರ್ನಾಟಕದ ಮುಖ್ಯಮಂತ್ರಿಗಳು ಹಾಗು ಉನ್ನತ ಶಿಕ್ಷಣ ಸಚಿವರು, ಸರಕಾರದ ಆದೇಶ ಮತ್ತು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ಪದವಿ ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರೂ, ಕಾಲೇಜುಗಳ ಹಿಜಾಬ್ ನಿರಾಕರಣೆಯ ನೀತಿಯು ಮುಂದುವರೆಯುತ್ತಿದೆ; ತ್ರಿಸದಸ್ಯ ಪೀಠದ ತೀರ್ಪು ಪ್ರಕಟವಾಗುವವರೆಗೆ, ಮುಸ್ಲಿಂ ವಿದ್ಯಾರ್ಥಿನಿಯರ ನೆನೆಗುದಿಯ ಸ್ಥಿತಿಗೆ ಪರಿಹಾರ ಸಿಗದಂತಾಗಿದೆ.

ಇದು ಉಡುಪಿಗೆ ವಿಶಿಷ್ಟವಾಗಿರುವ ಬಿಡಿ ಘಟನೆಯೇ? ಈ ಸ್ಥಿತಿಗೆ ಕಾರಣಗಳೇನು?

ಘಟನಾವಳಿಯು ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶುರುವಾಗಿರುವುದು ನಿಜವೆ. ಉಡುಪಿ ಜಿಲ್ಲೆಯಲ್ಲಿ ಹಲವು ಸರಕಾರಿ, ಅನುದಾನಿತ ಹಾಗು ಖಾಸಗಿ ಪದವಿಪೂರ್ವ ಹಾಗು ಪದವಿ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಬರುವ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದು, ತರಗತಿಯಲ್ಲೂ ಹಿಜಾಬ್ ಸಹಿತ ಹಾಜರಾಗುವುದು ಬಹಳ ಸಹಜವೆಂಬಂತೆ ನಡೆದುಕೊಂಡು ಬಂದಿದೆ. ಕಾಲೇಜುಗಳು ಶುರುವಾಗುವ ಮತ್ತು ಮುಗಿಯುವ ವೇಳೆ ಕಾಲೇಜು ಪ್ರವೇಶಿಸುತ್ತಿರುವ ಅಥವ ಹೊರಗೆ ಬರುತ್ತಿರುವ ಹತ್ತಾರು ಹಿಜಾಬ್ ಧರಿಸಿದ ಹುಡುಗಿಯರು ತಮ್ಮ ಸಹಪಾಠಿಗಳೊಟ್ಟಿಗೆ ಬಂದು ಹೋಗುವ ದೃಶ್ಯವು ಸಾಮಾನ್ಯವಾದುದ್ದಾಗಿದೆ. ಸಮವಸ್ತ್ರ ಇರುವ ಕಾಲೇಜುಗಳಲ್ಲೂ, ಹಿಜಾಬ್ ಸಮವಸ್ತ್ರಕ್ಕೆ ವ್ಯತಿರಿಕ್ತವಾದದ್ದು ಎಂದು ಇತರೆ ವಿದ್ಯಾರ್ಥಿಗಳು, ಶಿಕ್ಷಕರೂ ಭಾವಿಸಿದ್ದಿಲ್ಲ. ಇದರ ಅರ್ಥ ಮುಸಲ್ಮಾನರ ಕುರಿತು ಬಹಳ ಅನ್ಯೋನ್ಯ ಭಾವವಿದೆ ಎಂದೇನು ಅಲ್ಲ; ಸಮಾಜದಲ್ಲಿ ರೂಢಿಯಲ್ಲಿರುವ ಎಲ್ಲ ಪೂರ್ವಗ್ರಹಗಳಿಗೂ ಮುಸಲ್ಮಾನ ವಿದ್ಯಾರ್ಥಿನಿಯರು ಈಡಾಗುವುದೂ ಸಾಮಾನ್ಯವೇ. ಇಂತಿರುವಾಗ, ಸದರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 31, 2021ಕ್ಕೆ ಒಮ್ಮೆಲೆ ಈ ವಿದ್ಯಮಾನ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ; ಒಳಸುದ್ದಿ ಏನು ಎಂಬುದು ಬಹಿರಂಗವಾಗಿಲ್ಲ.

