“ವಿಷ್ಣುವಿನ ಅವತಾರ ಭಗವಾನ್ ಬುದ್ಧ. ನಾನು ಕೂಡ ಬುದ್ಧನ ಅನುಯಾಯಿ” ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದು, ಈ ಕುರಿತು ವಿಡಿಯೊ ಬಿಡುಗಡೆ ಮಾಡಿದ್ದಾರೆ.
“ಬೌದ್ಧಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಧರ್ಮವನ್ನು ಉಳಿಸಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ” ಎಂದು ಸುಧಾಕರ್ ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.
“ವಿಜ್ಞಾನಕ್ಕೂ ಮೊದಲು ಮಾನವ ಸಮಾಜಕ್ಕೆ ದಿಕ್ಕುದೆಸೆ ತೋರಿ ಆಚಾರ್ಯ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ ಎಲ್ಲಾ ಸಮಾಜದ ಕಾರ್ಯಕ್ರಮಗಳಿಗೂ ನೈತಿಕ ಬಲ ತುಂಬಿ ಆಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇಂದು ಭಾರತೀಯ ಸಂಸ್ಕೃತಿ, ಆಚಾರ ವಿಚಾರ ವಿಶ್ವಮಾನ್ಯವಾಗಿದ್ದರೆ ಅದರ ಶ್ರೇಯ ಈ ಸಮುದಾಯಕ್ಕೆ ಸಲ್ಲಬೇಕು. ಈ ನಿಟ್ಟಿನಲ್ಲಿ ಸಾವಿರಾರು ವರ್ಷದಿಂದ ನಾಗರಿಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಬ್ರಾಹ್ಮಣ ಸಮುದಾಯವು ವಿಶೇಷ ಗೌರವ ಸ್ಥಾನವನ್ನು ಹೊಂದಿದೆ” ಎಂದು ಅವರು ಹೇಳಿದ್ದು ವಿವಿಧ ವೇದಿಕೆಗಳಲ್ಲಿ ವರದಿಯಾದ ಬಳಿಕ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ವಿಡಿಯೊ ಮೂಲಕ ಡಾ.ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.
ಡಾ.ಕೆ.ಸುಧಾಕರ್ ಸ್ಪಷ್ಟನೆ ಹೀಗಿದೆ:
“ಸನಾತನ ಧರ್ಮದ ಉಳಿವಿಗಾಗಿ, ಪುನರುತ್ಥಾನಕ್ಕಾಗಿ ಜಗದ್ಗುರು ಶಂಕರಾಚಾರ್ಯರ ಕೊಡುಗೆ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ನಾನು ಮಾತನಾಡುತ್ತಿರುವುದನ್ನು ತಿರುಚಿ ಬೌದ್ಧ ಮತಕ್ಕೆ, ಭಗವಾನ್ ಬುದ್ಧರಿಗೆ ಅಪಮಾನ ಎಸಗಿದ್ದೇನೆ ಎನ್ನುವಂತಹ ರೀತಿಯಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.”
“ಸನಾತನ ಹಿಂದೂ ಧರ್ಮದಲ್ಲಿ ಮಹಾ ವಿಷ್ಣುವಿನ ದಶವತಾರ ಕಲ್ಪನೆ ಇದೆ. ಮತ್ಸ್ಯಾವತಾರ, ಕೂರ್ಮಾವತಾರ, ವರಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಹಾಗೂ ಕಲ್ಕಿ. ಇವು ವಿಷ್ಣುವಿನ ದಶವತಾರಗಳು ಎಂಬುದು ಸಮಸ್ತ ಹಿಂದೂಗಳ ನಂಬಿಕೆ.”
“ಹಿಂದೂಗಳು ಪೂಜಿಸುವಂತಹ ನರಸಿಂಹ ದೇವರು, ರಾಮ, ಕೃಷ್ಣನಿಗೆ ಸಮನಾದ ಸ್ಥಾನವನ್ನು ನಾವು ಭಗವಾನ್ ಬುದ್ಧರಿಗೂ ಕೊಟ್ಟಿದ್ದೀವಿ. ಬುದ್ಧನನ್ನು ಸಾಕ್ಷಾತ್ ಮಹಾನ್ ವಿಷ್ಣುವಿನ ಅವತಾರವೆಂದು ನಂಬಿದ್ದೇವೆ. ಈ ರೀತಿಯ ನಂಬಿಕೆ ಉಳ್ಳವರು ಹಿಂದೂಗಳು.”
“ನಾನು ಸಹ ಬುದ್ಧನ ಅನುಯಾಯಿ. ನನ್ನ ಮನೆಗೆ ಭೇಟಿ ಕೊಟ್ಟರೆ ಗೊತ್ತಾಗುತ್ತದೆ ಅಥವಾ ಭೇಟಿ ಕೊಟ್ಟಿರುವಂತಹ ಪ್ರತಿಯೊಬ್ಬರೂ ನನ್ನ ಮನೆಯಲ್ಲಿರುವಂತಹ ಬುದ್ಧನ ಪ್ರತಿಮೆಗಳು, ಪುಸ್ತಕಗಳು, ಫೋಟೋಗಳನ್ನು ಗಮನಿಸಿದ್ದಾರೆಂದು ತಿಳಿದುಕೊಂಡಿದ್ದೇನೆ. ನಾನು ಎಂಬಿಬಿಎಸ್ ವ್ಯಾಸಂಗ ಮಾಡಿದ ಕಾಲೇಜು ಹೆಸರು ಕೂಡ ಗೌತಮ ಬುದ್ಧನ ಮತ್ತೊಂದು ಹೆಸರಿನದ್ದಾಗಿದೆ. ಸಿದ್ಧಾರ್ಥ ಮೆಡಿಕಲ್ ಕಾಲೇಜು ಎನ್ನುವುದು ನನ್ನ ಜೀವನ ಪರ್ಯಾಂತ ಹೆಮ್ಮೆ ಎನಿಸುವಂತಹ ವಿಷಯ.”