ಆ ಮಟ್ಟಿಗೆ ಕಾಲೇಜಿನ ಪ್ರಿನ್ಸಿಪಾಲರು ಹಾಗು ಆಡಳಿತ ಮಂಡಳಿಯ ಅಧಿಕೃತ ನಿರೂಪಣೆಯನ್ನೇ ನಂಬೋಣ. ಅದರ ಪ್ರಕಾರ, ಸದರಿ ಕಾಲೇಜಿನಲ್ಲಿ ಅಭ್ಯಾಸ ಮಾಡುವ ಮುಸ್ಲಿಮ್ ವಿದ್ಯಾರ್ಥಿನಿಯರು ಯಾವತ್ತೂ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರಲಿಲ್ಲ; ಅಕ್ಟೋಬರ್ 2021ರಲ್ಲಿ ಒಮ್ಮೆಲೆ ಹಿಜಾಬ್ ಧರಿಸಿ ಬರತೊಡಗಿದರು; ಶಿಕ್ಷಕರು, ಪ್ರಿನ್ಸಿಪಾಲರೂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೊಟ್ಟು ಬರದಂತೆ ’ಬುದ್ಧಿವಾದ’ ಹೇಳುವ ಪ್ರಯತ್ನ ಮಾಡಿದರು; ಅದರ ಫಲವಾಗಿ ಐದಾರು ಹುಡುಗಿಯರ ಹೊರತಾಗಿ, ಬಾಕಿ ಮುಸ್ಲಿಮ್ ಹುಡುಗಿಯರು ಹಿಜಾಬ್ ತೊಟ್ಟು ಬರುವುದನ್ನು ನಿಲ್ಲಿಸಿದರು; ಆ ’ಐದಾರು ಹುಡುಗಿಯರು ವಿದ್ಯಾರ್ಥಿ ಸಂಘಟನೆಯೊಂದರ ಕುಮ್ಮಕ್ಕಿನಿಂದ, ಹಿಜಾಬ್ ಧರಿಸಿ ಬಂದೇ ಸಿದ್ಧ ಎಂದು ಹಟ ಹಿಡಿದ ಕಾರಣ’ ಡಿಸೆಂಬರ್ ಕೊನೆಯಲ್ಲಿ ಆ ’ಐದಾರು ವಿದ್ಯಾರ್ಥಿನಿಯರ’ ಮೇಲೆ, ಸಮವಸ್ತ್ರ ನಿಯಮಾನುಸಾರ ತರಗತಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಯಿತು.

ರಘುಪತಿ ಭಟ್

ಕಾಲೇಜಿನ ಆಡಳಿತ ಮಂಡಳಿಯ ಈ ನಿರೂಪಣೆಯಲ್ಲಿ, ಸಂವಿಧಾನಿಕ ಪ್ರಜಾಪ್ರಭುತ್ವವಿರುವ ಸಮಾಜದಲ್ಲಿ ವಿವೇಕಯುತವಾಗಿ ಪ್ರಶ್ನಿಸಬಹುದಾದ ಕೆಲವು ಸಂಗತಿಗಳಿವೆ: (1) ಹಿಜಾಬ್ ತೊಡುವುದು ಪರಿಸರದ ಶಾಲಾ-ಕಾಲೇಜುಗಳಲ್ಲಿ ಸಾಮಾನ್ಯವಾಗಿರುವಾಗ ’ತೊಡದಂತೆ’ ಯಾಕೆ ಬುದ್ಧಿವಾದ ಹೇಳಲಾಯಿತು? (2) ಪ್ರಸ್ತುತ ವಿದ್ಯಾರ್ಥಿನಿಯರು ಸಮವಸ್ತ್ರ ತೊಡುವುದಿಲ್ಲ ಎಂದೇನು ಹಠ ಮಾಡುತ್ತಿಲ್ಲ; ಸಮವಸ್ತ್ರ ಸಹಿತ ಹಿಜಾಬ್ ತೊಡುತ್ತೇವೆ ಎಂದರೆ ಅದು ಸಮವಸ್ತ್ರದ ಉಲ್ಲಂಘನೆ ಹೇಗಾಗುತ್ತದೆ? (3) ವಿದ್ಯಾರ್ಥಿನಿಯರು ಹಿಜಾಬ್ ತೊಡುವುದರಿಂದ ಶೈಕ್ಷಣಿಕ ವಾತಾವರಣಕ್ಕೆ ಯಾವ ರೀತಿ ಧಕ್ಕೆಯಾಗುತ್ತದೆ? (4) ಕೆಲವು ವಿದ್ಯಾರ್ಥಿನಿಯರು ’ಸಂಘಟನೆಯೊಂದರ ಕುಮ್ಮಕ್ಕಿನಿಂದ ಹಿಜಾಬ್ ತೊಡಲು ಶುರುಮಾಡಿದರು’ ಎಂಬುದು ಮಸಲ ನಿಜವೆಂದೇ ಇಟ್ಟುಕೊಂಡರೂ, ಪ್ರಜಾಪ್ರಭುತ್ವವಿರುವ ಸಮಾಜದಲ್ಲಿ ನಮಗೆ ಇಷ್ಟವಾಗದ ವಿಚಾರಗಳಿಗೆ ಬೇರೆಯವರು ಬುದ್ಧಿ ಹೇಳಿಕೊಟ್ಟರೆ, ಅದರ ಪರಿಣಾಮಗಳ ಕುರಿತು ನಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿ ವಿವರಿಸುವ ಹಕ್ಕು ನಮಗಿದೆಯಾದರೂ, ಅವರ ವೈಚಾರಿಕ ನಂಬಿಕೆಗಳಿಗೆ ಸುಖಾಸುಮ್ಮನೆ ನಿಯಂತ್ರಣ ಹೇರುವ ಹಕ್ಕು ಕಾಲೇಜಿನ ಆಡಳಿತ ಮಂಡಳಿಗೆ ನೀಡಿದವರು ಯಾರು?

ಈ ಎಲ್ಲ ಪ್ರಶ್ನೆಗಳನ್ನು ಒಂದು ಕಡೆ ಇಟ್ಟುಕೊಂಡು, ಡಿಸೆಂಬರ್ 31,2021ರ ನಂತರ ಕಾಲೇಜಿನಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಬಹುದು. ಹಿಜಾಬ್ ತೊಡುವ ಕಾರಣಕ್ಕೆ ತರಗತಿಗೆ ಹಾಜರಾಗದಂತೆ ವಿದ್ಯಾರ್ಥಿನಿಯರ ಮೇಲೆ ನಿರ್ಬಂಧವು ಮುಂದುವರೆದಂತೆ, ವಿಷಯವು ಮಾಧ್ಯಮಗಳ ಗಮನಕ್ಕೆ ಬಂದು ಸುದ್ದಿಯಾಗತೊಡಗಿತು. ಆಗ ಕಾಲೇಜಿನ ಅಭಿವೃದ್ಧಿ ಸಮಿತಿಯು ಶಿಕ್ಷಕರು ಹಾಗು ಪಾಲಕರ ಸಭೆ ನಡೆಸಿ, ಸಮವಸ್ತ್ರ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಲಕರಿಗೆ ’ತಿಳಿ ಹೇಳಿತು’, ಅದಕ್ಕೆ ಪಾಲಕರು ಒಪ್ಪಿಗೆ ನೀಡಿದರು ಎಂಬುದಾಗಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಡುಪಿಯ ಶಾಸಕ ರಘುಪತಿ ಭಟ್ ಹೇಳುತ್ತಾರೆ. ಆ ನಂತರ, ಉಡುಪಿ ಜಿಲ್ಲೆಯ ಮುಸ್ಲಿಮ್ ಸಮುದಾಯದ ಒಂದು ಸಂಘಟನೆಯಾದ ’ಮುಸ್ಲಿಮ್ ಒಕ್ಕೂಟ’ವು ತಮ್ಮನ್ನು ಭೇಟಿಯಾದಾಗ, ಅವರು ಸಹ ಸಹಮತ ತೋರಿದರು ಎಂದು ಭಟ್ ಹೇಳುತ್ತಾರೆ; ಆದರೆ ’ಮುಸ್ಲಿಮ್ ಒಕ್ಕೂಟ’ದವರು ನೀಡಿರುವ ಅಧಿಕೃತ ಹೇಳಿಕೆಯಲ್ಲಿ ’ಪ್ರತ್ಯೇಕವಾದ ಹಿಜಾಬ್ ಅಲ್ಲದಿದ್ದರೂ, ಸಮವಸ್ತ್ರದ ಭಾಗವಾಗಿರುವ ದುಪ್ಪಟ್ಟವನ್ನು ತಲೆಗೆ ಸುತ್ತಿಕೊಳ್ಳಲಿಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರೂ ಶಾಸಕರು ಮತ್ತು ಕಾಲೇಜು ಆಡಳಿತವು ನಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ ಎಂದಿದ್ದಾರೆ.