“ಬೌದ್ಧಮತ ಹಿಂದೂಧರ್ಮ ಎಂಬ ಹೆಮ್ಮರದ ಶಾಖೆ ಎಂಬುದು ಹಿಂದೂಗಳ ನಂಬಿಕೆ. ಹಿಂದೂ ಧರ್ಮ ಒಂದು ಪುಸ್ತಕವೋ, ಪ್ರವಾದಿಯೋ ಇರುವಂತಹ ಧರ್ಮ ಅಲ್ಲ. ಭಗವದ್ಗೀತೆಯಲ್ಲಿ ಶ್ರೀಕಷ್ಣ ‘ಸಂಭವಾಮಿ ಯುಗೇ ಯುಗೇ’ ಎಂದು.”
– ಡಾ.ಕೆ.ಸುಧಾಕರ್, ಆರೋಗ್ಯ ಸಚಿವರು, ಕರ್ನಾಟಕ ಸರ್ಕಾರ
***
‘ಬೌದ್ಧಧರ್ಮವು ಹಿಂದೂ ಧರ್ಮದ ಭಾಗವಲ್ಲ’
ಬೌದ್ಧಧರ್ಮವನ್ನು ಹಿಂದೂ ಧರ್ಮದ ಒಂದು ಭಾಗ ಎಂದು ಅಪಪ್ರಚಾರ ಮಾಡುತ್ತಿರುವುದು ಮೊದಲಿನಿಂದಲೂ ನಡೆದು ಬಂದಿದೆ. ಹೀಗಾಗಿ ಸುಧಾಕರ್ ಅವರ ಹೇಳಿಕೆಗೆ ಅನೇಕರು ಕಟುವಾಗಿ ಟೀಕಿಸಿದ್ದಾರೆ.
“ಬುದ್ಧ ಸಾಮಾನ್ಯ ಮನುಷ್ಯನಾಗಿ ಬದುಕಿದ ದೊಡ್ಡ ಜ್ಞಾನಿ. ಮಾನವ ಜನಾಂಗಕ್ಕೆ ದಾರಿ ತೋರಿದ ಗುರು. ಯಾವ ವಿಷ್ಣುವಿನ ಅವತಾರವೂ ಅಲ್ಲ” ಎಂದು ಸ್ವಾಮಿ ಡಿ.ಎಸ್. ಪ್ರತಿಕ್ರಿಯೆ ನೀಡಿದ್ದಾರೆ.
“ಬುದ್ದದಮ್ಮ ವೈಜ್ಞಾನಿಕ ಹಿನ್ನೆಲೆ ಹೊಂದಿರುವ ಧರ್ಮ. ಈ ಧರ್ಮದಲ್ಲಿ ಮಾಟ, ಮಂತ್ರ, ತಂತ್ರ, ಮಂತ್ರ ಇಲ್ಲ. ಬುದ್ದ ಹೇಗೆ ಅವತಾರದಲ್ಲಿ ವಿಷ್ಣು ಆಗಲು ಸಾಧ್ಯ?” ಎಂದು ಶಿವಮೂರ್ತಿ ಎಂಬವರು ಪ್ರಶ್ನಿಸಿದ್ದಾರೆ.
ಕವಿ ಸಿದ್ದಲಿಂಗಯ್ಯನವರು ದಶಕಗಳ ಹಿಂದೆ ಬರೆದ ‘ಮಾತಿಗೆ ಮಾತು ಕೊಟ್ಟವನ’ ಹಾಡಿದ ಒಂದು ಸಾಲು ಹೀಗಿದೆ- “ದೇವರು ಇಲ್ಲ ಎಂದವನನ್ನು ದೇವರು ಮಾಡಿ ಬಿಟ್ಟರು. ಹತ್ತವತಾರ ಸುಳ್ಳೆಂದವನ ಹನ್ನೊಂದಕ್ಕೆ ಏರಿಸಿದರು…”
ಇದನ್ನೂ ಓದಿರಿ: ಸುಧಾಕರ್ ಸದನದಲ್ಲೇ ಕ್ಷಮೆ ಕೇಳಬೇಕು: ಬಿಜೆಪಿ ಶಾಸಕ ಹರ್ಷವರ್ಧನ್ ಆಗ್ರಹ



ಬುದ್ಧಿಹೀನ ಅದ್ಹೇಗೆ ಬುದ್ಧನ ಅನುಯಾಯಿಯಾಗುತ್ತಾನೆ? ಕೊಳಕ ನೀಚ ಕೋಮುವಾದಿಗಳು ಮೋದಿಯ ಅನುಯಾಯಿಗಳೆನ್ನುವುದು ಸೂಕ್ತ