ದುಪ್ಪಟ್ಟವನ್ನು ಹೆಗಲಮೇಲೆ ಹೊದಿಯುವುದೇ ಸರಿಯಾದ ಸಮವಸ್ತ್ರ ನಿಯಮವೆಂದು ಅಭಿವೃದ್ಧಿ ಸಮಿತಿ ಹಾಗು ಅದರ ಅಧ್ಯಕ್ಷರಾದ ಶಾಸಕರು ಪಟ್ಟು ಹಿಡಿಯಲು ಇದ್ದ ಕಾರಣಗಳಾದರೂ ಏನು? ಫೆಬ್ರವರಿ 3, 2022ರ ನಂತರ ’ಹಿಜಾಬ್ ನಿರಾಕರಣೆ- ಕೇಸರಿ ಶಾಲುಧಾರಣೆ’ಯ ವಿದ್ಯಮಾನವಾಗಿ, ಅದು ಮೊದಲು ಉಡುಪಿ ಜಿಲ್ಲೆ, ಆಮೇಲೆ ಕರ್ನಾಟಕದ ಉಳಿದ ಭಾಗಗಳಿಗೆ ಹಬ್ಬುತ್ತಿದ್ದಂತೆ, ಸದರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ (ಬಿಜೆಪಿ) ಶಾಸಕ ರಘುಪತಿ ಭಟ್ ಹಾಗು ಉಪಾಧ್ಯಕ್ಷ (ಬಿಜೆಪಿಯ ಉಡುಪಿ ನಗರಸಭಾ ಸದಸ್ಯ ಹಾಗು ಬಿಜೆಪಿಯ ಹಲವು ಅಧಿಕೃತ ಹುದ್ದೆ ಪಡೆದವರಾದ) ಯಶಪಾಲ ಸುವರ್ಣ ಇವರುಗಳು ಬಹಿರಂಗವಾಗಿ ಮಾಧ್ಯಮಗಳು ಹಾಗು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ’ಉವಾಚ’ಗಳಲ್ಲಿ, ಕಾರಣಗಳು ಜಾಹಿರಾಗಿವೆ. ಯಶಪಾಲ್ ಸುವರ್ಣ ’ಈ ಘಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾದ ಹುನ್ನಾರವಿದೆ; ಅದು ಮತ್ತು ಅದರಿಂದ ಪ್ರೇರಿತರಾಗಿರುವ ವಿದ್ಯಾರ್ಥಿನಿಯರು ಭಯೋತ್ಪಾದಕರು; ಈ ಭಯೋತ್ಪಾದನೆಯನ್ನು ಮಟ್ಟಹಾಕುತ್ತೇವೆ; ಹಿಂದುತ್ವ ಸಂಘಟನೆಗಳು ಕೆಲವೇ ದಿನಗಳಲ್ಲಿ ಇದನ್ನು ನಿಗ್ರಹಿಸುತ್ತದೆ’ ಎನ್ನುತ್ತಾರೆ.

ಸುನೀಲ್ ಕುಮಾರ್

ರಘುಪತಿ ಭಟ್ ’ಇದು ಪಾಪ್ಯುಲರ್ ಫ್ರಂಟ್ ಹಾಗು ಕ್ಯಾಂಪಸ್ ಫ್ರಂಟ್‌ನ ಚೇಡಿಕೆ; ಇವರ ಬೇಡಿಕೆಯನ್ನು ನಿಯಂತ್ರಿಸಲು ಕ್ರಮ ತೆಗೆದುಕೊಂಡಿದ್ದೇವೆ; ಇವರು ಹೀಗೆ ಆಡಿದರೆ ಹಿಂದುತ್ವ ಸಂಘಟನೆಗಳು ಸುಮ್ಮನೆ ಕೂಡಲು ಸಾಧ್ಯವಿಲ್ಲದ್ದರಿಂದ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದಾರೆ; ಈ ವಿದ್ಯಮಾನದ ಹಿಂದೆ ಅಂತಾರಾಷ್ಟ್ರೀಯ ಹುನ್ನಾರ ಇರಬಹುದಾಗಿದ್ದು, ಎನ್.ಐ.ಎ. ಯಿಂದ ತನಿಖೆ ಮಾಡಿಸಬೇಕು’ ಎನ್ನುತ್ತಾರೆ. ಜೊತೆಗೆ, ಇದೇ ಜಿಲ್ಲೆಯ ಕಾರ್ಕಳದ ಬಿಜೆಪಿ ಶಾಸಕರು ಹಾಗು ಕ್ಯಾಬಿನೆಟ್ ಸಚಿವರಾಗಿರುವ ಸುನೀಲ್ ಕುಮಾರ್ ’ಈ ವಿದ್ಯಾರ್ಥಿನಿಯರಿಗೆ ಹೈಕೋರ್ಟಿನಲ್ಲಿ ದಾವೆ ಹೂಡಲು ಕಾಸು ಎಲ್ಲಿಂದ ಬರುತ್ತಿದೆ ಎಂಬ ತನಿಖೆಯಾಗಬೇಕು’ ಎನ್ನುತ್ತಾರೆ. ಇವುಗಳಿಂದ ನಿಚ್ಚಳವಾಗುವುದು: ಹಿಂದುತ್ವವಾದಿ ರಾಜಕಾರಣವು ತನ್ನ ಮುಸ್ಲಿಮ್ ಎದುರಾಳಿ ಎಂದು ಭಾವಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ/ಎಸ್.ಡಿ.ಪಿ.ಐ. ಪಕ್ಷಗಳ ಚಟುವಟಿಕೆಗಳನ್ನು ಅಪರಾಧೀಕರಿಸಲೂ ಮತ್ತು ಅಲ್ಪಸಂಖ್ಯಾತ ಸಮುದಾಯದ ಸಂವಿಧಾನಿಕ ಹಕ್ಕುಗಳನ್ನು ಗೌರವಿಸುವ/ನಿರಾಕರಿಸುವ ನಿಯಂತ್ರಣ ಅಧಿಕಾರ ಪ್ರದರ್ಶಿಸಲು, ವಿವೇಕ ವಿವೇಚನೆಗಳಿಂದ ಬಗೆಹರಿಸಬಹುದಾಗಿದ್ದ ಸ್ಥಳೀಯ ವಿದ್ಯಮಾನವನ್ನು ದೊಡ್ಡ ವಿವಾದವಾಗಿಸಲು ಬಳಸಿಕೊಳ್ಳುತ್ತಿದೆ. ಇಲ್ಲಿ ತೀರಾ ಸ್ಥಳೀಯವಾದದ್ದು ಏನೂ ಇಲ್ಲ; ಇದು ರಾಷ್ಟ್ರವ್ಯಾಪಿ ಹಿಂದುತ್ವವಾದಿ ರಾಜಕೀಯ ತಂತ್ರಗಳ ಚಿತ್ರಕತೆಯ, ಸ್ಥಳೀಯ ಅವತರಿಣಿಕೆ ಮಾತ್ರ.

ಹಿಂದಿನದನ್ನು ನೋಡದೆ ಇಂದನ್ನು ಕಾಣಬಹುದೇ?

ದೇಶವ ವಿವಿಧೆಡೆಗಳಿಂದ ಮಾಧ್ಯಮಗಳ ವರದಿಗಾರರು ಉಡುಪಿಗೆ ಬಂದು, ಉಡುಪಿಯಲ್ಲಿ ಇಂಥದೊಂದು ನಡೆಯಲಿಕ್ಕೆ ವಿಶಿಷ್ಟವಾದ ಕಾರಣಗಳನ್ನು ಹುಡುಕುತ್ತಿದ್ದಾರೆ. ಸ್ಥಳೀಯವಾಗಿ ಸಹಜ ಸಾಮಾನ್ಯವಾಗಿರುವ ಮುಸ್ಲಿಮರ ಆಚರಣೆ-ಬದುಕಿನ ಕ್ರಮಗಳನ್ನು ಹಿಂದುತ್ವವಾದಿ ರಾಜಕಾರಣವು ಯಾವತ್ತೂ ಗೌರವಿಸುವುದಿಲ್ಲ; ಮಾತ್ರವಲ್ಲ ಅಂತಹ ಸಹಜ ಆಚರಣೆಗಳ ಬಗ್ಗೆ ಬಹುಸಂಖ್ಯಾತರಲ್ಲಿ ಅನುಮಾನಗಳನ್ನು ಬಿತ್ತುವುದು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಅವರ ಆಚರಣೆ ಹಾಗು ಬದುಕಿನ ಕ್ರಮಗಳನ್ನು ಅಪರಾಧೀಕರಿಸುವುದು ಭಾರತದಾದ್ಯಂತ ಸಂಘಪರಿವಾರ ಪ್ರಣೀತ ಹಿಂದುತ್ವವಾದಿ ರಾಜಕಾರಣದ ’ಸಾಧಾರಣ ರಾಷ್ಟ್ರೀಯ ಚಿತ್ರಕತೆ’. ಈ ಚಿತ್ರಕತೆಯಲ್ಲಿ ಸ್ಥಳೀಯತೆಗೆ ಹೊಂದಿಕೊಂಡು ತಿರುವುಗಳನ್ನು ಕೊಟ್ಟುಕೊಂಡು ಚಿತ್ರೀಕರಣಗಳು ಭಾರತದ ಎಲ್ಲೆಡೆ ನಡೆಯುತ್ತಿವೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಈ ಬಗೆಯ ಪ್ರಯೋಗಗಳು 2000ದ ಇಸವಿಯಿಂದ ನಡೆಯುತ್ತಿವೆ. ಅವುಗಳನ್ನು ಒಟ್ಟಾಗಿಟ್ಟು ಕಂಡರೆ ನಮಗೆ ಈ ತಂತ್ರದ ಆಕೃತಿ ದೊರಕದೆ ಇರದು.

ಮಸೀದಿ: ಸಾಮಾನ್ಯ ಮುಸಲ್ಮಾನರು ಪ್ರಾರ್ಥನೆಗಾಗಿ ಮಸೀದಿಗೆ ಹೋಗುವುದನ್ನು, ಭಾರತದಲ್ಲಿ ಯಾರಾದರೂ ವಿಶೇಷವೆಂದು ಭಾವಿಸಿರಲಿಕ್ಕಿಲ್ಲ. ಈ ಮಸೀದಿಯು ಅಥವ ಕರಾವಳಿಯಲ್ಲಿ ಕರೆಯುವಂತೆ ’ಪಳ್ಳಿ’ಯ ಅಪರಾಧಿಕರಣ ಕಥನವು ಮೂರು ದಶಕಗಳಷ್ಟು ಹಳೆಯದು. ಬಹುಸಂಖ್ಯಾತರಾದ ಹಿಂದುಗಳ ಬದುಕಿಗೆ ಹಿಡಿಯಷ್ಟು ಜನಸಂಖ್ಯೆಯ ಮುಸಲ್ಮಾನರು ಬಹಳ ಅಪಾಯಕಾರಿ ಎಂದು ನಂಬಿಸಲು ಸಂಘಪರಿವಾರವು ಮಸೀದಿಗಳನ್ನು ಶಸ್ತ್ರಾಸ್ತ್ರಗಳ ಉಗ್ರಾಣವಾಗಿವೆ ಎಂಬ ಪ್ರಚಾರವನ್ನು ಸದಾ ಜಾರಿಯಲ್ಲಿ ಇಟ್ಟಿದೆ. ಒಂದು ವಸತಿ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರು ತಮ್ಮ ವಸತಿ ಪ್ರದೇಶದಲ್ಲಿ ಒಂದು ಮಸೀದಿ ಕಟ್ಟಿಕೊಂಡು, ಆ ’ಪಳ್ಳಿ’ಯ ’ಜಮಾತ್’ ಕಟ್ಟಿಕೊಂಡಿರುತ್ತಾರೆ. ಸಂಘಪರಿವಾರವು ಜನರ ತಲೆಯಲ್ಲಿ ಬಿತ್ತುವ ಹುಳ: ’ಐದತ್ತು ಕುಟುಂಬಗಳಿಗೆ ಒಂದು ಮಸೀದಿ ಯಾಕೆ ಬೇಕು? ಎಂಟು ನೂರು ಜನ ಇದ್ದರೆ ಎಂಬತ್ತು ಮಸೀದಿ ಕಟ್ಟಿಕೊಳ್ಳುತ್ತಾರೆ’ ಎಂದು!. ಉಡುಪಿಯಲ್ಲಿ ಮಸೀದಿ ಕಟ್ಟಿಕೊಳ್ಳಲು ಕಂದಾಯ ಇಲಾಖೆಯ ಪರವಾನಗಿ ಪರದಾಡುವ, ನೂರು ವರ್ಷಗಳಿಂದ ಇದ್ದರೂ ’ವಿವಾದಾತ್ಮಕ’ವಾಗಿಸಿದ ಮಸೀದಿಗಳ ಕಥನವು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಮುದಾಯವನ್ನು ಹೈರಾಣಾಗಿಸಿದೆ.

ಯಶಪಾಲ ಸುವರ್ಣ

ಚಪ್ಪಲಿ ಅಂಗಡಿ, ಫ್ಯಾನ್ಸಿ ಸ್ಟೋರ್: ಕರಾವಳಿಯಲ್ಲಿ ಈ ಎರಡು ವ್ಯಾಪಾರಗಳನ್ನು ಮುಸ್ಲಿಮರು ತಮ್ಮ ಹೊಟ್ಟೆಪಾಡಿಗೆ ಮಾಡಿಕೊಂಡಿರುವುದೂ ಅಪರಾಧವೆಂಬಂತೆ ಸಂಘಪರಿವಾರವು ಕಥೆ ಕಟ್ಟಿದೆ. ಈ ಅಂಗಡಿಗಳು, ತಮ್ಮಲ್ಲಿಗೆ ಬರುವ ಬಹುಸಂಖ್ಯಾತ ಮಹಿಳೆಯರನ್ನು ಮೋಡಿ ಮಾಡಿ ಒಲಿಸಿಕೊಳ್ಳುವ ವಂಚನೆಯ ಜಾಲಗಳು ಎಂಬ ಕಥನವು ’ಲವ್ ಜಿಹಾದ್’ಗಿಂತ ಹಳೆಯದಾದ ಚಿತ್ರಕತೆ.

ದನಗಳ ದಲ್ಲಾಳಿ ಉದ್ಯೋಗ: ಹಿಂದು ಕೃಷಿಕರು ಗೊಡ್ಡಾದ ದನಗಳನ್ನು ದಲ್ಲಾಳಿಗಳ ಮೂಲಕ ಕಸಾಯಿಖಾನೆಗೆ ಮಾರುವುದು ಕರಾವಳಿಯಲ್ಲಿ ಲಾಗಾಯ್ತಿನಿಂದ ಇತ್ತು. ಈ ರೀತಿಯ ದನಗಳ ದಲ್ಲಾಳಿಗಳನ್ನು ’ಪೈರಿನವರು’ ಎಂದು ಗುರುತಿಸುವ ರೂಢಿಗತ ಭಾಷೆಯೂ ಇದೆ. ಹಿಂದು ಮತ್ತು ಮುಸ್ಲಿಮ್ ಸಮುದಾಯಗಳೆರಡರಲ್ಲೂ ’ಪೈರಿನವರು’ ಇದ್ದರು. 2000ದ ನಂತರ ’ಗೋಹತ್ಯಾ ನಿಷೇಧ’ದ ಹೆಸರಿನಲ್ಲಿ ಕರಾವಳಿಯಲ್ಲಿ ’ಪೈರಿನವರ’ ಮೇಲೆ ಸರಣಿ ಹಿಂಸಾಚಾರ ಮತ್ತು ಕೊಲೆಗಳು ನಡೆದು ಹೋಗಿ, ’ಪೈರಿನವರ’ ಉದ್ಯೋಗವೇ ಅಪರಾಧವಾಗಿಹೋಯಿತು.

ಹೀಗೆ, ಕರಾವಳಿಯ ಜನರ ಬದುಕಿನಲ್ಲಿ ಸಹಜವಾಗಿರುವ ಮುಸಲ್ಮಾನರ ಬದುಕಿನ ಕ್ರಮದಲ್ಲಿನ ಒಂದೊಂದು ಅಂಶಗಳನ್ನು ಎಳೆದು, ವಿವಾದವಾಗಿಸಿ, ಅಪರಾಧೀಕರಿಸುವುದರಲ್ಲಿ ಕಳೆದ ಎರಡು ದಶಕಗಳ ಸಂಘಪರಿವಾರದ ರಾಜಕಾರಣವು ಬಹು ಯಶಸ್ಸು ಗಳಿಸಿದೆ. ’ಹಿಜಾಬ್ ಅಪರಾಧೀಕರಣ’ವು ಮತ್ತೊಂದು ಹೊಸ ಚಿತ್ರಕತೆ. ಇದರಿಂದಾಗಿ, ಶಿಕ್ಷಣಕ್ಕೆ ನಿಧಾನಕ್ಕೆ ತೆರೆದುಕೊಳ್ಳುತ್ತಿರುವ ಮುಸ್ಲಿಮ್ ಹುಡುಗಿಯರ ಭವಿಷ್ಯವು ಅಪಾಯದ ಅಂಚಿನಲ್ಲಿದೆ.

ಇದನ್ನು ಕೋರ್ಟಿನ ತೀರ್ಪಿಗೆ ಬಿಟ್ಟು, ಬಾಕಿ ಸಮಾಜದ ಜೀವನವು ನಿರುಮ್ಮಳವಾಗಿದ್ದರೆ, ’ಅಪರಾಧಿಕರಣ’ ರಾಜಕೀಯವು ವಿಸ್ತರಿಸುತ್ತ ಹೋಗುವುದರಲ್ಲಿ ಅನುಮಾನವಿಲ್ಲ.

ಕೆ.ಫಣಿರಾಜ್

ಕೆ. ಫಣಿರಾಜ್
ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟವಿಸ್ಟ್ ಆಗಿ ಕೆಲಸ ಮಾಡುತ್ತಾ, ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿ ಮತ್ತು ಕಾಳಜಿಯ ಕ್ಷೇತ್ರಗಳು ಹಲವು.


ಇದನ್ನೂ ಓದಿ: ಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ – ರಾಜೇಂದ್ರ ಚೆನ್ನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...